ಡೆಸ್ಕ್ ನಲ್ಲಿ ಮಕ್ಕಳು ಬರೆದಿದ್ದ ಆ ಚಿತ್ರ ನೋಡಿ ನಕ್ಕ ಸಚಿವ ಸುರೇಶ್ ಕುಮಾರ್ ಹೇಳಿದ್ದೇನು?
ಬೆಂಗಳೂರು: ಜನವರಿ 1ರಿಂದ ಶಾಲಾ ಕಾಲೇಜುಗಳು ಆರಂಭವಾಗುವ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಬೆಂಗಳೂರಿನ ಬಸವನಗುಡಿಯಲ್ಲಿರುವ ಕಾಲೇಜಿಗೆ ಭೇಟಿ ನೀಡಿ ಮುಂಜಾಗೃತ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದರು.
ಕ್ಲಾಸ್ ಪರಿಶೀಲನೆ ನಡೆಸುತ್ತಿದ್ದ ವೇಳೆ ಡೆಸ್ಕ್ ಮೇಲೆ ಬರೆಯಲಾಗಿದ್ದ ಚಿತ್ರವನ್ನು ಗಮನಿಸಿ ಸಚಿವ ಸುರೇಶ್ ಕುಮಾರ್ ನಕ್ಕರು. ಡೆಸ್ಕ್ ನ ಮೇಲೆ ಕಾಮಿಡಿ ಗೂಬೆಯ ಚಿತ್ರವೊಂದನ್ನು ಬರೆಯಲಾಗಿತ್ತು. ನಕ್ಕ ಬಳಿಕ ಕಾಲೇಜಿನ ಪ್ರಿನ್ಸಿ ಪಲ್ ಅವರನ್ನು ನೋಡಿ ಗುಡ್ ಲಿಟ್ರೇಚರ್ ಎಂದು ಸಚಿವರು ಹೇಳಿದರು.
ನಾಳೆ ಶಾಲೆ ಕಾಲೇಜು ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ರೌಂಡ್ಸ್ ಹೊಡೆಯುತ್ತಿದ್ದೇವೆ. ಇಂದು ಜಯನಗರ, ಬಸವನಗುಡಿ ಕಡೆ ಭೇಟಿ ನೀಡಿದ್ದೇವೆ. ನಿನ್ನೆ ಯಲಹಂಕ ಕಡೆ ಭೇಟಿ ನೀಡಿದ್ದೆವು. ನಾಳೆ ಆನೆಕಲ್ ಕಡೆಗೆ ಭೇಟಿ ನೀಡಲಿದ್ದೇವೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಇನ್ನು ಮಕ್ಕಳನ್ನು ಶಾಲೆಗೆ ಕಳಿಸಲೇ ಬೇಕು ಎಂದು ಒತ್ತಾಯ ಮಾಡುವುದಿಲ್ಲ ಎಂದು ಹೇಳಿರುವ ಸುರೇಶ್ ಕುಮಾರ್, ರೂಪಾಂತರಿ ಕೊರೊನಾ ವೈರಸ್ ಅಷ್ಟೊಂದು ಪರಿಣಾಮಕಾರಿಯಲ್ಲ ಎಂದು ಆರೋಗ್ಯ ಇಲಾಖೆಯೇ ಸ್ಪಷ್ಟಪಡಿಸಿದೆ. ಹೀಗಿರುವಾಗ ಯಾರೂ ಭಯಪಡಬೇಕಾದ ಅಗತ್ಯವಿಲ್ಲ ಎಂದು ಅವರು ಹೇಳಿದರು.