ಪ್ರಧಾನಿ ಮೋದಿ ಹೆಸರು ಎತ್ತಲು ನೈತಿಕತೆ ಇದೆಯಾ?: ಬಿ.ಕೆ. ಹರಿಪ್ರಸಾದ್ ಗೆ ಕುಯಿಲಾಡಿ ಸುರೇಶ್ ನಾಯಕ್ ಪ್ರಶ್ನೆ
ದೇಶಕ್ಕೆ ಸಮರ್ಥ ನಾಯಕತ್ವವನ್ನು ನೀಡಿ ‘ಸರ್ವ ಸ್ಪರ್ಶಿ; ಸರ್ವ ವ್ಯಾಪಿ’ ಅಭಿವೃದ್ಧಿಯ ಸಹಿತ ತನ್ನ ವೈಶಿಷ್ಟ್ಯಪೂರ್ಣ ಕಾರ್ಯವೈಖರಿಯ ಮೂಲಕ ಜನಮನ್ನಣೆ ಪಡೆದು ವಿಶ್ವನಾಯಕರೆನಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿಯವರ ಹೆಸರೆತ್ತಲೂ ಯೋಗ್ಯತೆ ಇಲ್ಲದ ‘ಕೋತ್ವಾಲ್ ಶಿಷ್ಯ’ ಖ್ಯಾತಿಯ ಬಿ.ಕೆ. ಹರಿಪ್ರಸಾದ್ ರವರಿಗೆ ಪ್ರಧಾನಿ ಮೋದಿಯವರ ಬಗ್ಗೆ ಮಾತನಾಡುವ ಯಾವ ನೈತಿಕತೆ ಇದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಪ್ರಶ್ನಿಸಿದ್ದಾರೆ.
ಅವರು ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಕಾಂಗ್ರೆಸ್ ನಿಂದ ನಡೆದ ಪ್ರಜಾಧ್ವನಿ ಯಾತ್ರೆಯ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ, ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ರವರು ಕಾಂಗ್ರೆಸ್ಸಿನ ಟೂಲ್ ಕಿಟ್ ಪರ್ಸಂಟೇಜ್ ಪ್ರಹಸನದ ಜೊತೆ ತಳುಕಿಹಾಕಿ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಆಡಿರುವ ಅವಮಾನಕರ ಮಾತುಗಳನ್ನು ತೀವ್ರವಾಗಿ ಖಂಡಿಸಿ ಪತ್ರಿಕಾ ಹೇಳಿಕೆ ನೀಡಿದ್ದಾರೆ.
ತನ್ನ ಹರಕು ಬಾಯಿಯಲ್ಲಿ ಸದಾ ಪ್ರಧಾನಿ ನರೇಂದ್ರ ಮೋದಿ ಹಾಗೂ ಹಿಂದೂ ಕಾರ್ಯಕರ್ತರ ವಿರುದ್ಧ ಬೊಗಳೆ ಬಿಡುವ ಬಿ.ಕೆ. ಹರಿಪ್ರಸಾದ್ ರವರು ಕಾಂಗ್ರೆಸ್ ಪಕ್ಷದ ವರಿಷ್ಠರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ರವರು ಭ್ರಷ್ಟಾಚಾರ ಪ್ರಕರಣಗಳಲ್ಲಿ ಆರೋಪಿಗಳಾಗಿ ತನಿಖೆಯನ್ನು ಎದುರಿಸುತ್ತಾ ಪ್ರಸ್ತುತ ಬೇಲ್ ನಲ್ಲಿ ಹೊರಗಡೆ ಇದ್ದಾರೆ ಎಂಬುದನ್ನು ಮೊದಲು ಅರಿತುಕೊಳ್ಳುವುದು ಉತ್ತಮ. ಕಾಂಗ್ರೆಸ್ಸಿನ 70 ವರ್ಷಗಳ ಲೂಟಿ ರಹಸ್ಯಗಳು ಇಂದಿನ ತಾಂತ್ರಿಕ ಯುಗದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಬೆರಳ ತುದಿಯಲ್ಲೇ ಲಭ್ಯವಿದೆ. ಇದೆಲ್ಲದರ ಬಗ್ಗೆ ಹರಿಪ್ರಸಾದ್ ರವರ ಜಾಣ ಕುರುಡುತನ ಹಾಸ್ಯಾಸ್ಪದ ಎಂದಿದ್ದಾರೆ.
‘ಭ್ರಷ್ಟಾಚಾರದ ಗಂಗೋತ್ರಿ’ ಎಂದೇ ಕುಖ್ಯಾತವಾಗಿರುವ ಕಾಂಗ್ರೆಸ್ ಭ್ರಷ್ಟಾಚಾರದ ಬಗ್ಗೆ ಮಾತನಾಡುವುದು ಎಂದರೆ ಅದು ‘ದೆವ್ವದ ಬಾಯಲ್ಲಿ ಭಗವದ್ಗೀತೆ’ ಎಂಬಂತಾಗಿದೆ. ಬ್ರಹ್ಮಾಂಡ ಭ್ರಷ್ಟಾಚಾರ, ಒಂದೇ ಕುಟುಂಬದ ಗುಲಾಮಗಿರಿ, ಒಂದೇ ವರ್ಗದ ಓಲೈಕೆಯಿಂದ ದೇಶದಾದ್ಯಂತ ಜನತೆಯ ವಿಶ್ವಾಸವನ್ನು ಕಳೆದುಕೊಂಡು ಪ್ರಸಕ್ತ ಕೇವಲ 3 ರಾಜ್ಯಗಳಲ್ಲಿ ಮಾತ್ರ ಆಡಳಿತಕ್ಕೆ ಸೀಮಿತವಾಗಿರುವ ದೇಶ ವಿರೋಧಿ ಕಾಂಗ್ರೆಸ್ ಮುಳುಗುತ್ತಿರುವ ಹಡಗು ಎಂಬುದು ವಾಸ್ತವ.
ಮಾತೆತ್ತಿದರೆ 40% ಕಮಿಷನ್ ಎಂದು ಬೊಬ್ಬಿರಿಯುವ ಬಿ.ಕೆ. ಹರಿಪ್ರಸಾದ್ ಸಹಿತ ಕಾಂಗ್ರೆಸ್ ನಾಯಕರಿಗೆ ತಮ್ಮ ಟೂಲ್ ಕಿಟ್ ಭಾಗವಾಗಿರುವ ಈ ‘ಸ್ವಯಂಘೋಷಿತ ಪ್ರಹಸನ’ವನ್ನು ಸಾಕ್ಷಿ ಸಮೇತ ರುಜುವಾತು ಪಡಿಸುವ ತಾಕತ್ತು ಇಲ್ಲವೇ? ಜನತೆಯ ಮುಂದೆ ಬರೇ ಪೊಳ್ಳು ಮಾತುಗಳಿಗೆ ಸೀಮಿತವಾಗಿರುವ ಕಾಂಗ್ರೆಸ್ ತನ್ನ ಆಡಳಿತಾವಧಿಯ ಆಕ್ರಮಗಳ ಬಗ್ಗೆ ಯಾಕೆ ಸೊಲ್ಲೆತ್ತುತ್ತಿಲ್ಲ? ತನ್ನ ವಿರುದ್ಧ ದಾಖಲಾಗಿರುವ ಭ್ರಷ್ಟಾಚಾರ ಪ್ರಕರಣಗಳಿಗೆ ಹೆದರಿ ಲೋಕಾಯುಕ್ತವನ್ನೇ ಮುಚ್ಚಿ ಎಳ್ಳು ನೀರು ಬಿಟ್ಟ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ನವರಂತಹ ಭ್ರಷ್ಟರ ಕೂಟದಿಂದ ಬಿಜೆಪಿಗೆ ನೈತಿಕತೆಯ ಪಾಠದ ಅಗತ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.
ರಾಜ್ಯದ ಜನತೆ ಪ್ರಬುದ್ಧರಾಗಿದ್ದು ಕಾಂಗ್ರೆಸ್ ನ ಸಾಕ್ಷ್ಯಾಧಾರವಿಲ್ಲದ ಮೋಸ ಜಾಲಗಳಿಗೆ ಎಂದೂ ಮರುಳಾಗಲಾರರು. ‘ಕಾಂಗ್ರೆಸ್ ಆಡಳಿತಾವಧಿಯಲ್ಲಿ ಕೇಂದ್ರ ಸರಕಾರದಿಂದ ಫಲಾನುಭವಿಗಳಿಗೆ 1 ರೂಪಾಯಿ ಮೊತ್ತ ಕಳುಹಿಸಿದರೆ ಅದರಲ್ಲಿ 15 ಪೈಸೆ ಮಾತ್ರ ತಲುಪುತ್ತಿತ್ತು’ ಎಂದು ಸ್ವತಃ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರೇ ಹೇಳಿದ್ದರು. ಇದನ್ನು ಕಾಂಗ್ರೆಸ್ ನಿಂದ 85% ಕಮಿಷನ್ ವ್ಯವಹಾರ ಎಂದು ತಿಳಿಯಬೇಕೇ? ಭ್ರಷ್ಟಾಚಾರದ ಪಿತಾಮಹ ಕಾಂಗ್ರೆಸ್ ನೊಂದಿಗೆ ಭ್ರಷ್ಟಾಚಾರದ ಕುರಿತು ವಾದ ವಿವಾದ ಅರ್ಥಹೀನ ಎಂಬುದು ಜಗಜ್ಜಾಹೀರಾಗಿದೆ ಎಂದಿದ್ದಾರೆ.
ಉಡುಪಿ ಜಿಲ್ಲೆಗೆ ಬಂದು ತಲೆಬುಡವಿಲ್ಲದೆ ಮಾತನಾಡುವ ಮೊದಲು ಬಿ.ಕೆ. ಹರಿಪ್ರಸಾದ್ ರವರು ಜಿಲ್ಲೆಯಲ್ಲಿ ಬಿಜೆಪಿ ನೇತೃತ್ವದಲ್ಲಿ ಡಾ! ವಿ.ಎಸ್. ಆಚಾರ್ಯರವರ ದೂರದರ್ಶಿತ್ವದ ಚಿಂತನೆಯೊಂದಿಗೆ ನಡೆದ ದಾಖಲೆಯ ಅಭಿವೃದ್ಧಿ ಕಾರ್ಯಗಳನ್ನು ನೋಡಿ ತಿಳಿದುಕೊಳ್ಳಲು ಪ್ರವಾಸಕ್ಕೆ ಹೋಗುವುದು ಉತ್ತಮ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಪರಿಕಲ್ಪನೆಯ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಗಳು, ವಾರಾಹಿ ಕುಡಿಯುವ ನೀರಿನ ಯೋಜನೆ, ಗ್ರಾಮಾಂತರ ರಸ್ತೆಗಳ ಉನ್ನತೀಕರಣ, ಜಿಲ್ಲಾಧಿಕಾರಿಗಳ ಸಂಕೀರ್ಣ, ನೈರ್ಮಲ್ಯ ಸಹಿತ ನೂರಾರು ವಿನೂತನ ಯೋಜನೆಗಳು ಜಿಲ್ಲೆಯ ಅಭಿವೃದ್ಧಿಯಲ್ಲಿ ಹೊಸ ಸಂಚಲನ ಮೂಡಿಸಿವೆ. ಇನ್ನೊಂದು ಸಿದ್ಧರಾಮಯ್ಯ ಎನಿಸಿಕೊಳ್ಳಲು ಹೊರಟಿರುವ ಬಿ.ಕೆ. ಹರಿಪ್ರಸಾದ್ ರವರಿಗೆ ಇದನ್ನೆಲ್ಲ ಅರ್ಥೈಸಿಕೊಳ್ಳುವ ಶಕ್ತಿ ಇಲ್ಲ ಎಂದವರು ತಿಳಿಸಿದ್ದಾರೆ.
ಚುನಾವಣೆಯನ್ನು ಎದುರಿಸಲು ಯಾವುದೇ ಪ್ರಮುಖ ವಿಚಾರಗಳಿಲ್ಲದೆ ಸೊರಗಿರುವ ಕಾಂಗ್ರೆಸ್ ಸೋಲಿನ ಭಯದಿಂದ ಸದಾ ಸುಳ್ಳು ಆರೋಪಗಳು ಹಾಗೂ ಅನಗತ್ಯ ವಿವಾದಗಳನ್ನು ಸೃಷ್ಟಿಸಿ ಜನತೆಯನ್ನು ಯಾಮಾರಿಸಲು ನಡೆಸುವ ಯಾವುದೇ ಪ್ರಯತ್ನಗಳು ಫಲ ನೀಡದು. ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರಕಾರಗಳ ಜನಪರ, ಅಭಿವೃದ್ಧಿ ಪರ ಆಡಳಿತ, ಉದಾತ್ತ ಯೋಜನೆಗಳು ಜನಮಾನಸದಲ್ಲಿ ಭರವಸೆ ಮೂಡಿಸಿದೆ. ಈ ನೆಲೆಯಲ್ಲಿ ಉಡುಪಿ ಜಿಲ್ಲೆಯ ಐದೂ ವಿಧಾನಸಭಾ ಕ್ಷೇತ್ರಗಳ ಭರ್ಜರಿ ಗೆಲುವಿನ ಜೊತೆಗೆ ರಾಜ್ಯದಾದ್ಯಂತ 150 ಸ್ಥಾನಗಳನ್ನು ಗೆಲ್ಲುವ ಮೂಲಕ ಮಗದೊಮ್ಮೆ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರಕಾರ ಆಡಳಿತದ ಚುಕ್ಕಾಣಿ ಹಿಡಿಯುವುದು ನಿಶ್ಚಿತ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw