ಕೋರೆಗಾಂವ್ ವಿಜಯೋತ್ಸವದಂದು ದಲಿತರು ಈ ಪ್ರತಿಜ್ಞೆಯನ್ನು ಮಾಡಲೇ ಬೇಕು
ಇಂದು ಒಂದೆಡೆ ಹೊಸ ವರ್ಷ ಆಚರಣೆ ನಡೆಸುತ್ತಿದ್ದರೆ, ಇನ್ನೊಂದೆಡೆ ಕೋರೆಗಾಂವ್ ವಿಜಯೋತ್ಸವ ನಡೆಯುತ್ತಿದೆ. ದಲಿತ ಸೈನಿಕರು, ಅಥವಾ ಮಹರ್ ಸೈನಿಕರು ಪೇಶ್ವೆಗಳ ಜಾತಿಯ ದುರಾಂಹಾರವನ್ನು ಮಟ್ಟ ಹಾಕಿದ ದಿನವೇ ಜನವರಿ , 1818. ಕೇವಲ 500 ದಲಿತ ಸೈನಿಕರು ಮೂವತ್ತು ಸಾವಿರ ಮೇಲ್ಜಾತಿಯ ಸೈನಿಕರನ್ನು ಹೊಡೆದುರುಳಿಸಿ ಇತಿಹಾಸ ನಿರ್ಮಿಸಿದ ದಾಖಲೆಯ ದಿನ ಇದಾಗಿದೆ.
ಪೇಶ್ವೆ ಮಂತ್ರಿ 2ನೆ ಬಾಜೀರಾಯನ ಕಾಲದಲ್ಲಿ ಸಾಮಾಜಿಕ ಸ್ಥಿತಿ ಬಹಳ ದುಸ್ಥರವಾಗಿತ್ತು. ಬ್ರಿಟೀಷರು ಭಾರತೀಯರನ್ನು ಷೋಷಣೆ ಮಾಡಿದ್ದಾರೆ ಎಂದು ನೀವು ಪುಸ್ತಕಗಳಲ್ಲಿ ಓದಿರಬಹುದು. ಆದರೆ, ರಾಜರ ಕಾಲದಲ್ಲಿ ದಲಿತರನ್ನು ಹಿಂದೂಗಳು ಅಥವಾ ಪೇಶ್ವೆ ಬ್ರಾಹ್ಮಣರು ಮಾಡಿದಷ್ಟು ಶೋಷಣೆಯನ್ನು ಬ್ರಿಟೀಷರು ಕೂಡ ಮಾಡಿರಲಿಲ್ಲ.
ಅಸ್ಪೃಶ್ಯತಾ ಆಚರಣೆಯನ್ನು ವ್ಯಾಪಕವಾಗಿ ಹರಡಲಾಗಿತ್ತು. ಈ ಕಾಲದಲ್ಲಿ ದಲಿತರ ನೆರಳು ಹಿಂದೂ ಒಬ್ಬನ ಮೇಲೆ ಬೀಳಬಾರದು. ಬಿದ್ದರೆ ಆತ ಮಲೀನವಾಗುತ್ತಾನೆ ಎಂಬ ಅನಿಷ್ಠ ಪದ್ಧತಿಯನ್ನು ಹೇರಲಾಗಿತ್ತು. ಇದರಿಂದಾಗಿ ದಲಿತರು ಸಾರ್ವಜನಿಕವಾಗಿ ಬೀದಿಗೆ ಬರುವಂತಿರಲಿಲ್ಲ. ತಾನು ಅಸ್ಪೃಶ್ಯ ಎಂದು ದಲಿತರು ಗುರುತಿಸಿಕೊಳ್ಳಬೇಕಿತ್ತು. ಅದಕ್ಕಾಗಿ ಕಪ್ಪುದಾರವನ್ನು ಕೈಗೆ ಕಟ್ಟಿಕೊಳ್ಳಬೇಕಿತ್ತು. ಆತನ ಹೆಜ್ಜೆ ಕೂಡ ನೆಲದ ಮೇಲೆ ಬೀಳಬಾರದು ಎಂದು, ಸೊಂಟಕ್ಕೆ ಪೊರಕೆ ಕಟ್ಟಿಕೊಳ್ಳಬೇಕಿತ್ತು. ಆತನ ಎಂಜಲು ನೆಲಕ್ಕೆ ಬೀಳಬಾರದು ಎಂಬ ಕಾರಣಕ್ಕೆ ಕುತ್ತಿಗೆಗೆ ಮಡಕೆಯನ್ನು ಕಟ್ಟಿಕೊಳ್ಳಬೇಕಿತ್ತು. ಅಂತಹ ದುಸ್ಥಿತಿಯ ನಡುವೆ, ದಲಿತರು ಬದುಕಬೇಕಿತ್ತು.
ಇಂತಹ ಕಾಲಘಟ್ಟದಲ್ಲಿ ದಲಿತರು ಶಸ್ತ್ರಾಸ್ತ್ರ ತರಬೇತಿ ಪಡೆದು ಬ್ರಿಟೀಷ್ ಸೈನ್ಯ ಸೇರುತ್ತಾರೆ. ಎದೆಯಲ್ಲಿ ಅಸ್ಪೃಶ್ಯತೆಯ ನೋವನ್ನಿಟ್ಟುಕೊಂಡು ಪೇಶ್ವೇಗಳ 30 ಸಾವಿರಕ್ಕೂ ಅಧಿಕ ಸೈನಿಕರ ಪಡೆಯನ್ನು ಕೆಚ್ಚೆದೆಯಿಂದ ಎದುರಿಸಿ ಧೂಳೀಪಟ ಮಾಡುವ ಮೂಲಕ ಇತಿಹಾಸ ಸೃಷ್ಟಿಸುತ್ತಾರೆ. ಆದರೆ ಈ ಇತಿಹಾಸವನ್ನೇ ಕೋರೇಗಾಂವ್ ವಿಜಯೋತ್ಸವ ಎಂದು ಕರೆಯುತ್ತಾರೆ.
ಅಂದು ಅಸ್ಪೃಶ್ಯತೆಯ ವಿರುದ್ಧ ಸಮರ ಸಾರಿದ ಮಹರ್ ಸೈನಿಕರ ಪರಾಕ್ರಮ ಇಂದು ದಲಿತ ಯುವಕರಿಗೆ ಮಾದರಿಯಾಗಿದೆ.ಇಂದಿಗೂ ಸಾಮಾಜಿಕ ಅಸಮಾನತೆ ಬದಲಾಗಿಲ್ಲ. ಆದರೆ ರೂಪಾಂತರವಾಗಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರ ಹೋರಾಟದ ಫಲದಿಂದ ದಲಿತರು, ಅಸ್ಪೃಶ್ಯರು ಇಂದು ನೆಮ್ಮದಿಯಿಂದ ಬದುಕುತ್ತಿದ್ದಾರೆ. ಆದರೆ ದೇಶವನ್ನು ಆಳುತ್ತಿರುವ ಸರ್ಕಾರಗಳು ದೇಶವನ್ನು ಮತ್ತೆ ಹಳೆಯ ಕಾಲಕ್ಕೆ ಕೊಂಡೊಯ್ಯಲು ಮುಂದಾಗಿದೆ. ಸಂಸ್ಕೃತಿ ಹೆಸರಿನಲ್ಲಿ, ದುಷ್ಟ ಕಾನೂನುಗಳ ಹೆಸರಿನಲ್ಲಿ ಸಮಾಜದಲ್ಲಿ ಬೇಧಭಾವ ಸೃಷ್ಟಿಸಲಾಗುತ್ತಿದೆ. ಇದರ ವಿರುದ್ಧ ದಲಿತ ಯುವಕರು ಜನರನ್ನು ಜಾಗೃತಿಗೊಳಿಸಬೇಕಿದೆ. ಸಮುದಾಯವನ್ನು ಒಗ್ಗಟ್ಟಿನಿಂದ ಮುಂದೆ ಕೊಂಡೊಯ್ಯಬೇಕಿದೆ. ಅಂಬೇಡ್ಕರ್ ಅವರು ನೀಡಿರುವ ಸಂವಿಧಾನದ ಮೌಲ್ಯಗಳನ್ನು ಮನೆಮನೆಗಳಿಗೆ ತಲುಪಿಸಬೇಕು. ಪ್ರತಿ ದಲಿತರ ಮನೆಗಳಿಗೆ ತೆರಳಿ, ಎಲ್ಲರನ್ನೂ ಜಾಗೃತಿಗೊಳಿಸಬೇಕಿದೆ.
ದಲಿತರು ಯಾರಿಗೂ ತಲೆಬಾಗಬೇಕಾಗಿಲ್ಲ. ಜಾತಿಯ ಆಧಾರದಲ್ಲಿ ಯಾರಿಗೂ ಗೌರವ ಕೊಡಬೇಕಾದ ಅಗತ್ಯವಿಲ್ಲ. ನಿಮ್ಮನ್ನು ಯಾರು ಗೌರವಿಸುತ್ತಾರೋ ಅವರಿಗೆ ಗೌರವ ನೀಡಿದರೆ ಸಾಕು. ನಿಮ್ಮ ಮನೆಯಲ್ಲಿ ಯಾರು ಊಟ ಮಾಡುತ್ತಾರೋ ಅವರ ಮನೆಯಲ್ಲಿ ಮಾತ್ರ ಊಟ ಮಾಡಿದರೆ ಸಾಕು. ನಿಮ್ಮನ್ನು ಯಾರು ತಮ್ಮ ಮನೆಯೊಳಗೆ ಆಹ್ವಾನಿಸುತ್ತಾರೋ, ಅಂತಹವರನ್ನು ಮಾತ್ರವೇ ನಿಮ್ಮ ಮನೆಗೆ ಆಹ್ವಾನಿಸಿ. ನಿಮ್ಮ ಪರವಾಗಿ ಯಾರು ಕೆಲಸ ಮಾಡುತ್ತಾರೋ, ನಿಮ್ಮ ಕಷ್ಟಗಳ ಕುರಿತು ಮಾತನಾಡುತ್ತಾರೋ ಅಂತಹ ರಾಜಕಾರಣಿಗಳನ್ನು ಮಾತ್ರವೇ ಬೆಂಬಲಿಸಿದರೆ ಸಾಕು ಎನ್ನುವ ಪ್ರತಿಜ್ಞೆಯನ್ನು ಕೈಗೊಳ್ಳಬೇಕು.
ಅಂಬೇಡ್ಕರ್ ಅವರ ಬಗ್ಗೆ ಮಾತನಾಡಬೇಕಾದರೆ ದಲಿತರು, ಅಂಬೇಡ್ಕರ್ ಅವರ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ದುಶ್ಚಟಗಳಿಗೆ ಸಮುದಾಯದ ಯುವಕರು ಬಲಿಯಾಗದಂತೆ ತಡೆಯಬೇಕು. ಪ್ರತಿ ಮನೆಗಳಲ್ಲಿಯೂ ವಿದ್ಯಾವಂತರ ಸಂಖ್ಯೆಯಲ್ಲಿ ಏರಿಕೆಯಾಗಬೇಕು. ವಾಸಿಸುವ ಪ್ರದೇಶ, ಮನೆಯನ್ನು ಮೇಲ್ಜಾತಿಯವರು ನಾಚಿಕೆ ಪಡುವಷ್ಟು ಸ್ವಚ್ಛವಾಗಿಡಬೇಕು. ನಿಮ್ಮ ಮನೆ ಗುಡಿಸಲೇ ಇರಬಹುದು. ಆದರೆ, ಆ ಗುಡಿಸಲನ್ನು ನೋಡಿದರೆ, ಅದರೊಳಗೆ ಬಂದು ಕುಳಿತುಕೊಳ್ಳಬೇಕು, ನೀರು ಕುಡಿಯಬೇಕು, ಊಟ ಮಾಡಬೇಕು ಎಂದು ಬೇರೆಯವರಿಗೆ ಅನ್ನಿಸುವಷ್ಟು ಸ್ವಚ್ಛವಾಗಿಡಬೇಕು. ಇದಕ್ಕಾಗಿ ಸಮುದಾಯದ ಯುವಕರು ಸಜ್ಜಾಗಿ, ಪ್ರತಿ ದಲಿತರಲ್ಲಿಯೂ ಜಾಗೃತಿ ಮೂಡಿಸಲು ತಂಡ ರಚಿಸಿ, ಸಂಘಟನೆ ಬಲಪಡಿಸಬೇಕು. ಜೊತೆಗೆ ಬುದ್ಧ, ಬಸವ ಅಂಬೇಡ್ಕರರ ಚರಿತ್ರೆಯನ್ನುಇಡೀ ಸಮುದಾಯಕ್ಕೆ ತಿಳಿಸುವ ಕಾರ್ಯಕ್ಕೆ ದಲಿತ ಯುವಕರು ಮುಂದಾಗಬೇಕು. ಅಂಬೇಡ್ಕರ್ ಅವರು ಇದೇ ಮೌಲ್ಯವನ್ನು ಸಮುದಾಯಕ್ಕೆ ಹೇಳಿದ್ದಾರೆ. “ಇತಿಹಾಸವನ್ನು ತಿಳಿಯದವರು, ಇತಿಹಾಸವನ್ನು ಸೃಷ್ಟಿಸಲಾರರು” ಎಂದು. ನೀವು ಸಮಾನತೆ ಬಯಸುವುದೇ ಆದರೆ, ಮೇಲ್ಜಾತಿಯವರಿಗಿಂತಲೂ ಅದ್ಧೂರಿಯಾಗಿ ನೀವು ಬದುಕಬೇಕು, ಅವರಿಗಿಂತ ಒಂದು ಪಟ್ಟು ನಾವು ಹೆಚ್ಚು ಎನ್ನುವುದನ್ನು ತೋರಿಸಬೇಕು. ನಿಮ್ಮ ಮಕ್ಕಳನ್ನು ಸರಿದಾರಿಯಲ್ಲಿ ಬೆಳೆಸ ಬೇಕು. ಆಗ ಮಾತ್ರವೇ ಸಮಾನತೆ ಬಯಸಲು ಸಾಧ್ಯ. ಕೋರೆಗಾಂವ್ ವಿಜಯೋತ್ಸವದ ಸಂದರ್ಭದಲ್ಲಿ ದಲಿತರು ಈ ಪ್ರತಿಜ್ಞೆಗಳನ್ನು ಸ್ವೀಕರಿಸುವ ಅಗತ್ಯವಿದೆ.
ಎಲ್ಲರಿಗೂ ಕೋರೆಗಾಂವ್ ವಿಜಯೋತ್ಸವದ ಶುಭಾಶಯಗಳು
-ಮಹಾನಾಯಕ ಬಳಗ