ಆರ್ಯ ಸಮಾಜದ ಯುವತಿಯನ್ನು ಮದುವೆಯಾದ ದಲಿತ ಯುವಕನ ಭೀಕರ ಹತ್ಯೆ
ಕರ್ನೂಲ್: ಭಾರತದಲ್ಲಿ ಇಂದು ಲವ್ ಜಿಹಾದ್ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದಾರೆ. ಹಿಂದೂ ಧರ್ಮದಲ್ಲಿರುವ ಆದರೆ ಜಾತಿ ಭಯೋತ್ಪಾದನೆಯ ಬಗ್ಗೆ ಯಾರೂ ಮಾತನಾಡುವುದಿಲ್ಲ. ಅಂತರ್ಜಾತಿಯ ಯುವತಿಯನ್ನು ಮದುವೆಯಾದ ದಲಿತ ಯುವಕನನ್ನು ಪತ್ನಿಯ ಕುಟುಂಬಸ್ಥರೇ ಹತ್ಯೆ ಮಾಡಿದ ಘಟನೆ ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಅದೊನಿ ಪಟ್ಟಣದಲ್ಲಿ ನಡೆದಿದೆ.
ಆ್ಯಡಮ್ ಸ್ಮಿತ್ ಹತ್ಯೆಗೀಡಾದ ಯುವಕನಾಗಿದ್ದು, 6 ತಿಂಗಳ ಹಿಂದೆಯಷ್ಟೆ ಹೈದರಾಬಾದಿನಲ್ಲಿ ಆರ್ಯ ಸಮಾಜದ ಮಹೇಶ್ವರಿ ಎಂಬ ಯುವತಿ ಸ್ಮಿತ್ ನನ್ನು ಇಷ್ಟಪಟ್ಟಿದ್ದು, ಆತನನ್ನ ವಿವಾಹವಾಗಿದ್ದಳು. ಮಹೇಶ್ವರಿ ಫಿಸಿಯೋಥೆರಪಿಸ್ಟ್ ಆಗಿದ್ದಳು. ಈ ಮದುವೆಗೆ ಮಹೇಶ್ವರಿ ಮನೆಯಲ್ಲಿ ತೀವ್ರ ವಿರೋಧವಿತ್ತು. ಆದರೂ ಇವರಿಬ್ಬರು ವಯಸ್ಕರಾಗಿದ್ದರಿಂದ ಮದುವೆಯಾಗಿದ್ದಾರೆ.
ಮದುವೆಯ ಬಳಿಕ ಮಹೇಶ್ವರಿ ಕುಟುಂಬಸ್ಥರು ಈ ಜೋಡಿಯ ಜೊತೆಗೆ ಏನೂ ಮಾತನಾಡುತ್ತಿರಲಿಲ್ಲ. ಆದರೂ ಮಹೇಶ್ವರಿ ಹಾಗೂ ಸ್ಮಿತ್ ಚೆನ್ನಾಗಿ ಜೀವನ ನಡೆಸುತ್ತಿದ್ದರು. ಇದನ್ನು ನೋಡಿ ಸಹಿಸದ ಮಹೇಶ್ವರಿ ಮನೆಯವರು ಒಳಗಿಂದೊಳಗೆ ಸ್ಕೆಚ್ ಹಾಕಿದ್ದರು. ಸ್ಮಿತ್ ಕೆಲಸ ಮುಗಿಸಿ ಮನೆಗೆ ಬರುತ್ತಿರುವ ಸಂದರ್ಭದಲ್ಲಿ ಬೈಕ್ ನಲ್ಲಿ ಅಡ್ಡಹಾಕಿದ ದುಷ್ಕರ್ಮಿಗಳು ಸ್ಮಿತ್ ನನ್ನು ಕಬ್ಬಿಣದ ರಾಡ್ ಗಳಿಂದ ಹೊಡೆದು, ಬಂಡೆಗೆ ತಲೆಯನ್ನು ಜಜ್ಜಿ, ಭೀಕರವಾಗಿ ಹತ್ಯೆ ಮಾಡಿದ್ದಾರೆ.
ದಲಿತ ಯುವಕನನ್ನು ಮದುವೆಯಾದ ಕಾರಣಕ್ಕಾಗಿ ನನ್ನ ಕುಟುಂಬಸ್ಥರು ಆ್ಯಡಂ ಸ್ಮಿತ್ ನನ್ನು ಹತ್ಯೆ ಮಾಡಿದ್ದಾರೆ ಎಂದು ಮಹೇಶ್ವರಿ ಹೇಳಿಕೆ ನೀಡಿದ್ದಾರೆ. ಈ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. ಕೃತ್ಯದ ಸಂಬಂಧ ಹಲವರನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.