ಮೋದಿ ಮೆಚ್ಚುಗೆ ಪಾತ್ರವಾದ ಆಪರೇಷನ್ ಎಲಿಫ್ಯಾಂಟ್ : ಕರೆಂಟ್ ಶಾಕ್ ನಿಂದ ಒದ್ದಾಡುತ್ತಿದ್ದ ಆನೆ ಉಳಿದಿದ್ದು ಹೇಗೆ ಗೊತ್ತಾ? - Mahanayaka
9:49 AM Thursday 17 - October 2024

ಮೋದಿ ಮೆಚ್ಚುಗೆ ಪಾತ್ರವಾದ ಆಪರೇಷನ್ ಎಲಿಫ್ಯಾಂಟ್ : ಕರೆಂಟ್ ಶಾಕ್ ನಿಂದ ಒದ್ದಾಡುತ್ತಿದ್ದ ಆನೆ ಉಳಿದಿದ್ದು ಹೇಗೆ ಗೊತ್ತಾ?

operation elephant
18/02/2023

ಚಾಮರಾಜನಗರ: ಪ್ರಧಾನಿ ನರೇಂದ್ರ ಮೋದಿ ಅವರಿಂದು ಮಾಡಿದ್ದ ಟ್ವೀಟ್ ವೊಂದು ಬಂಡೀಪುರ ಅರಣ್ಯ ಇಲಾಖೆಯಲ್ಲಿ ಸಂತಸ ಮನೆ ಮಾಡಿದ್ದು ಪಿಎಂ ಪ್ರಶಂಸೆಗೆ ಅಧಿಕಾರಿಗಳು ಆನಂದದಲ್ಲಿ ತೇಲುತ್ತಿದ್ದಾರೆ.

ಕಳೆದ ಮಂಗಳವಾರ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ್ ಅರಣ್ಯ ವಲಯಕ್ಕೆ ಒಳಪಡುವ ಗುಂಡ್ಲುಪೇಟೆ ತಾಲೂಕಿನ ಬರಗಿ ಗ್ರಾಮದ ಖಾಸಗಿ ಜಮೀನಿನಲ್ಲಿ ಅಕ್ರಮ ವಿದ್ಯುತ್ ಪ್ರವಹಿಸಿ ಅಂದಾಜು 25 ವರ್ಷದ ಹೆಣ್ಣಾನೆ ನರಳುತ್ತಿತ್ತು. ಮಾಹಿತಿ ಅರಿತ ಬಂಡೀಪುರ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪಶು ವೈದ್ಯರು ಚಿಕಿತ್ಸೆ ಕೊಟ್ಟು ಆನೆಯನ್ನು ಬದುಕಿಸಿದ್ದ ಘಟನೆಗೆ ಇಂದು ನರೇಂದ್ರ ಮೋದಿ ಟ್ವೀಟ್ ಮಾಡಿ ಸಂತಸ ವ್ಯಕ್ತಪಡಿಸಿದ್ದರು.‌ ಜೊತೆಗೆ, ಅರಣ್ಯ ಇಲಾಖೆ ಕಾರ್ಯವನ್ನು ಪ್ರಶಂಸಿದ್ದರು. ಕೇಂದ್ರ ಅರಣ್ಯ ಸಚಿವ ಭೂಪೇಂದ್ರ ಯಾದವ್ ಅವರೂ ಕೂಡ ಕಾರ್ಯವನ್ನು ಶ್ಲಾಘಿಸಿದ್ದರು.‌

ಅರಣ್ಯ ಸಚಿವರ ಟ್ವೀಟನ್ನು ಪ್ರಧಾನಿ ಮೋದಿ ಮರು ಟ್ವೀಟ್ ಮಾಡಿದ ಬಳಿಕ ಬಂಡೀಪುರ ಅರಣ್ಯ ಇಲಾಖೆ ಕಾರ್ಯವನ್ನು  ಲಕ್ಷಾಂತರ ಜನರು ನೋಡಿದ್ದು ಸಾವಿರಾರು ಮಂದಿ ಲೈಕ್ ಮಾಡಿ, ಕಮೆಂಟಿಸಿದ್ದಾರೆ.

ಆನೆ ಉಳಿವಿಗಾಗಿ ಹರಕೆ: ಬಂಡೀಪುರ ಎಸಿಎಫ್ ರವೀಂದ್ರ ಅವರು ಆನೆ ಸ್ಥಿತಿಯನ್ನು ಕಂಡು‌ ಮರುಗಿ ಮೈಸೂರಿನ ಚಾಮುಂಡೇಶ್ವರಿಗೆ ಹರಕೆ ಕಟ್ಟಿಕೊಂಡಿದ್ದರು ಎಂದು ತಿಳಿದುಬಂದಿದೆ. ಆನೆ  ಬಿದ್ದು ಒದ್ದಾಡುತ್ತಿದ್ದನ್ನು ಕಂಡಾಗ ಮನಸ್ಸು ತಡೆಯಲಾರದೇ ದೇವರಿಗೆ ಮೊರೆ ಇಟ್ಟೆ, ನಿನ್ನ ಮಡಿಲಿಗೆ ಈ ಪ್ರಾಣಿಯನ್ನು ಹಾಕಿದ್ದು ಬದುಕಿಸುವಂತೆ ಪ್ರಾರ್ಥಿಸಿಕೊಂಡೆ ದೈವಕೃಪೆಯಿಂದ ಆನೆ ಚೇತರಿಸಿಕೊಂಡಿತು ಎಂದು ರವೀಂದ್ರ ತಿಳಿಸಿದ್ದಾರೆ.

ನಿರಂತರ ಚಿಕಿತ್ಸೆ- 40 ಮಂದಿ ಪರಿಶ್ರಮ:

ಆನೆ ವಿದ್ಯುತ್ ಪ್ರವಹಿಸಿ ನರಳಾಡುತ್ತಿದೆ ಎಂಬ ಮಾಹಿತಿ ಅರಿತ ಕೂಡಲೇ ಒಂದು ತಾಸಿನಲ್ಲೇ ಸ್ಥಳಕ್ಕೆ ತೆರಳಿದ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ವೈದ್ಯರು ಪ್ರಾಥಮಿಕ ಚಿಕಿತ್ಸೆ ಕೊಡಲು ಮುಂದಾದರು. ಆ್ಯಂಟಿ ಬಯೋಟಿಕ್ ಹಾಗೂ ಇತರೆ ಇಂಜೆಕ್ಷನ್ ಕೊಟ್ಟಿದ್ದಾರೆ. ವಿದ್ಯುತ್ ಪ್ರವಹಿಸಿದ್ದರಿಂದ ನೀರಿನಂಶ ಇಲ್ಲದೇ ನಿತ್ರಾಣಗೊಂಡಿದ್ದ ಆನೆಗೆ 200 ಲೀ. ನಷ್ಟು ನೀರು ಕುಡಿಸಿದ್ದಾರೆ. ಚಿಕಿತ್ಸೆ ಕೊಟ್ಟ ಬಳಿಕವೂ ನಿಲ್ಲಲಾಗದೇ ಒದ್ದಾಡುತ್ತಿದ್ದಾಗ ಜೆಸಿಬಿ ಸಹಾಯದಿಂದ ಆನೆಗೆ ಗಾಯವಾಗದ ರೀತಿ ನಿಲ್ಲಿಸಿ ಕೊನೆಗೂ ಆನೆಯನ್ನು ಬದುಕಿಸಿದ್ದಾರೆ.

ಕರೆಂಟ್ ಶಾಕಿಗೆ ಒಳಪಟ್ಟ ಆನೆಯನ್ನು ಬದುಕಿಸಿರುವುದು ವಿರಳಾತಿ ಪ್ರಕರಣವಾಗಿದ್ದು ಬಂಡೀಪುರ ಅರಣ್ಯ ಇಲಾಖೆಯು ಇದನ್ನು ಸವಾಲಾಗಿ ಸ್ವೀಕರಿಸಿ ಗೆದ್ದೆವು, ಪ್ರಾಣಿ ಸಾಯಿಸುವಷ್ಟು ಮಾತ್ರ ಇಲ್ಲಾ ಅದನ್ಬು ಬದುಕಿಸುವವರು ಇದ್ದೇವೆ ಎಂಬುದನ್ನು ತೋರಿಸಬೇಕಿತ್ತು ಆ ಕೆಲಸ ಆಗಿದೆ. ಪ್ರಧಾನಿ, ಕೇಂದ್ರ ಅರಣ್ಯ ಸಚಿವರ ಜೊತೆಗೆ ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳು ನಮ್ಮ ಕೆಲಸವನ್ನು ಗುರುತಿಸಿ ಶ್ಲಾಘಿಸಿದ್ದಾರೆ ಎಂದು ಬಂಡೀಪುರ ಸಿಎಫ್ ಒ ರಮೇಶ್ ಕುಮಾರ್ ಸಂತಸ ವ್ಯಕ್ತಪಡಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ