ರೋಹಿಣಿ ಸಿಂಧೂರಿ ವಿರುದ್ಧ ಡಿ.ರೂಪಾ 19 ಆರೋಪ : ಡಿ.ಕೆ.ರವಿ ಹೆಸರೂ ಪ್ರಸ್ತಾಪ - Mahanayaka
12:57 AM Wednesday 11 - December 2024

ರೋಹಿಣಿ ಸಿಂಧೂರಿ ವಿರುದ್ಧ ಡಿ.ರೂಪಾ 19 ಆರೋಪ : ಡಿ.ಕೆ.ರವಿ ಹೆಸರೂ ಪ್ರಸ್ತಾಪ

d rupa vs rohini sindhuri
19/02/2023

ಬೆಂಗಳೂರು: ಕರ್ನಾಟಕದಲ್ಲಿ ಮಹಿಳಾ ಐಎಎಸ್ ​​– ಐಪಿಎಸ್ ಅಧಿಕಾರಿಗಳ​​​ ನಡುವೆ ವಾಕ್ಸಮರ​​​​ ಶುರುವಾಗಿದೆ. ಜೆಡಿಎಸ್‌ ಶಾಸಕ ಸಾ.ರಾ.ಮಹೇಶ್ ​ಹಾಗೂ ರೋಹಿಣಿ ಸಿಂಧೂರಿ ಸಂಧಾನ ಯತ್ನ ವಿಚಾರ ಮಾಧ್ಯಮಗಳಲ್ಲಿ ಬಹಿರಂಗವಾದ ಬೆನ್ನಲ್ಲೇ ರೋಹಿಣಿ ಸಿಂಧೂರಿ ವಿರುದ್ಧ ಡಿ.ರೂಪಾ ಮೌದ್ಗಿಲ್‌ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ರೂಪಾ, ರೋಹಿಣಿ ವಿರುದ್ಧ ಕರ್ತವ್ಯ ಲೋಪದ ಬಗ್ಗೆ ಆರೋಪಿಸಿದ್ದಾರೆ. ಕರ್ತವ್ಯ ಲೋಪ, ಭ್ರಷ್ಟಾಚಾರದ ಬಗ್ಗೆ ನನ್ನ ಬಳಿ ದಾಖಲೆ ಇದೆ ಎಂದಿದ್ದಾರೆ. ಡಿ.ರೂಪಾ ಅವರು ರೋಹಿಣಿ ವಿರುದ್ಧ 19 ಆರೋಪಗಳ ಪಟ್ಟಿ ಬಿಡುಗಡೆ ಮಾಡಿದ್ದಾರೆ.

‘ಶಾಸಕ ಸಾ.ರಾ.ಮಹೇಶ್ ಬಳಿ ರೋಹಿಣಿ ಸಂಧಾನಕ್ಕೆ ಹೋಗಿದ್ದರು’ ಸಂಧಾನಕ್ಕೆ ಹೋಗುವುದು ಅಂದರೆ ಅರ್ಥ ಏನು? ಎಂದು ಡಿ.ರೂಪ ಪ್ರಶ್ನೆ ಮಾಡಿದ್ದಾರೆ. ಯಾವ ಐಎಎಸ್ ಅಧಿಕಾರಿ ಕೂಡ ಎಂಎಲ್ಎ ಅಥವಾ ರಾಜಕೀಯ ವ್ಯಕ್ತಿಗಳ ಜೊತೆ, ತಾವು ನಿರ್ವಹಿಸಿದ ಕರ್ತವ್ಯ ನಿಮಿತ್ಯ ಸಂಧಾನಕ್ಕೆ ಹೋಗಿದ್ದು ನಾನು ಕೇಳಿದ್ದು ಇದೇ ಮೊದಲು ಎಂದು ರೂಪಾ ಗುಡುಗಿದ್ದಾರೆ.

ರೋಹಿಣಿ ಸಿಂಧೂರಿ ಸಂಧಾನಕ್ಕೆ ಹೋಗಿದ್ದು ಯಾಕೆ? ಆಕೆ ಏನನ್ನು ಮುಚ್ಚಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ? ತಮ್ಮ ಕರ್ತವ್ಯ ಲೋಪದ ಬಗ್ಗೆಯೋ, ತಮ್ಮ ಭ್ರಷ್ಟಾಚಾರ ಬಗ್ಗೆಯೋ ಏನು? ಎಂದು ರೂಪಾ ಪ್ರಶ್ನಿಸಿದ್ದಾರೆ.

ರೋಹಿಣಿ ವಿರುದ್ಧ ಡಿ.ರೂಪಾ ಮಾಡಿದ ಆರೋಪ ಪಟ್ಟಿ ಹೀಗಿದೆ..

1) ಡಿ.ಕೆ ರವಿ, ಐಎಎಸ್‌, ಸಂಭಾವಿತ ವ್ಯಕ್ತಿ. ಸಿಬಿಐ ರಿಪೋರ್ಟ್‌ನಲ್ಲಿ ಅವರ ಚಾಟ್ಸ್ ಬಗ್ಗೆ ಉಲ್ಲೇಖ ಇದ್ದು, ರವಿ ಅವರು ಎಂದಾದರೂ ಎಲ್ಲೆ ಮೀರಿ ಮೆಸೇಜ್ ಮಾಡಿದ ತಕ್ಷಣವೇ ಅವರನ್ನು ಬ್ಲಾಕ್ ಮಾಡಬಹುದಿತ್ತು. ಆದರೆ ರೋಹಿಣಿ, ಡಿ.ಕೆ ರವಿ ಅವರನ್ನು ಪರ್ಮನೆಂಟ್ ಆಗಿ ಬ್ಲಾಕ್ ಮಾಡಲಿಲ್ಲ. ಬ್ಲಾಕ್ ಮಾಡದೆ ಇದ್ದದ್ದು ಉತ್ತೇಜನ ಕೊಡುವ ಹಾಗೆ ಎಂಬಂತೆಯೇ ಕಾಣುತ್ತದೆ ಎಂಬುದು ಅನೇಕರ ಅಭಿಪ್ರಾಯ.

2) ಮುಂದೆ ಸಿಇಒ ಮಂಡ್ಯ ಆದಾಗ ಈಕೆ ಕಟ್ಟಿಸಿದ ಶೌಚಾಲಯಗಿಂತ ಹೆಚ್ಚು ತೋರಿಸಿ ನಕಲಿ ಸಹಿ ಮಾಡಿ ಕೇಂದ್ರ ಸರ್ಕಾರದ ಪ್ರಶಸ್ತಿ ತೆಗೆದುಕೊಂಡರು ಎಂಬ ಆರೋಪ ಕೇಳಿ ಬಂತು. ಅದರ ತನಿಖೆಯೇ ಆಗಲಿಲ್ಲ.

3) ಚಾಮರಾಜನಗರ 24 ಜನರು ಆಕ್ಸಿಜನ್ ಇಲ್ಲದೇ ಸತ್ತಾಗ, ಆಪಾದನೆಗಳು ಇವರ ಮೇಲೆ ನೇರವಾಗಿ ಬಂತು. ಅದರಿಂದ ಹೇಗೋ ಪಾರಾದರು.

4) ಕನ್ನಡದ ಐಎಎಸ್ ಅಧಿಕಾರಿ ಶಿಲ್ಪಾ ನಾಗ್ ಅವರ ಜೊತೆ ಜಗಳ, ರಂಪ. ಏತಕ್ಕಾಗಿ? ಅಲ್ಲಿ ಯಾವುದೇ ಮೌಲ್ಯಾಧಾರಿತ ವಸ್ತು ವಿಷಯ ಇರಲಿಲ್ಲ. ಕೋಳಿ ಜಗಳ. ಶಿಲ್ಪಾಗೆ ಹೆಚ್ಚು ಕೆಲಸ ಮಾಡಿದ್ದು, ಹೆಚ್ಚು ಅವರ ಬಗ್ಗೆ ಪಾಸಿಟಿವ್ ಆಗಿ ಬರೆಯಲಾಯಿತು. ಅದನ್ನು ಸಹಿಸಿಕೊಳ್ಳಲಾಗದೆ ಶಿಲ್ಪಾಗೆ ಕಿರುಕುಳ ನೀಡಿದರು ಎಂದು ಕೆಲವರು ಹೇಳಿದರು.

5) ಹರ್ಷ ಗುಪ್ತ ಐಎಎಸ್, ಅತ್ಯಂತ ಪ್ರಾಮಾಣಿಕ ಅಧಿಕಾರಿ. ಅವರ ಜೊತೆ ಜಗಳ. ಎಲ್ಲಾ ಐಎಎಸ್ ಅಧಿಕಾರಿಗಳಿಗೆ ಈ ವಿಷಯ ಗೊತ್ತಿದೆ.

6) ಮಣಿವಣ್ಣನ್ ಐಎಎಸ್ ಜೊತೆ ಲೇಬರ್/ ಕಾರ್ಮಿಕ ಇಲಾಖೆಯಲ್ಲಿ ಇದ್ದಾಗ ಜಗಳ ಮಾಡಿದ್ದು ಜಗಜನಿತ. ಮಣಿವಣ್ಣನ್ ಒಂದು ರೀತಿ ಅಜಾತಶತ್ರು. ಅವರ ಜೊತೆ ರೋಹಿಣಿ ಜಗಳ.

7) ಡಿ.ಕೆ. ರವಿ ತೀರಿ ಹೋದ ಕೆಲ ತಿಂಗಳು ಮುಂಚೆ ಕನ್ನಡದ ಹುಡುಗ, ಐಪಿಎಸ್ ಅಧಿಕಾರಿ ಎನ್‌ ಹರೀಶ್ ಅವರ ಜತೆ ರೋಹಿಣಿ ಮದುವೆಯಾಗಲಿದ್ದಾರೆ ಎಂಬ ವಿಚಾರ ಹರಿದಾಡಿತ್ತು. ಆದರೆ, ಆತ, ಈಕೆಗಾಗಿ ಕಾದು ಕಾದು ಆತ್ಮಹತ್ಯೆ ಮಾಡಿಕೊಂಡದ್ದು, ಎಂದು ಹಲವರು ಹೇಳಿದರೂ, ನಾನು ಅದನ್ನು ನಂಬಲಿಲ್ಲ, ಈಗೂ ನಂಬಿಲ್ಲ.

8) ಶಾಸಕ ಸಾ.ರಾ ಮಹೇಶ್ ಅವರ ಮೇಲೆ ಅನೇಕ ಆಪಾದನೆಗಳನ್ನು ಮಾಡಿದ ಈಕೆ ಒಂದನೂ ಸಾಬೀತು ಮಾಡಲಿಲ್ಲ. ಅದಕ್ಕೇ ಸಂಧಾನಕ್ಕೆ ಹೋದರಾ?

9) ಮೈಸೂರು ಸಂಸದ ಪ್ರತಾಪ್ ಸಿಂಹ ಅವರ ಮೇಲೆ ಕೂಡ ಅನೇಕರ ಬಳಿ ಈಕೆ ಸಾಬೀತು ಮಾಡಲಾರದ ಆರೋಪಗಳನ್ನು ಮಾಡಿದರು.

10) ಹಾಸನದಲ್ಲಿ ತನ್ನನ್ನು ಒಂದು ವರ್ಷದ ಒಳಗೆ ಎತ್ತಂಗಡಿ ಮಾಡಿದ ಸರ್ಕಾರದ ವಿರುದ್ಧ ಕೇಂದ್ರೀಯ ಆಡಳಿತ ನ್ಯಾಯಮಂಡಳಿಯಲ್ಲಿ ದಾವೆ ಹೂಡಿದರು. ಆ ದಾವೆಗೆ ಅರ್ಜಿ ಬರೆದು ಕೊಟ್ಟಿದ್ದೇ ನನ್ನ ಪತಿ ಮುನೀಶ್ ಮೌದ್ಗಿಲ್‌. ನನ್ನೆದುರಿಗೆ ಬರೆದ ಅರ್ಜಿಯನ್ನು ಆಕೆಗೆ, ಆಕೆಯ ತಂದೆಗೆ, ವಕೀಲರಿಗೆ ಕಳಿಸಿದ್ದರು. ಆದರೆ ಈಕೆ, ಮೈಸೂರು ಡಿಸಿ ಆಗಿ ಹೋದದ್ದು ಹೇಗೆ? ತನಗಿಂತ ಕೇವಲ 29 ದಿನ ಮುಂಚೆ ಮೈಸೂರಿಗೆ ಡಿಸಿ ಎಂದು ವರ್ಗಾವಣೆ ಆಗಿದ್ದ ಕನ್ನಡ ಹುಡುಗ ಶರತ್ ಅವರನ್ನು ಒಕ್ಕಲೆಬ್ಬಿಸಿದ್ದು ನ್ಯಾಯವೇ? ತನ್ನಂತೆ ಪರರು ಎಂಬ ಭಾವನೆ ಇಲ್ಲವೇಕೆ? 29 ದಿನದಲ್ಲಿ ಯಾವುದೇ ಕಳಂಕ, ಆರೋಪ ಇಲ್ಲದ ಶರತ್‌ರನ್ನು ಬದಲಾವಣೆ ಮಾಡಿದ್ದು ಈಕೆ ಯಾವ ಉನ್ನತ ಮಟ್ಟದ ಪ್ರಭಾವದಿಂದಾ?

11) ಡಾ,ರವಿಶಂಕರ್, ಐಎಎಸ್‌ ಈಕೆಯ ಮೇಲೆ ಪ್ರಾಥಮಿಕ ತನಿಖೆಯಲ್ಲಿ ತಪ್ಪುಮಾಡಿರುವುದು ಸಾಬೀತಾಗಿದೆ. ಮೈಸೂರಿನ ಡಿಸಿ ಮನೆ, ಪಾರಂಪರಿಕ ಕಟ್ಟಡ ಅಂತಾ ಇದ್ದರೂ ಅಲ್ಲಿ ಟೈಲ್ಸ್ ಹಾಕಿದ್ದು, ಸ್ವಿಮ್ಮಿಂಗ್ ಪೂಲ್ ಮಾಡಿದ್ದು. ಮನುಷ್ಯತ್ವ ಇರೋರು ಕೋವಿಡ್‌ ಸಮಯದಲ್ಲಿ ಜನ ಸಾಯುತ್ತಿರುವಾಗ ಸ್ವಿಮ್ಮಿಂಗ್ ಪೂಲ್ ಕಟ್ಟಿಸಿಕೊಳ್ತಾರ

12) ಹಿಂದೆ ನನಗೆ ಒಬ್ಬರು ವಾಟ್ಸಾಪ್‌ ಮೆಸೇಜ್ ಮಾಡಿ ತಾವು ಇವರ ಪರವಾಗಿ ನಡೆಸುವ ಸಾಮಾಜಿಕ ಮಾಧ್ಯಮ ನಿರ್ವಹಣೆ ಏಜನ್ಸಿ ಒಂದರಲ್ಲಿ ಕೆಲಸ ಮಾಡಿದ್ದು, ಈಗ ಆ ಕೆಲಸ ಬಿಟ್ಟಿದ್ದೇನೆಎಂದು ಹೇಳುತ್ತ, ಹೇಗೆ ಅಲ್ಲಿ ಈಕೆಯ ಪರವಾಗಿ ಸುದ್ದಿ, ಫೋಟೊ, ವಿಡಿಯೊ ಸೃಷ್ಟಿ ಮಾಡುತ್ತಾರೆ, ಹೇಗೆ ಈಕೆಯ ವಿರುದ್ಧ ಇರುವವರ ಟ್ರೋಲ್ ಮಾಡುವ ಪಠ್ಯ ಹಾಗೂ ಹ್ಯಾಂಡಲ್‌ಗಳು ತಯಾರಾಗುತ್ತವೆ ಎಂಬುದು ಹೇಳಿದ್ದರು.

13) ಈಕೆಯ ಮೇಲೆ ಅಗ್ಗದ ಬ್ಯಾಗ್‌ ಗಳನ್ನೂ ಅತಿ ಹೆಚ್ಚು ಬೆಲೆಗೆ ಮಾರಾಟ ಮಾಡಿರುವ ಕಂಪ್ಲೈಂಟ್ ಲೋಕಾಯುಕ್ತದಲ್ಲಿ ದಾಖಲಾಗಿದ್ದು, ಅದರ ತನಿಖೆ ಕೈಗೆತ್ತಿಕೊಳ್ಳಲು ಲೋಕಾಯುಕ್ತ ಈಗಾಗಲೇ ಸರ್ಕಾರಕ್ಕೆ ಬರೆದಿದ್ದರೂ ಸರ್ಕಾರ ಮಟ್ಟದಲ್ಲಿ ಕಾರಣ ಕೊಡದೆ ಆಕೆಯನ್ನು ತನಿಖೆಗೆ ಒಳಪಡಿಸಲು ಅನುಮತಿ ನಿರಾಕರಣೆ ಮಾಡಲಾಗಿದೆ. ಅದರ ಕಾಪಿ ನನ್ನ ಬಳಿ ಇದೆ. ಸಾಮಾನ್ಯವಾಗಿ ಅಧಿಕಾರಿಗಳಿಗೆ ಈ ರೀತಿಯ ಬೆಂಬಲ ಇರುತ್ತದೆಯೇ?

14) ಈಕೆ ಕೆಲವು ಐಎಎಸ್ ಅಧಿಕಾರಿಗಳಿಗೆ, ಒಂದಲ್ಲ, ಎರಡಲ್ಲ, ಅನೇಕರಿಗೆ ತನ್ನ ಅಷ್ಟು ಯೋಗ್ಯವಾಗಿಲ್ಲದ (not so decent) ಚಿತ್ರಗಳನ್ನು ಕಳಿಸಿರುವ, ಹಾಗೂ ಅವರನ್ನು ಉತ್ತೇಜಿಸುವ ಕಾರ್ಯ ಮಾಡಿರುವ ಆಪಾದನೆ ಇದೆ. ಆ ಫೋಟೊಗಳು ನನಗೆ ಸಿಕ್ಕಿವೆ. ಇದು ಖಾಸಗಿ ವಿಷಯ ಆಗುವುದಿಲ್ಲ.

15) ಮೊನ್ನೆ ಇವರ ಭಾವ ಮಧುಸೂಧನ್ ರೆಡ್ಡಿ ಅವರು, ಲಕ್ಕಿ ಅಲಿ ಎಂಬ ಗಾಯಕರ ಜಾಗಕ್ಕೆ 20ರಿಂದ 30 ಜನರನ್ನು ಕರೆದುಕೊಂಡು ಹೋಗಿ ರೌಡಿಸಂ ಮಾಡಿರುವ ವಿಷಯ ಮಾಧ್ಯಮಗಳಲ್ಲಿ ಬಂತು. ಈಕೆಯು ತನ್ನ ಐಎಎಸ್ ಪ್ರಭಾವ ಬಳಸಿ ದುರುಪಯೋಗ ಮಾಡಿಕೊಂಡು ಇರುವುದಾಗಿ ಲಕ್ಕಿ ಅಲಿ ಆರೋಪ ಮಾಡಿದ್ದರು. ವ್ಯಾಜ್ಯದ ಜಮೀನಿಗೆ 20 ರಿಂದ 30 ಜನ ಕರೆದುಕೊಂಡು ಹೋಗಿ ಕಾನೂನು ಕೈಗೆ ತೆಗೆದುಕೊಳ್ಳಬಹುದು? ಈ ರೀತಿಯ ಭಂಡ ಧೈರ್ಯ ಎಲ್ಲಿಂದ ಬರುತ್ತದೆ? ಐಎಎಸ್ ಅಧಿಕಾರದಿಂದ?

16) ಇವರ ಗಂಡ , ಹಾಗೂ ಇವರ ಮಾವನವರು (ಈಗ ತೀರಿ ಹೋಗಿದ್ದಾರಂತೆ) ರಿಯಲ್ ಎಸ್ಟೇಟ್ ಬ್ಯುಸಿನೆಸ್ ನಡೆಸುತ್ತಾರೆ. ಅನೇಕ ಬಾರಿ ಸರ್ವೇ ಹಾಗೂ ಭೂ ದಾಖಲೆ ಕಚೇರಿಯ ಮೂಲಕ ತನ್ನ ಕುಟುಂಬದ ವ್ಯವಹಾರಕ್ಕೆ ಅಗತ್ಯ ಇರುವ ಅನೇಕ ಭೂ ದಾಖಲೆ ಮಾಹಿತಿ, ಅಂದರೆ, ಒಂದು ಭೂಮಿಯ ಫೋಡಿ, ಇನ್ನೊಂದರ ಬಗ್ಗೆ ಅದು ವ್ಯಾಜ್ಯ ಇರುವ ಭೂಮಿಯೇ ಅಥವಾ ಖರೀದಿಸಲು ಯೋಗ್ಯವೇ ಎಂಬಂತಹ ಮಾಹಿತಿಗಳನ್ನು ತಮ್ಮ ಐಎಎಸ್ ಸ್ಥಾನ ಅಧಿಕಾರದಿಂದ ಪಡೆದು ಕೊಂಡಿರುವ ಮಾಹಿತಿ ದಾಖಲೆ ಸಮೇತ ಇದ್ದು, ಇದರ ಮೇಲೆ ಕ್ರಮ ಆಗುತ್ತದೆಯೇ? ನೋಡಬೇಕು.

17) ಅನೇಕ ಬಾರಿ ಸರ್ಕಾರ ಅಧಿಕಾರಿಗಳನ್ನು ವರ್ಗಾವಣೆ ಮಾಡಿದಾಗ ಆ ಜಾಗದಲ್ಲಿ ಇದ್ದವರು ಕ್ಯಾಟ್/ಕೋರ್ಟ್‌ಗೆ ಹೋಗುವುದು ಸಹಜ. ನಾನು 3 ವರ್ಷ ದೂರದ ಯಾದಗಿರಿಯಲ್ಲಿ ಕೆಲಸ ಮಾಡಿ, ಬೆಂಗಳೂರಿಗೆ ನನಗೆ ವರ್ಗವಾದಾಗ, ಆ ಜಾಗದಲ್ಲಿ ಇದ್ದ ಅಧಿಕಾರಿ ಪವಾರ್ ಅವರು ನನ್ನ ವರ್ಗಾವಣೆ ಪ್ರಶ್ನಿಸಿ ಕ್ಯಾಟ್‌ಗೆ ಹೋದರು. ಆದರೆ, ರೋಹಿಣಿ ಸಿಂಧೂರಿಗೆ ಸಾಕ್ಷಾತ್ ಅಡ್ವೊಕೇಟ್ ಜನರಲ್ ಅವರೇ ಬಂದು ವಾದ ಮಾಡಿದರಲ್ಲ, ಮೈಸೂರು ಡಿಸಿ ವರ್ಗಾವಣೆ ವಿಷಯದಲ್ಲಿ, ಆ ಸೌಲಭ್ಯ ನನಗೇಕೆ ಸಿಗಲಿಲ್ಲ? ನನ್ನಂತಹ ಕನ್ನಡಿಗ ಅಧಿಕಾರಿಗಳು, ಹೇಗೆ ನಡೆಸಿ ಕೊಂಡರೂ ಸುಮ್ಮನೆ ಇರ್ತಾರೆ ಅಂತಲೇ? ಸ್ವತಃ ಅಡ್ವೊಕೇಟ್ ಜನರಲ್ ಹಾಜರಾಗಿ ವಾದ ಮಾಡಿದ್ದು ಈಕೆಗಲ್ಲದೆ ಮತ್ಯಾವ ಅಧಿಕಾರಿಗೂ ಈ ಸೌಲಭ್ಯ ಸಿಕ್ಕಿಲ್ಲ. ಯಾಕೆ ಈ ಮಲತಾಯಿ ಧೋರಣೆ?

18) ಈಕೆ ಪ್ರೊಬೇಷನರಿ ಅಂತ ಇದ್ದಾಗ, ಅಲ್ಲಿಯ ಡಿಸಿ, ಹಾಗೂ ಅವರ ಪತ್ನಿ ನೆರೆಯ ಜಿಲ್ಲೆಯ ಡಿಸಿ, ಇವರಿಬ್ಬರ ಸಂಸಾರದಲ್ಲಿ ಹುಳಿ ಬಿದ್ದು ಅವರು ಬೇರ್ಪಟ್ಟಿದ್ದಾರೀಗ ಹಾಗೂ ಇದು ಈಕೆಯ ದೆಸೆಯಿಂದ ಎಂಬ ಮಾತು ಅನೇಕರ ಬಾಯಲ್ಲಿ ಕೇಳಿದ್ದೇನೆ.

19) ಜಾಲಹಳ್ಳಿಯಲ್ಲಿ ಈಕೆಯ (ಪತಿಯದ್ದು ಇದ್ದರೂ ಈಕೆಯದೂ ಆಗುತ್ತದೆ) ದೊಡ್ಡ ಮನೆ ಒಂದು ಕಟ್ಟುತ್ತಿದ್ದು, ಐಎಎಸ್ ಅಧಿಕಾರಿ ಸಲ್ಲಿಸಬೇಕಾದ ಆಸ್ತಿ ವಿವರದಲ್ಲಿ ಈ ಮನೆಯ ಬಗ್ಗೆ ಉಲ್ಲೇಖ ಇರದೆ, ಬೇರೆಲ್ಲಾ ಲಂಗು ಲೊಟ್ಟು ಆ ಬಗ್ಗೆ ವರದಿ ಕೊಟ್ಟಿದ್ದಾರೆ. ಆ ಮನೆಗೆ ಕೋಟಿಗಟ್ಟಲೆ ಇಟಲಿ ಫರ್ನೀಚರ್, 26 ಲಕ್ಷದ ಜರ್ಮನ್ ಉಪಕರಣಗಳು ಬಗ್ಗೆ ಈಕೆ ಮಾಡಿರುವ ಚಾಟ್‌ಗಳ ಮಾಹಿತಿ ಸರ್ಕಾರಕ್ಕೆ ಸಿಕ್ಕಿದೆ. ಇದರ ಮೇಲೆ ಕೂಲಂಕುಷ ತನಿಖೆ ಆಗುವುದೇ ನೋಡಬೇಕಿದೆ. ಇಷ್ಟೆಲ್ಲಾ ಆದ್ರೂ, ಯಾರು ಪ್ರತಿ ಬಾರಿ ಈಕೆಯನ್ನು ತನಿಖೆಗೂ ಒಳ ಪಡಿಸದೇ ಬಚಾವ್ ಮಾಡುತ್ತಾ ಇರುವುದು. ಈಕೆ ಕೆಮ್ಮಿದ್ದೂ ಕ್ಯಾಕರಿಸಿದ್ದೂ ತಮ್ಮ ಟಿಆರ್‌‍ಪಿಗೋಸ್ಕರ ಹಾಕುವ ಮಾಧ್ಯಮದವರೇ ಈಕೆಯನ್ನು ಹೀರೋ/ ಹೀರೋಯಿನ್ ಮಾಡುವ ಮೂಲಕ ಈಕೆ ಯಾವುದೇ ಶಿಕ್ಷೆಯಿಲ್ಲದೆ ಪ್ರತಿ ಬಾರಿ ಬಚಾವ್ ಆಗಿರುವುದೇ? ಅಥವಾ ಕಿಂದರಿ ಜೋಗಿ ಮಾದಿದರೀತಿಯಲ್ಲಿ ಸರ್ಕಾರದಲ್ಲಿ ಇರುವ ಪ್ರಭಾವಿಗಳು ಕಿಂದರಿ ಜೋಗಿಯ ಪಾಶಕ್ಕೆ ಸಿಲುಕಿದರೆ?

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ