ಮೃತಪಟ್ಟು 20ದಿನಗಳ ಕಾಲ ಮನೆಯಲ್ಲಿಯೇ ಉಳಿದ ಮಹಿಳಾ ಪೇದೆಯ ಮೃತದೇಹ | ಅರ್ಚಕನ ವಿಕೃತಿಯನ್ನು ನಂಬಿದ ಅಮಾಯಕರು!
ಚೆನ್ನೈ: ಅರ್ಚಕನ ವಿಕೃತಿಗೆ ಮಹಿಳಾ ಕಾನ್ಸ್ ಸ್ಟೇಬಲ್ ಸಾವನ್ನಪ್ಪಿದ್ದರೆ, ಅವರ ಮಕ್ಕಳು 20 ದಿನಗಳವರೆಗೆ ಮೃತದೇಹವನ್ನು ಮನೆಯಲ್ಲಿಯೇ ಇಟ್ಟುಕೊಂಡ ಘಟನೆ ಅಮಾನವೀಯ ಘಟನೆ ತಮಿಳುನಾಡಿನ ದಿಂಡಿಗಲ್ ನಲ್ಲಿ ನಡೆದಿದೆ.
ದಿಂಡಿಗಲ್ ಪೊಲೀಸ್ ಠಾಣೆಯಲ್ಲಿ ಮಹಿಳಾ ಪೇದೆಯಾಗಿ ಕೆಲಸ ಮಾಡುತ್ತಿದ್ದ ಇಂದಿರಾ ಎಂಬವರು ಕಿಡ್ನಿ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ತಮ್ಮ ರೋಗದ ಹಿನ್ನೆಲೆಯಲ್ಲಿ ನಿವೃತ್ತಿ ಪಡೆಯಲು ಬಯಸಿದ್ದ ಅವರು ನಿವೃತ್ತಿಗಾಗಿ ಅರ್ಜಿ ಕೂಡ ಸಲ್ಲಿಸಿದ್ದರು. ಅರ್ಜಿ ಸಲ್ಲಿಸಿದ ಬಳಿಕ ಸುಮಾರು ದಿನಗಳವರೆಗೆ ಇಂದಿರಾ ಅವರು ಠಾಣೆಗೆ ಬಂದಿರಲಿಲ್ಲ. ಹೀಗಾಗಿ ಯಾಕೆ ಅವರು ಠಾಣೆಗೆ ಬರುತ್ತಿಲ್ಲ ಎಂದು ವಿಚಾರಿಸಲು ಸಹೋದ್ಯೋಗಿಗಳು ಮನೆಗೆ ತೆರಳಿದ್ದಾಗ ಅಲ್ಲೊಂದು ವಿಚಿತ್ರ ಸನ್ನಿವೇಶ ಅವರಿಗೆ ಎದುರಾಗಿತ್ತು.
ಇಂದಿರಾ ಅವರ ಮನೆಗೆ ಪೊಲೀಸರು ಬಂದಾಗ ಅವರ ಮನೆಯಲ್ಲಿ 13 ವರ್ಷದ ಮಗ ಹಾಗೂ 9 ವರ್ಷದ ಮಗಳು ಇವರಿಗೆ ಎದುರಾಗಿದ್ದಾರೆ. ಅಮ್ಮ ಎಲ್ಲಿದ್ದಾರೆ ಎಂದು ಪ್ರಶ್ನಿಸಿದಾಗ , “ಅಮ್ಮ ಮಲಗಿದ್ದಾರೆ, ಅವರು ಏಳುವುದಿಲ್ಲ, ಎದ್ದರೆ ದೇವರು ಶಾಪಕೊಡುತ್ತಾರೆ” ಎಂದು ಹೇಳಿದ್ದಾರೆ.
ಮಕ್ಕಳ ಮಾತು ಕೇಳಿದಾಗ ಸಹೋದ್ಯೋಗಿಗಳಿಗೆ ಇಲ್ಲೇನೋ ನಡೆದಿದೆ ಎಂಬ ಅನುಮಾನ ಬಂದಿದ್ದು, ತಕ್ಷಣವೇ ತಮ್ಮ ಮೇಲಾಧಿಕಾರಿಗಳಿಗೆ ಅವರು ವಿಷಯ ಮುಟ್ಟಿಸಿದ್ದಾರೆ. ತಕ್ಷಣವೇ ಮನೆಗೆ ಪೊಲೀಸರು ಬಂದಿದ್ದು, ಈ ವೇಳೆ ಇಂದಿರಾ ಅವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಹಾಸಿಗೆಯ ಮೇಲೆ ಮಲಗಿಸಲಾಗಿತ್ತು. ಒಳಗೆ ಇಂದಿರಾ ಅವರ ತಂಗಿ ಹಾಗೂ ಒಬ್ಬ ಅರ್ಚಕ ಕೂಡ ಇದ್ದು, ಸುತ್ತಾ ಪೂಜಾ ಸಾಮಗ್ರಿಗಳು, ಪೂಜೆ ಮಾಡಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಇಲ್ಲಿನ ವಿಚಿತ್ರ ಸ್ಥಿತಿಯನ್ನು ಗಮನಿಸಿದ ಪೊಲೀಸರು, ಅರ್ಚಕನನ್ನು ಪ್ರಶ್ನಿಸಿದ್ದು, ಈ ವೇಳೆ, ಇಂದಿರಾ ಅವರು ಅಸ್ವಸ್ಥರಾಗಿ ಬಿದ್ದಿದ್ದು, ಈ ವೇಳೆ ಇದೇ ಅರ್ಚಕನನ್ನು ಕರೆಯಲಾಗಿತ್ತು. ಈ ಅರ್ಚಕ ಇಂದಿರಾ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಬಿಡದೇ, ಆಸ್ಪತ್ರೆಗೆ ಸಾಗಿಸಿದರೆ, ದೇವರು ಕೋಪ ಮಾಡಿಕೊಳ್ಳುತ್ತಾರೆ ಎಂದು ಹೇಳಿದ್ದಾನೆ. ಇದರಿಂದಾಗಿ ಇಂದಿರಾ ಅವರು ಅದೇ ದಿನ ಮೃತಪಟ್ಟಿದ್ದಾರೆ. ಬಳಿಕ ಮನೆಯ ಬಾಗಿಲು ಹಾಕಿಸಿ ಪೂಜೆ ಮಾಡಿದ್ದು, ಇಂದಿರಾ ಅವರ ಆತ್ಮವನ್ನು ಮತ್ತೆ ಮೃತದೇಹದೊಳಗೆ ಸೇರಿಸುವುದಾಗಿ ಅಮಾಕರಾದ ಇಂದಿರಾ ಅವರ ತಂಗಿ ಹಾಗೂ ಪುಟ್ಟ ಮಕ್ಕಳನ್ನು ನಂಬಿಸಿದ್ದಾನೆ. ಇದರಿಂದಾಗಿ 20 ದಿನಗಳಿಂದ ಕೊಳೆತ ಮೃತದೇಹದೊಂದಿಗೆ ಇವರು ಜೀವನ ನಡೆಸುವಂತಾಗಿತ್ತು. ಈ ಸಂಬಂಧ ಇದೀಗ ಅರ್ಚಕ ಹಾಗೂ ಇಂದಿರಾ ಅವರ ತಂಗಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ಮುಂದುವರಿದಿದ್ದಾರೆ.