ಡಾ.ಸಿ.ಎನ್.ಅಶ್ವತ್ಥನಾರಾಯಣ ಅಪಮಾನ ಮಾಡಿದ್ದಾರೆ: ಶಾಸಕಿ ಅನಿತಾ ಕುಮಾರಸ್ವಾಮಿ ಗುಡುಗು
ಬೆಂಗಳೂರು: ಉನ್ನತ ಶಿಕ್ಷಣ ಸಚಿವ ಹಾಗೂ ರಾಮನಗರ ಉಸ್ತುವಾರಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರ ವಿರುದ್ಧ ರಾಮನಗರ ವಿಧಾನಸಭೆ ಕ್ಷೇತ್ರದ ಶಾಸಕರಾದ ಅನಿತಾ ಕುಮಾರಸ್ವಾಮಿ ಅವರು, ಶಿಷ್ಟಾಚಾರ ಉಲ್ಲಂಘನೆ ಹಾಗೂ ಹಕ್ಕುಚ್ಯುತಿ ಆರೋಪ ಮಾಡಿದ್ದಾರೆ.
ಹಾರೋಹಳ್ಳಿ ತಾಲೂಕು ಕಚೇರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಆಗಿರುವ ಅಶ್ವತ್ಥನಾರಾಯಣ ನಾರಾಯಣ ಅವರು, ತಮ್ಮನ್ನು ಕಡೆಗಣಿಸಿ ಅಪಮಾನ ಮಾಡಿದ್ದಾರೆ. ಉನ್ನತ ಶಿಕ್ಷಣ ಸಚಿವರ ಉನ್ನತ ಮೌಲ್ಯ ಇದೇನಾ? ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉತ್ತರ ಕೊಡಬೇಕು ಹಾಗೂ ಈ ಬಗ್ಗೆ ವಿಧಾನಸಭೆ ಸಭಾಧ್ಯಕ್ಷರು, ಹಕ್ಕು ಭಾದ್ಯತಾ ಸಮಿತಿ ಅಧ್ಯಕ್ಷರಿಗೆ ದೂರು ಕೊಡಲಾಗುವುದು ಎಂದು ಅವರು ತಿಳಿಸಿದ್ದಾರೆ. ಈ ಬಗ್ಗೆ ಅನಿತಾ ಕುಮಾರಸ್ವಾಮಿ ಅವರು ಸರಣಿ ಟ್ವೀಟ್ ಮಾಡಿದ್ದಾರೆ.
ಅವರ ಟ್ವೀಟ್ ನ ಪೂರ್ಣ ಪಾಠ ಇಲ್ಲಿದೆ:
ಹಾರೋಹಳ್ಳಿ ತಾಲೂಕು ಕಚೇರಿ ಲೋಕಾರ್ಪಣೆಗೊಳಿಸುವ ವಿಷಯದಲ್ಲಿ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ತೋರಿದ ಆತುರ ನನಗೆ ಅಚ್ಚರಿ ಉಂಟು ಮಾಡಿದೆ. ರಾಜಕೀಯಕ್ಕಾಗಿ ಶಿಷ್ಟಾಚಾರವನ್ನು ಹತ್ತಿಕ್ಕಿ, ಓರ್ವ ಮಹಿಳಾ ಶಾಸಕಿಯನ್ನು ಅಪಮಾನಿಸುವುದು ಎಷ್ಟು ಸರಿ ಎನ್ನುವುದು ನನ್ನ ಪ್ರಶ್ನೆ.
ಹಾರೋಹಳ್ಳಿ ತಾಲೂಕು ಕೇಂದ್ರ ರಚನೆಗೆ ಕಾರಣಕರ್ತರು ಯಾರು? ಎನ್ನುವುದು ಜನತೆಗೆ ಗೊತ್ತಿದೆ. ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಹೆಚ್.ಡಿ.ಕುಮಾರಸ್ವಾಮಿ ಅವರ ಒತ್ತಾಸೆ ಹಾಗೂ ನನ್ನ ಬದ್ಧತೆಯ ಕುರುಹಾಗಿ ಹಾರೋಹಳ್ಳಿ ತಾಲೂಕು ಕೇಂದ್ರವಾಗಿ ಹೊರಹೊಮ್ಮಿದೆ. ಕುಮಾರಸ್ವಾಮಿ ಅವರೇ ಹಾರೋಹಳ್ಳಿ ತಾಲೂಕು ಕೇಂದ್ರ ಘೋಷಣೆ ಮಾಡಿದ್ದು. ಉಸ್ತುವಾರಿ ಸಚಿವರಿಗೆ ಇದೆಲ್ಲಾ ಗೊತ್ತಿಲ್ಲವೆ?
ಹಾರೋಹಳ್ಳಿ ತಾಲೂಕು ಕೇಂದ್ರದ ಅಭಿವೃದ್ಧಿಗೆ ನಾನು ಸಾಕಷ್ಟು ಅನುದಾನ ತಂದಿದ್ದೇನೆ. ನಾನು ಮತ್ತು ಶ್ರೀ ಕುಮಾರಸ್ವಾಮಿ ಅವರು ರಾಜಕೀಯವನ್ನು ಬದಿಗಿಟ್ಟು ರಾಮನಗರ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದ್ದೇವೆ. ಆದರೆ, ಪ್ರತಿ ಸಣ್ಣ ವಿಷಯದಲ್ಲಿಯೂ ರಾಜಕೀಯ ಹುಡುಕುವ ಉಸ್ತುವಾರಿ ಸಚಿವರಿಗೆ, ಶಾಸಕರು ಕೂಡ ಉತ್ತರದಾಯಿ ಎನ್ನುವ ಸಾಮಾನ್ಯ ಜ್ಞಾನ ಇಲ್ಲದಾಯಿತಲ್ಲ ಎನ್ನುವುದು ನನಗೆ ಬೇಸರ ಉಂಟು ಮಾಡಿದೆ.
ಕ್ಷೇತ್ರದಲ್ಲಿ ಯಾವುದೇ ಸರಕಾರಿ ಕಾರ್ಯಕ್ರಮ ನಡೆದರೂ ಅದರ ಅಧ್ಯಕ್ಷತೆ ಆಯಾ ಕ್ಷೇತ್ರದ ಶಾಸಕರು ವಹಿಸಬೇಕು. ಇದು ಶಿಷ್ಟಾಚಾರ ಮಾತ್ರವಲ್ಲ, ಶಾಸಕರ ಹಕ್ಕು ಕೂಡ. ಆದರೆ, ಸಚಿವರು ನನ್ನ ಹಕ್ಕು ಕಸಿದುಕೊಂಡಿದ್ದಾರೆ. ಇದು ಅನ್ಯಾಯದ ಪರಮಾವಧಿ. ಬಿಜೆಪಿ ಸರಕಾರದಲ್ಲಿ ಮಹಿಳೆಯರಿಗೆ ಸಿಗುತ್ತಿರುವ ಗೌರವ ಈ ರೀತಿಯದ್ದು.
ಮಾನ್ಯ ಸಚಿವರಿಗೆ ಹಾರೋಹಳ್ಳಿ ತಾಲೂಕು ಕೇಂದ್ರದ ಅಭಿವೃದ್ಧಿಗೆ ನಾನು ಮತ್ತು ಶ್ರೀ ಕುಮಾರಸ್ವಾಮಿ ಅವರು ನಡೆಸಿರುವ ಪ್ರಯತ್ನಗಳು, ತಂದ ಅನುದಾನದ ಬಗ್ಗೆ ಮಾಹಿತಿ ಇಲ್ಲದಿದ್ದರೆ ಮೊದಲು ದಾಖಲೆಗಳನ್ನು ಪರಿಶೀಲನೆ ಮಾಡಲಿ, ಅದಕ್ಕೂ ಸಮಯ ಇಲ್ಲ ಎಂದಾದರೆ ಅವರ ಸಂಪುಟ ಸಹೋದ್ಯೋಗಿ, ಕಂದಾಯ ಸಚಿವರಾದ ಶ್ರೀ ಆರ್.ಅಶೋಕ್ ಅವರನ್ನು ಸಂಪರ್ಕ ಮಾಡಲಿ.
ಜನರ ಸಂಕಷ್ಟಗಳ ಪರಿಹಾರ, ಅಭಿವೃದ್ಧಿ ವಿಷಯದಲ್ಲಿ ನಾನಾಗಲಿ, ಶ್ರೀ ಕುಮಾರಸ್ವಾಮಿ ಅವರಾಗಲಿ ಅಥವಾ ನಮ್ಮ ಪಕ್ಷವಾಗಲಿ ಕ್ಷುಲ್ಲಕ ರಾಜಕೀಯ ಮಾಡಿಲ್ಲ, ಮಾಡುವುದೂ ಇಲ್ಲ. ಅಂತಹ ರಾಜಕೀಯದಲ್ಲಿ ನಿಪುಣರಾಗಿರುವ ಬಿಜೆಪಿಗರಿಗೆ ಶಿಷ್ಟಾಚಾರ ಎನ್ನುವುದು ಗೊತ್ತಿರಲು ಹೇಗೆ ಸಾಧ್ಯ? ಉನ್ನತ ಶಿಕ್ಷಣ ಸಚಿವರ ಉನ್ನತ ಮೌಲ್ಯ ಎಂದರೆ, ಮಹಿಳಾ ಶಾಸಕರನ್ನು ಅಪಮಾನಿಸುವುದಾ?
ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಅವರು ಇದಕ್ಕೆ ಉತ್ತರ ನೀಡಬೇಕು ಹಾಗೂ ಶಾಸಕಿಗೆ ಅಪಮಾನಿಸಿದ ಸಚಿವರ ನಡೆಯನ್ನು ಖಂಡಿಸಬೇಕು. ಈ ಬಗ್ಗೆ ನನಗೆ ಬಹಳ ನೋವಾಗಿದೆ. ಮಾನ್ಯ ಸಭಾಧ್ಯಕ್ಷರು ಹಾಗೂ ಹಕ್ಕು ಭಾದ್ಯತಾ ಸಮಿತಿ ಅಧ್ಯಕ್ಷರಿಗೆ ದೂರು ಸಲ್ಲಿಸಲಾಗುವುದು ಎಂದು ಅನಿತಾ ಕುಮಾರಸ್ವಾಮಿ ಹೇಳಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw