ಕುದುರೆಮುಖ ರಾಷ್ಟ್ರೀಯ ಉದ್ಯಾನವನದದಲ್ಲಿ ಕಾಡ್ಗಿಚ್ಚು: ಬೆಂಕಿ ನಂದಿಸಲು ಸಿಬ್ಬಂದಿ ಹರಸಾಹಸ - Mahanayaka
12:07 AM Thursday 12 - December 2024

ಕುದುರೆಮುಖ ರಾಷ್ಟ್ರೀಯ ಉದ್ಯಾನವನದದಲ್ಲಿ ಕಾಡ್ಗಿಚ್ಚು: ಬೆಂಕಿ ನಂದಿಸಲು ಸಿಬ್ಬಂದಿ ಹರಸಾಹಸ

kuduremukha
22/02/2023

ಬೆಳ್ತಂಗಡಿ:  ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಕುದುರೆಮುಖ ಕಡೆಯಿಂದ ಅಳದಂಗಡಿಯ ಊರ್ಜಾಲುಬೆಟ್ಟ, ಹೂವಿನಕೊಪ್ಪಲು ಅರಣ್ಯದ ಹುಲ್ಲುಗಾವಲು ಪರಿಸರವನ್ನು ವ್ಯಾಪಿಸಿರುವ ಬೆಂಕಿ ಹತೋಟಿಗೆ ತರಲು ವನ್ಯಜೀವಿ ವಿಭಾಗ ಹರಸಾಹಸ ನಡೆಸುತ್ತಿದೆ.

ಬೆಂಕಿ ಕಾಣಿಸಿಕೊಂಡಿರುವ ಪ್ರದೇಶ ಕುದುರೆಮುಖಕ್ಕೆ ಸಮೀಪವಾದರೂ ಅದು ಬೆಳ್ತಂಗಡಿ ವನ್ಯಜೀವಿ ವಿಭಾಗದ ವ್ಯಾಪ್ತಿಯಲ್ಲಿದೆ. ಬೆಂಕಿ ಬಿದ್ದಿರುವ ಪ್ರದೇಶಕ್ಕೆ ಏಳೆಂಟು ಕಿ.ಮೀ. ದೂರವನ್ನು ತಂಡವು ಟ್ರಕ್ಕಿಂಗ್ ಮೂಲಕ ಪಯಣಿಸಬೇಕು. ಮಂಗಳವಾರದಿಂದ ಇಲ್ಲಿ ಬೆಂಕಿ ಹತೋಟಿಗೆ ತರಲು ಅಹರ್ನಿಶಿ ಪ್ರಯತ್ನ ನಡೆದಿದೆ. ಬೆಂಕಿ ಉಂಟಾಗಿರುವ ಪ್ರದೇಶಕ್ಕೆ ತೆರಳಬೇಕಾದರೆ ಗುಡ್ಡ, ಬೆಟ್ಟ ಹತ್ತಿ ಹೋಗಲು ಹಲವು ತಾಸು ಸಮಯಬೇಕು. ಇಂತಹ ದುರ್ಗಮ ಪ್ರದೇಶದಲ್ಲಿ ಬುಧವಾರವು ಬೆಂಕಿ ನಂದಿಸುವ ಕಾರ್ಯ ಭರದಿಂದ ನಡೆದಿದೆ.

ಕುದುರೆಮುಖ ಭಾಗದಿಂದ ಯಾವ ಕಾರಣದಿಂದ ಬೆಂಕಿ ಉಂಟಾಗಿದೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಈ ಪ್ರದೇಶದಲ್ಲಿ ಬೆಂಕಿ ನಂದಿಸುವ ಪ್ರಯತ್ನಗಳು ಬುಧವಾರ ರಾತ್ರಿಯೂ ಮುಂದುವರಿದಿದೆ.

ಹುಲ್ಲುಗಾವಲು ವ್ಯಾಪ್ತಿಯ ಅಲ್ಲಲ್ಲಿ ಬೆಂಕಿ ಪಸರಿಸಿರುವ ಕುರಿತು ಮಾಹಿತಿ ಇದೆ. ಇದನ್ನು ನಂದಿಸುವ ಪ್ರಯತ್ನ ಮುಂದುವರಿದಿದೆ‌. ಮಲವಂತಿಗೆ ಗ್ರಾಮದ ಕೊಲ್ಲಿ ಪ್ರದೇಶದಲ್ಲಿ, ಚಾರ್ಮಾಡಿ ಪರ್ಲಾಣಿ ಪರಿಸರ ಹಾಗೂ ಕೊಟ್ಟಿಗೆಹಾರ ವಿಭಾಗದ ಅಣ್ಣಪ್ಪ ಬೆಟ್ಟ ಸಮೀಪ ಉಂಟಾಗಿದ್ದ ಬೆಂಕಿಯನ್ನು ಪೂರ್ಣ ಪ್ರಮಾಣದಲ್ಲಿ ಹತೋಟಿಗೆ ತರಲಾಗಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.

ಕಾರ್ಯಾಚರಣೆಯಲ್ಲಿ ವನ್ಯಜೀವಿ ವಿಭಾಗದ ಬೆಳ್ತಂಗಡಿ ಆರ್ ಎಫ್ ಒ ಸ್ವಾತಿ, ಡಿ ಆರ್ ಎಫ್ ಒ ಕಿರಣ್ ಪಾಟೀಲ್, ರಂಜಿತ್,ರವೀಂದ್ರ ಅಂಕಲಗಿ,ನಾಗೇಶ್ ಗಸ್ತು ಅರಣ್ಯ ಪಾಲಕರಾದ ಮಾರುತಿ, ರಾಜು,ಭರತೇಶ್, ರಾಘವೇಂದ್ರ, ಪಾಂಡುರಂಗ ಕಮತಿ, ಸ್ಥಳೀಯರು ಸೇರಿ 50 ಕ್ಕಿಂತಲೂ ಅಧಿಕ ಮಂದಿ ಪಾಲ್ಗೊಂಡಿದ್ದಾರೆ.

ಹುಲ್ಲಿಗೆ ಹಿಡಿದ ಬೆಂಕಿ:

ಹುಲ್ಲುಗಾವಲು ಪ್ರದೇಶದಲ್ಲೆ ಪಸರಿಸಿರುವ ಬೆಂಕಿ ಬಹಳ ವೇಗವಾಗಿ ವ್ಯಾಪಿಸುತ್ತಿದೆ.ಇಂತಹ ಕಡೆ ಇದನ್ನು ಹತೋಟಿಗೆ ತರುವುದು ಕಷ್ಟಸಾಧ್ಯವಾಗಿದೆ.

ಒಂದು ಕಡೆ ಬೆಂಕಿ ಆರಿದರೆ ಇನ್ನೊಂದು ಕಡೆಯಿಂದ ಬೆಂಕಿ ಹಿಡಿಯುತ್ತದೆ.ಆದರೆ ಕೆಲವೆಡೆ ಬೆಂಕಿ ರೇಖೆ ನಿರ್ಮಿಸಿರುವುದರಿಂದಾಗಿ ಬೆಂಕಿ ಹತೋಟಿಗೆ ತರಲು  ಸಾಧ್ಯವಾಗಿದೆ ಎಂದು ಇಲಾಖೆ ತಿಳಿಸಿದೆ. ಒಣ ಹುಲ್ಲಿಗೆ ಬೆಂಕಿ ಹಿಡಿದಿರುವ ಕಾರಣ ಮರಮಟ್ಟುಗಳಿಗೆ ಹೆಚ್ಚಿನ ಹಾನಿಯಾಗಿಲ್ಲ ಎಂದು ತಿಳಿದು ಬಂದಿದೆ. ಆದರೆ ಬೆಂಕಿ ಇನ್ನಷ್ಟು ಪಸರಿಸುತಿದ್ದರೆ ಮರಮಟ್ಟುಗಳು ನಾಶವಾಗುವ ಸಾಧ್ಯತೆ ಇತ್ತು.ಆದರೆ ವನ್ಯಜೀವಿ ವಿಭಾಗದ ಸಕಾಲಿಕ ಕೆಲಸದಿಂದ ಬೆಂಕಿ ದಟ್ಟ ಕಾಡಿಗೆ ಪಸರಿಸುವುದು ತಪ್ಪಿದೆ.

ಊರ್ಜಾಲುಬೆಟ್ಟ ಹಾಗೂ ಹೂವಿನ ಕೊಪ್ಪಲು ಪರಿಸರಗಳಲ್ಲಿ ಬೇರೆ ಬೇರೆ ತಂಡಗಳಲ್ಲಿ ಬೆಂಕಿ ಆರಿಸುವ ಕಾರ್ಯ ನಡೆದಿದೆ.

ವನ್ಯಜೀವಿಗಳಿಗೆ ಸಂಕಷ್ಟ:

ಅರಣ್ಯದಲ್ಲಿ ವಾಸಿಸುವ ಅನೇಕ ವನ್ಯಜೀವಿಗಳಿಗೆ ಸಂಕಷ್ಟ ಬಂದೊದಗಿದೆ. ಕೆಲವು ಸರಿಸೃಪಗಳು ನಾಶವಾಗಿರುವ ಸಾಧ್ಯತೆಯೂ ಇದೆ. ಬೆಂಕಿಯ ಶಾಖಕ್ಕೆ ಕಾಡಿನಲ್ಲಿದ್ದ ಪ್ರಾಣಿಗಳು ನಾಡಿಗೆ ಇಳಿಯುವ ಸಾಧ್ಯತೆಯೂ ಇದೆ ಇದಕ್ಕೆ ಪೂರಕ ಎಂಬಂತೆ ಮಂಗಳವಾರ ರಾತ್ರಿ ಮಲವಂತಿಗೆ ಸಮೀಪದ ಕಡಿರುದ್ಯಾವರ ಗ್ರಾಮದ ಎರ್ಮಾಲ್ ಪಲ್ಕೆ ಪರಿಸರದಲ್ಲಿ ಕಾಡಾನೆಗಳು ಘೀಳಿಡುವ ಸದ್ದು ಕೇಳಿ ಬಂದಿರುವ ಕುರಿತು ಸ್ಥಳೀಯರು ತಿಳಿಸಿದ್ದಾರೆ.

ಹಳೆ ಪದ್ಧತಿ:

kuduremukha

ಅರಣ್ಯ ಇಲಾಖೆ, ವನ್ಯಜೀವಿ ವಿಭಾಗ ಅರಣ್ಯ ಪ್ರದೇಶದಲ್ಲಿ ಬೆಂಕಿ ರೇಖೆಗಳನ್ನು ನಿರ್ಮಿಸಿದ್ದರು ಬೆಂಕಿ ಅದನ್ನು ಮೀರಿ ಆವರಿಸಿದೆ. ಧಗಧಗನೇ ಉರಿಯುವ ಕಾಡ್ಗಿಚ್ಚನ್ನು ಹತೋಟಿಗೆ ತರಲು ಇಲಾಖೆ ಇಂದಿಗೂ ಕತ್ತಿ, ಕೋಲು, ಸೊಪ್ಪುಗಳ ಹಳೆ ಪದ್ಧತಿಯನ್ನು ಬಳಸುತ್ತಿದೆ, ವಿನಃ ಯಾವುದೇ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಲಾಗಿಲ್ಲ. ಬೆಂಕಿ ನಂದಿಸುವ ಕಾರ್ಯಕ್ಕೆ ಸಿಬ್ಬಂದಿಗಳಿಗೆ ಬೇಕಾದ ಶೂ, ಜಾಕೆಟ್ ಬೆಂಕಿ ರಕ್ಷಕ ವ್ಯವಸ್ಥೆಗಳು ಇಲ್ಲ. ಬೆಂಕಿ ಆರಿಸಲು ಅಗತ್ಯ ಬೇಕಾದ ಬ್ಲೋಯರ್, ಫೈರ್ ಎಕ್ಸಟಿಂಗ್ ವಿಸರ್ ಮಷೀನ್ ಕೂಡ ಇಲಾಖೆ ಬಳಿ ಇಲ್ಲ ಎನ್ನಲಾಗಿದ್ದು  ಅರಣ್ಯ ಅಧಿಕಾರಿಗಳು ಸಾಹಸ ಮಾಡಿಯೇ ಬೆಂಕಿ ನಂದಿಸಬೇಕಾದ ಅನಿವಾರ್ಯತೆಯಿದೆ.

ಅರಣ್ಯ ಪ್ರದೇಶದಲ್ಲಿ ನೀರಿನ ವ್ಯವಸ್ಥೆಯಂತೂ ಇಲ್ಲವೇ ಇಲ್ಲ. ಅರಣ್ಯ ಪ್ರದೇಶದ ಮುಖ್ಯ ರಸ್ತೆಗಿಂತ ಹಲವು ಕಿಮೀ ದೂರದಲ್ಲಿ ಬೆಂಕಿ ಕಾಣಿಸಿಕೊಂಡರೆ ಅಲ್ಲಿ ಯಾವುದೇ ವಾಹನ ಅಥವಾ ಅಗ್ನಿಶಾಮಕ ದಳವು ಹೋಗಲು ಸಾಧ್ಯವಿಲ್ಲ ಸಿಬ್ಬಂದಿಗಳು ಕಾಲ್ನಡಿಗೆ ಮೂಲಕವೇ ತೆರಳ ಬೇಕಾಗಿದ್ದು ಅವರು ತಲುಪುವಾಗ ಬೆಂಕಿ ಸಾಕಷ್ಟು ಪರಿಸರವನ್ನು ಪಸರಿಸಿರುವ ಸಾಧ್ಯತೆಗಳಿದ್ದು ಅದರಿಂದಾಗಿ ಬೆಂಕಿ ನಂದಿಸಲು ಕಷ್ಟವಾಗುತ್ತಿದೆ.

ಸ್ಥಳೀಯ ನಿವಾಸಿಗಳ ಸಹಕಾರವೇ ಅರಣ್ಯ ಇಲಾಖೆಯ ನೆರವಿಗೆ ಬರುತ್ತಿದ್ದು ಅವರೇ ಅರಣ್ಯ ಸಂರಕ್ಷಣೆಯ ಜವಾಬ್ದಾರಿ ವಹಿಸುತ್ತಿದ್ದಾರೆ.

ಕಾಡ್ಗಿಚ್ಚಿನಿಂದ ವಾತಾವರಣದಲ್ಲಿ ಏರುಪೇರು ಉಂಟಾಗಿದ್ದು ಹಗಲಿನಲ್ಲಿ ಉರಿಬಿಸಿಲು, ತಡರಾತ್ರಿ ಬಳಿಕ ಚಳಿ ಕಂಡುಬರುತ್ತಿದೆ.


“ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಮೂರು ಕಡೆಗಳಲ್ಲಿ ಗುಡ್ಡಗಳ ಹುಲ್ಲುಗಾವಲು ಪ್ರದೇಶದಲ್ಲಿ ಬೆಂಕಿ ಕಂಡುಬಂದಿದ್ದು, ಇದರಲ್ಲಿ ಬೆಳ್ತಂಗಡಿ ವಿಭಾಗದ ಎರಡು ಗುಡ್ಡಗಳಲ್ಲಿ ಶೇ. 80ಕ್ಕಿಂತ ಅಧಿಕ ಬೆಂಕಿ ನಂದಿಸುವ ಕೆಲಸ ನಿರ್ವಹಿಸಲಾಗಿದ್ದು ಬೆಂಕಿ ಇನ್ನಷ್ಟು ಪಸರಿಸಿದಂತೆ ಕ್ರಮ ಕೈಗೊಳ್ಳಲಾಗಿದೆ. ಕುದುರೆಮುಖ ಪ್ರದೇಶದ ಕಡೆಯಿಂದಲೂ ಬೆಂಕಿ ಆರಿಸುವ ಕೆಲಸ ನಡೆಯುತ್ತಿದೆ. ಗುರುವಾರವು ಕಾರ್ಯಾಚರಣೆ ನಡೆಯಲಿದೆ.”

–ಸ್ವಾತಿ, ಆರ್.ಎಫ್.ಒ., ವನ್ಯಜೀವಿ ವಿಭಾಗ, ಬೆಳ್ತಂಗಡಿ


ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ