ಟೆಂಪಲ್ ಮೂಲಕ ಟಿಕೆಟ್ ಆಕಾಂಕ್ಷಿ ಕಮಾಲ್ | 8 ತಿಂಗಳಲ್ಲಿ ನೂರಾರು ದೇಗುಲ, ಮಠ ಜೀರ್ಣೋದ್ಧಾರ
ಚಾಮರಾಜನಗರ: ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿ ಗುರುತಿಸಿಕೊಂಡಿರುವ ನಿಶಾಂತ್ ಎಂಬವರು ಕಳೆದ 8 ತಿಂಗಳಲ್ಲಿ ನೂರಾರು ದೇಗುಲ, ಭವನ ನಿರ್ಮಾಣ ಮಾಡಿ ಭಾವನಾತ್ಮಕ ಮತಬೇಟೆ ನಡೆಸಿದ್ದು, ಬೇರೆಯವರಿಗೆ ನಿದ್ರೆಗೆಡಿಸುವಂತೆ ಮಾಡಿದ್ದಾರೆ.
ಹೌದು…., ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿ ಗುರುತಿಸಿಕೊಂಡಿರುವ ನಿಶಾಂತ್ ಸರಿಸುಮಾರು 149 ದೇಗುಲ, 25 ಮಠಗಳನ್ನು ಜೀರ್ಣೋದ್ಧಾರ ಮಾಡಿದ್ದು ಕಡಿಮೆ ಅವಧಿಯಲ್ಲೇ ಜನರ ಗಮನ ಸೆಳೆದು ಅಚ್ಚರಿ ಮೂಡಿಸಿದ್ದಾರೆ.
ಬೇಡಗಂಪಣ ಹಾಗೂ ಸೋಲಿಗ ಮತವು ಹನೂರು ಕ್ಷೇತ್ರದಲ್ಲಿ ನಿರ್ಣಾಯಕ ಆಗಿರುವುದರಿಂದ ನಿಶಾಂತ್ ಅವರ ಈ ಧಾರ್ಮಿಕ ಕಾರ್ಯಗಳು ಜನರ ಮನ ಗೆಲ್ಲುತ್ತಿದೆ. ಸೋಲಿಗ ಮಹಿಳೆಯೊಬ್ಬರು ತಮ್ಮ ಮಗುವಿಗೆ ನಿಶಾಂತ್ ಎಂದು ನಾಮಕರಣ ಮಾಡಿರುವುದು 8 ತಿಂಗಳಲ್ಲಿ ನಿಶಾಂತ್ ಮಾಡಿರುವ ಮೋಡಿಗೆ ಸಾಕ್ಷಿಯಾಗಿದೆ.
5 ಕೆಜಿ ಬೆಳ್ಳಿ- 2 ದಶಕದ ಬಳಿಕ ಭವನ ನಿರ್ಮಾಣ:
ಕಾಮಗೆರೆ ಗ್ರಾಮದಲ್ಲಿ ಕಂಡಾಯ ಉತ್ಸವ ನಡೆಸಲು ಹಾಗೂ ಬೆಳ್ಳಿ ಸಾಮಾನುಗಳನ್ನು ಮಾಡಿಸಲು ದೇಣಿಗೆ ಕೇಳಿದ ವೇಳೆ 5 ಕೆಜಿ ಬೆಳ್ಳಿಯನ್ನೇ ನಿಶಾಂತ್ ಕೊಟ್ಟು ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಜೊತೆಗೆ, ಬೇರೆಯವರು ಹೌಹಾರುವಂತೆಯೂ ಮಾಡಿದ್ದಾರೆ.
ಕಾಡಿನ ಹಾದಿಯಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸಲು ಕಷ್ಟ ಸಾಧ್ಯ ಎಂದು ನಿಶಾಂತ್ ಬಳಿ ಅಳಲು ತೋಡಿಕೊಂಡ ವೇಳೆ ತಮ್ಮ ಹಣದಲ್ಲಿ 2.5 ಕಿಮೀ ಬಿದರಹಳ್ಳಿ ಸಮೀಪ ಕಚ್ಚಾ ರಸ್ತೆಯನ್ನು ನಿರ್ಮಾಣ ಮಾಡಿದ್ದಾರೆ. ಒಡೆಯರಪಾಳ್ಯದಲ್ಲಿ 20 ವರ್ಷಗಳಿಂದ ಶಿಥಿಲಾವಸ್ಥೆ ತಲುಪಿದ್ದ ಲಿಂಗಾಯತರ ಭವನವನ್ನು ಐದಾರು ತಿಂಗಳಲ್ಲಿ ಜೀರ್ಣೋದ್ಧಾರ ಮಾಡಿ ಸುತ್ತೂರು ಶ್ರೀಗಳಿಂದ ಉದ್ಘಾಟಿಸಿದ್ದು ಭಾವನಾತ್ಮಕವಾಗಿ ಜನರನ್ನು ತಮ್ಮತ್ತ ಸೆಳೆಯುತ್ತಿದ್ದಾರೆ.
ನಿಶಾಂತ್ ವಿರುದ್ಧ ಶಾಸಕ ನರೇಂದ್ರ ವಾಗ್ದಾಳಿ:
ಕಳೆದ ಮಂಗಳವಾರ ಹನೂರಿನಲ್ಲಿ ನಡೆದ ಪ್ರಜಾಧ್ವನಿ ಯಾತ್ರೆಯಲ್ಲಿ ಶಾಸಕ ನರೇಂದ್ರ ಮಾತನಾಡಿ, ಬೆಂಗಳೂರಿನಿಂದ ಬಂದು ಇಲ್ಲಿ ಜನರನ್ನು ಖರೀದಿ ಮಾಡುತ್ತಿದ್ದಾರೆ, ಆದರೆ ಹನೂರು ಕ್ಷೇತ್ರವನ್ನು ಮಾರಟಕ್ಕಿಟ್ಟಿಲ್ಲ, ತಾಕತ್ತಿದ್ದರೇ ದುಡ್ಡು ಕೊಡದೇ 500 ಜನರನ್ನು ಸೇರಿಸಿ ಎಂದು ಕಿಡಿಕಾರಿದ್ದರು. ಇದಕ್ಕೆ ನಿಶಾಂತ್ ಪ್ರತಿಕ್ರಿಯಿಸಿದ್ದು, ಬೆಂಗಳೂರಿನಲ್ಲಿ ಸೇವೆ ಮಾಡುವ ಅಗತ್ಯವಿಲ್ಲ ಆದರೆ ಹನೂರಿನಲ್ಲಿ ಅದರ ಅವಶ್ಯಕತೆ ಇದೆ, ಕಳೆದ 75 ವರ್ಷಗಳಿಂದ ರಸ್ತೆ ಇಲ್ಲದಿರುವುದು ಶಾಸಕರಿಗೆ ಗೊತ್ತಿರಲಿಲ್ಲ ಆದರೆ ಅದನ್ನು ನಾನು ಮಾಡಿದೆ, ನೂರಾರು ದೇವಾಲಯಗಳನ್ನು ಜೀರ್ಣೋದ್ಧಾರ ಮಾಡಿದ್ದೇನೆ, ಮಠಗಳನ್ನು ಜೀರ್ಣೋದ್ಧಾರ ಮಾಡಿದ್ದೇನೆ, ಅಭಿಮಾನಿಗಳು ತನ್ನ ಫೋಟೋ ಹಾಕಿ ಸೀರೆ ಕೊಟ್ಟರೆ ಅದಕ್ಕೆ ತಾನೇನು ಮಾಡಕ್ಕಾಗಲ್ಲ ಎಂದು ತಿರುಗೇಟು ಕೊಟ್ಟಿದ್ದಾರೆ.
ಎರಡು ಕುಟುಂಬಗಳ ನಡುವಿನ ಕಾದಾಟ ಈ ಬಾರಿ ಇರಲ್ಲ:
ಹನೂರು ಕ್ಷೇತ್ರ ಎಂದರೆ ಈ ಹಿಂದೆ ದಿ. ನಾಗಪ್ಪ ಹಾಗೂ ದಿ.ರಾಜೂಗೌಡರ ಕುಟುಂಬಗಳ ನಡುವೆಯಷ್ಟೇ ಕಾದಾಟ, ಅಧಿಕಾರ ಹಂಚಿಕೆ ಎಂಬ ಮಾತು ಈ ಬಾರಿ ಚುನಾವಣೆಯಲ್ಲಿ ಸುಳ್ಳಾಗುವ ವಾತಾವರಣ ಇದ್ದು ನಾಗಪ್ಪರ ಮಗ ಡಾ.ಪ್ರೀತಂ, ಜನಧ್ವನಿ ವೆಂಕಟೇಶ್, ದತ್ತೇಶ್ ಹಾಗೂ ನಿಶಾಂತ್ ಈ ಬಾರಿ ಟಿಕೆಟ್ ಪಡೆಯಲು ಭಾರೀ ಪೈಪೋಟಿ ನಡೆಸುತ್ತಿದ್ದು ನಿಶಾಂತ್ ಅವರ ಧಾರ್ಮಿಕ ಕಾರ್ಯಗಳೇ ಅವರನ್ನು ಹೆಚ್ಚೆಚ್ಚು ಜನಪ್ರಿಯಗೊಳಿಸುತ್ತಿದೆ.
ಜೆಡಿಎಸ್ ಕೂಡ ಭದ್ರ ನೆಲೆ ಕಂಡುಕೊಂಡಿದ್ದು ಎಂ.ಆರ್.ಮಂಜುನಾಥ್, ಕಾಂಗ್ರೆಸ್ ನ ಹಾಲಿ ಶಾಸಕ ನರೇಂದ್ರ ಮತ್ತು ಬಿಜೆಪಿ ನಡುವೆ ಈ ಕಾಳಗ ನಡೆಯುವುದು ನಿಖ್ಖಿಯಾಗಿದ್ದು ಎರಡು ಕುಟುಂಬಗಳ ನಡುವಿನ ಸ್ಪರ್ಧೆ ಈ ಬಾರಿ ಇರುವುದಿಲ್ಲ ಎಂಬುದು ನಿಚ್ಚಳವಾಗಿದೆ.
ಟಿಕೆಟ್ ಆಕಾಂಕ್ಷಿಯೊಬ್ಬರು ಕೇವಲ 8 ತಿಂಗಳಲ್ಲಿ ನೂರಾರು ದೇಗುಲ ಜೀರ್ಣೋದ್ಧಾರ ಮಾಡಿರುವುದು ಒಂದು ಅಚ್ಚರಿಯೇ ಆಗಿದೆ. ಒಟ್ಟಿನಲ್ಲಿ ಈ ಬಾರಿ ಹನೂರು ಕ್ಷೇತ್ರ ಕದನ ಕುತೂಹಲ ಕೆರಳಿಸಿದೆ. ಭಾವನಾತ್ಮಕವಾಗಿ ಮತ ಸೆಳೆಯುತ್ತಿರುವ ನಿಶಾಂತ್ ಬಿಜೆಪಿ ಇನ್ನಿತರ ಆಕಾಂಕ್ಷಿಗಳಿಗೆ ನಿದ್ರೆಗೆಡಿಸಿರುವುದಂತು ಸುಳ್ಳಲ್ಲ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw