ಮಲೆಕುಡಿಯರ ಸಂಘದ ಜಿಲ್ಲಾ ಅಧ್ಯಕ್ಷರಿಗೆ ಸಮುದಾಯದ ಹಿತಕ್ಕಿಂತ ಶಾಸಕರ ಹಿತವೇ ಮುಖ್ಯವಾಗುತ್ತಿದೆ: ಜಯರಾಮ ಎಂ.ಕೆ.
ಬೆಳ್ತಂಗಡಿ: ಮಲೆಕುಡಿಯರ ಸಂಘದ ಜಿಲ್ಲಾ ಅಧ್ಯಕ್ಷರಿಗೆ ಮಲೆಕುಡಿಯರ ಹಿತ ಕಾಪಾಡುವುದಕ್ಕಿಂತ ಶಾಸಕರ ಹಿತವೇ ಮುಖ್ಯವಾಗುತ್ತಿದೆ. ಸಂಘದ ತಾಲೂಕು ಕಾರ್ಯದರ್ಶಿಯವರಿಗೆ ಅವಮಾನವಾದಾಗ ಮಾತನಾಡದ ಜಿಲ್ಲಾಧ್ಯಕ್ಷರು ಶಾಸಕರ ವಿರುದ್ದ ಪ್ರತಿಭಟನೆಯಾದ ಕೂಡಲೇ ಪತ್ರಿಕಾಗೋಷ್ಠಿ ಕರೆದು ಮಾತನಾಡುವುದೇ ಇದಕ್ಕೆ ಸಾಕ್ಷಿಯಾಗಿದೆ ಎಂದು ಮಲೆಕುಡಿಯರ ಸಂಘದ ರಾಜ್ಯ ಜತೆ ಕಾರ್ಯದರ್ಶಿ ಮಾಜಿ ತಾ.ಪಂ. ಸದಸ್ಯ ಜಯರಾಮ ಎಂ.ಕೆ. ಹೇಳಿದರು.
ಅವರು ಬೆಳ್ತಂಗಡಿಯಲ್ಲಿ ಶುಕ್ರವಾರ ಮಲೆಕುಡಿಯ ಸಮುದಾಯದ ಮುಖಂಡರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಸಂಘದ ತಾಲೂಕು ಕಾರ್ಯದರ್ಶಿ ಜಯಾನಂದ ಪಿಲಿಕಳ ಅವರಿಗೆ ಅಪಮಾನವಾದಾಗ ಅದರ ವಿರುದ್ದ ಸಮಾನ ಮನಸ್ಕ ಸಂಘಟನೆಗಳು ಸೇರಿ ಪ್ರತಿಭಟಿಸಿದ್ದೇವೆ. ಸಂಘದ ಜಿಲ್ಲಾ ಅಧ್ಯಕ್ಷರು ಹೇಳುವಂತೆ ನಾವು ಎಲ್ಲಿಯೂ ಮಲೆಕುಡಿಯರ ಸಂಘದ ಹೆಸರನ್ನು ದುರುಪಯೋಗ ಪಡಿಸಿಲ್ಲ, ನಾವು ಪಕ್ಷಾತೀತವಾಗಿ ನಡೆಸಿದ ಹೋರಾಟಕ್ಕೆ ಎಲ್ಲರೂ ಬೆಂಬಲ ನೀಡಿದ್ದಾರೆ. ಹರೀಶ್ ಎಳನೀರು ಶಾಸಕರ ಹಿತಾಸಕ್ತಿ ಕಾಪಾಡುವ ಉದ್ದೇಶದಿಂದ ಇಂತಹ ಹೇಳಿಕೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಸಂಘದ ಹಲವರು ಪದಾಧಿಕಾರಿಗಳನ್ನು ಬಿಟ್ಟು ತಮಗೆ ಬೇಕಾದ ಕೆಲವರನ್ನು ಕರೆದೊಯ್ದು ಅವರು ಮಾಡಿರುವ ಪತ್ರಿಕಾಗೋಷ್ಠಿಯ ಹಿಂದೆ ಯಾರದೋ ಕುಮ್ಮಕ್ಕಿದೆ. ಇದೀಗ ಜಿಲ್ಲಾ ಅಧ್ಯಕ್ಷರೇ ಮಲೆಕುಡಿಯ ಸಮುದಾಯದ ನಡುವೆ ಒಡಕು ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ ಅವರು ತಕ್ಷಣ ಇದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಜಯಾನಂದ ಪಿಲಿಕಳ ಅವರಿಗಾದ ಅವಮಾನದ ಬಗ್ಗೆ ದೂರು ನೀಡಿದರೂ ಇನ್ನೂ ಪೊಲೀಸ್ ಇಲಾಖೆ ಯಾವುದೇ ಕ್ರಮಕೈಗೊಳ್ಳಲು ಮುಂದಾಗಿಲ್ಲ ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಸಮಾನ ಮನಸ್ಕ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಅವರು ತಿಳಿಸಿದರು.
ಮಲೆಕುಡಿಯರು ಆರಾಧಿಸಿಕೊಂಡು ಬರುತ್ತಿರುವ ಸವಣಾಲಿನ ಬೈರವ ಕಲ್ಲಿನಲ್ಲಿ ರಾಜಕೀಯ ನಡೆಸಿ ಸಮುದಾಯದ ಮುಖಂಡರನ್ನು ಹೊರಗಿಟ್ಟು ಶಾಸಕರು ಬ್ರಹ್ಮ ಕಲಶೋತ್ಸವ ಸಮಿತಿಯನ್ನು ರಚಿಸಿರುವುದು ಸರಿಯಾದ ಕ್ರಮವಲ್ಲ ದೈವಸ್ಥಾನದ ವಿಚಾರದಲ್ಲಿ ಯಾವುದೇ ರಾಜಕೀಯ ತರುವುದು ಸರಿಯಲ್ಲ ಅದು ಮಲೆಕುಡಿಯ ಸಮುದಾಯದವರ ಕೈಯಲ್ಲಿಯೇ ಇರಬೇಕು ಎಂದರು.
ಶಾಸಕರು ಮಲೆಕುಡಿಯರ ಸಮುದಾಯ ನೆಲೆಸಿರುವ ಹಲವಾರು ಪ್ರದೇಶಗಳಿಗೆ ಇನ್ನು ಮೂಲಭೂತ ಸೌಲಭ್ಯಗಳನ್ನು ಒದಗಿಸಿಲ್ಲ, ಹಲವೆಡೆ ಆದಿವಾಸಿಗಳಿಗಾಗಿ ಮಂಜೂರಾಗಿರುವ ಯೋಜನೆಗಳನ್ನು ದುರುಪಯೋಗ ಪಡಿಸಲಾಗಿದೆ ಇದೆಲ್ಲದರ ಬಗ್ಗೆಯೂ ಸಂಘದ ಜಿಲ್ಲಾ ಅಧ್ಯಕ್ಷರು ಗಮನ ಹರಿಸಿ ಇದರ ಬಗ್ಗೆಯೂ ಮಾತನಾಡಲಿ ಎಂದು ಅವರು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಮಲೆಕುಡಿಯರ ಸಂಘದ ಜೊತೆಕಾರ್ಯದರ್ಶಿ ಲಕ್ಷ್ಮಣ ಆಲಂಗಾಯಿ, ತಾಲೂಕು ಪ್ರಧಾನ ಕಾರ್ಯದರ್ಶಿ ಜಯಾನಂದ ಪಿಲಿಕಲ, ರಾಜ್ಯ ಸಮಿತಿ ಸದಸ್ಯರಾದ ಪುಷ್ಪ ನೆರಿಯ, ಸುಕುಮಾರ್ ದಿಡುಪೆ, ಮಹಾಬಲ ಮಲೆಕುಡಿಯ,ನೀಲಯ್ಯ ಮಲೆಕುಡಿಯ, ಪದ್ಮ ಮಲೆಕುಡಿಯ ಉಪಸ್ಥಿತರಿದ್ದರು.
ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಹಿರಿಯ ಹೋರಾಟಗಾರ ಮಲೆಕುಡಿಯರ ಸಂಘದ ಮಾಜಿ ಅಧ್ಯಕ್ಷ ಎಲ್ಯಣ್ಣ ಮಲೆಕುಡಿಯ ಅವರು, ಶಾಸಕ ಹರೀಶ್ ಪೂಂಜ ಅವರು ತಾಲೂಕಿನಲ್ಲಿ ಆಮಿಷದ ರಾಜಕೀಯ ಮಾಡುತ್ತಿದ್ದಾರೆ, ದರ್ಪಗಾರಿಕೆಯ ರಾಜಕೀಯ ನಡೆಯುತ್ತಿದೆ ಇದು ಸರಿಯಲ್ಲ. ಮಲೆಕುಡಿಯ ಸಮುದಾಯವನ್ನು ರಾಜಕೀಯಕ್ಕಾಗಿ ಒಡೆಯುವ ಕಾರ್ಯಮಾಡಲಾಗುತ್ತಿದೆ. ಮಲೆಕುಡಿಯರ ವಿರುದ್ದ ದಬ್ಬಾಳಿಕೆ ಮಾಡಿದರೆ ಅದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.
ಸಮುದಾಯದ ಯುವಕ ಜಯಾನಂದ ಅವರೊಂದಿಗೆ ಶಾಸಕರು ನಡೆದುಕೊಂಡ ರೀತಿ ಜನಪ್ರತಿನಿಧಿಗಳು ತಲೆ ತಗ್ಗಿಸುವಂತದ್ದಾಗಿದೆ, ಈ ರೀತಿಯ ದರ್ಪದ ನಡವಳಿಕೆ ಯಾರಿಗೂ ಒಳ್ಖೆಯದಲ್ಲ ಎಂದ ಅವರು ಶಾಸಕರು, ಶಾಸಕರು ಆಮಿಷಗಳನ್ನು ಒಡ್ಡುವ ರಾಜಕೀಯ ಮಾಡುತ್ತಿದ್ದಾರೆ, ಮಲೆಕುಡಿಯ ಸಮುದಾಯದವರು ಅವರ ಬೆಂಬಲಕ್ಕಿದ್ದಾರೆ ಎಂದು ಯಾರದೋ ಮೇಲೆ ದೌರ್ಜನ್ಯ ನಡೆಸಲು ಮುಂದಾದರೆ ಅದನ್ನು ಸಹಿಸಲು ಸಾಧ್ಯವಿಲ್ಲ. ಆದಿವಾಸಿಗಳ ವಸತಿ ಪ್ರದೇಶಗಳಲ್ಲಿ ಸರಕಾರದ ಇಲಾಖೆಗಳ ಹಾಗೂ ಭೂಮಾಲಕರ ಅಡೆತಡೆಯಿಂದಾಗಿ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ ಅದನ್ನು ಸರಿಪಡಿಸಿ ಅಭಿವೃದ್ದಿ ಕಾರ್ಯಗಳನ್ನು ಮಾಡಲು ಯಾಕೆ ಸಾಧ್ಯವಾಗಿಲ್ಲ ಎಂದು ಅವರು ಪ್ರಶ್ನಿಸಿದರು.
ಸಮುದಾಯದವರು ಸೇರಿ ಕಟ್ಟಿದ ದೈವಸ್ಥಾನದ ವಿಚಾರದಲ್ಲಿ ರಾಜಕೀಯ ತರುವುದು ಸರಿಯಲ್ಲ. ಮಲೆಕುಡಿಯ ಸಮುದಾಯದ ಪರವಾಗಿ ಶೋಷಿತರ ಪರವಾಗಿ ಅನ್ಯಾಯಕ್ಕೆ ಒಳಗಾದವರ ಪರವಾಗಿ ಯಾವುದೇ ರಾಜಕೀಯ ನೋಡದೆ ಹೋರಾಟಕ್ಕೆ ಬೆಂಬಲ ನೀಡುತ್ತೇನೆ, ಎಂದು ಅವರು ತಿಳಿಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw