ಕಲ್ಯಾಣ ಕರ್ನಾಟಕ ಭಾಗಕ್ಕೆ ಅಮೃತ ಕಾಲ ಶುರುವಾಗಿದೆ: ಸಿಎಂ ಬಸವರಾಜ ಬೊಮ್ಮಾಯಿ
ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ದಿ ಮಾಡಿ ಅದರ ಸಂಭ್ರಮವನ್ನು ಕಲ್ಯಾಣ ಕರ್ನಾಟಕ ಉತ್ಸವದ ಮೂಲಕ ಆಚರಿಸಲಾಗುತ್ತಿದೆ. ಕಲ್ಯಾಣ ಕಲ್ಯಾಣ ಕರ್ನಾಟಕ ಭಾಗಕ್ಕೆ ಅಮೃತ ಕಾಲ ಶುರುವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಭಾನುವಾರ ಗುಲಬರ್ಗಾ ವಿ.ವಿ. ಆವರಣದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ-2023ರ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದೇಶಕ್ಕೆ ಅಮೃತ ಕಾಲ ಬಂದಂತೆ ಈ ಕಲ್ಯಾಣ ಕರ್ನಾಟಕ ಭಾಗಕ್ಕೂ ಕೂಡಾ ಅಮೃತಕಾಲ ಬಂದಿದೆ. ಈ ಭಾಗಕ್ಕೆ ಸ್ವಲ್ಪ ತಡವಾಗಿ ಸ್ವಾತಂತ್ರ್ಯ ಬಂದಿದ್ದರು ಕೆಚ್ಚದೆಯ ಹೋರಾಟದಿಂದ ಎರಡೆರಡು ಬಾರಿ ಸ್ವಾತಂತ್ರ್ಯಕ್ಕೆ ಹೋರಾಡಿದವರಾಗಿದ್ದಾರೆ. ರಮಾನಾಂದ ತೀರ್ಥರು ಸೇರಿದಂತೆ ಅಸಂಖ್ಯಾತ ಇಲ್ಲಿನ ಹೋರಾಟಗಾರರ ತ್ಯಾಗ, ಬಲಿದಾನ ಮಾಡಿದ ವೀರರಿಗೆ ವಿಶೇಷ ನಮನ ಸಲ್ಲಿಸುವುದಾಗಿ ಹೇಳಿದರು.
ಈ ಭಾಗ ಬಹಳ ವರ್ಷ ಹಿಂದುಳಿದಿತ್ತು. ಈ ಭಾಗದ ಸಮಗ್ರ ಅಭಿವೃದ್ದಿಗೆ ಸಂವಿಧಾನದ ಆರ್ಟಿಕಲ್ 371(ಜೆ) ಆಗಿರಲಿಲ್ಲ. ಆ ನಂತರ ತಿದ್ದುಪಡಿ ಆದರೂ ಕೂಡಾ ನಾಯಕತ್ವದಲ್ಲಿ ಇಚ್ಛಾ ಶಕ್ತಿ ಕೊರತೆಯಿಂದ ಈ ಭಾಗ ಅಭಿವೃದ್ದಿಯಾಗಿರಲಿಲ್ಲ. ಈ ಭಾಗದ ಯುವಕರಿಗೆ ಯಾವುದೇ ಕೆಲಸ ಮಾಡುವ ಶಕ್ತಿ ಇದೆ. ರೈತರಿಗೆ ಬಂಗಾರದ ಬೆಳೆ ಬೆಳೆಯುವ ಶಕ್ತಿ ಇದೆ. ಕಾರ್ಮಿಕರಿಗೆ ದುಡಿಯುವ ಶಕ್ತಿ ಇದೆ. ಈ ಭಾಗದಲ್ಲಿ ಸಂಪದ್ಭರಿತ ನೈಸರ್ಗಿಕ ಶಕ್ತಿ ಇದೆ. ಆದರೂ ಇಚ್ಛಾ ಶಕ್ತಿಯ ಕೊರತೆಯಿಂದ ಸುಮಾರು ವರ್ಷಗಳ ಕಾಲ ಹಿಂದುಳಿದಿತ್ತು ಎಂದರು.
ಕಲ್ಯಾಣ ಕರ್ನಾಟಕ ಭಾಗದ ಜನರು ಹಿಂದುಳಿಯಲಿ ಎನ್ನುವ ಧೋರಣೆ ಈ ಭಾಗದ ಜನರ ಹಿಂದುಳಿಯುವಿಕೆಗೆ ಕಾರಣವಾಗಿತ್ತು. ಆದರೆ, ಈ ಭಾಗದಲ್ಲಿ ಮಂತ್ರಿ ಮಂಡಳ ಸಭೆ ನಡೆಸಿ ಅಭಿವೃದ್ದಿಗೆ ನಾಂದಿ ಹಾಡಿದವರು ಮಾಜಿ ಸಿಎಂ ಯಡಿಯೂರಪ್ಪನವರು. ಬೀದರ್-ಗುಲಬರ್ಗಾ ರೈಲ್ವೆ ಲೈನ್ ಹಾಗೂ ಕಲಬುರಗಿ ವಿಮಾನ ನಿಲ್ದಾಣ ಅವರ ಕೊಡುಗೆಯಾಗಿದೆ ಎಂದ ಅವರು, ಈ ಭಾಗಕ್ಕೆ ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿದ ಶ್ರೇಯಸ್ಸು ಸಹ ಅವರಿಗೆ ಸಲ್ಲುತ್ತದೆ. ಈಗ ನಾನು ಈ ಭಾಗದ ಅಭಿವೃದ್ದಿಗೆ ಸಹಕಾರಿಯಾಗಲು ಮಂಡಳಿಗೆ ರೂ 3,000 ಕೋಟಿ ನೀಡುವುದಾಗಿ ಹೇಳಿ ಈ ಅನುದಾನದಲ್ಲಿ ಮ್ಯಾಕ್ರೋ ಮತ್ತು ಮೈಕ್ರೋ ಯೋಜನೆಯಡಿ ತಲಾ1500 ಕೋಟಿ ರೂ. ನೀಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದರು.
ಈ ವರ್ಷ 1,100 ಕ್ಕಿಂತ ಹೆಚ್ಚು ಶಾಲಾ ಕೊಠಡಿಗಳನ್ನು ಕಲ್ಯಾಣ ಕರ್ನಾಟಕ ಭಾಗದಲ್ಲಿ ಆಗುತ್ತಿವೆ. ಮುಂಬರುವ ವರ್ಷದಲ್ಲಿ ಇನ್ನೂ1,000 ಕೊಠಡಿ ನಿರ್ಮಾಣ ಮಾಡಲಾಗುತ್ತದೆ. ಡಿಗ್ರಿ ಹಾಗೂ ಪಾಲಿಟೆಕ್ನಿಕ್ ಕಾಲೇಜು ನಿರ್ಮಾಣ, ನೀರಾವರಿ, ಕೌಶಲ ಅಭಿವೃದ್ದಿ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಭಾಗದಲ್ಲಿ ನೂತನ 28 ಹೊಸ ಪಿಎಚ್ ಸಿ ಹಾಗೂ 4 ಸಿಎಚ್ ಸಿಗಳನ್ನು ತೆರೆಯಲಾಗಿದೆ. ಕಲಬುರಗಿ ಜಯದೇವ ಆಸತ್ರೆ ಗೆ ರೂ.150 ಕೋಟಿ ಹಾಗೂ ಈ ಭಾಗದ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗಾಗಿ ಅನುಕೂಲವಾಗಲು ಬೆಂಗಳೂರಿನಲ್ಲಿ ರೂ 50 ಕೋಟಿ ವೆಚ್ಚದಲ್ಲಿ ಹಾಸ್ಟೆಲ್ ನಿರ್ಮಾಣ ಮಾಡಲಾಗುತ್ತಿದೆ ಎಂದರು.
ಸನ್ನತಿ ಅಭಿವೃಧ್ದಿಗೆ ಕ್ರಮ, ಬೀದರ್ ಹಾಗೂ ಮಳ ಖೇಡ ಕೋಟೆ ಅಭಿವೃದ್ಧಿಗೆ ತಲಾ ರೂ 50 ಕೋಟಿ ಹಾಗೂ ದತ್ತಾತ್ರೇಯ ದೇವಸ್ಥಾನದ ಅಭಿವೃದ್ದಿಗೆ ರೂ 57 ಕೋಟಿ ಅನುದಾನ ಘೋಷಣೆ ಮಾಡಿದ್ದೇನೆ. ಈ ಭಾಗದ ತಾಂಡಾ ನಿವಾಸಿಗಳಿಗೆ ಶಾಶ್ವತ ಸೂರು ಕಲ್ಪಿಸಲು ಇತ್ತೀಚಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 50,000 ತಾಂಡಾ ನಿವಾಸಿಗಳಿಗೆ ಹಕ್ಕು ಪತ್ರ ವಿತರಿಸಿದ್ದಾರೆ. ಇದು ಗಿನ್ನಿಸ್ ಪುಸ್ತಕದಲ್ಲಿ ದಾಖಲೆಯಾಗಿದೆ ಎಂದರು.
ಈ ಭಾಗದ ಸಮಗ್ರ ಅಭಿವೃದ್ದಿ ನನ್ನ ಕನಸು. ಔದ್ಯೋಗಿಕ ಅಭಿವೃದ್ದಿ ಹಾಗೂ ಸಮಗ್ರ ನೀರಾವರಿ ಒದಗಿಸುವ ಮೂಲಕ ಈ ಭಾಗದ ರೈತರ ಬಾಳಿಗೆ ಬೆಳಕಾಗುವ ಕನಸು ನನ್ನದು. ಈ ಕಾರ್ಯದಲ್ಲಿ ಹೋಗುವಾಗ ಹಲವರು ನನ್ನ ಟೀಕೆ ಮಾಡಬಹುದು. ಆದರೆ, ಆ ಬಗ್ಗೆ ನಾನು ಯೋಚಿಸದೆ ಅಭಿವೃದ್ದಿ ಮಾಡುವುದಾಗಿ ಅಭಯ ನೀಡಿದರು.
ಆಶಯ ನುಡಿಗಳನ್ನಾಡಿದ ಕೆಕೆಆರ್ ಡಿಬಿ ಅಧ್ಯಕ್ಷರಾದ ದತ್ತಾತ್ರೇಯ ಪಾಟೀಲ ರೇವೂರು ಮಾತನಾಡಿ ಕಲ್ಯಾಣ ಕರ್ನಾಟಕ ಉತ್ಸವ ಶರಣರ, ಸೂಫಿ, ಸಂತರ ನಾಡಿನಲ್ಲಿ ನಡೆಯುತ್ತಿರುವುದು ಸಂತಸದ ವಿಚಾರ ಎಂದರು.
ಮಾಜಿ ಸಿಎಂ ಯಡಿಯೂರಪ್ಪನವರು ಹೈ.ಕ.ವನ್ನು ಕಲ್ಯಾಣ ಕರ್ನಾಟಕ ಎಂದು ಪುನರ್ ನಾಮಕರಣ ಮಾಡಿ ಕೆಕೆಆರ್ ಡಿಬಿ ಗೆ ರೂ 1,500 ಕೋಟಿ ಅನುದಾನವನ್ನು ಘೋಷಿಸಿದರು. ಆ ನಂತರ ಅಧಿಕಾರಕ್ಕೆ ಬಂದ ಸಿಎಂ ಬಸವರಾಜ ಬೊಮ್ಮಾಯಿ ಅವರು ರೂ 1,500 ಕೋಟಿಯಿಂದ ರೂ 3,000 ಕೋಟಿಗೆ ಏರಿಸಿ ಈ ಭಾಗದ ಅಭಿವೃದ್ದಿ ಕ್ರಾಂತಿ ಮಾಡಿದರು. ಕಲ್ಯಾಣದಲ್ಲಿ ಅಣ್ಣ ಬಸವಣ್ಣನಂತೆ ಕ್ರಾಂತಿ ಮಾಡಿದ್ದಾರೆ ಎಂದರು.
ಈ ಸಲದ ಬಜೆಟ್ ನಲ್ಲಿ ರೂ 5,000 ಕೋಟಿ ಅನುದಾನ ಘೋಷಿಸಿ ಈ ಭಾಗಕ್ಕೆ ಹೆಚ್ಚಿನ ಕಾಳಜಿ ತೋರಿಸಿದ್ದಾರೆ. ಈ ಹಿಂದಿನ ಯಾವ ಸಿಎಂಗಳು (ರಾಜಕಾರಣಿಗಳು) ಬೊಮ್ಮಾಯಿ ಅವರಷ್ಟು ಬದ್ಧತೆ ತೋರಿಸಿರಲಿಲ್ಲ. ಈಗ ನಡೆಯುತ್ತಿರುವ ಕಲ್ಯಾಣ ಕರ್ನಾಟಕ ಉತ್ಸವ ಆಯೋಜನೆಗೆ ಕೂಡಾ ಸಿಎಂ ಅವರ ಮಾರ್ಗದರ್ಶನ ನೀಡಿದ್ದಾರೆ. ಅವರು ಮತ್ತೊಮ್ಮೆ ಸಿಎಂ ಆದಾಗ ಮಾತ್ರ ಕಲಬುರಗಿ ಯಲ್ಲಿ ಇಂತಹ ಕಾರ್ಯಕ್ರಮ ನಡೆಯಲು ಸಾಧ್ಯ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಮಾತನಾಡಿ, ರೂ 3.09 ಲಕ್ಷ ಕೋಟಿ ಬಜೆಟ್ ನಲ್ಲಿ ಸಿಎಂ ನವ ಕರ್ನಾಟಕದ ಕನಸು ಕಂಡಿದ್ದಾರೆ. ಈ ಭಾಗಕ್ಕೆ ಹಿಂದುಳಿದ ಭಾಗ ಎನ್ನುವ ಹಣೆಪಟ್ಟಿ ಮುಂಬರುವ ದಿನಗಳಲ್ಲಿ ತೊಡೆದುಹಾಕಬೇಕು. ಈ ನಿಟ್ಟನಲ್ಲಿ ಶೈಕ್ಷಣಿಕ ಹಾಗೂ ಔದ್ಯೋಗಿಕ ಅಭಿವೃದ್ದಿಯಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.
ಕಲ್ಯಾಣ ದರ್ಶನ ಸ್ಮರಣ ಸಂಚಿಕೆ ಬಿಡುಗಡೆ:
ಇದೇ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕದ ಕುರಿತು ಸಮಗ್ರ ಮಾಹಿತಿಯನ್ನು ಒಳಗೊಂಡ ‘ ಕಲ್ಯಾಣ ದರ್ಶನ’ ಸ್ಮರಣ ಸಂಚಿಕೆನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರು ಬಿಡುಗಡೆ ಮಾಡಿದರು.
ವೇದಿಕೆಯ ಮೇಲೆ ನಿಜಶರಣ ಅಂಬಿದರ ಚೌಡಯ್ಯ ಅಭಿವೃದ್ದಿ ನಿಗಮದ ಅಧ್ಯಕ್ಷ ಬಾಬುರಾವ ಚಿಂಚನಸೂರು, ಶಾಸಕರಾದ ಬಸವರಾಜ ಮತ್ತಿಮೂಡ, ಎಂ.ವೈ. ಪಾಟೀಲ್, ವಿಧಾನ ಪರಿಷತ್ ಶಾಸಕ ಶಶಿಲ್ ನಮೋಶಿ, ಮಾಜಿ ಶಾಸಕ ಮಾಲಿಕಯ್ಯ ಗುತ್ತೇದಾರ್, ರಾಜ್ಯ ದ್ವಿದಳ ಧಾನ್ಯ ಮಂಡಳಿ ಅಧ್ಯಕ್ಷ ವಿದ್ಯಾಸಾಗರ್ ಶಹಾಬಾದಿ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅವಿನಾಶ್ ಕುಲಕರ್ಣಿ, ಈಶಾನ್ಯ ವಲಯ ಪೊಲೀಸ್ ಉಪ ಮಹಾನಿರೀಕ್ಷಕ ಅನುಪಮ್ ಅಗರವಾಲ್, ಕೆ.ಕೆ..ಆರ್.ಡಿ.ಬಿ. ಕಾರ್ಯದರ್ಶಿ ಅನಿರುದ್ಧ ಶ್ರವಣ್, ಕಲಬುರಗಿ ನಗರ ಪೊಲೀಸ್ ಆಯುಕ್ತ ಚೇತನ್ ಆರ್., ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ , ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್ ಡಿ. ಬದೋಲೆ,
ಕಲಬುರಗಿ ಜಿಲ್ಲಾ ಪೊಲೀಸ್ ವರಿಷ್ಥಾಧಿಕಾರಿ ಇಶಾ ಪಂತ್, ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಪಾಟೀಲ್ ಭುವನೇಶ್ ದೇವಿದಾಸ್, ಸಾರ್ವಜನಿಕ ಶಿಕ್ಷಣ ಇಲಾಖೆ ಅಪರ ಆಯುಕ್ತೆ ಗರಿಮಾ ಪನ್ವಾರ್ ಸೇರಿದಂತೆ ಮುಂತಾದವರು ಇದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw