ಅಂತರ್ಜಾತಿ ಮದುವೆ ಆಗಿದ್ದಕ್ಕೆ ದಂಪತಿಗೆ ದಂಡ, ಗ್ರಾಮದಿಂದ ಬಹಿಷ್ಕಾರ
ಕೊಳ್ಳೇಗಾಲ: ತಾಲ್ಲೂಕಿನ ಕುಣಗಳ್ಳಿ ಗ್ರಾಮದಲ್ಲಿ ಅಂತರ್ ಜಾತಿ ವಿವಾಹ ಆಗಿದ್ದಕ್ಕೆ ಗ್ರಾಮದ ಯಜಮಾನರು 3 ಲಕ್ಷ ದಂಡ ಹಾಕಿ ಗ್ರಾಮದಿಂದ ಹೊರ ಉಳಿಯುವಂತೆ ಬಹಿಷ್ಕಾರ ಹಾಕಿದ್ದಾರೆ ಎಂದು ನಗರದ ಡಿ.ವೈ.ಎಸ್.ಪಿ. ಕಚೇರಿಗೆ ಬಂದು ದಂಪತಿಗಳು ದೂರು ನೀಡಿದ್ದಾರೆ.
ಕುಣಗಳ್ಳಿ ಗ್ರಾಮದ ಗೋವಿಂದರಾಜು ಎಂಬುವರು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಹೂವಿನ ಕೊಪ್ಪಲು ಗ್ರಾಮದ ದಲಿತ ಜನಾಂಗಕ್ಕೆ ಸೇರಿದ ಪ್ರಕಾಶ್ ಎಂಬುವರ ಮಗಳಾದ ಶ್ವೇತ ಜೊತೆ ಪರಸ್ಪರ ಪ್ರೀತಿಸಿ ಮನೆಯವರ ಸಮ್ಮುಖದಲ್ಲಿ 5 ವರ್ಷಗಳ ಹಿಂದೆ ಮಳವಳ್ಳಿಯ ಸಬ್ ರಿಜಿಸ್ಟರ್ ಕಚೇರಿಯಲ್ಲಿ ವಿವಾಹ ನೊಂದಣಿ ಮಾಡಿಸಿಕೊಂಡಿದ್ದರು.
ಗೋವಿಂದರಾಜು ಮಳವಳ್ಳಿಯಲ್ಲಿ ಮನೆ ಮಾಡಿಕೊಂಡು ಕೆಲಸ ನಿರ್ವಹಿಸುತ್ತಿದ್ದರು. ಆಗಾಗ ಗೋವಿಂದರಾಜು ಹಾಗೂ ಶ್ವೇತ ಕುಣಗಳ್ಳಿ ಗ್ರಾಮಕ್ಕೆ ಬಂದು ಹೋಗುತ್ತಿದ್ದು ಐದು ವರ್ಷದಿಂದ ಜೀವನ ನಡೆಸುತ್ತಿದ್ದರು. ಗೋವಿಂದರಾಜು ಅವರ ಮನೆಯಲ್ಲಿ ಅಂತರ್ ಜಾತಿ ವಿವಾಹ ತಿಳಿದಿದ್ದರೂ ಸಹ ಮನೆಯವರು ಯಾರು ಸಹ ತೊಂದರೆ ನೀಡಲಿಲ್ಲ. ತಿಂಗಳಿಗೆ 2 ರಿಂದ 3 ಬಾರಿ ಗ್ರಾಮಕ್ಕೆ ಬಂದು ಹೋಗುತ್ತಿದ್ದರು. ಆದರೆ ಗೋವಿಂದರಾಜು ಅವರ ಅಕ್ಕಪಕ್ಕದ ನಿವಾಸಿಗಳು ಅಂತರ್ ಜಾತಿ ವಿವಾಹದ ಬಗ್ಗೆ ಮಾಹಿತಿಯನ್ನು ಪಡೆದು ಶ್ವೇತಾ ನಮ್ಮ ಜಾತಿಯವಳಲ್ಲ, ಅವಳು ದಲಿತ ಜನಾಂಗಕ್ಕೆ ಸೇರಿದವಳು ಎಂದು ಪಕ್ಕದ ಮನೆಯವರಾದ ಜಯಲಕ್ಷ್ಮಿ, ಮಧು, ರಂಗಸ್ವಾಮಿ, ಕುಳ್ಳ, ಮಹದೇವಪ್ಪ ಮಹದೇವ ಶೆಟ್ಟಿ ಇವರುಗಳು ಗ್ರಾಮದ ಯಜಮಾನರುಗಳಿಗೆ ಮಾಹಿತಿ ನೀಡಿ ಎರಡರಿಂದ ಮೂರು ಬಾರಿ ಪಂಚಾಯಿತಿ ನಡೆಸಿ ದಂಡ ಕಟ್ಟಬೇಕು ಎಂದು ನಮ್ಮ ಮಾವನವರಾದ ವೆಂಕಟಶೆಟ್ಟಿ ಮತ್ತು ಸಂಗಮ್ಮ ಅವರಿಗೆ ಆದೇಶ ನೀಡಿ ಕಿರುಕುಳ ನೀಡುತ್ತಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ನಂತರ ಗ್ರಾಮದ ಯಜಮಾನರುಗಳು ಬಹಿಷ್ಕಾರ ಹಾಕಿ, ನೀವು ಗ್ರಾಮಸ್ಥರ ಜೊತೆ ಮಾತನಾಡುವಂತಿಲ್ಲ, ಅಂಗಡಿಗಳಲ್ಲಿ ಅಕ್ಕಿ, ತರಕಾರಿ, ಹಾಲು ನೀಡುವುದಿಲ್ಲ ನೀರನ್ನು ಸಹ ತೆಗೆದುಕೊಳ್ಳುವಂತಿಲ್ಲ ಎಂದು ತೀರ್ಪು ನೀಡಿದ್ದರು. ಗ್ರಾಮದ ಯಜಮಾನರಾದ ವೆಂಕಟಶೆಟ್ಟಿ ,ಮಹದೇವ, ಮೊಂಡಶೆಟ್ಟಿ, ಕಣ್ಣಪ್ಪ, ನಂಜಶೆಟ್ಟಿ, ಮಹದೇವ ಶೆಟ್ಟಿ, ಸಿದ್ದೇಶ್, ಪಂಚಾಯಿತಿ ಮಾಡಿ ನೀವು ತಪ್ಪು ಮಾಡಿದ್ದೀರಾ ಆ ಕಾರಣ 3 ಲಕ್ಷ ದಂಡ ಕಟ್ಟಬೇಕು ಎಂದು ಯಜಮಾನರು ಮಾರ್ಚ್ 1 ರಂದು ಕೊನೆಯ ದಿನಾಂಕ ನೀಡಿದರು. ನೀವು ದಂಡ ಕಟ್ಟಿದರು ಸಹ ನಿಮ್ಮ ಸೊಸೆ, ಮಗ ಗ್ರಾಮಕ್ಕೆ ಪ್ರವೇಶ ಮಾಡುವಂತಿಲ್ಲ ನೀವು ಅವರ ಜೊತೆ ಮಾತನಾಡುವಂತಿಲ್ಲ ಈಗ 3 ಲಕ್ಷ ಕಟ್ಟಿದರೆ ಗ್ರಾಮದವರು ಎಂದಿನಂತೆ ನಿಮ್ಮನ್ನು ಮಾತನಾಡಿಸುತ್ತಾರೆ ಎಂದು ಬಹಿಷ್ಕಾರ ಹಾಕಿದ್ದರು. ನಮ್ಮ ಮಾವನವರು ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದಾರೆ ಅವರ ಬಳಿ 3 ಲಕ್ಷ ಇಲ್ಲ ಹಾಗಾಗಿ ನಮಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಡಿ.ವೈ.ಎಸ್.ಪಿ ಅವರಿಗೆ ದೂರು ನೀಡಿದ್ದಾರೆ.
ಶ್ವೇತಾ ಹಾಗೂ ಗೋವಿಂದರಾಜು ದೂರು ನೀಡಿದ ವಿಷಯ ಗ್ರಾಮದ ಯಜಮಾನರುಗಳಿಗೆ ತಿಳಿದ ತಕ್ಷಣ ಗ್ರಾಮದ ಯಜಮಾನರು ಮತ್ತೆ 3 ಲಕ್ಷ ಹಾಕಿದ್ದಾರೆ ಒಟ್ಟು 6 ಲಕ್ಷ ದಂಡವನ್ನು ಕಟ್ಟಬೇಕು ಎಂದು ಯಜಮಾನರುಗಳು ಆದೇಶ ನೀಡಿದ್ದಾರೆ ಎಂದು ಶ್ವೇತಾ ಹಾಗೂ ಗೋವಿಂದರಾಜು ಅಳಲು ತೋಡಿಕೊಂಡಿದ್ದಾರೆ.
ಮಾರ್ಚ್ 1 ರಂದು ನಮ್ಮ ಕಚೇರಿಗೆ ಬಂದು ದೂರು ನೀಡಿದ್ದಾರೆ. ನಾನು ಅಂದು ಕಚೇರಿಯಲ್ಲಿ ಇರಲಿಲ್ಲ ಹಾಗಾಗಿ ಅರ್ಜಿಯನ್ನು ನೋಡಿ ಇದರ ಬಗ್ಗೆ ತನಿಖೆ ನಡೆಸಿ ಮಾಹಿತಿಯನ್ನು ಪಡೆದುಕೊಂಡು ಬರಬೇಕು ಎಂದು ಸಿಪಿಐ ಕೃಷ್ಣಪ್ಪ ಅವರಿಗೆ ಸೂಚನೆ ನೀಡಿದ್ದೇನೆ. ಒಂದು ವೇಳೆ ಬಹಿಷ್ಕಾರ ಹಾಕಿದ್ದರೆ ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸುತ್ತೇನೆ.
–ಡಿ.ವೈ.ಎಸ್.ಪಿ, ಸೋಮೇಗೌಡ
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw