40 ದಿನಗಳ ಪ್ರತಿಭಟನೆಯಲ್ಲಿ 60 ರೈತರು ಹುತಾತ್ಮ | ಕರಗದ ಮೋದಿ ಸರ್ಕಾರದ ಕಲ್ಲು ಹೃದಯ
ನವದೆಹಲಿ: ಕೇಂದ್ರ ಸರ್ಕಾರದ ವಿವಾದಿತ ಕೃಷಿ ಕಾಯ್ದೆ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಕಳೆದ 40 ದಿನಗಳಲ್ಲಿ 60 ರೈತರು ಹುತಾತ್ಮರಾಗಿದ್ದಾರೆ. 16 ಗಂಟೆಯಲ್ಲಿ ಒಬ್ಬರಂತೆ ಒಟ್ಟು 60 ರೈತರು ಹುತಾತ್ಮರಾಗಿದ್ದಾರೆ.
ಸ್ವಾಮಿನಾಥನ್ ವರದಿ ಜಾರಿಗೊಳಿಸಬೇಕು, ಕನಿಷ್ಠ ಬೆಂಬಲ ಬೆಲೆ ಘೋಷಿಸಬೇಕು ಹಾಗೂ ಮೂರು ವಿವಾದಿತ ಕಾಯ್ದೆಗಳನ್ನು ರದ್ದು ಮಾಡಬೇಕು ಎಂದು ರೈತರು ಪಟ್ಟು ಹಿಡಿದಿದ್ದಾರೆ. ಆದರೆ ಕೇಂದ್ರ ಸರ್ಕಾರವು ಒಂದೆಡೆ ರೈತರ ಜೊತೆಗೆ 6 ಸುತ್ತಿನ ಮಾತುಕತೆ ನಡೆಸಿದರೂ ಇನ್ನೂ ರೈತರ ಬೇಡಿಕೆಗಳನ್ನು ಸರ್ಕಾರ ಈಡೇರಿಸಿಲ್ಲ. ಆದರೆ ರೈತರ ಪ್ರತಿಭಟನೆ ಹತ್ತಿಕ್ಕಲು, ರೈತರನ್ನು ನಕ್ಸಲೇಟ್ಸ್ ಭಯೋತ್ಪಾದಕರು, ಪ್ರತ್ಯೇಕತಾವಾದಿಗಳು, ಖಲಿಸ್ತಾನಿಗಳು ಎಂದು ಅಪಪ್ರಚಾರ ಮಾಡುತ್ತಿದೆ. ಈ ನಡುವೆ 60 ರೈತರು ತಮ್ಮ ಹಕ್ಕುಗಳಿಗಾಗಿ ನಡೆಸುತ್ತಿರುವ ಹೋರಾಟದಲ್ಲಿ ಹುತಾತ್ಮರಾಗಿದ್ದಾರೆ.
ರೈತರು ಪ್ರತಿಭಟನೆಯಿಂದ ಸುಸ್ತಾಗಿ ಪ್ರತಿಭಟನೆ ಹಿಂಪಡೆಯುತ್ತಾರೆ ಎಂದು ಕೇಂದ್ರ ಸರ್ಕಾರ ಕಾಯುತ್ತಿದೆ. ಆದರೆ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿರುವ ರೈತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಕೇಂದ್ರ ಸರ್ಕಾರವು ರೈತರ ಸಾವಿಗೆ ನೇರವಾಗಿ ಕಾರಣವಾಗುತ್ತಿದೆ. ಕಾರ್ಪೋರೇಟ್ ಗಳ ಪರವಾಗಿ ಕೇಂದ್ರ ಸರ್ಕಾರ ನಿಂತಿದೆ ಮತ್ತು ಅವರ ಪರವಾಗಿ ಪ್ರಧಾನಿ ಮೋದಿ ಕೂಡ ಬ್ಯಾಟಿಂಗ್ ಮಾಡುತ್ತಿದ್ದಾರೆ. ಈ ನಡುವೆ ವಿವಿಧ ರಾಜ್ಯಗಳಲ್ಲಿ ರೈತರ ಆಕ್ರೋಶ ಮುಗಿಲು ಮುಟ್ಟುತ್ತಿದೆ. ಈಗಾಗಲೇ ಪಂಜಾಬ್ ನಲ್ಲಿ ಜಿಯೋ ವಿರುದ್ಧ ರೈತರು ಸಿಡಿದೆದ್ದಿದ್ದಾರೆ. ಬಿಜೆಪಿ ಮುಖಂಡರ ಮನೆಯ ಮುಂದೆ ಸೆಗಣಿ ಸುರಿದಿದ್ದಾರೆ. ಕೇಂದ್ರ ಸರ್ಕಾರ ಇನ್ನೂ ತನ್ನ ಮೊಂಡುವಾದವನ್ನು ಮುಂದುವರಿಸಿದರೆ, ರೈತರು ಇನ್ನಷ್ಟು ಕೆರಳುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.