ಜನರಿಗೆ ಕೊಟ್ಟ ಆಶ್ವಾಸನೆಯನ್ನು ನಿರೀಕ್ಷೆಗೂ ಮೀರಿ ಈಡೇರಿಸಿದ್ದೇನೆ: ಶಾಸಕ ಹರೀಶ್ ಪೂಂಜ
ಬೆಳ್ತಂಗಡಿ: ಹಿಂದೆಂದೂ ಕಾಣದ ರೀತಿಯಲ್ಲಿ ತಾಲೂಕು ಕಳೆದ ನಾಲ್ಕೂವರೆ ವರ್ಷದಲ್ಲಿ ಅಭಿವೃದ್ಧಿ ಕಂಡಿದ್ದು ಜನರಿಗೆ ಕೊಟ್ಟ ಆಶ್ವಾಸನೆಯನ್ನು ನಿರೀಕ್ಷೆಗೂ ಮೀರಿ ಈಡೇರಿಸಿದ್ದೇನೆ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಈಗಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಾಲೂಕಿನ ಅಭಿವೃದ್ಧಿಗೆ ಕೇಳಿದ ಹಾಗೆ ಅನುದಾನ ನೀಡಿದ್ದು, ಅದರಂತೆ 3,500 ಕೋಟಿಗೂ ಅಧಿಕ ಅನುದಾನ ತಾಲೂಕಿಗೆ ಬಂದಿದ್ದು, ಬಿಜೆಪಿ ಪಕ್ಷ ನುಡಿದಂತೆ ನಡೆದ ಪಕ್ಷವಾಗಿದೆ ಎಂದು ಶಾಸಕ ಹರೀಶ್ ಪೂಂಜಾ ಹೇಳಿದರು.
ಅವರು ಮಂಗಳವಾರ ತಾಲೂಕಿನ ವಿವಿಧ ಗ್ರಾಮಗಳಲ್ಲಿ 411 ಕೋಟಿ ಮೊತ್ತದ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರ ಕಲ್ಪನೆಯಂತೆ ಅಭಿವೃದ್ದಿಯಲ್ಲಿ ಯಾವ ಜಾತಿ, ಮತ, ಪಕ್ಷ ನೋಡದೆ ಅನುದಾನ ಹಂಚಿಕೆ ಮಾಡಿದ್ದೇನೆ. ಸರಳೀಕಟ್ಟೆ ಬಳಿ ಜೀವನ್ ಮಿಷನ್ ಯೋಜನೆಯಡಿಯಲ್ಲಿ ಸುಮಾರು 21 ಗ್ರಾಮದ ಜನರಿಗೆ ಶುದ್ದ ಕುಡಿಯುವ ನೀರು ಒದಗಿಸಲು 170 ಕೋಟಿ ವೆಚ್ಚದಲ್ಲಿ ಕುಡಿಯುವ ನೀರಿನ ಯೋಜನೆಗೆ ಶಿಲಾನ್ಯಾಸ ನೆರವೇರಿಸಿದ್ದು, ಇದು ಈ ಭಾಗದ ಜನರ ಭಾಗ್ಯವಾಗಿದೆ. ನಾಳೆಯಿಂದಲೇ ಕಾಮಗಾರಿ ಪ್ರಾರಂಭವಾಗಲಿದೆ. ಆದಷ್ಟು ಬೇಗ ಕಾಮಗಾರಿ ಮುಗಿದು ಪ್ರತಿ ಮನೆಗೂ ನೀರಿನ ಭಾಗ್ಯ ಒದಗಿಬರಲಿದೆ ಎಂದರು.
ಬಂದಾರು ಮೈಪಾಲ ಬಳಿ 70 ಕೋಟಿ ವೆಚ್ಚದಲ್ಲಿ ಸೇತುವೆ ಸಹಿತ ಕಿಂಡಿ ಅಣೆಕಟ್ಟು ನಿರ್ಮಾಣವಾಗಲಿದ್ದು, ಇದರಿಂದ ತೆಕ್ಕಾರು, ಬಾರ್ಯ ಕಲ್ಲೇರಿ,ಬಂದಾರು ಭಾಗದ ಜನರಿಗೆ ಕೊಕ್ಕಡ ಹೋಬಳಿ ಕೇಂದ್ರಕ್ಕೆ ಹೋಗಲು ಸಹಕಾರಿಯಲ್ಲದೆ, ಬೆಂಗಳೂರಿಗೆ ಹೋಗುವವರಿಗೂ ಅನುಕೂಲವಾಗಲಿದೆ. ಉಳಿದಂತೆ ಇದೀಗ ಶಿಲಾನ್ಯಾಸಗೊಂಡಿರುವ ಎಲ್ಲಾ ಕಾಮಗಾರಿಗಳು ಪ್ರಾರಂಭವಾಗಲಿದ್ದು, ಜನರಿಗೆ ನೆರವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಕೊಕ್ಕಡ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಕುಶಾಲಪ್ಪ ಗೌಡ, ಜಿ.ಪಂ. ಮಾಜಿ ಅಧ್ಯಕ್ಷ ಕೊರಗಪ್ಪ ಗೌಡ, ತಾ.ಪಂ. ಮಾಜಿ ಸದಸ್ಯರಾದ ಗೀತಾ ರಾಮಣ್ಣ ಗೌಡ, ಮಹಾಬಲ ಗೌಡ, ಮಚ್ಚಿನ ಗ್ರಾ.ಪಂ. ಅದ್ಯಕ್ಷ ಚಂದ್ರಕಾಂತ್ ನಿಡ್ಪಾಜೆ, ಬಿಜೆಪಿ ಮಾಜಿ ಪ್ರಧಾನ ಕಾರ್ಯದರ್ಶಿ ಸೀತಾರಾಮ ಬಿ ಎಸ್. ಮತ್ತು ವಿವಿಧ ಗ್ರಾ.ಪಂ.ನ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.
ಚುನಾವಣೆಗೆ 15 ದಿನಗಳಿರುವಾಗ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬಂದಿರುವ ಕಾಮೆಂಟ್ ಗಳ ಬಗ್ಗೆ ಮಾತನಾಡಿದ ಹರೀಶ್ ಪೂಂಜ, ಅವರು ಹಿಂದೆ ಕಾಂಗ್ರೆಸ್ ನವರು ತೆಂಗಿನ ಕಾಯಿ ಒಡೆದಲ್ಲಿ ಕಾಮಗಾರಿ ನಡೆದಿರಲಿಲ್ಲ ಆದರೆ ಈಗ ಎಲ್ಲ ಕಾಮಗಾರಿಗಳಿಗೂ ಅನುದಾನ ಮಂಜೂರಾಗಿದ್ದು ಇನ್ನು ಒಂದೇ ವಾರದಲ್ಲಿ ಎಲ್ಲ ಕಾಮಗಾರಿಗಳಿಗೂ ಚಾಲನೆ ಸಿಗಲಿದೆ. ಈ ಬಗ್ಗೆ ಯಾವುದೇ ಅನುಮಾನ ಬೇಡ ಕೆಲವು ಕಾಮಗಾರಿಗಳು ಈಗಲೇ ಆರಂಭಗೊಂಡಿದೆ ಎಂದು ತಿಳಿಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw