ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿರುವ ನಗರ ಬೆಂಗಳೂರು: ಬೊಮ್ಮಾಯಿ‌ - Mahanayaka
1:21 AM Thursday 12 - December 2024

ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿರುವ ನಗರ ಬೆಂಗಳೂರು: ಬೊಮ್ಮಾಯಿ‌

cm bommai
08/03/2023

ಬೆಂಗಳೂರು: ಬೆಂಗಳೂರು ವಿಶೇಷವಾಗಿರುವ ನಗರ. ಭಾರತ ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿರುವ ನಗರ. ಪ್ರತಿದಿನ 3/4 ಲಕ್ಷ ಜನರು ಬೆಂಗಳೂರಿಗೆ ಬಂದು ಹೋಗುತ್ತಾರೆ. ವಿದೇಶದಿಂದ ವಿಮಾನಗಳಲ್ಲಿ ವಿಜ್ಞಾನಿಗಳು, ಎಂಜಿನಿಯರ್ಸ್ ಗಳು, ಸಾಫ್ಟವೇರ್ ಎಂಜಿನಿಯರ್ ಗಳಂತಹ ವಿಶೇಷ ಅತಿಥಿಗಳೇ 5 ಸಾವಿರದಷ್ಟು ಜನರು ಬರುತ್ತಾರೆ. 1.30 ಕೋಟಿ ಜನಸಂಖ್ಯೆಯಷ್ಟಿರುವ ನಗರದಲ್ಲಿ ಜನಸಂಖ್ಯೆಗಿಂತ ವೇಗವಾಗಿ ವಾಹನಗಳ ಸಂಖ್ಯೆ ಬೆಳೆಯುತ್ತಿದೆ. ಬೆಂಗಳೂರಿನಲ್ಲಿ ಜನಸಂಖ್ಯೆ ಮತ್ತು ವಾನಹಗಳ ಸಂಖ್ಯೆಯ ನಡುವೆ ಪೈಪೋಟಿ ನಡೆದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು.

ಬೆಂಗಳೂರಿನ ಹೆಣ್ಣೂರು ಟ್ರಾಫಿಕ್ ಪೊಲೀಸ್ ಠಾಣೆಯನ್ನು ಉದ್ಘಾಟನೆ ಮಾಡಿದ ಬಳಿಕ ಅವರು ಮಾತನಾಡಿದರು.

ಬೆಂಗಳೂರಿನಲ್ಲಿ ಇನ್ನು ಐದು ವರ್ಷದಲ್ಲಿ ಜನಸಂಖ್ಯೆಯನ್ನು ದಾಟಿ ವಾಹನಗಳ ಸಂಖ್ಯೆ ಮುಂದೆ ಹೋಗುವ ವಿಶ್ವಾಸ ನನಗೆ ಇದೆ. ಇದನ್ನು ನಾವು ಯಾವ ರೀತಿ ತೆಗೆದುಕೊಳ್ಳುತ್ತೆವೆ. ಒಂದು ನಗರ ಬೃಹತ್ತಾಗಿ ಔದ್ಯೋಗಿಕವಾಗಿ, ಆರ್ಥಿಕವಾಗಿ ಎಲ್ಲ ದೃಷ್ಟಿಯಿಂದ ಬೆಳೆಯುತ್ತಿರುವಾಗ ಇವೆಲ್ಲವೂ ಬಹಳ ಸಹಜ. ಬೆಳವಣಿಗೆ ಆಗಬೇಕು. ಬೆಳವಣಿಗೆ ‌ಅದಾಗಲೇ ಎಲ್ಲರ ಕೈಗೆ ಕೆಲಸ ಸಿಕ್ಕು ಆದಾಯ ಹೆಚ್ಚಾಗುತ್ತದೆ. ‌ರಾಜ್ಯದ ಆದಾಯ ಕೂಡ ಹೆಚ್ಚಾಗುತ್ತದೆ. ಆದರೆ ಈ ಬೆಳವಣಿಗೆ ಹಲವಾರು ಸಮಸ್ಯೆಗಳನ್ನು ಜತೆಗೆ ತರುತ್ತದೆ. ಅವುಗಳನ್ನು ಯಾವ ರೀತಿ ನಿವಾರಣೆಗೆ ಮಾಡಬೇಕು ಎನ್ನುವುದು ನಮ್ಮ ಮುಂದೆ ಇರುವ ಸವಾಲು. ಇದರ ಅರ್ಥ ಬೆಳವಣಿಗೆ ಬೇಡ ಅಂತಲ್ಲ.‌ ಬೆಳವಣಿಗೆ ಬೇಕು ಎಂದರೆ ಆ ಸಮಸ್ಯೆಗೆ ಪರಿಹಾರ ಬೇಕಾಗುತ್ತದೆ. ಹೀಗಾಗಿ ಒಂದು ನಗರದ ಯೋಜನೆಯನ್ನು ಕಲ್ಪನೆ, ಬೆಳವಣಿಗೆಯ ಗತಿಯನ್ನು ನೋಡಿದಾಗ ಅದಕ್ಕೆ ತಕ್ಕದಾದ ಯೋಜನೆಗಳನ್ನು ರೂಪಿಸುವುದು ಅವಶ್ಯಕವಾಗಿದೆ ಎಂದರು.

ಜಗತ್ತಿನ ಬೃಹತ್ ನಗರಗಳಲ್ಲಿ ಟ್ರಾಪಿಕ್ ಸಮಸ್ಯೆ ಇದೆ. ನ್ಯೂಯಾರ್ಕ್, ಲಂಡನ್‌, ಪ್ಯಾರಿಸ್, ಟೋಕಿಯೊ, ಶಾಂಘೈ ಸೇರಿದಂತೆ ಎಲ್ಲ ನಗರಗಳಲ್ಲಿ ಟ್ರಾಫಿಕ್ ಜಾಮ್ ಹೆಚ್ಚು ಆಗುತ್ತದೆ. ಅದನ್ನು ನಾನು ಅನುಭವಿಸಿದ್ದೇನೆ. ಅದನ್ನು ಆಧುನಿಕ ತಂತ್ರಜ್ಞಾನಗಳನ್ನು ಬಳಸಿ ನಿಯಂತ್ರಣ ಮಾಡಲು ಪ್ರಯತ್ನ ಮಾಡುತ್ತಾರೆ. ಒಂದು ಸಣ್ಣ ಅಪಘಾತವಾದರೆ 50 ರಿಂದ 60 ಕಿ.ಮೀ ನಷ್ಟು ಟ್ರಾಫಿಕ್ ಜಾಮ್ ಆಗುತ್ತದೆ. ಇವತ್ತು ಅಂತಹದ್ದೇ ಪರಿಸ್ಥಿತಿ ನಮಗೆ ಬಂದಿದೆ.

ನಗರದಲ್ಲಿ ಎಲ್ಲರ ಮನೆಯಲ್ಲಿಯೂ ಎರಡು ಮೂರು ಕಾರು,ಬೈಕ್ ಇರುತ್ತವೆ. ಎಲ್ಲರಿಗೂ ಪ್ರತ್ಯೆಕ ವಾಹನ ವ್ಯವಸ್ಥೆ ಬೇಕು.
ದೇಶದ ಬೇರೆ ನಗರಗಳಾದ ಮುಂಬೈ ದೆಹಲಿ, ಚೆನೈನಲ್ಲಿ ಪ್ರವಾಹ ಬಂದರೆ ಯಾರೂ ಮಾತನಾಡುವುದಿಲ್ಲ. ಆದರೆ ಬೆಂಗಳೂರಿನಲ್ಲಿ ಸ್ವಲ್ಪ ಪ್ರವಾಹ ಬಂದರೂ ಹೆಸರು ಕೆಡಿಸುವ ಕೆಲಸ ಮಾಡುತ್ತಾರೆ.‌
ಸಾಮಾಜಿಕ ಜಾಲ ತಾಣದಲ್ಲಿ ಟ್ರೋಲ್ ಮಾಡುವವರು ಹೆಚ್ಚಾಗಿದೆ ಎಂದರು.

ಬೆಂಗಳೂರಿನಲ್ಲಿ ಸಮಸ್ಯೆಗಳು ಇಲ್ಲ ಅಂತ ನಾನು ಹೇಳುತ್ತಿಲ್ಲ. ಅಂತರರಾಷ್ಟ್ರೀಯ ಮಟ್ಟದಲ್ಲಿ ಸಿಲಿಕಾನ್ ವ್ಯಾಲಿ ಅಂತ ಬೆಂಗಳೂರನ್ನು ಕರೆಯುತ್ತಾರೆ. ಬೆಂಗಳೂರು ವಿಶ್ವ ಮಟ್ಟದಲ್ಲಿ ಸಾಕಷ್ಟು ಮುಂಚೂಣಿಯಲ್ಲಿದೆ. ಅತಿ ಹೆಚ್ಚು ಉದ್ಯೋಗ, ಏರೋಪ್ಲೇನ್ ಬಿಡಿಭಾಗಗಳ ತಯಾರಿಕೆ ಇಲ್ಲಿ ಆಗುತ್ತಿದೆ. ಎಫ್ ಡಿಐ, ಐಟಿ-ಬಿಟಿ, 400 ಫಾರ್ಚೂನ್ ಕಂಪನಿಗಳು ಬೆಂಗಳೂರಿನಲ್ಲಿವೆ. ವಿಜ್ಞಾನ, ತಂತ್ರಜ್ಞಾನ, ಸಂಶೋಧನೆ ಎಲ್ಲ ಕ್ಷೇತ್ರದಲ್ಲಿ ಬೆಂಗಳೂರು ಬೃಹತ್ ಪ್ರಮಾಣದಲ್ಲಿ ಕೆಲಸ ಮಾಡುತ್ತಿದೆ. ಇಂತಹ ಹೆಸರು ಕೆಡಿಸುವ ಕೆಲಸವನ್ನು ನಾವು ಯಾರು ಮಾಡಬಾರದು. ಬೆಂಗಳೂರಿನ ಬಗ್ಗೆ ‌ಬೆಂಗಳೂರಿಗೆ ಅಭಿಮಾನ ಇರಬೇಕು ಎಂದರು.

ಬೆಂಗಳೂರು ಉತ್ತರ ಭಾರತ ಮತ್ತು ದಕ್ಷಿಣ ಭಾರತದ ನರ ಇದ್ದ ಹಾಗೆ. ಆ ಭಾಗದಿಂದ ಬಹಳ ವಾಹನಗಳ ಬರುತ್ತವೆ. ರಸ್ತೆ ಎಷ್ಟಿದೆಯೋ ಅಷ್ಟೇ ಇತ್ತು. ಹೀಗಾಗಿ‌ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಇದನ್ನು ನಿಯಂತ್ರಣ ಮಾಡಲು ಸಲೀಮ್ ಅವರನ್ನು ವಿಶೇಷ ಆಯುಕ್ತರನ್ನಾಗಿ‌‌ ನೇಮಿಸಿದ್ದೇವೆ. ಅವರಿಂದ ಸಾಕಷ್ಟು ಟ್ರಾಪಿಕ್ ಸಮಸ್ಯೆಗೆ ಪರಿಹಾರ ಸಿಕ್ಕಿದೆ. ಇನ್ನೂ ಕೆಲವು ಕೆಲಸ ಆಗಬೇಕು. ಫ್ಲೈ ಓವರ್ ಗಳು, ಸೀಮ್‌ಲೆಸ್ ಟ್ರಾಫಿಕ್, ಸಿಗ್ನಲ್ ಸಿಂಕ್ರನೈಸ್ ವ್ಯವಸ್ಥೆ ಮಾಡಲಾಗುತ್ತಿದೆ. ಟ್ರಾಫಿಕ್ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡಿ ಎಂದರು.

ಹೆಚ್ಚುವರಿ ಪೊಲೀಸ್ ಠಾಣೆಗಳಿಗೆ ಅನುಮೋದನೆ:

ಬೆಂಗಳೂರಿನಲ್ಲಿ 4 ಪೊಲೀಸ್ ಸ್ಟೇಷನ್ ಗಳಿಗೆ ಕಳೆದ ವರ್ಷ ಅನುಮೋದನೆ ನೀಡಿ ಈ ವರ್ಷ ಪ್ರಾರಂಭ ಮಾಡಿದ್ದೇವೆ. ಈ ವರ್ಷ 5 ಹೊಸ ಟ್ರಾಫಿಕ್ ಪೊಲೀಸ್ ಸ್ಟೇಷನ್ ಮಾಡುತ್ತಿದ್ದೇವೆ. 9 ಹೊಸ ಕಾನೂನು ಮತ್ತು ಸುವ್ಯವಸ್ಥಿತ ಪೊಲೀಸ್ ಸ್ಟೇಷನ್ ಮತ್ತು 6 ಮಹಿಳಾ ಪೊಲೀಸ್ ಸ್ಟೇಷನ್ ಸೇರಿ ಒಟ್ಟು 20 ಹೊಸ ಪೊಲೀಸ್ ಸ್ಟೇಷನ್ ಮಾಡಬೇಕು ಎಂದು ನಾನು ಗೃಹ ಸಚಿವನಾಗಿದ್ದರಿಂದಲೂ ಬಹಳ ಪ್ರಯತ್ನ ಪಟ್ಟಿದ್ದೆ. ಈಗ ಅದಕ್ಕೆ ಮುಖ್ಯಮಂತ್ರಿಯಾಗಿ ಅನುಮೋದನೆ ಕೊಟ್ಟಿದ್ದೇನೆ ಎಂದರು.

ಈ ಸಂದರ್ಭದಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರ, ಸಚಿವ ಬೈರತಿ ಬಸವರಾಜ, ಕಮಿಷನರ್ ಪ್ರತಾಪ್ ರೆಡ್ಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ