ಮಂಗಳೂರು ವಿಶ್ವವಿದ್ಯಾಲಯ: ಎಸ್ ವಿಪಿ ಸಂಸ್ಥೆಯಲ್ಲಿ ‘ಸಂಸ್ಕೃತಿ ಸಿರಿ’
ತುಳುನಾಡಿನ ದೈವಾರಾಧನೆ, ಕಂಬಳ, ಧಾರ್ಮಿಕ ಆಚರಣೆಗಳು, ಸಂಪ್ರದಾಯಗಳು ಬಹಳ ವಿಶೇಷವಾದುದು ಮತ್ತು ತುಳುನಾಡಿನ ಸಾಂಸ್ಕೃತಿಕ ಪರಂಪರೆ ಅನನ್ಯವಾದದ್ದು. ಯುವ ಸಮುದಾಯ ಇದರ ಮಹತ್ವವನ್ನು ಅರಿತುಕೊಂಡು ಮುನ್ನಡೆಯಬೇಕು ಎಂದು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಅವರು ಹೇಳಿದ್ದಾರೆ.
ಅವರು ಮಂಗಳೂರು ವಿಶ್ವವಿದ್ಯಾನಿಲಯದ ಎಸ್ ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ವತಿಯಿಂದ “ಸಂಸ್ಕೃತಿ ಸಿರಿ-2023” ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಕುರಿತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ತುಳುನಾಡಿನ ಕಂಬಳ ಅಥವಾ ಇತರ ಜಾನಪದ ಕ್ರೀಡೆಗಳು ಮನರಂಜನೆಗೆ ಮಾತ್ರ ಸೀಮಿತವಾಗಿಲ್ಲ. ಅದರಲ್ಲಿರುವ ಧಾರ್ಮಿಕತೆ ಮತ್ತು ನೈಜ ಸತ್ಯವನ್ನು ಅರಿಯಬೇಕಿದೆ. ಕರಾವಳಿಯ ಜನರ ಆಚರಣೆಗಳು, ಮೂಲನಂಬಿಕೆಗಳು ಇಲ್ಲಿಯ ಜೀವನದೊಂದಿಗೆ ಬೆಸೆದುಕೊಂಡಿದೆ. ಇಂದಿನ ವೈಜ್ಞಾನಿಕ ಯುಗದಲ್ಲೂ ಕೆಲವೊಂದು ರೋಗಗಳಿಗೆ ತುಳುನಾಡಿನ ನಾಟಿವೈದ್ಯರೇ ಆಗಬೇಕಿದೆ. ತುಳುನಾಡಿನ ಸತ್ವ ಸತ್ಯಗಳನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಇಂತಹ ಕಾರ್ಯಕ್ರಮಗಳಿಂದ ಸಂಸ್ಕೃತಿ ಯ ಅರಿವು, ಜಾಗೃತಿಯಾಗುತ್ತದೆ ಎಂದರು.
ಬಿ.ಸಿ.ರೋಡ್ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಡಾ.ತುಕಾರಾಮ ಪೂಜಾರಿ ಅವರು ‘ಕರಾವಳಿಯ ಸಾಂಸ್ಕೃತಿಕ ಬದುಕು’ ಎಂಬ ವಿಷಯ ಬಗ್ಗೆ ಉಪನ್ಯಾಸ ನೀಡಿ , ಪದವಿ ಪಡೆಯುವುದಷ್ಟೇ ಶಿಕ್ಷಣವಲ್ಲ, ತಲೆಮಾರಿನಿಂದ ಬಂದ ಸಾಂಸ್ಕೃತಿಕ ಬದುಕನ್ನು ಅರ್ಥಮಾಡಿಕೊಂಡು ಅದರ ಧನಾತ್ಮಕ ಅಂಶಗಳನ್ನು ಅರಿತುಕೊಳ್ಳುವುದು ನಿಜವಾದ ಶಿಕ್ಷಣ. ಇಂದಿನ ಅಭಿವೃದ್ಧಿಯ ಓಟದಲ್ಲಿ ದಾರಿ ತಪ್ಪದೆ ಸಂಸ್ಕೃತಿ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕೆಂದು ಹೇಳಿದರು.
ಎಸ್ ವಿಪಿ ಅಧ್ಯಯನ ಸಂಸ್ಥೆಯ ಅಧ್ಯಕ್ಷರಾದ ಪ್ರೊ.ಸೋಮಣ್ಣ ಹೊಂಗಳ್ಳಿ ಅವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಪ್ರಾಧ್ಯಾಪಕರಾದ ಪ್ರೊ.ಅಭಯಕುಮಾರ್ , ಡಾ.ನಾಗಪ್ಪ ಗೌಡ, ಡಾ.ಧನಂಜಯ ಕುಂಬ್ಳೆ, ಡಾ. ಯಶು ಕುಮಾರ್, ಸಂಶೋಧನಾ ವಿದ್ಯಾರ್ಥಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ರಶ್ಮೀ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಗಳ ಪಾಡ್ದನ ಹಾಡಿದರು. ಸೌಮ್ಯ ಆರ್ ನಿರೂಪಿಸಿದರು. ಅಶ್ವಿತ ವಂದಿಸಿದರು.
ಸಂಸ್ಕೃತಿ ಸಿರಿಯಲ್ಲಿ:
ಸಂಸ್ಕೃತಿ ಸಿರಿ ಕಾರ್ಯಕ್ರಮಕ್ಕಾಗಿ ಒಂದು ತಿಂಗಳಿನಿಂದಲೇ ಪೂರ್ವತಯಾರಿ ಮಾಡಿಕೊಂಡಿದ್ದ ಎಸ್ ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ವಿದ್ಯಾರ್ಥಿಗಳು ಕನ್ನಡ ವಿಭಾಗದ ಹೊರಾಂಗಣದಲ್ಲಿ ಸಾಂಪ್ರದಾಯಿಕ ಗದ್ದೆ, ಕಂಬಳ ಕರೆ, ಬಾವಿ, ದೈವದ ಕೊಡಿಯಡಿ,ನಾಗಾರಾಧನೆ, ತೆಂಗಿನ ಗರಿಯ ಮಾಡಿನ ಮನೆ ಸೇರಿದಂತೆ ತುಳುನಾಡಿನ ಸಂಸ್ಕೃತಿಯನ್ನು ಸೃಷ್ಟಿಸಿದ್ದರು. ಅಲ್ಲದೆ ಮುಖ್ಯ ದ್ವಾರದ ಬಳಿ ರಂಗೋಲಿ, ಬಾಳೆಯ ಎಲೆಯ ಶೃಂಗಾರ ಆಕರ್ಷಕವಾಗಿತ್ತು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw