ಭ್ರಷ್ಟಾಚಾರಿಗಳ ವಿರುದ್ಧ ಕ್ರಮಗಳನ್ನು ಕೈಗೊಳ್ಳದಿದ್ದರೆ ಲೋಕಾಯುಕ್ತಕ್ಕೆ ದೂರು: ವಸಂತ ಬಂಗೇರ ಎಚ್ಚರಿಕೆ
ಬೆಳ್ತಂಗಡಿ: ಇಂದಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವ್ಯಾಪಕವಾಗಿ ಭ್ರಷ್ಟಾಚಾರ ನಡೆದಿದ್ದು , ಭ್ರಷ್ಟಾಚಾರಿಗಳ ವಿರುದ್ಧ ಇಲಾಖೆ ಸೂಕ್ತ ಕ್ರಮಗಳನ್ನು ಕೈಗೊಳ್ಳದಿದ್ದರೆ ಲೋಕಾಯುಕ್ತಕ್ಕೆ ದೂರು ನೀಡಲಾಗುವುದು ಎಂದು ಮಾಜಿ ಶಾಸಕ ಕೆ.ವಸಂತ ಬಂಗೇರ ಎಚ್ಚರಿಕೆ ನೀಡಿದರು.
ಮಂಗಳವಾರ ಇಂದಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಭ್ರಷ್ಟಾಚಾರ ನಡೆದ ಕಾಮಗಾರಿಗಳನ್ನು ವೀಕ್ಷಣೆ ಮಾಡಿದ ಬಳಿಕ ಪಂಚಾಯತ್ ಕಛೇರಿ ಎದುರು ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಬಿಜೆಪಿ ಆಡಳಿತದಲ್ಲಿ ಗ್ರಾಮ ಪಂಚಾಯತ್ ನಿಂದ ಹಿಡಿದು ರಾಜ್ಯ ಸರ್ಕಾರದವರೆಗೂ ವ್ಯಾಪಕವಾಗಿ ಭ್ರಷ್ಟಾಚಾರ ನಡೆಯುತ್ತಿದ್ದು , ಎಲ್ಲಾ ಕಡೆಗಳಲ್ಲೂ ನುಂಗಣ್ಣಗಳೇ ತುಂಬಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಒಂದೊಂದು ಕಾಮಗಾರಿಗೆ ಎರಡೆರಡು ಬಿಲ್ಲು ಮಾಡಲಾಗಿದೆ, ಸಾರ್ವಜನಿಕರು ನಡೆಸಿದ ಕಾಮಗಾರಿಗೆ ಪಂಚಾಯತ್ ಬಿಲ್ ಮಾಡಿರುವುದು , ಪ.ಜಾತಿ/ಪಂಗಡಗಳ ಅನುದಾನ ದುರುಪಯೋಗ , ಸೋಲಾರ್ ನೀಡದೆ ವಂಚನೆ , ವಿಕಲಚೇತನರ ಹೆಸರಿನಲ್ಲೂ ಭ್ರಷ್ಟಾಚಾರ ಸೇರಿದಂತೆ ಹತ್ತಾರು ಕಾಮಗಾರಿಗಳಲ್ಲಿ ನಕಲಿ ಬಿಲ್ ಮಾಡಿ ವ್ಯಾಪಕವಾಗಿ ಭೃಷ್ಟಾಚಾರ ನಡೆಸಲಾಗಿದೆ ಎಂದು ಗಂಭೀರವಾಗಿ ಆರೋಪಿಸಿದರು.
ಪರಿಶಿಷ್ಟ ಜಾತಿ/ಪಂಗಡದ ಅನುದಾನ ದುರುಪಯೋಗ ಮಾಡಿದ ಬಗ್ಗೆ ಜೈಲು ಸೇರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ ಅವರು, ನನ್ನ ಶಾಸಕತ್ವದ ಸಂದರ್ಭದಲ್ಲಿ ಯಾವುದೇ ರೀತಿಯಲ್ಲಿ ಭ್ರಷ್ಟಾಚಾರ ನಡೆದಿಲ್ಲ ಎಂದ ಅವರು, ಶಾಸಕ ಹರೀಶ್ ಪೂಂಜಾ ಮತ್ತು ಅವರ ಬಿಜೆಪಿ ಪಕ್ಷದ ಸದಸ್ಯರು ಭ್ರಷ್ಟಾಚಾರದಲ್ಲಿ ಗಿನ್ನಿಸ್ ದಾಖಲೆ ಎಂದು ಟೀಕಿಸಿದರು.
ಮಾಜಿ ಸಚಿವ ಗಂಗಾಧರ ಗೌಡ ಮಾತನಾಡಿ, ಬಿಜೆಪಿ ಮಂತ್ರಿಗಳಿಂದಿಡಿದು ಗ್ರಾಮ ಪಂಚಾಯತ್ ಅಧ್ಯಕ್ಷ, ಸದಸ್ಯರು ಬಡವರ ಹಣವನ್ನು ಸುಲಿಗೆ ಮಾಡುತ್ತಿದ್ದಾರೆ. ಬಿಜೆಪಿ ಪಕ್ಷ ಸುಲಿಗೆಕೋರರ ಪಕ್ಷವೆಂದು ಆರೋಪಿಸಿದ ಅವರು, ಒಂದು ಪಂಚಾಯತ್ ನಲ್ಲಿ 20 ಲಕ್ಷಕ್ಕೂ ಹೆಚ್ಚು ರೂಪಾಯಿ ಭ್ರಷ್ಟಾಚಾರ ನಡೆದರೆ ತಾಲೂಕಿನ ಇನ್ನಿತರ ಬಿಜೆಪಿ ಆಡಳಿತದ ಪಂಚಾಯತ್ ಗಳಲ್ಲಿ ಎಷ್ಟು ಭೃಷ್ಟಾಚಾರ ನಡೆದಿರಬಹುದು ಎಂದು ಪ್ರಶ್ನಿಸಿದರು.
ಇಂದಬೆಟ್ಟು ಕಾಂಗ್ರೆಸ್ ಗ್ರಾಮ ಸಮಿತಿ ಅಧ್ಯಕ್ಷ ಜಯರಾಂ ಗೌಡ ಬಂಗಾಡಿ ಸ್ವಾಗತಿಸಿದರು. ಬಂಗಾಡಿ ಸಿಎ ಬ್ಯಾಂಕ್ ಮಾಜಿ ಅಧ್ಯಕ್ಷ ಲಕ್ಷ್ಮಣ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ರಂಜನ್ ಜಿ ಗೌಡ , ಶೈಲೇಶ್ ಕುಮಾರ್ ಕುರ್ತೋಡಿ , ಪದಾಧಿಕಾರಿಗಳಾದ ಅಭಿನಂದನ್ ಹರೀಶ್ ಕುಮಾರ್ , ಅನಿಲ್ ಪೈ , ಭರತ್ ಕುಮಾರ್ , ಅಶ್ವಥ್ ರಾಜ್ ಇಂದಬೆಟ್ಟು , ತಾ.ಪಂ ಮಾಜಿ ಸದಸ್ಯ ಗಣೇಶ್ ಕನಾಲು , ಕಾರ್ಮಿಕ ಘಟಕದ ಸುರೇಶ್ ಇಂಚರ , ಗ್ರಾಮ ಪಂಚಾಯತ್ ಸದಸ್ಯ ವೀರಪ್ಪ ಮೊಯ್ಲಿ , ಅಬ್ದುಲ್ ಸಮಾದ್ , ರಾಜೇಶ್ ಪುದುಶೇರಿ , ಪ್ರವೀಣ್ ಗೌಡ ವಿ.ಜಿ , ಮಧುಕರ ಸುವರ್ಣ , ರವಿ ನೇತ್ರಾವತಿ ನಗರ , ನಾರಾಯಣ ಟಿ ನೇತ್ರಾವತಿ ನಗರ , ಎಲಿಯಮ್ಮ ಬಂಗಾಡಿ , ಅಜಯ್ ಎ.ಜೆ. ಮಟ್ಲ ಉಪಸ್ಥಿತರಿದ್ದರು.
ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದ ವಿವಿಧ ಭ್ರಷ್ಟಾಚಾರಗಳ ಬಗ್ಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸವಿತಾ ಅವರನ್ನು ಮಾಜಿ ಶಾಸಕ ವಸಂತ ಬಂಗೇರರು ತರಾಟೆಗೆ ತೆಗೆದುಕೊಂಡರು. ಪ್ರತಿಭಟನಾಕಾರರು ತಮ್ಮ ವಾರ್ಡ್ ನ ಸಮಸ್ಯೆಗಳನ್ನು ಮುಂದಿಟ್ಟು ಪಂಚಾಯತ್ ಆಡಳಿತವನ್ನು ತರಾಟೆಗೆ ತೆಗೆದುಕೊಂಡರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಾಲೂಕು ಪಂಚಾಯತ್ ವ್ಯವಸ್ಥಾಪಕ ಪ್ರಶಾಂತ್ ಬಳೆಂಜ ಅವರಿಗೆ ಮನವಿ ಸಲ್ಲಿಸಲಾಯಿತು .
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw