ಮಾ.10 ರಿಂದ 12ರವರೆಗೆ ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ಯಾಲಿಗ್ರಫಿ ಪ್ರದರ್ಶನ, ವಿಚಾರಗೋಷ್ಠಿ: ಸೈಯದ್ ಮುಹಮ್ಮದ್ ಬ್ಯಾರಿ
![exhibition and seminar](https://www.mahanayaka.in/wp-content/uploads/2023/03/Exhibition-and-Seminar.jpg)
ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನಲ್ಲಿ ಮಾ.10 ರಿಂದ 12 ರವರೆಗೆ ಮೂರು ದಿನಗಳ ಬಹುಭಾಷಾ ಕ್ಯಾಲಿಗ್ರಫಿ ಪ್ರದರ್ಶನ ವಿಚಾರಗೋಷ್ಠಿಯನ್ನು ಆಯೋಜಿಸಲಾಗಿದೆ ಎಂದು ಬ್ಯಾರೀಸ್ ಗ್ರೂಪ್ ನ ಅಧ್ಯಕ್ಷ ಸೈಯದ್ ಮುಹಮ್ಮದ್ ಬ್ಯಾರಿ ತಿಳಿಸಿದರು.
ಬುಧವಾರ ನಗರದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬ್ಯಾರೀಸ್ ಗ್ರೂಪ್ ಪ್ರಾಯೋಜಕತ್ವದಲ್ಲಿ ಇನ್ಸ್ಟಿಟ್ಯೂಟ್ ಆಫ್ ಇಂಡೊ ಇಸ್ಲಾಮಿಕ್ ಆರ್ಟ್ ಅಂಡ್ ಕಲ್ಚರ್ ಸಂಘಟಿಸಿರುವ ಈ ಕಾರ್ಯಕ್ರಮವು
ಬೃಂಗ್ಟನ್ ರಸ್ತೆಯಲ್ಲಿರುವ ಪ್ರೆಸ್ಟಿಜ್ ಫಾಲ್ಕನ್ ಟವರ್ಸ್ ನ ದಿ ಫಾಲ್ಕನ್ ಡೆನ್ ಸಭಾಂಗಣದಲ್ಲಿ ಜರುಗಲಿದೆ ಎಂದರು.
ದೇಶ, ವಿದೇಶದ ಸುಮಾರು 50 ಕಲಾವಿದರು ಇದರಲ್ಲಿ ಭಾಗವಹಿಸಲಿದ್ದಾರೆ. ಕ್ಯಾಲಿಗ್ರಫಿ ಒಂದು ವಿಶಿಷ್ಟವಾದ ಕಲೆ. ದೇಹ, ಮನಸ್ಸು, ಆಲೋಚನೆ ಒಂದು ಕಡೆ ಕೇಂದ್ರೀಕೃತ ವಾಗುವಂತೆ ಮಾಡುತ್ತದೆ. ನರರೋಗ ತಜ್ಞರು ಏಕಾಗ್ರತೆಗಾಗಿ ಈ ಕಲೆಯನ್ನು ಕಲಿಯುತ್ತಾರೆ ಎಂದು ಅವರು ಹೇಳಿದರು.
ಕ್ಯಾಲಿಗ್ರಫಿ ಅನ್ನೋದು ಸುಂದರ ಬರಹ. ಮೂಲತಃ ಅರೆಬಿಕ್ ಭಾಷೆಯಲ್ಲಿ ಕ್ಯಾಲಿಗ್ರಫಿ ಬಳಕೆ ಹೆಚ್ಚಾಗಿ ಕಾಣುತ್ತದೆ. ಅದರ ಜೊತೆಗೆ ಚೀನಾ, ಜಪಾನ್ ಭಾಷೆಯ ಮೇಲೂ ಕ್ಯಾಲಿಗ್ರಫಿ ಪ್ರಭಾವ ಕಂಡುಬರುತ್ತದೆ. ನಮ್ಮ ದೇಶದ ಎಲ್ಲ ರಾಜ್ಯಗಳ ಭಾಷೆಗಳು ಕ್ಯಾಲಿಗ್ರಫಿ ಅನ್ನು ಅಳವಡಿಸಿಕೊಂಡಿರುವುದು ಕಾಣಬಹುದು ಎಂದು ಸೈಯದ್ ಮುಹಮ್ಮದ್ ಬ್ಯಾರಿ ಹೇಳಿದರು.
ಈ ಕಾರ್ಯಕ್ರಮದಲ್ಲಿ ಟರ್ಕಿ, ಜಪಾನ್, ಸೂಡಾನ್, ಮಧ್ಯ ಪ್ರಾಚ್ಯ ಸೇರಿದಂತೆ ಹತ್ತಕ್ಕೂ ಹೆಚ್ಚು ದೇಶಗಳ ಕ್ಯಾಲಿಗ್ರಫಿ ತಜ್ಞರು ಮತ್ತು ಉರ್ದು, ಮಲಯಾಳಂ, ಕನ್ನಡ, ತಮಿಳು, ಮರಾಠಿ ಸೇರಿ ಹತ್ತಾರು ಭಾರತೀಯ ಭಾಷೆಗಳ ಕ್ಯಾಲಿಗ್ರಫಿ ತಜ್ಞರು ಭಾಗವಹಿಸಿ ವಿಷಯ ಮಂಡನೆ ಮಾಡಲಿದ್ದಾರೆ ಎಂದು ಸೈಯದ್ ಮುಹಮ್ಮದ್ ಬ್ಯಾರಿ ಹೇಳಿದರು.
ಈ ವಿಶಿಷ್ಟ ಕಾರ್ಯಕ್ರಮದಲ್ಲಿ ಕ್ಯಾಲಿಗ್ರಫಿ ಕಲೆಗಳ ಪ್ರದರ್ಶನ ಹಾಗು ಕ್ಯಾಲಿಗ್ರಫಿಗೆ ಸಂಬಂಧಿಸಿದ ಹಲವು ವಿಷಯಗಳು ಹಾಗೂ ಆಯಾಮಗಳ ಬಗ್ಗೆ ವಿಚಾರಗೋಷ್ಠಿ, ಸಂವಾದ, ಕಾರ್ಯಾಗಾರ ಇತ್ಯಾದಿಗಳು ನಡೆಯಲಿವೆ. ಭಾರತದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಇದೇ ಮೊದಲ ಬಾರಿ ನಡೆಯುತ್ತಿರುವ ಈ ಅಪರೂಪದ ಕಾರ್ಯಕ್ರಮ ಇದಾಗಿದೆ ಎಂದು ಅವರು ತಿಳಿಸಿದರು.
ಇನ್ಸ್ಟಿಟ್ಯೂಟ್ ಆಫ್ ಇಂಡೊ ಇಸ್ಲಾಮಿಕ್ ಆರ್ಟ್ ಅಂಡ್ ಕಲ್ಚರ್(ಐಐಐಎಸಿ)ನ ಪ್ರಾಂಶುಪಾಲ ಮುಖ್ತಾರ್ ಅಹ್ಮದ್ ಮಾತನಾಡಿ, ಕ್ಯಾಲಿಗ್ರಫಿ ಒಂದು ಕೌಶಲ್ಯ ಕಲೆ. ಸುಂದರ ಲಿಪಿಯ ಮೂಲಕ ತಮ್ಮ ಸಂದೇಶವನ್ನು ಕಳುಹಿಸಲು ಕ್ಯಾಲಿಗ್ರಫಿ ಪರಿಣಾಮಕಾರಿ. ನಮ್ಮ ಸಂಸ್ಥೆಯಲ್ಲಿ ದೇಶ, ವಿದೇಶದ ಪ್ರಜೆಗಳು ದಾಖಲಾತಿ ಪಡೆದು ಈ ಕಲೆಯನ್ನು ಕಲಿಯುತ್ತಿದ್ದಾರೆ ಎಂದರು.
ಬಹುಭಾಷಾ ಕ್ಯಾಲಿಗ್ರಫಿ ಕಾರ್ಯಕ್ರಮದಲ್ಲಿ ಬೇರೆ ಭಾಷೆಗಳ ತಜ್ಞರನ್ನು ಆಹ್ವಾನಿಸಲಾಗುತ್ತಿದೆ. ಈ ಸುಂದರ ಲಿಪಿ ಮೂಲಕ ನೀಡುವ ಸಂದೇಶವು ಸಮುದಾಯ ಹಾಗೂ ಸಾಮಾಜಿಕ ಜೀವನಕ್ಕೆ ಸಹಕಾರಿ ಎಂದು ಅವರು ಹೇಳಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw