ಇನ್ನೂ ಹತೋಟಿಗೆ ಬಾರದ ಕಾಡ್ಗಿಚ್ಚು: ಏನು ಮಾಡ್ತಿದೆ ಸರ್ಕಾರ!?
ಬೆಳ್ತಂಗಡಿ: ತಾಲೂಕಿನ ಕುದುರೇಮುಖ ರಾಷ್ಟ್ರೀಯ ಉದ್ಯಾನವನದ ಒಳಗೆ ಹಾಗೂ ಇತರೆಡೆಗಳಲ್ಲಿ ಅರಣ್ಯದಲ್ಲಿ ಆವರಿಸಿಕೊಂಡಿರುವ ಕಾಡ್ಗಿಚ್ವು ಇನ್ನೂ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿಲ್ಲ. ಕುದುರೇ ಮುಖ ರಾಷ್ಟ್ರೀಯ ಉದ್ಯಾನವನದೊಳಗೆ ಸವಣಾಲು ಹಾಗೂ ಶಿರ್ಲಾಲು ಗ್ರಾಮದ ಮೆಲ್ಬಾಗದಲ್ಲಿ ವ್ಯಾಪಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಎಲ್ಲೆಡೆ ಅರಣ್ಯದ ನಡುವೆ ಹೊಗೆ ಮೇಲೇಳುತ್ತಿರುವುದು ಕಾಣಿಸುತ್ತಿದೆ ಕಳೆದ ಕೆಲದಿನಗಳಿಂದ ಇಲ್ಲಿ ಬೆಂಕಿ ಹಾಗೂ ಹೊಗೆ ಕಾಣಿಸುತ್ತಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆಯವರು ಬೆಂಕಿ ನಂದಿಸುವ ಪ್ರಯತ್ನ ನಡೆಸಿದರೂ ಅದು ಸಂಪೂರ್ಣವಾಗಿ ಯಶಸ್ವಿಯಾಗುತ್ತಿರುವುದು ಕಂಡುಬಂದಿಲ್ಲ.
ಇದೇ ಸ್ಥಿತಿ ಶಿಶಿಲ ರಕ್ಷಿತಾರಣ್ಯದಲ್ಲಿಯೂ ಇದೆಯೆಂಬ ಅನುಮಾನ ವ್ಯಕ್ತವಾಗುತ್ತಿದೆ. ಚಾರ್ಮಾಡಿ ಪರಿಸರದಲ್ಲಂತೂ ಪ್ರತಿ ದಿನ ಅಲ್ಲಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದೆ. ಎಲ್ಲೆಡೆಯೂ ಅರಣ್ಯದೊಳಗೆ ಹೊಗೆ ಕಾಣಿಸುತ್ತಿದೆ. ಕೇವಲ ಅರಣ್ಯ ಇಲಾಖೆಯ ಬಳಿ ಇರುವ ಸಲಕರಣೆಗಳಿಂದ ಮಾತ್ರ ಬೆಂಕಿ ನಂದಿಸುವುದು ಅಸಾಧ್ಯದ ಕಾರ್ಯವಾಗಿದೆ ಎಂಬುದು ಈಗಾಗಲೇ ಸ್ಪಷ್ಟವಾಗಿದೆ.
ಅಪೂರ್ವವಾದ ಪ್ರಾಣಿ ಸಂಕುಲಗಳ ಹಾಗೂ ಸಸ್ಯ ಪ್ರಭೇಧಗಳ ತಾಣವಾಗಿರುವ ಪಶ್ಚಿಮ ಘಟ್ಟದ ಅರಣ್ಯದಲ್ಲಿ ಬಿದ್ದಿರುವ ಬೆಂಕಿ ಈ ಪ್ರದೇಶದ ಅಮೂಲ್ಯ ಪ್ರಾಣಿ ಹಾಗೂ ಸಸ್ಯ ಸಂಪತ್ತನ್ನು ನಾಶಮಾಡುವ ಅಪಾಯವಿದೆ ಎಂದು ಪರಿಸರ ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಕಳೆದ ಒಂದು ವಾರದಿಂದ ಬೆಂಕಿ ಆವರಿಸಿಕೊಂಡಿದ್ದರೂ ಇನ್ನು ಅದನ್ನು ಸಂಪೂರ್ಣವಾಗಿ ನಂದಿಸಲು ಸಾಧ್ಯವಾಗಿಲ್ಲ ಹಾಗೂ ಈ ಬಗ್ಗೆ ಸರಕಾರ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂಬ ಆರೋಪ ಸ್ಥಳೀಯರದ್ದಾಗಿದೆ.
ಇಂದು ರಾತ್ರಿಯೂ ಕುದುರೇಮುಖ ರಾಷ್ಟ್ರೀಯ ಉದ್ಯಾನವನದೊಳಗೆ ಬೆಂಕಿ ಹಾಗೂ ಹೊಗೆ ಕಾಣಿಸುತ್ತಿದೆ ಇದನ್ನು ನಂದಿಸಬೇಕಾದರೆ ಸರಕಾರ ದೊಡ್ಡ ಮಟ್ಟದಲ್ಲಿ ಕಾರ್ಯಾಚರಣೆ ನಡೆಸಬೇಕಾದ ಅನಿವಾರ್ಯತೆಯಿದೆ.
ಬೆಂಕಿ ನಿಯಂತ್ರಣಕ್ಕೆ ಬಾರದಿದ್ದಲ್ಲಿ ಹೆಲಿಕಾಪ್ಟರ್ ಬಳಕೆ ಹರೀಶ್ ಪೂಂಜ:
ಮುಖ್ಯಮಂತ್ರಿಗಳೊಂದಿಗೆ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಈಗಾಗಲೇ ಮಾತುಕತೆ ನಡೆಸಿದ್ದು ಪಶ್ಚಿಮ ಘಟ್ಟದಲ್ಲಿ ವ್ಯಾಪಿಸಿಕೊಂಡಿರುವ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಶಾಸಕ ಕೆ.ಹರೀಶ್ ಪೂಂಜ ಮಾಹಿತಿ ನೀಡಿದರು. ಮಾದ್ಯಮದವರೊಂದಿಗೆ ಮಾತನಾಡಿದ ಅವರು ಅರಣ್ಯ ಇಲಾಖೆ ಹಾಗೂ ಸ್ಥಳೀಯರು ಈಗಾಗಲೆ ಸಾಕಷ್ಟು ಪ್ರಯತ್ನ ನಡೆಸಿದ್ದಾರೆ ದಟ್ಟ ಅರಣ್ಯದ ನಡುವೆ ಇರುವ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸುವ ನಿಟ್ಟಿನಲ್ಲಿ ಸೇನೆಯ ಸಹಕಾರವನ್ನು ಪಡೆಯಲು ನಿರ್ಧರಿಸಲಾಗಿದೆ. ಬೆಂಕಿ ನಿಯಂತ್ರಣಕ್ಕೆ ಬಾರದಿದ್ದಲ್ಲಿ ಗೋವಾದಲ್ಲಿರುವ ಸೇನಾ ನೆಲೆಯಿಂದ ಹೆಲಿಕಾಪ್ಟರ್ ಮೂಲಕ ಅರಣ್ಯದಲ್ಲಿ ಕಾಣಿಸಿಕೊಂಡಿರುವ ಬೆಂಕಿ ನಂದಿಸಲು ಈಗಾಗಲೇ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗಿದೆ. ಒಂದೆರಡು ದಿನಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಚಾರ್ಮಾಡಿಯಲ್ಲಿ ಬೆಂಕಿ ಅನಾಹುತ:
ಚಾರ್ಮಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಘಾಟಿ ಆರಂಭದ ಭಾಗವಾದ ಮಠದ ಮಜಲು ರಸ್ತೆ ಬದಿಯ ಸರಕಾರಿ ಜಾಗದಲ್ಲಿ ಗುರುವಾರ ರಾತ್ರಿ ಕಾಣಿಸಿಕೊಂಡ ಬೆಂಕಿಯು ಚಾರ್ಮಾಡಿ– ಕನಪಾಡಿ ರಕ್ಷಿತಾರಣ್ಯ ಕ್ಕೆ ನುಗ್ಗಿದ ಘಟನೆ ಗುರುವಾರ ರಾತ್ರಿ 11:45 ರ ಸುಮಾರಿಗೆ ಜರಗಿದೆ. ರಸ್ತೆ ಬದಿ ಹಾಗೂ ಅರಣ್ಯದ ಸುಮಾರು 2 ಎಕರೆಗಿಂತ ಅಧಿಕ ಸ್ಥಳ ಬೆಂಕಿಯಿಂದ ಹಾನಿಗೊಳದಾಗಿದೆ.
ಅರಣ್ಯ ಇಲಾಖೆಯ ಡಿ ಆರ್ ಎಫ್ ಓ ರವೀಂದ್ರ ಅಂಕಲಗಿ, ಸಿಬ್ಬಂದಿಗಳು ತಕ್ಷಣ ಘಟನಾ ಸ್ಥಳಕ್ಕೆ ಧಾವಿಸಿದರು. ಸ್ಥಳೀಯರಾದ ಪ್ರಕಾಶ್,ಮಹಮ್ಮದ್ ಹನೀಫ್, ಸಿನಾನ್ ಮುಗಸಿರ್ ಝಕಾರಿಯ ಮತ್ತಿತರರು ಸೇರಿ ಶುಕ್ರವಾರ ಮುಂಜಾನೆ 4ಗಂಟೆವರೆಗೆ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಹತೋಟಿಗೆ ತಂದ ಕಾರಣ ಹೆಚ್ಚಿನ ಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ಮಂಗಳೂರು- ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ ಬದಿ ಧೂಮಪಾನಿಗಳಿಂದ ಅಥವಾ ಪ್ರದೇಶದಲ್ಲಿ ಹಾದು ಹೋಗಿರುವ ಹೈಟೆನ್ಷನ್ ವಿದ್ಯುತ್ ಲೈನ್ ನಿಂದಾಗಿ ಬೆಂಕಿ ಉಂಟಾಗಿರುವ ಶಂಕೆ ವ್ಯಕ್ತವಾಗಿದೆ.
ಬೆಂಕಿ ಪ್ರಕರಣ ಉಂಟಾದ ಸಮೀಪದಲ್ಲಿ ಅನಂತ ರಾವ್ ಎಂಬ ವರ ಕೃಷಿತೋಟವಿದ್ದು ಅಲ್ಲಿವರೆಗೂ ಬೆಂಕಿ ವ್ಯಾಪಿಸಿದೆ ಆದರೆ ಬೆಂಕಿ ಹತೋಟಿಗೆ ಬಂದ ಕಾರಣ ಯಾವುದೇ ಹಾನಿಯಾಗಿಲ್ಲ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw