ಉದ್ಘಾಟನೆಯ ಮರುದಿನವೇ ಕಿತ್ತೋದ ಬೆಂಗಳೂರು–ಮೈಸೂರು ಎಕ್ಸ್ ಪ್ರೆಸ್ ವೇ: ಕಮಿಷನ್ ಕರ್ಮಕಾಂಡ!
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ರವಿವಾರ ಬೆಂಗಳೂರು–ಮೈಸೂರು ರಾಷ್ಟ್ರೀಯ ದಶಪಥ ಹೆದ್ದಾರಿಯನ್ನು ಉದ್ಘಾಟನೆ ಮಾಡಿದ್ದರಾದರೂ ಉದ್ಘಾಟನೆಯಾದ ಮರುದಿನವೇ ರಾಷ್ಟ್ರೀಯ ದಶಪಥ ಹೆದ್ದಾರಿಯ ಟಾರ್ ಕಿತ್ತು ಬಂದಿದೆ. ಮತ್ತೊಂದೆಡೆ ಹಲವು ಸಂಘಟನೆಗಳು ಟೋಲ್ ಸಂಗ್ರಹ ವಿಚಾರಕ್ಕೆ ಪ್ರತಿಭಟನೆಗಳನ್ನು ನಡೆಸಿದ್ದಾರೆ.
ರಾಮನಗರ ಕಡೆಯಿಂದ ಪ್ರಯಾಣಿಸುವಾಗ ಬಿಡದಿ ಬೈಪಾಸ್ ಮುಕ್ತಾಯದ ಜಾಗದಲ್ಲಿ ಸೇತುವೆ ಮೇಲಿನ ಟಾರ್ ಕಿತ್ತು ಬಂದಿದೆ. ಸದ್ಯ ದುರಸ್ತಿ ಕಾರ್ಯ ನಡೆದಿದೆ. ಅರ್ಧಭಾಗದಲ್ಲಿ ವಾಹನಗಳು ಓಡಾಟದಂತೆ ಬ್ಯಾರಿಕೇಡ್ ಹಾಕಲಾಗಿದೆ.
ಬಿಜೆಪಿ ಸಂಸದ ಕಮಿಷನ್ ತಿಂದ ಆರೋಪ:
ಮಂಗಳವಾರ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಅವರು, ಬೆಂಗಳೂರು-ಮೈಸೂರು ಹೆದ್ದಾರಿ ಕಾಮಗಾರಿಯಲ್ಲಿ ಸಂಸದ ಪ್ರತಾಪ್ ಸಿಂಹ ಕೋಟ್ಯಾಂತರ ರೂ. ಕಮಿಷನ್ ತಿಂದಿದ್ದಾರೆ ಎಂದು ಆರೋಪಿಸಿದ್ದಾರೆ.
ಕಾಮಗಾರಿಯಲ್ಲಿ ದೊಡ್ಡ ಅಕ್ರಮವಾಗಿದ್ದು, ಹೆದ್ದಾರಿಗೆ ಸರಬರಾಜು ಆಗಿರುವ ಸಾಮಗ್ರಿಗಳು ಪ್ರತಾಪ್ ಸಿಂಹ ಬೆಂಬಲಿಗರಿಗೆ ಸೇರಿದ್ದಾಗಿವೆ. ಆ ರೀತಿಯಲ್ಲಿ ಕೋಟ್ಯಾಂತರ ರೂ ಕಮಿಷನ್ ಹೊಡೆದಿದ್ದಾರೆ. ನಾನು ರಾಜಕಾರಣಕ್ಕೆ ಬಂದು 50 ವರ್ಷ ಆಯ್ತು. ನನ್ನ ಮನೆಯನ್ನು ನೋಡಿ ಮತ್ತು ಈಗ ಪ್ರತಾಪ್ ಸಿಂಹ ಕಟ್ಟಿಸುತ್ತಿರುವ ಮನೆಯನ್ನು ನೋಡಿ. ಎಷ್ಟು ದೊಡ್ಡ ಮನೆ ಕಟ್ಟಿಸುತ್ತಿದ್ದಾರೆ ಗೊತ್ತೆ ಎಂದು ಪ್ರಶ್ನಿಸಿದರು.
ಬೆಂಗಳೂರು-ಮೈಸೂರು ಹೆದ್ದಾರಿ ಉದ್ಘಾಟನೆಯ ದಿನವೇ ಅಪಘಾತವೊಂದು ಸಂಭವಿಸಿತ್ತು. ಭಾನುವಾರ ಹೆದ್ದಾರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸುಮಾರು 50 ಮೀಟರ್ ದೂರ ನಡೆಯುವ ಮೂಲಕ ಅಧಿಕೃತವಾಗಿ ದಶಪಥ ರಸ್ತೆಯನ್ನು ಉದ್ಘಾಟಿಸಿದರು.
ಉದ್ಘಾಟನೆಯ ಬಳಿಕ ಮಧ್ಯಾಹ್ನ 2:30ರ ಸುಮಾರಿಗೆ ಮದ್ದೂರು ಶಿಂಷಾ ನದಿ ಸೇತುವೆ ಬಳಿ ಕಾರು ಅಪಘಾತ ಸಂಭವಿಸಿತ್ತು. ಬೆಂಗಳೂರಿನಿಂದ ಮೈಸೂರಿನ ಕಡೆಗೆ ಸಂಚರಿಸುತ್ತಿದ್ದ ಕಾರು, ಶಿಂಷಾ ನದಿ ಸೇತುವೆಯ ಬಳಿ ತಡೆಗೋಡೆಗೆ ಡಿಕ್ಕಿಯಾಗಿತ್ತು. ಡಿಕ್ಕಿಯಾದ ರಭಸಕ್ಕೆ ಕಾರು ಪಲ್ಟಿಯಾಗಿತ್ತು. ಈ ರಸ್ತೆಯು ಅವೈಜ್ಣಾನಿಕವಾಗಿದೆ ಎಂದು ಹಲವರು ಈ ಹಿಂದಿನಿಂದಲೂ ಆರೋಪಿಸುತ್ತಿದ್ದರು.
ರಾಷ್ಟ್ರೀಯ ಹೆದ್ದಾರಿ ಪ್ರಧಿಕಾರವು ವಾಹನ ಸವಾರರಿಂದ ಮಂಗಳವಾರ (ಮಾರ್ಚ್ 14)ದಂದು ಟೋಲ್ ಸಂಗ್ರಹಕ್ಕೆ ಮುಂದಾಗಿದೆ. ಸುಮಾರು 55 ಕಿ.ಮೀ, ಹೆದ್ದಾರಿಗೆ ಬೆಳಗ್ಗೆ 8 ಗಂಟೆಯಿಂದಲೇ ಟೋಲ್ ಸಂಗ್ರಹಿಸಲು ಮುಂದಾಗಿದ್ದರು. ಆದರೆ ವಾಹನ ಸವಾರರು ಹಾಗೂ ಹಲವು ಸಂಘಟನೆಯವರು ವಿರೋಧ ವ್ಯಕ್ತಪಡಿಸಿದರು.
ಬೆಂಗಳೂರು ಕಡೆಯಿಂದ ಮೈಸೂರು ಕಡೆಗೆ ಹೋಗುವ ವಾಹನಗಳಿಗೆ ಬೆಂಗಳೂರು ದಕ್ಷಿಣ ತಾಲೂಕಿನ ಕಣಮಿಣಿಕೆ ಹತ್ತಿರ ಟೋಲ್ ಸಂಗ್ರಹ ಮಾಡಲು ನಿರ್ಧರಿಸಿದ್ದರು. ಮೈಸೂರಿನಿಂದ ಬೆಂಗಳೂರಿಗೆ ಬರುವ ವಾಹನಗಳಿಗೆ ರಾಮನಗರ ತಾಲೂಕಿನ ಶೇಷಗಿರಿಹಳ್ಳಿ ಪ್ಲಾಜಾ ಬಳಿ ಟೋಲ್ ಸಂಗ್ರಹ ಮಾಡಲು ಮುಂದಾಗಿದ್ದಾರೆ. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಕಣಿಮಿಣಿಕೆ ಟೋಲ್ ಪ್ಲಾಜಾ ಬಳಿ ಪ್ರತಿಭಟನೆ ನಡೆಸಿದ್ದರು, ಅವರನ್ನೆಲ್ಲಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw