ಟೋಲ್ ಸುಲಿಗೆಯಿಂದ ಬೇಸತ್ತ ಜನರು: ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ
ಜನ ಸರ್ಕಾರಕ್ಕೆ ತೆರಿಗೆಯೂ ಪಾವತಿಸಬೇಕು, ಇನ್ನೊಂದೆಡೆ ರಸ್ತೆಗಳಿಗೂ ಟೋಲ್ ಪಾವತಿಸಬೇಕು, ಬರೇ ತೆರಿಗೆ ಪಾವತಿಸುವುದೇ ಜನರ ಜೀವನವಾಗಿದೆ ಎಂದು ಬೆಂಗಳೂರು–ಮೈಸೂರು ರಾಷ್ಟ್ರೀಯ ದಶಪಥ ಹೆದ್ದಾರಿಯಲ್ಲಿ ಸಾರ್ವಜನಿಕರು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಸ್ತೆಗಳನ್ನು ನಿರ್ಮಿಸುವ ಖಾಸಗಿ ಸಂಸ್ಥೆಗಳು ತಮಗೆ ಇಷ್ಟ ಬಂದಂತೆ ದರಗಳನ್ನು ನಿಗದಿಗೊಳಿಸುತ್ತವೆ. ವಾಹನ ಸವಾರರು ಪೆಟ್ರೋಲ್, ಡೀಸೆಲ್ ಹಾಕಿಸುವುದಕ್ಕೂ ಹೆಚ್ಚಿನ ಹಣವನ್ನು ಟೋಲ್ ಗೇಟ್ ಗಳಿಗೆ ನೀಡುವ ಪರಿಸ್ಥಿತಿ ಬಂದಿದೆ. ಖಾಸಗಿ ಸಂಸ್ಥೆಗಳು ರಸ್ತೆ ನಿರ್ಮಿಸಿ ಟೋಲ್ ಸಂಗ್ರಹ ಮಾಡುತ್ತಿದ್ದಾರೆ. ಆದರೆ, ಇದು ಕೇಂದ್ರ ಸರ್ಕಾರದ ಸಾಧನೆ ಎಂದು ಬಿಜೆಪಿ ನಾಯಕರು ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ. ಜನರಿಗೆ ಉಚಿತವಾಗಿ ಪ್ರಯಾಣಿಸಲು ರಸ್ತೆಗಳನ್ನು ನಿರ್ಮಿಸುವಷ್ಟೂ ನಮ್ಮ ಸರ್ಕಾರಗಳು ಪ್ರಬಲವಾಗಿಲ್ಲವೇ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದು, ಈ ವ್ಯವಸ್ಥೆಯನ್ನು ತಕ್ಷಣವೇ ಬದಲಿಸುವಂತೆ ತೀವ್ರ ಒತ್ತಾಯ ಕೇಳಿ ಬಂದಿದೆ.
ಟೋಲ್ ದರ ಹೀಗಿದೆ:
ಕಾರು, ಜೀಪು, ವ್ಯಾನ್ಗಳಿಗೆ ಏಕಮುಖ ಸಂಚಾರಕ್ಕೆ 135 ರೂ., ಎರಡೂ ಕಡೆಗೆ 205 ರೂ.
ಲಘು ವಾಣಿಜ್ಯ ವಾಹನಗಳು, ಲಘು ಸರಕು ವಾಹನ, ಮಿನಿ ಬಸ್ಗಳಿಗೆ ಏಕಮುಖ ಸಂಚಾರಕ್ಕೆ 220 ರೂ., ಅದೇ ದಿನ ಮರುಸಂಚಾರಕ್ಕೆ 330 ರೂಪಾಯಿ.
ಬಸ್/ಟ್ರಕ್ಗಳಿಗೆ ಏಕಮುಖ ಸಂಚಾರಕ್ಕೆ 460 ರೂ, ಎರಡೂ ಕಡೆಗೆ 690 ರೂ.
ಟೋಲ್ ಶುಲ್ಕ ಸಂಗ್ರಹ ಮಾಡಲು ಮುಂದಾಗುತ್ತಿದ್ದಂತೆಯೇ ಹಲವು ಸಂಘಟನೆಗಳ ಮುಖಂಡರು ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ದಕ್ಷಿಣದ ಕಣಿಮಿಣಿಕೆ ಮತ್ತು ರಾಮನಗರ ಬಳಿಯ ಶೇಷಗಿರಿಹಳ್ಳಿ ಪ್ಲಾಜಾ ಬಳಿ ಹಲವು ಸಂಘಟನೆಗಳು ಮತ್ತು ಕಾಂಗ್ರೆಸ್ ನಾಯಕರು ಸರ್ಕಾರ ಜನರಿಂದ ಹೆಚ್ಚಿನ ದರ ವಿಧಿಸಿ ಸುಲಿಗೆ ಮಾಡುತ್ತಿದೆ ಎಂದು ಪ್ರತಿಭಟನೆಯಲ್ಲಿ ಆಕ್ರೋಶ ಹೊರಹಾಕಿದ್ದಾರೆ.
ಮಂಗಳವಾರ ಬೆಳಗ್ಗೆ ಹಲವು ಸಂಘಟನೆಗಳು ಟೋಲ್ ಸಂಗ್ರಹ ವಿರೋಧಿಸಿ ಪ್ರತಿಭಟನೆಗೆ ಕರೆ ನೀಡಿವೆ. ಧರಣಿಗೆ ಕರೆ ಹಿನ್ನೆಲೆ ವಾಹನ ಸವಾರರಿಗೆ ಪ್ರತಿಭಟನೆಯ ಬಿಸಿ ಮುಟ್ಟಿದೆ ಎನ್ನಲಾಗಿದೆ. ಇದರಿಂದ ಸಂಚಾರ ದಟ್ಟಣೆಯೂ ಕೂಡ ಆಗಿದೆ ಎನ್ನುವ ಮಾತುಗಳು ಕೂಡ ಕೇಳಿಬರುತ್ತಿವೆ. ಹಲವು ವಾಹನ ಸವಾರರು ಈ ಟೋಲ್ ಸಂಗ್ರದ ವಿಚಾರವಾಗಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಪ್ರತಿಭಟನೆಯ ಕಾವು ಜೋರಾಗುತ್ತಿದ್ದಂತೆ ಟೋಲ್ ಪ್ಲಾಜಾಗಳಲ್ಲಿ ಸೂಕ್ತ ಪೊಲೀಸ್ ಭದ್ರತೆ ಒದಗಿಸಲು ಪ್ರಾಧಿಕಾರದ ಯೋಜನಾ ನಿರ್ದೇಶಕ ಶ್ರೀಧರ್ ರಾಮನಗರ ಡಿಸಿ, ಎಸ್‌ಪಿಗೆ ಮನವಿ ಮಾಡಿದ್ದಾರೆ. ಅದರಂತೆಯೇ ಟೋಲ್ ಬಳಿ 3 ಕೆಎಸ್ ಆರ್ ಪಿ ತುಕಡಿ, ಸ್ಥಳೀಯ ಪೊಲೀಸರ ನಿಯೋಜನೆ ಮಾಡಿದ್ದಾರೆ. ಭದ್ರತೆಗಾಗಿ 200ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಗಿದೆ. ಎಸ್‌ಪಿ ಕಾರ್ತಿಕ್ ರೆಡ್ಡಿ ನೇತೃತ್ವದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw