ಭತ್ತದ ಗದ್ದೆಯಲ್ಲಿ ಕಮಲ ನೆಟ್ಟರು, ಆನೆ ತುಳಿಯುವುದೋ, ಕೈ ಕೀಳುವುದೋ!
- ಧಮ್ಮಪ್ರಿಯ, ಬೆಂಗಳೂರು
“ಅಕ್ಕಿ ಇಲ್ಲಾ, ಬೇಳೆ ಇಲ್ಲಾ , ಎಣ್ಣೆ ಇಲ್ಲಾ, ಬೆಣ್ಣೆ ಇಲ್ಲಾ, ನೀ ಏನೇ ಬೇಕೆಂದರು. ಸಿಕ್ಕೋದಿಲ್ಲ ಅಂತಾರಲ್ಲಾ. ಜನರ ಕಷ್ಟ ಕೇಳೋರಿಲ್ಲಾ. ಸ್ವಾತಂತ್ರ್ಯ ಬಂದಾದರು. ಕಾರಣ ಬಲ್ಲೆಯಾ, ಹೇಳಲೇ ನಾನು.” ಹೀಗೆ ಸಿನಿಮಾದಲ್ಲಿ ಹಾಡುತ್ತಾ ಇಡೀ ರಾಜಕೀಯ ವ್ಯವಸ್ಥೆಯ ವಿರುದ್ಧ ಬಂಡೆದ್ದವರು ನಮ್ಮ ಮಂಡ್ಯದ ಗಂಡು ಡಾ.ಅಂಬರೀಶ್ ರವರು. ನಾವು ಈ ನಾಡಿನ ಜನರಿಗೆ ನ್ಯಾಯ ದೊರಕಿಸಿಕೊಡಬೇಕಾಗಿದೆ. ಅದಕ್ಕೆ ರಾಜಕೀಯ ಅಧಿಕಾರವೆಂಬುದು ಬಹಳ ಮುಖ್ಯವಾಗಿದೆ ಎಂದು ಮನಗಂಡಿದ್ದರು. ಆದರೆ ನಮ್ಮ ಮಂಡ್ಯದ ಗಂಡು ನಿರ್ಮಿಸಿದ್ದ ಕಾಂಗ್ರೇಸ್ ಭದ್ರಕೋಟೆಗೆ ಇಂದು ಕೇಸರಿಯ ದೊಡ್ಡ ಸುನಾಮಿಯ ಅಲೆಗಳು ಅಪ್ಪಳಿಸಿಬಿಟ್ಟಿದೆ. ಇದರಿಂದ ಇಡೀ ಕೋಟೆಯೇ ಕೊಚ್ಚಿಹೋಗುವ ಕ್ಷಣಗಣನೆಗಳು ಪ್ರಾರಂಭವಾಗಿವೆ ಎಂದು ಕೆಲವರು ಮಾತನಾಡುತ್ತಿದ್ದಾರೆ.
ಭತ್ತದ ಗದ್ದೆಯೊಳಗೆ ಕಮಲ ಹುಟ್ಟಿದರೆ ಕಳೆಯೆಂದು ನಮ್ಮ ಮಂಡ್ಯದ ಜನತೆ ಕೈಯಿಂದ ಕಿತ್ತು ಬಿಸಾಡುವರು.ಇದು ಸಹಜ ಮತ್ತು ಸತ್ಯವಾದ ಮಾತು. ಇದರಲ್ಲಿ ಮಂಡ್ಯದ ಜನತೆ ಬಹಳ ಸ್ವಾಭಿಮಾನಿಗಳು ಮತ್ತು ಪ್ರಜ್ಞಾವಂತರು ಎಂದರೆ ತಪ್ಪಾಗಲಾರದು. ಇವರಿಗೆ ಇಂಡಿಯಾದಲ್ಲಿ ಬಹಳ ಪ್ರಭಾವಿ ಮಂಡ್ಯ ಅಂದರೆ ಬಹಳ ಹೆಮ್ಮೆ. ಅದಕ್ಕಾಗಿ ದೇಶದ ಪ್ರಧಾನಿಯೂ ಇಲ್ಲಿಗೆ ಬರಲೇಬೇಕು ಎನ್ನುವುದನ್ನು ಅಕ್ಷರ ಸಹ ಸತ್ಯವಾಗಿಸಿದರು. ಮಂಡ್ಯ ಐಕಳ ಮಾತು ಅಂದರೆ ಮಾತು, ಅವನ ತಾಯಾಣೆಗೂ ಮಾತು. ನಮ್ಮ ಊರನ್ನು ಬೇರೆಯವರಿಗೆ ಬಿಟ್ಟುಕೊಡುವ ಮಾತೆ ಇಲ್ಲಾ ಎನ್ನುವ ಕೂಗು ಈಗ ಸತ್ಯವಾಗಬೇಕಾಗಿದೆ.
ರೆಬಲ್ ಸ್ಟಾರ್ ಅಂಬಿಯವರು ಭಾವುಕರಾಗಿದ್ದು, ನೀರಿನಲ್ಲಿ ಮುಳಿಗಿದ ಬಸ್ಸಿನಲ್ಲಿ ಆದ ಸಾವುನೋವುಗಳನ್ನು ಕಂಡು ಮಾನಸಿಕವಾಗಿ ಹೃದಯವಿದ್ರಾವಕಗೊಂಡು ಪ್ರಕೃತಿಯೊಡನೆ ಲೀನವಾದರೂ. ಇದು ಡಾ.ಅಂಬಿಯವರಿಗೆ ಮಂಡ್ಯ ಜನತೆಯ ಮೇಲಿದ್ದ ಅಪಾರವಾದ ಪ್ರೀತಿ, ಮಮತೆ ಮತ್ತು ಕಾಳಜಿ ಎನ್ನಬಹುದು. ಇವರದು ರಾಜಕೀಯ ಇತಿಹಾಸದಲ್ಲಿ ಯಾರನ್ನು ವಿರೋಧಿಸಿಕೊಳ್ಳದ ವಿಶಾಲ ಮನಸ್ಸು ಎಂದರೆ ತಪ್ಪಾಗಲಾರದು. ಅಂಬಿಯವರನ್ನು ಕಳೆದುಕೊಂಡ ಒಂದೇ ವರ್ಷದಲ್ಲಿ ಶ್ರೀಮತಿ ಸುಮಲತಾ ಅಂಬರೀಶ್ ರವರು ಚುನಾವಣೆಯ ಕಣಕ್ಕಿಳಿದರು.ಇದನ್ನು ಹಲವಾರು ಜನ ಟೀಕಿಸಿದರು. ಇವರು ಕನ್ನಡಿಗರೇ ಅಲ್ಲಾ ಎನ್ನುವುದು ಒಂದು ವಾದವಾದರೆ, “ನಮ್ಮೂರ ಸೊಸೆ” ಯಾಕೆ ನಿಲ್ಲಬಾರದು ಎನ್ನುವುದು ಮತ್ತೊಬ್ಬರ ವಾದವಾಗಿತ್ತು.
ಕೊನೆಗೂ ಸುಮಲತಾರನ್ನು ರಾಜಕೀಯ ರಂಗಕ್ಕೆ ಕಣಕ್ಕಿಳಿಸಲಾಯಿತು. ಕಾಂಗ್ರೇಸ್ ನ ಭದ್ರ ಕೋಟೆಯಂತಿದ್ದ ಮಂಡ್ಯ ಕ್ಷೇತ್ರವನ್ನು ಯಾವ ಪಕ್ಷವೂ ಗೆಲ್ಲಲು ಸಾಧ್ಯವಿಲ್ಲವೆಂದು ನಮ್ಮ ರಾಜಕೀಯ ಮುಖಂಡರುಗಳು ಅರಿತಿದ್ದರು. ಕೊನೆಗೆ ಪಕ್ಷೇತರವಾಗಿ ಸುಮಲತಾರವರನ್ನು ಕಣಕ್ಕಿಳಿಸಿ ಗೆಲ್ಲಿಸಲು ಅವಕಾಶ ನೀಡಿದಂತಾಯಿತು. ಇಂತಹ ತಂತ್ರಗಾರಿಕೆಯ ಹಿಂದಿರುವ ಮರ್ಮವಾದರೂ ಏನು ಎಂಬುದನ್ನು ಮಂಡ್ಯ ಜನತೆಯು ಕ್ಷಣಕ್ಕೆ ಅರಿಯದಾದರು. ಕಳೆದ 3-4 ವರ್ಷಗಳಲ್ಲಾದ ಮಂಡ್ಯದ ರಾಜಕೀಯ ದೊಂಬರಾಟಗಳು, ಆಶ್ವಾಸನೆಗಳ ಸರಮಾಲೆಗಳನ್ನು ಗಮನಿಸಿದ ನಿಷ್ಠಾವಂತ ಮತದಾರರು ಮತ್ತು ಸಾಮಾನ್ಯ ಜನತೆಯನ್ನು ಗೊಂದಲಕ್ಕೀಡುಮಾಡಿತು.ಎಲ್ಲರೂ ಇಂತಹ ಘಟನೆಗಳಿಂದ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಅರಿಯುವಂತಾಯಿತು.
ಪ್ರಜ್ಞಾವಂತ ಓದುಗರೇ : ಒಮ್ಮೆ 2004–05 ರಲ್ಲಿ ನಡೆದ ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲಿ ಕೊಳ್ಳೇಗಾಲದಲ್ಲಿ ನಡೆದ ರಾಜಕೀಯ ಆಟಗಳು ನಮ್ಮ ಕಣ್ಣಮುಂದೆಯೇ ಇವೆ. ಅಂದಿನ ಕಾಂಗ್ರೇಸ್ ಪಕ್ಷ ತಾನು ಅಧಿಕಾರಕ್ಕೆ ಬರದಿದ್ದರು ಪರವಾಗಿಲ್ಲ. ತನ್ನ ಪಕ್ಷದಿಂದ ಕಣಕ್ಕಿಳಿಸಿದ ಅಭ್ಯರ್ಥಿ ಗೆಲ್ಲದಿದ್ದರೂ ಪರವಾಗಿಲ್ಲ. ಆದರೆ “ಬಹುಜನ ಸಮಾಜ ಪಾರ್ಟಿ” ಮಾತ್ರ ಕರ್ನಾಟಕದಲ್ಲಿ ಖಾತೆ ತೆರೆಯಬಾರದು ಎಂದು ತೀರ್ಮಾನಿಸಿದ್ದರು. BSP ಕರ್ನಾಟಕದಲ್ಲಿ ಒಮ್ಮೆ ಖಾತೆ ತೆರೆದದ್ದೇ ಆದರೆ ಕಾಂಗ್ರೇಸ್ ತನ್ನ ತಾತ್ವಿಕವಾದ ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆಂದು ಮನಗಂಡಿದ್ದರು.ಅದಕ್ಕಾಗಿ ಕಾಂಗ್ರೇಸ್ ಪಕ್ಷದ ನಾಯಕರು “ಬಹುಜನ ಸಮಾಜ ಪಾರ್ಟಿ” ಯನ್ನು ಸೋಲಿಸಲು ಮುಂದಾದರು. ಆದರೆ ಅಲ್ಲಿ ನಡೆದದ್ದೇ ಬೇರೆಯಾಯಿತು.
ಇಂತಹ ಗೊಂದಲದ ರಾಜಕೀಯ ಮನಸ್ಥಿತಿಯನ್ನು ಬಳಸಿಕೊಂಡ “ಭಾರತೀಯ ಜನತಾ ಪಾರ್ಟಿ” ತನ್ನ ಪಕ್ಷದಿಂದ ಟಿಕೆಟ್ ಕೊಟ್ಟರೆ ದಲಿತರ ಮತ್ತು ನಿಮ್ನವರ್ಗಗಳ, ಹಿಂದುಳಿದವರ,ಅಲ್ಪಸಂಖ್ಯಾತರ ಮತಗಳನ್ನು ಪಡೆಯುವುದು ಕಷ್ಟವೆಂದು ತಿಳಿಯಿತು. ಅದಕ್ಕಾಗಿ ಪಕ್ಷೇತರವಾಗಿ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಪರೋಕ್ಷವಾಗಿ ಬೆಂಬಲ ನೀಡಿದ್ದು ಎಲ್ಲರಿಗೂ ತಿಳಿದ ವಿಚಾರವಾಗಿದೆ. ಪಕ್ಷೇತರವಾಗಿ ಕಣಕ್ಕಿಳಿದು ಜಯಗಳಿಸಿದ ನಾಯಕರನ್ನು ತಕ್ಷಣವೇ ಭಾರತೀಯ ಜನತಾ ಪಾರ್ಟಿಯು ತೆಕ್ಕೆಯೊಳಗೆ ಸೇರಿಸಿಕೊಂಡಿತು. ಇದು ಅಂದಿನ ಮತದಾರರು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತಾಯಿತು. ಬಂಡಾಯವಾಗಿ ಸ್ಪರ್ಧಿಸಲು ಕಾರಣ “ಪಕ್ಷದ ಚಿಹ್ನೆ” ಇದ್ದರೆ ದಲಿತರು ಇತರೆ ಹಿಂದುಳಿದವರು ಅಲ್ಪಸಂಖ್ಯಾತರ ಓಟು ಬರುವುದಿಲ್ಲ ಎನ್ನುವುದು ಭಾ. ಜ. ಪ. ಪಕ್ಷದ ನಾಯಕರಿಗೆ ತಿಳಿದ ಸಾಮಾನ್ಯ ವಿಚಾರವಾಗಿತ್ತು.
ಇಂತಹ ರಾಜಕೀಯ ತಂತ್ರಗಾರಿಕೆಯಲ್ಲಿ ಜನರ ವಿಮೋಚನೆಗಾಗಿ ಹಗಲಿರುಳು ಶ್ರಮಿಸಿ ಕೆಲಸ ಮಾಡುತ್ತಾ ಚಳುವಳಿ ಪ್ರಾರಂಭಿಸಿದ “ಬಹುಜನ ಸಮಾಜ ಪಾರ್ಟಿ”ಯ ನಾಯಕರು ತನ್ನವರಿಂದಲೇ ಪರಾಭವಗೊಂಡರು. ಇಂತಹ ರಾಜಕೀಯ ದೊಂಬರಾಟದಿಂದ ಮಂಡ್ಯ ಕ್ಷೇತ್ರವೇನು ಹೊರತಾಗಿಲ್ಲ. ಇಂತಹ ರಾಜಕೀಯ ಈಗ ಮಂಡ್ಯ ಕ್ಷೆತ್ರದಲ್ಲಿಯೂ ನಡೆಯುತ್ತಿದೆ. ಸುಮಲತಾ ಅಂಬರೀಷ್ ರವರಿಗೆ ಭಾ.ಜ.ಪ ಪಕ್ಷದಿಂದ ಟಿಕೆಟ್ ಕೊಟ್ಟಿದ್ದೇ ಆದರೆ ಮಂಡ್ಯ ಕ್ಷೇತ್ರದಲ್ಲಿ ಸರಿ ಸಮಾನವಾಗಿರುವ ಒಕ್ಕಲಿಗರ ಮತ್ತು ದಲಿತ ಸಮುದಾಯಗಳ ಮತಗಳು ಖಂಡಿತವಾಗಿಯೂ ಭಾ ಜ ಪ ಪಕ್ಷಕ್ಕೆ ಬರಲು ಸಾಧ್ಯವಿಲ್ಲವೆಂದು ಅರಿತಿದ್ದರು. ಹಾಗಾಗಿ ಇಲ್ಲಿಯೂ ಸುಮಲತಾ ರವರನ್ನು ಪಕ್ಷೇತರವಾಗಿ ಸ್ಪರ್ಧಿಸಲು ಪರೋಕ್ಷವಾಗಿ ಸೂಚಿಸಿದರು.
ಭಾ ಜ ಪ ಪಕ್ಷದ ಮತ್ತೊಂದು ಉದ್ದೇಶವೇ ಪ್ರಾದೇಶಿಕ ಪಕ್ಷಕ್ಕೆ ಹಿನ್ನೆಡೆಯನ್ನುಂಟುಮಾಡುವುದು. ದಕ್ಷಿಣ ಭಾರತದಲ್ಲಿ ಪ್ರಥಮ ಬಾರಿಗೆ ಕೇಸರಿ ಭಾವುಟ ಹಾರಿಸಲು ಮುಂದಾದ ಭಾ.ಜ.ಪ ಪಡೆಗೆ ಪ್ರಾದೇಶಿಕ ಪಕ್ಷ ವಿಶ್ವಾಸದ ದ್ರೋಹವೆಸಗಿತ್ತು. ಈ ದ್ರೋಹದ ಸೇಡನ್ನು ತೀರಿಸಿಕೊಳ್ಳಲು ಇದು ಒಳ್ಳೆಯ ಸಮಯವೆಂದು ತಿಳಿದ ಭಾ.ಜ.ಪ ನಾಯಕರು ಪ್ರಾದೇಶಿಕ ಪಕ್ಷಕ್ಕೆ ಪಾಠ ಕಲಿಸಲು ಮುಂದಾದರು. ಜೊತೆಗೆ ಎರಡು ಪ್ರತಿಷ್ಠಿತ ಜಾತಿಗಳ ಓಟುಗಳನ್ನು ಬಹಳ ಸುಲಭವಾಗಿ ಪಡೆಯಲು ಪಕ್ಷೇತರವಾಗಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದರು. ಆದರೆ ಕಳೆದ 8 -10 ವರ್ಷಗಳಲ್ಲಿ ಪೂರ್ಣ ಬೆಂಬಲದೊಂದಿಗೆ ಆಡಳಿತ ನಡೆಸಿದ ಸರ್ಕಾರದ ಕಾರ್ಯವೈಖರಿಯನ್ನು ಮನಗಂಡ ಮತದಾರರು ದೇಶದಾದ್ಯಂತ ಭಾ ಜ ಪ ಪಕ್ಷದ ಬಗೆಗಿನ ಪರ ವಿರೋಧದ ಹೇಳಿಕೆಗಳನ್ನು ಇತ್ತೀಚೆಗೆ ಸೋಷಿಯಲ್ ಮೀಡಿಯಾಗಳಲ್ಲಿ ನೋಡುತ್ತಿದ್ದರು. ಇಂತಹ ಸಂದರ್ಭದಲ್ಲಿ ತನ್ನ ಬೆಂಬಲಿತ ಅಭ್ಯರ್ಥಿಗಳಿಗೆ ಭಾ ಜ ಪ ಪಕ್ಷದಿಂದ ಟಿಕೆಟ್ ಕೊಟ್ಟರೆ ಗೆಲುವುದು ಬಹಳ ಕಷ್ಟಕರವೆಂದು ತಿಳಿದಿದ್ದರು. ಇದರೊಟ್ಟಿಗೆ ಇತಿಹಾಸದ ಪುಟಗಳಲ್ಲಿ ಇಲ್ಲದ ಉರಿಗೌಡ ಮತ್ತು ನಂಜೇಗೌಡ ಎನ್ನುವ ಯೋಧರನ್ನು ಕಾಲ್ಪನಿಕವಾಗಿ ಚಿತ್ರಿಸಿ ಪುಂಗಿದಾಸರ ಪುರಾಣಗಳಲ್ಲಿ ಪಠಣ ಮಾಡಿಸಲಾಯಿತು.
ಇದನ್ನು ಮಾನ್ಯ ಶಿಕ್ಷಣ ಸಚಿವರು ವೇದಿಕೆಗಳಲ್ಲಿ ಮಾತನಾಡಲಾರಂಭಿಸಿದರು. ಜೊತೆಗೆ ಒಂದು ಸ್ವಾಭಿಮಾನಿ ಸಮುದಾಯಕ್ಕೆ ಅಪಮಾನ ಮಾಡಲು ಉರಿ ಮತ್ತು ನಂಜನ್ನು ಸೃಷ್ಠಿಸಲಾಯಿತು. ಇದು ಎರಡು ಕೋಮಿನ ನಡುವೆ ವೈರುಧ್ಯಗಳನ್ನು ಸೃಷ್ಠಿಮಾಡಲು ನಡೆಸಿದ ಹುನ್ನಾರಗಳು ಎನ್ನುವುದನ್ನು ಮತದಾರರು ಅರಿಯಬೇಕಿದೆ. ಇಂದಿನ ಸ್ವಾಭಿಮಾನಿ ಒಕ್ಕಲಿಗ ಸಮುದಾಯಕ್ಕೆ ಭೂಮಿಯ ಒಡೆತನವನ್ನು ನೀಡಿದವನೇ ಟಿಪ್ಪು ಎನ್ನುವುದನ್ನು ಇತಿಹಾಸದ ಪುಟಗಳಿಂದ ತಿಳಿಯಬಹುದು. ಟಿಪ್ಪು ಯಾವ ಒಕ್ಕಲಿಗ ಸಮುದಾಯದ ವಿರುದ್ಧ ಹೋರಾಡಿದವರಲ್ಲ. ಇದು ಕೇವಲ ಕಟ್ಟು ಕಥೆ ಎಂಬುದು ಮಂಡ್ಯ ಮತದಾರಿಗೆ ಅರ್ಥವಾಗಬೇಕಿದೆ. ಇದು ಒಕ್ಕಲಿಗರ ಓಟನ್ನು ಪಡೆಯಲು ಇಂದಿನ ಆಳುವ ಪಕ್ಷಗಳು ನಡೆಸುತ್ತಿರುವ ಹುನ್ನಾರಗಳೇ ಹೊರತು ಬೇರೆ ಯಾವುದೇ ನೈಜ ಇತಿಹಾಸವಲ್ಲ.! ಇಂತಹ ಸುಳ್ಳು ವಿಚಾರಗಳನ್ನು ಪ್ರಚಾರ ಮಾಡಲು ಹೊರಟಾಗ ಮಂಡ್ಯದ ಜನತೆ ತನ್ನ ಪಕ್ಷದ ನಾಯಕನನ್ನೇ ಇಡೀ ಜಿಲ್ಲೆಯಿಂದ ಉಚ್ಛಾಟನೆ ಮಾಡಿರುವುದು ಅಲ್ಲಿನ ಮಣ್ಣಿನ ಮಕ್ಕಳ ತಾಕತ್ತು ಮತ್ತು ಸ್ವಾಭಿಮಾನದ ಸಂಕೇತ ಎನ್ನಬಹುದು.
ಇನ್ನು ದಲಿತರ ಓಟು ಪಡೆಯುವುದು ಹೇಗೆ ? ಎಂದು ಅರಿತ ಪ್ರಭಾವಿ ರಾಜಕೀಯ ನಾಯಕರು ಒಂದು ತಂತ್ರಗಾರಿಕೆಯನ್ನು ಬಳಸಿದರು.ಅದಕ್ಕಾಗಿ ಸನ್ಮಾನ್ಯ ಶ್ರೀಮತಿ ಸುಮಲತಾ ಅಂಬರೀಶ್ ಎನ್ನುವ ರಾಜಕೀಯ ಮತ್ತು ಸಿನಿಮಾ ನಾಯಕಿಯನ್ನು ಮುಂದಿಟ್ಟುಕೊಂಡರು. ಬಾಬಾಸಾಹೇಬ್ ಡಾ.ಅಂಬೇಡ್ಕರ್ ರವರ ಹೆಸರನ್ನು “ಕರ್ನಾಟಕ ಸಾರಿಗೆ ಸಂಸ್ಥೆಗೆ” ಇಡಬೇಕು ಎಂದು ಸರ್ಕಾರಕ್ಕೆ ಪತ್ರ ಬರೆದು ಎಲ್ಲಾ ಕಡೆ ವೈರಲ್ ಮಾಡಿಸಿಬಿಟ್ಟರು. ದಲಿತರು ಮೊದಲೇ ಭಾವಜೀವಿಗಳು ಬಾಬಾಸಾಹೇಬರ ಹೆಸರು ಬಳಸಿದ ತಕ್ಷಣ ಭಾವುಕರಾಗುತ್ತಾರೆ. ಇದರಿಂದ ಮುಂದಿನ ಚುನಾವಣೆಯಲ್ಲಿ ಮಂಡ್ಯದ ದಲಿತರ ಓಟು ಬ್ಯಾಂಕನ್ನು ಕಬಳಿಸುವುದು ಬಹಳ ಸುಲಭ ಎಂದು ನಂಬಿದ್ದರು. ಆದರೆ ಇವತ್ತಿಗೂ ಅಂತಹ ಮಹತ್ವಪೂರ್ಣ ಕೆಲಸ ಕಾರ್ಯರೂಪಕ್ಕೆ ಬರಲೇ ಇಲ್ಲ. ಸಂಸದರೊಬ್ಬರು “ನಾವು ಬಂದಿರುವುದೇ ಸಂವಿಧಾನ ಬದಲಾಯಿಸಲು” ಎಂದು ಬಹಿರಂಗವಾಗಿ ಹೇಳಿದ್ದರು. ಅಂತಹ ಸಂದರ್ಭದಲ್ಲಿ ದಲಿತರ ಮತಗಳಿಂದಲೂ ಗೆದ್ದು ದಿಲ್ಲಿಗೆ ಹೋದ ನಮ್ಮ ಮಂಡ್ಯದ ಸಂಸದರು “ಸಂವಿಧಾನದ ಬಗ್ಗೆ ಹಾಗೆಲ್ಲ ಮಾತನಾಡಬೇಡಿ” ಎಂದು ಹೇಳಬಹುದಿತ್ತು. ಆದರೆ ಯಾಕೆ ಹೇಳಲಿಲ್ಲಾ ? ಇವರಿಗೂ ಸಂವಿಧಾನ ಬದಲಾಯಿಸುವ ಮನಸ್ಥಿತಿ ಇರಬೇಕೇನೋ ಅನ್ನುವ ಅನುಮಾನಗಳು ದಲಿತ ಪ್ರಜ್ಞಾವಂತರಲ್ಲಿ ಕಾಡತೊಡಗಿದೆ. ಇವರಿಗೆ ಇಲ್ಲಿ ನಾವು ಗೆಲ್ಲಿಸಿ ಕಳಿಸಿದರೆ, ಅಲ್ಲಿ ಇವರು ಸಂವಿಧಾನದ ಆಶಯಗಳಿಗೆ ಕೊಳ್ಳಿಯಿಟ್ಟು ಇಡೀ ಶೋಷಿತ ಸಮುದಾಯಗಳ ಬದುಕಿಗೆ ಗುಂಡಿ ತೊಡುತ್ತಾರೆ ಎನ್ನುವುದರಲ್ಲಿ ಅನುಮಾನವೇ ಇಲ್ಲ.
ಮಾನ್ಯ ಪ್ರಧಾನಿಗಳು “ಇಡೀ ಇಂಡಿಯಾವನ್ನೇ ಗೆದ್ದರು ನಮ್ಮ ಮಂಡ್ಯ ಜನತೆಯನ್ನು ಗೆಲ್ಲುವುದು ಕಷ್ಟ” ಎಂದು ಹೇಳಿದ ಮಾಜಿ ಪ್ರಧಾನಿಗಳ ಮಾತು ಸತ್ಯವಾಗಿದೆ. ಇದಕ್ಕಾಗಿ ಪಣತೊಟ್ಟ ನಮ್ಮ ಮಾನ್ಯ ಪ್ರಧಾನಿಗಳು “ಮಂಡ್ಯ ಗೆದ್ದರೆ ಇಂಡಿಯಾ ಗೆಲ್ಲಬಹುದು” ಎನ್ನುವ ಮಹದಾಸೆಯಿಂದ ಸ್ವತಃ ತಾವೇ ಪ್ರಚಾರಕ್ಕೆ ಇಳಿದಿದ್ದಾರೆ. ಯಾರಾದರೂ ಗೆಲ್ಲಲಿ, ಬಿಡಲಿ ಮಂಡ್ಯ ಜನತೆ ಇಂಡಿಯಾವನ್ನು ಆಳುವವರಾಗಲಿ. ಇದು ಕನ್ನಡಿಗರ, ರೈತರ, ಯುವಕರ, ಕಾರ್ಮಿಕರ, ವಿದ್ಯಾವಂತರ,ಮಹಿಳೆಯರ ಮಹಾದಾಸೆಯಾಗಿದೆ. ಇದನ್ನು ನನ್ನೆಲ್ಲಾ ಪ್ರಜ್ಞಾವಂತ ಮತಬಾಂಧವರು, ಬಹುಜನರು,ದಲಿತರು,ಅಲ್ಪ ಸಂಖ್ಯಾತರು, ಶೋಷಿತ ಸಮುದಾಯಗಳು ಇತರ ಹಿಂದುಳಿದ ವರ್ಗದವರು ಜಾಗೃತವಾಗಿ ಅರ್ಥಮಾಡಿಕೊಳ್ಳಬೇಕಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw