ಮೂಡಿಗೆರೆ: ಬೀದಿಗೆ ಬಿದ್ದ ಬಣ ರಾಜಕೀಯ: ವಿರೋಧಿ ಬಣದ ವರ್ತನೆಗೆ ಕಣ್ಣೀರಿಟ್ಟ ಬಿಜೆಪಿ ಶಾಸಕ - Mahanayaka
10:59 PM Wednesday 11 - December 2024

ಮೂಡಿಗೆರೆ: ಬೀದಿಗೆ ಬಿದ್ದ ಬಣ ರಾಜಕೀಯ: ವಿರೋಧಿ ಬಣದ ವರ್ತನೆಗೆ ಕಣ್ಣೀರಿಟ್ಟ ಬಿಜೆಪಿ ಶಾಸಕ

m p kumaraswamy
16/03/2023

ಚಿಕ್ಕಮಗಳೂರು: ಮೂಡಿಗೆರೆ  ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ವಿರುದ್ಧ ಕಾರ್ಯಕರ್ತರ ಆಕ್ರೋಶ ಮುಗಿಲು ಮುಟ್ಟಿದ್ದು, ಇದೀಗ ಕುಮಾರಸ್ವಾಮಿ ಬೇಡವೇ ಬೇಡ ಎಂದು ಕಾರ್ಯಕರ್ತರು ರಸ್ತೆಗಿಳಿದಿದ್ದಾರೆ.

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರು ಬರುವ ಮಾರ್ಗವನ್ನು ಅಡ್ಡಗಟ್ಟಿದ ಕಾರ್ಯಕರ್ತರು, ಕುಮಾರಸ್ವಾಮಿ ಬೇಡವೇ ಬೇಡ ಎಂದು ಘೋಷಣೆ ಕೂಗಿದ್ದಾರೆ. ಹೊಸ ಮುಖಕ್ಕೆ ಟಿಕೆಟ್ ಕೊಡುವಂತೆ ಒತ್ತಾಯಿಸಿದ್ದಾರೆ.

ಸಾವಿರಕ್ಕೂ ಅಧಿಕ ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಇದೇ ವೇಳೆ ಸ್ಥಳದಲ್ಲಿದ್ದ ಶಾಸಕ ಕುಮಾರಸ್ವಾಮಿಯನ್ನು ಬೇರೆ ಕಡೆಗೆ ಪೊಲೀಸರು ಕರೆದೊಯ್ದಿದ್ದಾರೆ.

ಬಿಜೆಪಿಯ ಹಿರಿಯ ನಾಯಕ ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆಯುತ್ತಿರುವ ವಿಜಯ ಸಂಕಲ್ಪ ಯಾತ್ರೆಗೆ ಮುನ್ನವೇ ಮೀಸಲು ವಿಧಾನ ಸಭಾ ಕ್ಷೇತ್ರದಲ್ಲಿ ಕಾರ್ಯಕರ್ತರು ಶಾಸಕ ಕುಮಾರಸ್ವಾಮಿ ವಿರುದ್ಧ ತಿರುಗಿ ಬಿದ್ದಿದ್ದಾರೆ. ಕಾರ್ಯಕರ್ತರ ಒಗ್ಗಟ್ಟಿಗೆ ಸಾಕ್ಷಿಯಾಗಬೇಕಾದ ವಿಜಯ ಸಂಕಲ್ಪ ಯಾತ್ರೆ ಕಾರ್ಯಕರ್ತರ ಆಕ್ರೋಶದ ಹಿನ್ನೆಲೆಯಲ್ಲಿ ಗೊಂದಲದ ಗೂಡಾಗಿ ಪರಿಣಮಿಸಿದೆ.

ಮೂಡಿಗೆರೆ ಬಿಜೆಪಿಯ ಬಣ ರಾಜಕೀಯ ಇದೀಗ ಬೀದಿಗೆ ಬಂದಿದ್ದು, ಎಂ‌.ಪಿ.ಕುಮಾರಸ್ವಾಮಿ ಬಿಟ್ಟು ಬೇರೆ ಯಾರಿಗಾದರೂ ಟಿಕೆಟ್ ನೀಡಿ ಎಂದು ವಿರೋಧ ಬಣ ಒತ್ತಾಯಿಸಿದೆ. ಮೂಡಿಗೆರೆಯಲ್ಲಿ ಅಭ್ಯರ್ಥಿಯ ಬದಲಾವಣೆ ಮಾಡುವಂತೆ ಒತ್ತಾಯಿಸಿದ ಯಡಿಯೂರಪ್ಪನವರಿಗೆ ಕಾರ್ಯಕರ್ತ ಮನವಿ ಸಲ್ಲಿಸಲು ಮುಂದಾಗಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಕಣ್ಣೀರು ಹಾಕಿದ ಬಿಜೆಪಿ ಶಾಸಕ :

ವಿರೋಧ ಬಣದ ಪ್ರತಿಭಟನೆ ಬಗ್ಗೆ ಸ್ಪಷ್ಟನೆ ನೀಡಲು  ಮೂಡಿಗೆರೆ ಐಬಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಎಂ.ಪಿ.ಕುಮಾರಸ್ವಾಮಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ನಾನು ದಲಿತ ಅನ್ನೋ ಕಾರಣಕ್ಕೆ ಹೀಗೆಲ್ಲ ಮಾಡುತ್ತಿದ್ದಾರೆ. ಬೇರೆ ಯಾರಾದರೂ  ಜನರಲ್ ಶಾಸಕ ಆಗಿದ್ರೆ ಹೀಗೆ ಮಾಡುತ್ತಿದ್ದರಾ? ಎಂದು ಕಣ್ಣೀರು ಹಾಕಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ