ಟೌನ್ ಶಿಫ್ ಗೆ ಭೂಮಿ ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ, ಇಲ್ಲವೇ ನೈಸ್ ಸಂಸ್ಥೆಯಿಂದ ಭೂಮಿ ವಾಪಸ್: ಸಚಿವ ಎಸ್.ಟಿ.ಸೋಮಶೇಖರ್
ಬೆಂಗಳೂರು: ನೈಸ್ ಸಂಸ್ಥೆಯು ಟೌನ್ ಶಿಪ್ ಗೆಂದು ಭೂಮಿ ಸ್ವಾಧೀನಪಡಿಸಿಕೊಂಡ ರೈತರಿಗೆ ಸೂಕ್ತ ರೀತಿಯಲ್ಲಿ ಪರಿಹಾರ ನೀಡಬೇಕು. 2013ರಲ್ಲಿ ಕೆಐಎಡಿಬಿ ನಿಗದಿಪಡಿಸಿದ ದರದಲ್ಲಿ ಸಂಸ್ಥೆ ಪರಿಹಾರ ನೀಡದಿದ್ದರೆ ಸುಪ್ರೀಂ ಕೋರ್ಟ್ ಗೆ ಮನವಿ ಮಾಡಿ ಭೂಮಿ ವಾಪಸ್ ಕೊಡಿಸಲು ಕ್ರಮವಹಿಸಲಾಗುವುದು ಎಂದು ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಹೇಳಿದರು.
ವಿಧಾನಸೌಧದಲ್ಲಿ ಲೋಕೋಪಯೋಗಿ ಸಚಿವರಾದ ಸಿ.ಸಿ.ಪಾಟೀಲ್ ಅವರ ಉಪಸ್ಥಿತಿಯಲ್ಲಿ ಸಂಪುಟ ಉಪಸಮಿತಿ ಸಭೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.26 ವರ್ಷದ ಹಿಂದೆ ಟೌನ್ ಶಿಫ್ ಗೆ 1906 ಎಕರೆ ಜಾಗ ವಶಪಡಿಸಿಕೊಳ್ಳಲಾಗಿತ್ತು. 9-10 ಹಳ್ಳಿಗಳಿಗೆ ಪರಿಹಾರ ಅಂತಿಮವಾಗಿರಲಿಲ್ಲ. 2013ರಲ್ಲಿ ಕೆಐಎಡಿಬಿನವರು ಹೊಸದರ ಅಂತಿಮಗೊಳಿಸಿದ್ದು, ಅದರಂತೆ ನೈಸ್ ಸಂಸ್ಥೆ ಪರಿಹಾರ ನೀಡಬೇಕು ಎಂದರು.
ನಗರಪ್ರದೇಶದಲ್ಲಿ 1:2, ಗ್ರಾಮಾಂತರ ಭಾಗದಲ್ಲಿ 1:4ನಂತೆ ಅಂತಿಮಗೊಳಿಸಿದ್ದಾರೆ. 1 ಎಕರೆಗೆ 3 ಕೋಟಿ ರೂ.ಗೂ ಅಧಿಕ ಪರಿಹಾರಧನವನ್ನು ಕೆಐಎಡಿಬಿ ನಿಗದಿಪಡಿಸಿದೆ. ಆದರೆ ನೈಸ್ ಕಂಪನಿಯವರು 41 ಲಕ್ಷಕ್ಕೆ ಸೀಮಿತ ಮಾಡಿ ರೈತರಿಗೆ ಅನ್ಯಾಯವೆಸಗಿದ್ದಾರೆ.
ಸಚಿವರಾದ ಸಿ.ಸಿ.ಪಾಟೀಲ್ ಅವರ ಸಮ್ಮುಖದಲ್ಲಿ ಸಭೆ ನಡೆಸಲಾಯಿತು. ರೈತರಿಗೆ ಅನ್ಯಾಯ ಆಗದಂತೆ ಕ್ರಮಕೈಗೊಳ್ಳುವ ಕುರಿತು ಚರ್ಚೆಯಾಯಿತು. ಎಕರೆಗೆ 3 ಕೋಟಿ ರೂ.ಗೂ ಅಧಿಕ ಮೊತ್ತದ ಪರಿಹಾರ ನೀಡಬೇಕು. ಇಲ್ಲವಾದಲ್ಲಿ ನಿಯಮಾನುಸಾರ ಸ್ವಾಧೀನ ಪಡಿಸಿಕೊಂಡ ಭೂಮಿ ವಾಪಸ್ ಕೊಡಬೇಕು ಎಂದರು.
ಸುಮಾರು ವರ್ಷಗಳಿಂದ ರೈತರಿಗೆ ಪರಿಹಾರ ಸಿಗದೆ ಅನ್ಯಾಯವಾಗಿದೆ. ರೈತರಿಗೆ ಸೂಕ್ತ ಪರಿಹಾರ ಕಲ್ಪಿಸುವಂತೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ. 2013ರಲ್ಲಿ ಕೆಐಎಡಿಬಿ ನಿಗದಿಪಡಿಸಿದ ಬೆಲೆ ನೀಡದಿದ್ದರೆ ಸುಪ್ರೀಂ ಕೋರ್ಟ್ ಗೆ ಮನವಿ ಮಾಡಿ ಜಮೀನು ವಾಪಸ್ ಕೊಡಿಸುವ ಕುರಿತು ಸಭೆಯಲ್ಲಿ ಚರ್ಚೆಯಾಯಿತು ಎಂದರು.
ನೈಸ್ ಸಂಸ್ಥೆಯ ಮೇಲೆ ಸರ್ಕಾರಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಸುಪ್ರೀಂ ಕೋರ್ಟ್ ನಲ್ಲಿ ನೈಸ್ ಸಂಸ್ಥೆ ದಾಖಲಿಸಿದ್ದ ಕೇಸ್ ಗಳು ಒಂದೊಂದಾಗಿ ವಜಾ ಆಗುತ್ತಿವೆ ಎಂದು ಹೇಳಿದರು.
ಸುಪ್ರೀಂ ಕೋರ್ಟ್ ನಲ್ಲಿ ದಾಖಲಿಸಿರುವ ಪ್ರಕರಣಗಳ ಮೇಲೆ ನಿಗಾ ವಹಿಸಲು ಸರ್ಕಾರ ವಕೀಲರನ್ನು ನೇಮಕ ಮಾಡಿದೆ. ಟೋಲ್ ದರ ಸಂಬಂಧ ನೈಸ್ ಸಂಸ್ಥೆಯವರು ಸುಪ್ರೀಂ ಕೋರ್ಟ್ ನಲ್ಲಿ ತಡೆ ತಂದಿದ್ದಾರೆ. ತಡೆ ತೆರವು ಸಂಬಂಧ ವಕೀಲ ಜೊತೆ ಚರ್ಚೆ ನಡೆಸಲಾಗಿದೆ. ಸಂಪೂರ್ಣ ಸಿಮೆಂಟ್ ರಸ್ತೆ ಮಾಡಿ ನಂತರ ಟೋಲ್ ಸಂಗ್ರಹಿಸಬೇಕಿತ್ತು. ಈ ಬಗ್ಗೆ ಸುಪ್ರೀಂ ಕೋರ್ಟ್ ನಲ್ಲಿ ತಡೆ ತಂದಿದ್ದು ಸದ್ಯದಲ್ಲೇ ತೆರವಾಗುವ ಸಾಧ್ಯತೆಯಿದೆ ಎಂದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw