ಶಿಕಾರಿಪುರ: ಪ್ರತಿಭಟನಾಕಾರರ ಕಲ್ಲೇಟಿಗೆ ಇನ್ಸ್ ಪೆಕ್ಟರ್ ಸಹಿತ ನಾಲ್ವರಿಗೆ ಗಾಯ
ಶಿಕಾರಿಪುರ: ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಕೇಂದ್ರಕ್ಕೆ ಶಿಫಾರಸು ಮಾಡುವ ಸರ್ಕಾರದ ನಿರ್ಧಾರ ವಿರೋಧಿಸಿ ಪಟ್ಟಣದಲ್ಲಿ ಸೋಮವಾರ ಬಂಜಾರ ಸಮಾಜದವರು ನಡೆಸಿದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಸರ್ಕಲ್ ಇನ್ ಸ್ಪೆಕ್ಟರ್ ಸೇರಿದಂತೆ ನಾಲ್ವರು ಪೊಲೀಸರು ಕಲ್ಲೇಟಿನಿಂದ ಗಾಯಗೊಂಡಿದ್ದಾರೆ.
ಉದ್ರಿಕ್ತರು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಅವರ ಮನೆಗೆ ಕಲ್ಲು ತೂರಿದ್ದು, ಕಿಟಕಿ ಗಾಜುಗಳು ಒಡೆದಿವೆ. ಪರಿಸ್ಥಿತಿ ತಹಬದಿಗೆ ಬಂದಿದ್ದು, ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದಾರೆ.
ತಾಲ್ಲೂಕು ಬಂಜಾರ ಸಮಾಜದ ನೇತೃತ್ವದಲ್ಲಿ ಮುಂಜಾನೆ ಶಿಕಾರಿಪುರದ ಅಂಬೇಡ್ಕರ್ ಸರ್ಕಲ್‌ನಲ್ಲಿ ಜಮಾವಣೆಗೊಂಡ ಸಾವಿರಾರು ಪ್ರತಿಭಟನಾಕಾರರು, ಸದಾಶಿವ ಆಯೋಗದ ವರದಿ ಅನ್ವಯ ಒಳಮೀಸಲಾತಿಗೆ ಶಿಫಾರಸು ಮಾಡುವ ಮೂಲಕ ನಮ್ಮ ಬದುಕು ಕಿತ್ತುಕೊಳ್ಳಲಾಗಿದೆ ಎಂದು ಆರೋಪಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಅಲ್ಲಿಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಅವರ ಭಾವಚಿತ್ರ ಇರುವ ಪ್ಲೆಕ್ಸ್ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲಿಂದ ಪಟ್ಟಣದ ಮಾಳೇರಕೇರಿಯಲ್ಲಿರುವ ಯಡಿಯೂರಪ್ಪ ಅವರ ನಿವಾಸದತ್ತ ಪ್ರತಿಭಟನಾಕಾರರು ಗುಂಪು ಗುಂಪಾಗಿ ಹೊರಟಾಗ ಅವರನ್ನು ತಡೆಯಲು ಪೊಲೀಸರು ಮೂರು ಕಡೆ ಬ್ಯಾರಿಕೇಡ್ ಅಳವಡಿಸಿದ್ದರು. ಎರಡು ಬ್ಯಾರಿಕೇಡ್‌ಗಳನ್ನು ಮುರಿದು ಮುಂದಕ್ಕೆ ಬಂದ ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ಲಾಠಿ ಪ್ರಹಾರ ಮಾಡಿದರು. ಇದರಿಂದ ಆಕ್ರೋಶಗೊಂಡ ಪ್ರತಿಭಟನಾಕಾರರು ಕಲ್ಲು ಹಾಗೂ ಚಪ್ಪಲಿ ತೂರಾಟ ನಡೆಸಿದರು.ಈ ವೇಳೆ ಶಿಕಾರಿಪುರ ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ್ ಲಕ್ಷ್ಮಣ್, ನಗರ ಠಾಣೆ ಪಿಎಸ್ಐ ಮಂಜುನಾಥ ಕೊಪ್ಪಲೂರು, ಕಾನ್‌ಸ್ಟೆಬಲ್‌ಗಳಾದ ಶಂಕರಗೌಡ ಹಾಗೂ ಕಾಂತರಾಜು ಅವರ ತಲೆಗೆ ಕಲ್ಲೇಟು ಬಿದ್ದಿದೆ.
ಪ್ರತಿಭಟನಾಕಾರರು ಶಿಕಾರಿಪುರ ಪಟ್ಟಣದಲ್ಲಿ ಅಳವಡಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಪ್ಲೆಕ್ಸ್‌ಗಳನ್ನು ಕಿತ್ತು ಹಾಕಿದರು. ಫೆಬ್ರುವರಿ 27ರಂದು ಯಡಿಯೂರಪ್ಪ ಅವರ ಹುಟ್ಟುಹಬ್ಬದ ದಿನ ವಿತರಿಸಿದ್ದ ಸೀರೆಗಳನ್ನು ಸುಟ್ಟು ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw