ಪ್ರಜಾಪ್ರಭುತ್ವ ಮಾದರಿಯಲ್ಲಿ ಬಿಜೆಪಿ ಅಭಿಪ್ರಾಯ ಸಂಗ್ರಹಣೆ ರಾಜಕೀಯ ಕ್ಷೇತ್ರದಲ್ಲೇ ಐತಿಹಾಸಿಕ ಹೆಜ್ಜೆ : ಬಿಜೆಪಿ ರಾಜ್ಯ ಕಾರ್ಯದರ್ಶಿ ಜಗದೀಶ್ ಹಿರೇಮನೆ
ಉಡುಪಿ: ಭಾರತೀಯ ಜನತಾ ಪಾರ್ಟಿ ತನ್ನ ಪಕ್ಷದ ಸಂವಿಧಾನದ ಚೌಕಟ್ಟಿನೊಳಗೆ ಹಮ್ಮಿಕೊಂಡಿರುವ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಗಳಲ್ಲಿ ಒಂದಾಗಿರುವ ಶಕ್ತಿಕೇಂದ್ರ ಮತ್ತು ಮೇಲ್ಪಟ್ಟ ಪದಾಧಿಕಾರಿಗಳ ಅಭಿಪ್ರಾಯ ಸಂಗ್ರಹಣೆ ಅಭಿಯಾನವು ರಾಜಕೀಯ ಪಕ್ಷಗಳಲ್ಲೇ ಒಂದು ಐತಿಹಾಸಿಕ ಹೆಜ್ಜೆಯಾಗಿದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಜಗದೀಶ್ ಹಿರೇಮನೆ ಹೇಳಿದರು.
ಅವರು ಮಾ.31ರಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ರವರ ಅಧ್ಯಕ್ಷತೆಯಲ್ಲಿ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ವಿಧಾನಸಭಾ ಚುನಾವಣಾ ಮಂಡಲ ಶಹ ಅಭಿಪ್ರಾಯ ಸಂಗ್ರಹಣೆ ಸಭೆಯಲ್ಲಿ ರಾಜ್ಯ ತಂಡದ ನೇತೃತ್ವ ವಹಿಸಿ ಮಾತನಾಡಿದರು.
ತನ್ನ ಕ್ಷೇತ್ರದ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಯಾರಾಗಬೇಕು ಎನ್ನುವ ಬಗ್ಗೆ ಪಕ್ಷದ ಸಾಮಾನ್ಯ ಕಾರ್ಯಕರ್ತನಿಂದಲೂ ಅಭಿಪ್ರಾಯ ಸಂಗ್ರಹಣೆ ಮಾಡುವಲ್ಲಿ ಭಾರತೀಯ ಜನತಾ ಪಾರ್ಟಿ ಮೊಟ್ಟಮೊದಲನೆಯ ಸ್ಥಾನದಲ್ಲಿ ನಿಲ್ಲುತ್ತದೆ ಎಂದು ಅವರು ಹೇಳಿದರು.
ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸುಮಾರು 16,000ಕ್ಕೂ ಮಿಕ್ಕಿ ಶಕ್ತಿಕೇಂದ್ರಗಳ ಅಧ್ಯಕ್ಷರ ಸಹಿತ ಮಹಾ ಶಕ್ತಿಕೇಂದ್ರ, ಮಂಡಲ, ಪ್ರಕೋಷ್ಠ, ಮೋರ್ಚಾ, ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರೀಯ ಪದಾಧಿಕಾರಿಗಳು ಹಾಗೂ ಪಕ್ಷದ ಇತರ ಪ್ರಮುಖರು ಈ ಪ್ರಕ್ರಿಯೆಯಲ್ಲಿ ಭಾಗವಹಿಸಿ ತಮ್ಮ ವಿಧಾನಸಭಾ ಕ್ಷೇತ್ರಕ್ಕೆ ಒಂದು ಅಥವಾ ಗರಿಷ್ಠ ಮೂರು ಮಂದಿ ಅಭ್ಯರ್ಥಿಗಳ ಹೆಸರನ್ನು ಸೂಚಿಸಲು ಅವಕಾಶ ನೀಡಲಾಗಿದೆ. ಮತದಾನ ಪ್ರಕ್ರಿಯೆಯ ಬಳಿಕ ಸೀಲ್ ಮಾಡಿದ ಬ್ಯಾಲೆಟ್ ಪೇಪರ್ ಬಾಕ್ಸ್ ಗಳನ್ನು ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳು ಪರಿಶೀಲಿಸಲಿದ್ದಾರೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಉಪ ಸಭಾಪತಿ ಪ್ರಾಣೇಶ್ ಹಾಗೂ ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪರವರು ಮಾರ್ಗದರ್ಶನದ ಮಾತುಗಳನ್ನಾಡಿ, ಉಡುಪಿ ಜಿಲ್ಲೆಯ ಐದೂ ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷದ ಭರ್ಜರಿ ಗೆಲುವಿಗೆ ಪಕ್ಷದ ಪ್ರಮುಖರು, ಎಲ್ಲ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಕಾರ್ಯಕರ್ತ ಬಂಧುಗಳು ತಕ್ಷಣದಿಂದ ಕಾರ್ಯಪ್ರವೃತ್ತರಾಗಿ ಬದ್ಧತೆ ಹಾಗೂ ಕ್ರಿಯಾಶೀಲತೆಯಿಂದ ಶ್ರಮಿಸಬೇಕು ಎಂದು ಕರೆ ನೀಡಿದರು.
ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ಬೆಳಿಗ್ಗೆ 9.30 ರಿಂದ ಸಂಜೆ 4.30ರ ತನಕ ನಡೆದ ಮಂಡಲವಾರು ಅಭಿಪ್ರಾಯ ಸಂಗ್ರಹಣೆಯಲ್ಲಿ ಉಡುಪಿ ನಗರ ಮತ್ತು ಗ್ರಾಮಾಂತರ, ಕಾಪು, ಕುಂದಾಪುರ, ಕಾರ್ಕಳ ಹಾಗೂ ಬೈಂದೂರು ಮಂಡಲಗಳ ಅಪೇಕ್ಷಿತ ಪದಾಧಿಕಾರಿಗಳ ಮತದಾನ ಪ್ರಕ್ರಿಯೆ ನಡೆಯಿತು.
ಈ ಸಂದರ್ಭದಲ್ಲಿ ಬಿಜೆಪಿ ಮಂಗಳೂರು ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಕುಮಾರ್, ಮಾಜಿ ಶಾಸಕರುಗಳಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಬಿ.ಎಮ್. ಸುಕುಮಾರ್ ಶೆಟ್ಟಿ, ಪ್ರಮೋದ್ ಮಧ್ವರಾಜ್ ಹಾಗೂ ಮಂಡಲಗಳ ಅಧ್ಯಕ್ಷರುಗಳಾದ ಮಹೇಶ್ ಠಾಕೂರ್ ಉಡುಪಿ, ವೀಣಾ ನಾಯ್ಕ್ ಉಡುಪಿ ಗ್ರಾಮಾಂತರ, ಶ್ರೀಕಾಂತ್ ನಾಯಕ್ ಕಾಪು, ಶಂಕರ ಅಂಕದಕಟ್ಟೆ ಕುಂದಾಪುರ, ಮಹಾವೀರ ಹೆಗ್ಡೆ ಕಾರ್ಕಳ, ದೀಪಕ್ ಕುಮಾರ್ ಶೆಟ್ಟಿ ಬೈಂದೂರು ಹಾಗೂ ಬಿಜೆಪಿ ರಾಷ್ಟ್ರೀಯ, ರಾಜ್ಯ, ಜಿಲ್ಲಾ, ಮೋರ್ಚಾ, ಪ್ರಕೋಷ್ಠ, ಮಂಡಲ, ಮಹಾಶಕ್ತಿ ಕೇಂದ್ರ, ಶಕ್ತಿಕೇಂದ್ರ ಪದಾಧಿಕಾರಿಗಳು, ಮಾಜಿ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕುತ್ಯಾರು ನವೀನ್ ಶೆಟ್ಟಿ, ಮನೋಹರ್ ಎಸ್. ಕಲ್ಮಾಡಿ ಮತ್ತು ಸದಾನಂದ ಉಪ್ಪಿನಕುದ್ರು ವಿವಿಧ ಮಂಡಲಗಳ ಅಭಿಪ್ರಾಯ ಸಂಗ್ರಹಣೆಯ ಮತದಾನ ಪ್ರಕ್ರಿಯೆಯನ್ನು ನಿರ್ವಹಿಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw