ಮೀಸಲಾತಿ ಜಾರಿ ವಿಚಾರದಲ್ಲಿ ರಾಜಕೀಯ ಇಚ್ಛಾಶಕ್ತಿ ದರ್ಶನ: ಸಚಿವ ಕೋಟ ಶ್ರೀನಿವಾಸ ಪೂಜಾರಿ - Mahanayaka
8:03 PM Thursday 12 - December 2024

ಮೀಸಲಾತಿ ಜಾರಿ ವಿಚಾರದಲ್ಲಿ ರಾಜಕೀಯ ಇಚ್ಛಾಶಕ್ತಿ ದರ್ಶನ: ಸಚಿವ ಕೋಟ ಶ್ರೀನಿವಾಸ ಪೂಜಾರಿ

bjp
01/04/2023

ಬೆಂಗಳೂರು: ಮೀಸಲಾತಿ ವಿಚಾರದಲ್ಲಿ ಬಿಜೆಪಿ ಜೇನುಗೂಡಿಗೆ ಕೈಹಾಕಿದೆ. ಗೊಂದಲ ಸೃಷ್ಟಿಯಾಗಿದೆ ಎಂಬ ಚರ್ಚೆಗಳಾಗುತ್ತಿವೆ. ಆದರೆ, ನಮ್ಮ ಸರಕಾರ ಜೇನುಗೂಡಿಗೆ ಕೈಹಾಕಿ ಜೇನನ್ನು ತೆಗೆದು ಸಮಾಜದ ಕಟ್ಟಕಡೆಯ ವ್ಯಕ್ತಿಗೆ, ಮುಖ್ಯವಾಹಿನಿಗೆ ಬರಲಾಗದೆ ಚಡಪಡಿಸುತ್ತಿದ್ದವರಿಗೆ ಹಾಗೂ ಧ್ವನಿ ಇಲ್ಲದವರಿಗೆ ಹಂಚಿದೆ ಎಂದು ರಾಜ್ಯದ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಸಮರ್ಥಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮಾಜಿಕ ನ್ಯಾಯಕ್ಕೆ ಅನುಗುಣವಾಗಿ ಮೀಸಲಾತಿ ಹಂಚಿಕೆ ಮಾಡಲಾಗಿದೆ. ಆ ವಿಚಾರದಲ್ಲಿ ತೃಪ್ತಿ ಇದೆ. ಇದಕ್ಕಾಗಿ ಶ್ರಮ ವಹಿಸಿದ ಮುಖ್ಯಮಂತ್ರಿಯವರಿಗೆ ಅಭಿನಂದನೆಗಳು ಎಂದರಲ್ಲದೆ, ಒಂದು ಕಾಲದಲ್ಲಿ ದೇವರಾಜ ಅರಸು ಅವರು ಇಂಥ ಕೆಲಸ ಮಾಡಿದ್ದರು. ಅವರ ನಂತರ ಇಂಥ ಕೆಲಸ ಮಾಡಿದ ಕೀರ್ತಿ ಬಿಜೆಪಿಗೆ ಮತ್ತು ಬೊಮ್ಮಾಯಿಯವರಿಗೆ ಸಿಗುತ್ತದೆ ಎಂದು ವಿಶ್ಲೇಷಿಸಿದರು.

ರಾಜ್ಯದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ವೈಜ್ಞಾನಿಕವಾಗಿ ಮೀಸಲಾತಿ ಪರಿಷ್ಕರಣೆ ಕಾರ್ಯ ನಡೆದಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಒಕ್ಕಲಿಗರು, ಲಿಂಗಾಯತರು ಸೇರಿ ಎಲ್ಲ ಅರ್ಹರಿಗೆ ಸಾಮಾಜಿಕ ನ್ಯಾಯ ಕೊಡುವ ಕಾರ್ಯವನ್ನು ನಮ್ಮ ಸರಕಾರ ಮಾಡಿದೆ ಎಂದು ತಿಳಿಸಿದರು.

ಕೆಲವು ಸಾರಿ ವಿರೋಧ ಪಕ್ಷಗಳು, ಕಾಂಗ್ರೆಸ್ನ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಜನತಾದಳದವರು ಮುಸ್ಲಿಮರಿಗೆ ಮೀಸಲಾತಿ ರದ್ದುಪಡಿಸಿದ್ದಾಗಿ ಆಕ್ಷೇಪಿಸಿವೆ. ಶೇ 4ರ ಮೀಸಲಾತಿ ತೆಗೆದು ಶೇ 10 ಮೀಸಲಾತಿ ಇರುವ ಇಡಬ್ಲ್ಯುಎಸ್ ಅಡಿ ಅವರನ್ನು ತರಲಾಗಿದೆ. ಮುಸ್ಲಿಮರಿಗೆ ಅನ್ಯಾಯ ಆಗಿಲ್ಲ. ಸ್ವತಂತ್ರ ಭಾರತದ ಇತಿಹಾಸದಲ್ಲಿ ರಾಜ್ಯದಲ್ಲಿ ಶೇ 15 ಮೀಸಲಾತಿಯನ್ನು ಶೇ 17ಕ್ಕೆ ಏರಿಸಲಾಗಿದೆ. 3ರ ಪರಿಶಿಷ್ಟ ಪಂಗಡದ ಮೀಸಲಾತಿಯನ್ನು 7ಕ್ಕೆ ಏರಿಸಿ, ಅದು ಅನುಷ್ಠಾನವೂ ಆಗಿದೆ ಎಂದು ವಿವರಿಸಿದರು.

ಯಾರಿಗೂ ಅನ್ಯಾಯ ಆಗದಂತೆ ಮೀಸಲಾತಿ ಜಾರಿ ಮಾಡಿದ್ದೇವೆ. ಸದಾಶಿವ ಆಯೋಗದ ಉಲ್ಲೇಖಗಳನ್ನೂ ಗಮನಿಸಿದ್ದೇವೆ ಎಂದು ತಿಳಿಸಿದರು. ಎಡಗೈಯವರಿಗೆ ಶೇ 6, ಬಲಗೈಯವರಿಗೆ ಶೇ 5.5, ದಲಿತ ಸ್ಪøಶ್ಯರಿಗೆ 4.5, ಇತರರು- ಅಲೆಮಾರಿಗಳಿಗೆ ಶೇ 1ರಷ್ಟು ಮೀಸಲಾತಿ ಕೊಟ್ಟಿದ್ದೇವೆ. ಜನಸಂಖ್ಯೆಗೆ ಅನುಗುಣವಾಗಿ, ವೈಜ್ಞಾನಿಕವಾಗಿ ಮೀಸಲಾತಿ ಜಾರಿ ಆಗಿದೆ. ಪರಿಷ್ಕøತ ಆದೇಶವನ್ನು ಅದೇ ಹಿನ್ನೆಲೆಯಲ್ಲಿ ಮಾಡಿದ್ದೇವೆ ಎಂದರು.

ಇಷ್ಟು ವರ್ಷ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದರೂ, ಸಿದ್ದರಾಮಯ್ಯ ಸಿಎಂ ಆಗಿದ್ದರೂ ಇಷ್ಟು ವರ್ಷ ಸದಾಶಿವ ಆಯೋಗ ವರದಿ ಯಾಕೆ ಜಾರಿ ಮಾಡಿಲ್ಲ? ಅದನ್ನು ಯಾಕೆ ಬಿಡುಗಡೆ ಮಾಡಿಲ್ಲ? ಸಮಾಜಿಕ ನ್ಯಾಯ ನೀಡಿದ ನಮ್ಮನ್ನು ಅಭಿನಂದಿಸದೆ ಇರಬಹುದು. ಆದರೆ, ವಾಸ್ತವಿಕ ಸತ್ಯ ಯಾಕೆ ಒಪ್ಪುತ್ತಿಲ್ಲ? ಎಂದು ಕೇಳಿದರು.

ಯಡಿಯೂರಪ್ಪ ಅವರ ಮನೆ ಮೇಲೆ ಕಲ್ಲು ಎಸೆದ ವಿಚಾರವಾಗಿ ಲಂಬಾಣಿ ಸಮುದಾಯವರು ಕ್ಷಮೆ ಕೇಳಿದ್ದಾರೆ. ಹಾಗಿದ್ದರೆ ಕಲ್ಲು ಹೊಡೆಯಲು ಪ್ರೇರಣೆ ಕೊಟ್ಟವರು ಯಾರು? ಇದಕ್ಕೆ ಕಾಂಗ್ರೆಸ್ ಪಕ್ಷ ಉತ್ತರ ಕೊಡಲಿ ಎಂದು ಆಗ್ರಹಿಸಿದರು.

ಹಿಂದೆ ಬಡವರ್ಗಕ್ಕೆ ಮೂಗಿಗೆ ತುಪ್ಪ ಹಚ್ಚುತ್ತಿದ್ದರು. ನಾವು ಜೇನುಗೂಡಿಗೆ ಕೈ ಹಾಕಿ ಜೇನು ತೆಗೆದು ಸಾಮಾಜಿಕ ನ್ಯಾಯದಡಿ ಹಂಚಿದ್ದೇವೆ. ಬಿಜೆಪಿಯ ಈ ಪ್ರಯತ್ನವನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.

ಶಾಂತಾರಾಮ ಸಿದ್ದಿ, ಹೇಮಲತಾ ನಾಯಕರಿಗೆ ಎಂಎಲ್ಸಿ ಆಗಲು ಅವಕಾಶ, ಅಶೋಕ ಗಸ್ತಿ ಅವರಿಗೆ ರಾಜ್ಯಸಭಾ ಸದಸ್ಯತ್ವ- ಹೀಗೆ ವಿವಿಧ ಸಮುದಾಯಗಳÀನ್ನು ಬಿಜೆಪಿ ಗುರುತಿಸಿದೆ. ಯಡಿಯೂರಪ್ಪ ಅವರು ಪಿಂಜಾರ ಅಭಿವೃದ್ಧಿ ನಿಗಮ, ತಿಗಳ ಸಮುದಾಯ, ಬಲಿಜ, ಕಾಡುಗೊಲ್ಲರ ನಿಗಮ ಸೇರಿ ವಿವಿಧ ಸಮುದಾಯಗಳ ಅಭಿವೃದ್ಧಿಗಾಗಿ ಹಲವು ನಿಗಮಗಳನ್ನು ರಚಿಸಿದ್ದಾರೆ. ಈ ವಿಷಯದಲ್ಲಿ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಿದ್ದೇವೆ ಎಂದು ತಿಳಿಸಿದರು.

ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ನೀತಿಯಡಿ ನಾವು ಕಾರ್ಯ ನಿರ್ವಹಿಸಿದ್ದೇವೆ. ಇದನ್ನು ಕಾಂಗ್ರೆಸ್ನವರು ರದ್ದು ಮಾಡಿ ಸಮಾಜಕ್ಕೆ ಅನ್ಯಾಯ ಮಾಡಲು ಸಿದ್ಧವೇ? ಎಂದು ಅವರು ಸವಾಲು ಹಾಕಿದರು.

ಬಿಜೆಪಿ ರಾಷ್ಟ್ರೀಯ ವಕ್ತಾರರು ಮತ್ತು ರಾಜ್ಯಸಭಾ ಸದಸ್ಯ ಜಿ.ವಿ.ಎಲ್. ನರಸಿಂಹರಾವ್, ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ