ಏ.8 ರಂದು ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ಸಿಎಂ ಬೊಮ್ಮಾಯಿ

ಬೆಂಗಳೂರು: ಕಳೆದ ಮೂರು ನಾಲ್ಕು ದಿನಗಳ ಬೆಳವಣಿಗೆ ಗಮನಿಸಿದರೆ ಬಿಜೆಪಿಗೆ ಸಂಪೂರ್ಣ ಬಹುಮತ ದೊರೆಯಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಮಾಧ್ಯಮದವರೊಂದಿಗೆ ಮಾತನಾಡಿದರು. ಕೆಲವು ಕ್ಷೇತ್ರದಲ್ಲಿ ಆಶ್ಚರ್ಯಕರ ಫಲಿತಾಂಶ ಬರಲಿದೆ. ಕಾರ್ಯಕರ್ತರು ಮತ್ತು ನಾಯಕರಿಗೆ ಆತ್ಮವಿಶ್ವಾಸವಿದೆ ಎಂದರು.
ಏ .8 ರಂದು ಪಟ್ಟಿ ಬಿಡುಗಡೆ:
ವಾಸ್ತವಾಂಶ ಆಧರಿಸಿ ಅಭ್ಯರ್ಥಿ ಆಯ್ಕೆಯಾಗಿದೆ. ಇಂದು ರಾಜ್ಯ ಸಮಿತಿಯ ಸಭೆ ಕರೆದಿದ್ದು, ಎರಡು ದಿನಗಳ ಕಾಲ ನಡೆಯಲಿದೆ. ಸಭೆ ಬಳಿಕ ಕೇಂದ್ರಕ್ಕೆ ಅಭ್ಯರ್ಥಿಗಳ ಪಟ್ಟಿ ಕಳುಹಿಸಲಾಗುವುದು. 8 ನೇ ತಾರೀಖು ಕೇಂದ್ರದಲ್ಲಿ ಚರ್ಚೆಯಾಗಿ ಪಟ್ಟಿ ಬಿಡುಗಡೆಯಾಗಲಿದೆ ಎಂದರು.
ಫಲಿತಾಂಶದ ನಂತರ ಜನರ ಅಭಿಮತ ತಿಳಿಯಲಿದೆ:
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಖಾಸಗಿ ಚಾನಲ್ ಸಂದರ್ಶನವೊಂದರಲ್ಲಿ ಮತ್ತೆ ಸಿಎಂ ಆಗುವ ಇಚ್ಛೆ ವ್ಯಕ್ತಪಡಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಅವರೇನೋ ಬಯಸಿದ್ದಾರೆ ಆದರೆ ಜನರ ನಾಡಿ ಮಿಡಿತ ಏನಿದೆಯೋ ಯಾರಿಗೆ ಗೊತ್ತು..? ಫಲಿತಾಂಶ ಬಂದ ಮೇಲೆ ಜನರ ಅಭಿಮತ ತಿಳಿಯಲಿದೆ ಎಂದರು. ಜನರ ಬೆಂಬಲ ಇದ್ದಾರೆ ಮಾತ್ರ ಶಾಸಕನಾಗಲು ಸಾಧ್ಯ ಎಂದರಲ್ಲದೇ ಸಿದ್ದರಾಮಯ್ಯ ಅವರು ಹೊಸದೇನು ಹೇಳಿಲ್ಲ ಎಂದರು.
ಕಾಂಗ್ರೆಸ್ ಅಧಿಕಾರಕ್ಕೆ ಬರೋಲ್ಲ:
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ. ಇಲ್ಲದಿರುವ ಸೀಟಾಗಿ ಗುದ್ದಾಡುತ್ತಿದ್ದಾರೆ ಎಂದ ಮುಖ್ಯ ಮಂತ್ರಿಗಳು ಕಾಂಗ್ರೆಸ್ ಪಕ್ಷ ಅಧಿಕಾರಕ್ಕಾಗಿ,ಮುಖ್ಯಮಂತ್ರಿ ಸ್ಥಾನಕ್ಕಾಗಿ ಹೊರಾಡುತ್ತಿದೆ. ಜನರಿಗ, ಕರ್ನಾಟಕಕ್ಕೆ ಒಳ್ಳೆಯದು ಮಾಡಬೇಕು ಎಂಬ ಯೋಚನೆ ಮಾಡಿಲ್ಲ ಎಂದರು.
ಆಂತರಿಕ ವಿದ್ಯಾಮಾನಗಳ ಪ್ರತಿಬಿಂಬ:
ಸಿದ್ದರಾಯಮಯ್ಯ ಹೇಳಿರೋದು ಅಲ್ಲಿ ಆಂತರಿಕವಾಗಿ ನಡೆಯುತ್ತಿರುವ ವಿದ್ಯಮಾನಗಳ ಪ್ರತಿಬಿಂಬ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೋದ ಕಡೆಯಲ್ಲಿ ನಾನೇ ಸಿಎಂ ನನಗೆ ಆಶೀರ್ವಾದ ಮಾಡಿ ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ. ಸಿದ್ದರಾಮಯ್ಯ ಅವರು ನಾನೇ ಸಿಎಂ ಹೇಳುತ್ತಾರೆ. ಮುಖ್ಯಮಂತ್ರಿ ಮಾಡೋದು ಜನ. ಆದರೆ ಜನರ ಮನಸ್ಸಿನಲ್ಲಿ ಇವರಿಬ್ಬರೂ ಇಲ್ಲ. ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಇಬ್ಬರೂ ಮುಖ್ಯಮಂತ್ರಿ ಸ್ಥಾನದ ಕನಸು ಕಾಣುತ್ತಿದ್ದಾರೆ. ಆ ಕನಸು ನನಸಾಗೋದಿಲ್ಲ ಎಂದರು.
ಪಕ್ಷಾಂತರ: ಬಿಜೆಪಿ ಮೇಲೆ ಪರಿಣಾಮ ಬೀರೋಲ್ಲ
ಆಯನೂರು ಮಂಜುನಾಥ್ ಬಂಡಾಯ, ಶಾಸಕರು ಪಕ್ಷಾಂತರ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ 125 ಶಾಸಕರು ಈಗ ಇದ್ದಾರೆ. ಅದರಲ್ಲಿ ಕೆಲವು ಕಡೆ ಇಬ್ಬರು ಆಕಾಂಕ್ಷಿಗಳು ಇದ್ದಾರೆ. ಅಲ್ಲಿ ಸ್ಥಾನ ದೊರೆಯೋಲ್ಲ ಎಂದು ಕೆಲವರು ಬಿಟ್ಟು ಹೋಗಿದ್ದಾರೆ ಅಷ್ಟೆ. ಇದರಿಂದ ಬಿಜೆಪಿ ಹಾಗೂ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದರು. ಬಿಜೆಪಿಯಿಂದ ಮತ್ತೆ ಯಾರು ಹೋಗೊಲ್ಲ. ಡಿ.ಕೆ.ಶಿವಕುಮಾರ್ ಸುಮ್ಮನೆ ಹೆಸರುಗಳನ್ನು ತೇಲಿ ಬಿಡುತ್ತಿದ್ದಾರೆ ಅಷ್ಟೆ ಎಂದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw