ಕರ್ನಾಟಕದ ಹೆಮ್ಮೆಯ ನಂದಿನಿ ಸಂಸ್ಥೆ ಮುಳುಗಿಸಲು ಬಿಜೆಪಿ ಪ್ರಯತ್ನಿಸುತ್ತಿದೆ: ಡಿ.ಕೆ.ಸುರೇಶ್
ಬೆಂಗಳೂರು: ‘ಕನ್ನಡಿಗರು ಕಟ್ಟಿ ಬೆಳೆಸಿದ ಪ್ರತಿಷ್ಠಿತ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಕೆನರಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್ ಗಳನ್ನು ಮುಳುಗಿರುವ ಬಿಜೆಪಿ ಈಗ ಕನ್ನಡಿಗರ ಹೆಮ್ಮೆಯ ನಂದಿನಿ ಸಂಸ್ಥೆಯನ್ನು ಮುಳುಗಿಸಲು ಚುನಾವಣೆ ಸಮಯದಲ್ಲಿ ಬಿಲ ತೋಡುತ್ತಿದ್ದಾರೆ’ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಿ.ಕೆ. ಸುರೇಶ್ ಅವರು ವಾಗ್ದಾಳಿ ನಡೆಸಿದರು.
ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಈ ವಿಚಾರವಾಗಿ ಮಾತನಾಡಿದ ಸುರೇಶ್ ಅವರು ಹೇಳಿದ್ದಿಷ್ಟು;
‘ನಾವೆಲ್ಲರೂ ಚುನಾವಣೆ ಸಮಯದಲ್ಲಿದ್ದೇವೆ. ಜನರ ದೃಷ್ಟಿ ರಾಜಕಾರಣದತ್ತ ಇರುತ್ತದೆ. ಈ ಸಂದರ್ಭದಲ್ಲಿ ರಾಜ್ಯದೊಳಗೆ ಬೇರೆ ಬೇರೆ ರೂಪದಲ್ಲಿ ಮುಸುಳಲು ಪ್ರಯತ್ನವಾಗುತ್ತಿದೆ. ಇವರ ಪಾಲಿಗೆ ಕನ್ನಡಿಗರು ಎಂದರೆ ಇಷ್ಟೋಂದು ಕೀಳು ಮನೋಭಾವನೆಯೇ? ಕನ್ನಡಿಗರು, ಕನ್ನಡದ ರೈತರು ತಮ್ಮದೇ ಆದ ಗೌರವ ಸಂಪಾದಿಸಿದ್ದಾರೆ. ಸ್ವಾತಂತ್ರ್ಯ ಬಂದ ನಂತರ ಅತಿ ಹೆಚ್ಚು ಖಾಸಗಿ ಕ್ಷೇತ್ರ ಹೊಂದಿದ್ದ ರಾಜ್ಯ ಕರ್ನಾಟಕ. ನಂತರದ ದಿನಗಳಲ್ಲಿ ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದು ಕರ್ನಾಟಕ. ವಿಜಯಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಕೆನರಾ ಹಾಗೂ ಕಾರ್ಪೋರೇಷನ್ ಬ್ಯಾಂಕ್ ಆರಂಭಿಸಿದ್ದವರು ಕನ್ನಡಿಗರು.
ದೇಶದಲ್ಲಿ ಸಹಕಾರಿ ಚಳುವಳಿ ಮೂಲಕ ಅತ್ಯುತ್ತಮವಾದ ಸಹಕಾರಿ ಸಂಘಗಳು, ಸಹಕಾರಿ ಬ್ಯಾಂಕುಗಳು, ಕೃಷಿ ಪತ್ತಿನ ಬ್ಯಾಂಕುಗಳನ್ನು ಕರ್ನಾಟಕ ಸ್ಥಾಪಿಸಿತ್ತು. ರೈತರಿಗೆ ನೆರವಾಗಲು ರಾಜ್ಯದಲ್ಲಿ ಕರ್ನಾಟಕ ಹಾಲು ಒಕ್ಕೂಟವನ್ನು ಸ್ಥಾಪಿಸಿ ಸಹಕಾರಿ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ಮಾಡಲಾಗುತ್ತಿದೆ.
ಸಹಕಾರಿ ಬ್ಯಾಂಕುಗಳಿಲ್ಲದಿದ್ದರೆ ರೈತರಿಗೆ ಬಡಿರಹಿತ ಸಾಲ ಸುಲಭವಾಗಿ ಸಿಗುವುದಿಲ್ಲ. ರೈತರ ಬದುಕು ಸುಧಾರಿಸಬೇಕು ಎಂದು ಕೃಷಿ ಜತೆಗೆ ಕೃಷಿಯ ಇತರೆ ಚಟುವಟಿಕೆಗಳನ್ನು ಮಾಡಬೇಕಾಗಿದೆ.
ರಾಜ್ಯದಲ್ಲಿ 28 ಲಕ್ಷ ರೈತ ಕುಟುಂಬಗಳು ಕ್ಷೀರ ಕ್ಷೇತ್ರವನ್ನು ಅವಲಂಬಿಸಿವೆ. ಅವರಿಗೆ ಇದರಿಂದ ಹೆಚಿನ ಆದಾಯ ಸಿಗದಿದ್ದರೂ ಪ್ರತಿ ಹದಿನೈದು ದಿನಕ್ಕೆ ಅವರಿಗೆ ಕುಟುಂಬ ನಿರ್ವಹಣೆಗೆ ಬೇಕಾದಷ್ಟು ಹಣ ಸಂಪಾದನೆ ಮಾಡುತ್ತಿದ್ದಾರೆ. ಒಟ್ಟಾರೆಯಾಗಿ 2.50 ಲಕ್ಷ ಮಂದಿ ಈ ಕ್ಷೇತ್ರದಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಪ್ರಾಥಮಿಕ ಹಾಲು ಸಹಕಾರ ಸಂಘಗಳ ಮೂಲಕ ಸುಮಾರು 50 ಸಾವಿರ ಜನ ಉದ್ಯೋಗ ನಂಬಿಕೊಂಡು ಬದುಕುತ್ತಿದ್ದಾರೆ.
ಕರ್ನಾಟಕದ ಮೇಲೆ ಕೆಲವರು ಕಣ್ಣು ಹಾಕಿದ್ದು, ಚುನಾವಣೆ ಸಮಯದಲ್ಲಿ ಕರ್ನಾಟಕದೊಳಗೆ ನುಸುಳಲು ಬಿಲ ಹುಡುಕುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಅಮೂಲ್ ಎಂಬ ಸಹಕಾರಿ ಸಂಸ್ಥೆ ಮೂಲಕ ಮಾಡುತ್ತಿದ್ದಾರೆ. ಅಮೂಲ್ ಸಹಕಾರಿ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿಕೊಂಡು ಬರುತ್ತಿದ್ದು, ಈ ಸಂಸ್ಥೆ ಮೇಲೆ ಮೇಲೆ ಸಾಕಷ್ಟು ಗೌರವವೂ ಇದೆ. ಆದರೆ ಕನ್ನಡಿಗರು, ಕೆಎಂಎಫ್ ಗುಜರಾತಿಗಳು ಹಾಗೂ ಸಹಕಾರ ಕ್ಷೇತ್ರಕ್ಕೆ ಯಾವ ಅನ್ಯಾಯ ಮಾಡಿದೆ ಎಂದು ಈ ರೀತಿ ಷಡ್ಯಂತ್ರ ರೂಪಿಸುತ್ತಿದ್ದಾರೆ ತಿಳಿಯುತ್ತಿಲ್ಲ.
ಸಹಕಾರ ಎಂದರೆ ಒಬ್ಬರಿಗೊಬ್ಬರು ಕೈಜೋಡಿಸಿ ಬೆಂಬಲ ನೀಡುವುದು, ಬಾಂದವ್ಯ ಸೃಷ್ಟಿಸುವುದು. ಒಂದು ರಾಜ್ಯದ ಸಹಕಾರಿ ಸಂಸ್ಥೆಗಳು ಖಾಸಗಿ ಸಂಸ್ಥೆಗಳ ಜತೆ ಪೈಪೋಟಿ ನಡೆಸುವುದರ ಜತೆಗೆ ಬೇರೊಂದು ರಾಜ್ಯದ ಸಹಕಾರಿ ಸಂಸ್ಥೆ ಜತೆಗೆ ಸ್ಪರ್ಧೆ ಮಾಡಬೇಕಾ? ಬೇರೆ ರಾಜ್ಯದ ಸಹಕಾರ ಸಂಸ್ಥೆ ಕನ್ನಡಿಗರು ಕಟ್ಟಿ ಬೆಳೆಸಿರುವ ಸಂಸ್ಥೆ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾ? ಎಂಬುದನ್ನು ಪ್ರತಿಯೊಬ್ಬ ಕನ್ನಡಿಗರೂ ಆಲೋಚನೆ ಮಾಡಬೇಕಾದ ವಿಚಾರ.
ಮೋದಿ ಅವರು ಬಂದ ನಂತರ ಸಾರ್ವಜನಿಕ ವಲಯಗಳ ಉದ್ದಿಮೆಗಳನ್ನು ಖಾಸಗಿಯವರಿಗೆ ಮಾರಿ ಆಗಿದೆ. ನಂತರ ಕರ್ನಾಟಕದ ಬ್ಯಾಂಕುಗಳಾದ ಸಿಂಡಿಕೇಟ್, ಕೆನರಾ, ವಿಜಯಾ ಹಾಗೂ ಕಾರ್ಪೋರೇಷನ್ ಬ್ಯಾಂಕುಗಳನ್ನು ವಿಲೀನದ ಹೆಸರಲ್ಲಿ ನಾಶ ಮಾಡಲಾಗಿದೆ. ಕೆನರಾ ಎಂಬ ಹೆಸರನ್ನು ನಮ್ಮ ಕರಾವಳಿ ಭಾಗದ ಜನ ಬಹಳ ಹೆಮ್ಮೆಯಿಂದ ಬಳಸುತ್ತಾರೆ. ಇಂತಹ ಹೆಸರಿನ ಬ್ಯಾಂಕ್ ಅನ್ನು ಬಿಜೆಪಿ ಸಂಸದರು ಹೇಗೆ ಬಿಟ್ಟುಕೊಟ್ಟರು ಎಂಬುದು ಅರ್ಥವಾಗುತ್ತಿಲ್ಲ.
ಈಗ ಇವರು ನಮ್ಮ ನಂದಿನಿ ಸಂಸ್ಥೆ ಮೇಲೆ ಕಣ್ಣಿಟ್ಟಿದ್ದು, ಇದನ್ನು ನುಂಗಲು ಕಾಯುತ್ತಿದ್ದಾರೆ. ನಂದಿನಿ ಉತ್ಪನ್ನ ತನ್ನ ಗುಣಮಟ್ಟದಿಂದ ದೇಶ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಗಮನ ಸೆಳೆದಿದೆ. ಹಾಲು ಉತ್ಪಾದನೆಯಲ್ಲಿ ನಾವು ನಂದಿನಿ ಮೂಲಕ ಸ್ವಾವಲಂಬನೆ ಸಾಧಿಸಿದ್ದೇವೆ. ಈ ಮಧ್ಯೆ ಅಮೂಲ್ ಅನ್ನು ರಾಜ್ಯದಲ್ಲಿ ಬಿಟ್ಟು ಏನನ್ನು ಸಾಧಿಸಲು ಮುಂದಾಗಿದ್ದಾರೆ? ಬಿಜೆಪಿ ಕೇಂದ್ರ ನಾಯಕರು ರಾಜ್ಯದಲ್ಲಿ ನೆರೆ ಬಂದಾಗ ಬರಲಿಲ್ಲ, ಬರ ಬಂದಾಗ ಬರಲಿಲ್ಲ, ಕೋವಿಡ್ ಸಂದರ್ಭದಲ್ಲಿ ಬರಲಿಲ್ಲ. ಈಗ ಚುನಾವಣೆ ನಡೆಯುವ ಸಂದರ್ಭದಲ್ಲಿ ಬಂದು ನಮ್ಮ ಒಕ್ಕೂಟ ವ್ಯವಸ್ಥೆ ನಾಶ ಮಾಡಲು ಪ್ರಯತ್ನಿಸುತ್ತಿದ್ದೀರಿ.
ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಸಹಕಾರ ಇಲಾಖೆ ಆರಂಭಿಸಿ, ಕೆಎಂಎಫ್ ನಲ್ಲಿ ಯಾವ ಲೋಪ ಕಂಡು ಕೇಂದ್ರ ಸರ್ಕಾರ ನಂದಿನಿ ಮೇಲೆ ದಬ್ಬಾಳಿಕೆ ನಡೆಸುತ್ತಿದೆ? ನಂದಿನಿ ಸಂಸ್ಥೆ ಮೂಲಕ 160 ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡಲಾಗುತ್ತಿದೆ. ಈ ಸರ್ಕಾರ ರಾಜ್ಯದಲ್ಲಿ ಕೃತಕವಾಗಿ ಹಾಲಿನ ಕೊರತೆ ಸೃಷ್ಟಿಸುತ್ತಿರುವುದೇಕೆ? ನಮ್ಮಲ್ಲಿ ಹಾಲಿಗೆ ಯಾವುದೇ ಅಭಾವವಿಲ್ಲ. ಈ ರಾಜ್ಯದಲ್ಲಿ ಎಂದಿಗೂ ಹಾಲಿನ ಕೊರತೆ ಇರಲಿಲ್ಲ. ಕೇಂದ್ರ ಸಹಕಾರಿ ಸಚಿವರು ಯಾವತ್ತೂ ನಮ್ಮ ಹಾಲು ಸಹಕಾರ ಸಂಸ್ಥೆ ಮೇಲೆ ಕಣ್ಣು ಇಟ್ಟರೋ ಅಂದಿನಿಂದ ರಾಜ್ಯದಲ್ಲಿ ಹಾಲಿನ ಅಭಾವ ಸೃಷ್ಟಿಯಾಗಿದೆ. ಅಂದಿನಿಂದ ನಿಂದಿನಿ ವಿಚಾರದಲ್ಲಿ ಮಲತಾಯಿ ಧೋರಣೆ ಅನುಸರಿಸಿ, ನಂದಿನಿಯನ್ನು ಮುಳುಗಿಸುವ ಪ್ರಯತ್ನ ನಡೆಯುತ್ತಿದೆ.
ಗ್ರಾಹಕರು ಹಾಗೂ ರೈತರ ದೃಷ್ಟಿಯಿಂದ ಹಾಲಿನ ದರವನ್ನು 37 ರೂ. ನಿಗದಿ ಮಾಡಲಾಗಿದೆ. ಬೇರೆ ರಾಜ್ಯಗಳಲ್ಲಿ ಅದೇ ಹಾಲನ್ನು 54-60 ರೂ.ಗೆ ಮಾರಾಟ ಮಾಡುತ್ತಿದ್ದಾರೆ. ಕಳೆದ 45 ವರ್ಷಗಳಲ್ಲಿ ನಮ್ಮ ಹಾಲಿನ ಗುಣಮಟ್ಟದಲ್ಲಿ ಎಂದಾದರೂ ಕೊರತೆ ಎದುರಾಗಿದೆಯಾ? ಬೆಲೆ ಏರಿಕೆಯನ್ನು ತಡೆಯಲಾಗದ ಸರ್ಕಾರ ಇಂತಹ ಪರಿಸ್ಥಿತಿಯಲ್ಲಿ ಬೇರೆಯವರನ್ನು ಕರೆತಂದು ಕ್ಷೀರ ಕ್ಷೇತ್ರವನ್ನು ಖಾಸಗಿಕರಣ ಮಾಡುವ ಹುನ್ನಾರ ಮಾಡುತ್ತಿದ್ದಾರೆ.
ರಾಜ್ಯದ ಮುಖ್ಯಮಂತ್ರಿಗಳು, ರಾಜ್ಯದ ಸಹಕಾರಿ ಸಚಿವರುಗಳ ಬಳಿ ಹಾಲಿಗೆ ಪ್ರೋತ್ಸಾಹ ಧನವಾಗಿ 5 ರೂ. ಹೆಚ್ಚಾಗಿ ನೀಡುವಂತೆ ಕೇಳಿದರು. ಆದರೆ ಸರ್ಕಾರ ಅನುಮತಿ ನೀಡಲಿಲ್ಲ. ಆದರೆ ಕೇಂದ್ರ ನಾಯಕರ ಓಲೈಸಲು ಈ ಸರ್ಕಾರ, ನಮ್ಮ ಸಂಸ್ಥೆ ಮುಳುಗಿಸಿ ಬೇರೆಯವರು ರಾಜ್ಯದ ಮಾರುಕಟ್ಟೆ ಪ್ರವೇಶಿಸಲು ಅನುಮತಿ ನೀಡಲಾಗಿದೆ. ಆಮೂಲಕ ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತಂದು ರೈತರನ್ನು ಬಲಿ ಕೊಡುವ ಪ್ರಯತ್ನ ಮಾಡುತ್ತಿದ್ದಾರೆ.
ಬಿಜೆಪಿಯವರು ವ್ಯಾಪಾರಸ್ಥರು ಎಂಬುದು ಗೊತ್ತಿದೆ. ಅವರು ವ್ಯಾಪಾರ ಮಾಡದೇ ಇರುವ ವಿಚಾರವೇ ಇಲ್ಲ. ರಾಜಕಾರಣವನ್ನು ವ್ಯಾಪಾರ ಮಾಡಿಕೊಂಡೆ ಅಧಿಕಾರ ಮಾಡುತ್ತಿದ್ದಾರೆ. ಇಡೀ ವ್ಯವಸ್ಥೆ ವ್ಯಾಪಾರಿಕರಣ ಮಾಡಿ, ತೆರಿಗೆ ಮೇಲೆ ತೆರಿಗೆ ಹಾಕಲಾಗಿದೆ. ರೈತರಿಗೆ ಸ್ವಾವಲಂಬನೆಯ ಬದುಕು ನೀಡಲಾಗದೆ, ಎಲ್ಲವನ್ನು ತಮ್ಮ ಹಿಡಿತಕ್ಕೆ ತೆಗೆದುಕಳ್ಳುವ ಪ್ರಯತ್ನ ಮಾಡುತ್ತಿರುವುದು ಸರಿಯೇ? ಕನ್ನಡಿಗರು ಯಾವ ಅನ್ಯಾಯ ಮಾಡಿದ್ದಾರೆ ಎಂದು ಈ ರೀತಿ ಮಾಡುತ್ತಿದ್ದಾರೆ?
ಜಿಎಸ್ ಟಿ ಮೂಲಕ ತಮ್ಮ ಖಜಾನೆ ತುಂಬಿಸಿಕೊಳ್ಳಲು ಕರ್ನಾಟಕ ಬೇಕು, ಆದರೆ ಈ ರಾಜ್ಯದ ಹಿತಾಸಕ್ತಿ ಮಾತ್ರ ಕಾಪಾಡಲು ಆಸಕ್ತಿ ಇಲ್ಲ. ಈ ರಾಜ್ಯವನ್ನು ಕೇವಲ 40% ಕಮಿಷನ್ ಪಡೆಯಲು ಮಾತ್ರ ಸೀಮಿತಗೊಳಿಸಿದ್ದೀರಿ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಹಾಲು ಉತ್ಪಾದನೆ ಕಡಿಮೆಯಾಗಿ, ರೈತರು ಆತ್ಮಹತ್ಯೆಗೆ ಮುಂದಾದರೆ ಅದಕ್ಕೆ ಬಿಜೆಪಿ ಸರ್ಕಾರವೇ ನೇರ ಹೊಣೆ. ಬಿಜೆಪಿ ಗೊಂದಲ ಸೃಷ್ಟಿಸಿ ಖಾಸಗೀಕರಣ ಮಾಡಲು ಮುಂದಾಗಿದೆ. ಬಿಜೆಪಿಯವರು ವಿಮಾನ ನಿಲ್ದಾಣ, ರೈಲ್ವೇ, ಬಂದರು, ವಿಮಾ ಕಂಪನಿ ಎಲ್ಲವನ್ನು ವ್ಯಾಪಾರಕ್ಕೆ ಇಟ್ಟಿದ್ದಾರೆ. ದಯಮಾಡಿ ಕನ್ನಡಿಗರ ನಂದಿನಿ ಸಂಸ್ಥೆಯನ್ನು ಮಾರಾಟಕ್ಕೆ ಇಡಬೇಡಿ. ರೈತರು ಈ ಸಂದರ್ಭದಲ್ಲಿ ಎಚ್ಛೆತ್ತುಕೊಳ್ಳದಿದ್ದರೆ ಕರ್ನಾಟಕವನ್ನು ಇವರು ಒಂದಲ್ಲಾ ಒಂದು ದಿನ ತಮಗೆ ಬೇಕಾದವರಿಗೆ ಮಾರಾಟ ಮಾಡುತ್ತಾರೆ.
ಈ ಸರ್ಕಾರಕ್ಕೆ ಕನ್ನಡಿಗರ ಬಗ್ಗೆ ಗೌರವ ಇದ್ದರೆ, ಸಿಆರ್ ಪಿಎಫ್ ನಲ್ಲಿ 1.50 ಲಕ್ಷ ನೇಮಕಾತಿಗೆ ಹೊರಡಿಸಿರುವ ಅಧಿಸೂಚನೆಯಲ್ಲಿ ಪ್ರಾದೇಶಿಕ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಿ. ಅದನ್ನು ಬಿಟ್ಟು ಮತ ಹಾಕಿಸಿಕೊಂಡು ದಾರಿತಪ್ಪಿಸಬೇಡಿ.
ನೀವು ನರೇಂದ್ರ ಮೋದಿ ಅವರನ್ನು ಬ್ರಾಂಡ್ ಅಅಂಬಾಸಿಡರ್ ಆಗಿ ತೋರಿಸುವುದೇ ಆದರೆ, ಈ ರಾಜ್ಯದಲ್ಲಿನ ಭ್ರಷ್ಟಾಚಾರಕ್ಕೂ ನರೇಂದ್ರ ಮೋದಿ ಅವರೇ ಕಾರಣ ಎಂಬುದನ್ನು ಸ್ಪಷ್ಟಪಡಿಸಿ.
ಎಐಸಿಸಿ ವಕ್ತಾರರಾದ ಗೌರವ್ ವಲ್ಲಭ್:
ರಾಜ್ಯ ಹಾಗೂ ಕೇಂದ್ರ ಬಿಜೆಪಿ ಸರ್ಕಾರ ಎಲ್ಲಾ ರಾಜ್ಯಗಳ ಪ್ರತಿಷ್ಠಿತ ಸಂಸ್ಥೆಗಳನ್ನು ಕಬಳಿಸುವ ಪ್ರಯತ್ನ ಮಾಡುತ್ತಿದೆ. ಎಲ್ಲವನ್ನೂ ಪೂರ್ವಯೋಜಿತವಾಗಿ ಮಾಡುತ್ತಿದೆ. ಇವರ ಮುಂದಿನ ಗುರಿ ನಂದಿನಿ ಸಂಸ್ಥೆಯಾಗಿದೆ.
ಸಿಆರ್ ಪಿಎಫ್ ದೇಶದಲ್ಲಿ 1.30 ಲಕ್ಷಕ್ಕೂ ಹೆಚ್ಚು ಕಾನ್ಸ್ಟೇಬಲ್ ಗಳ ನೇಮಕಕ್ಕೆ ಅಧಿಸೂಚನೆ ಹೊರಡಿಸಿದೆ. ಇದರ ಪ್ರಕಾರ ರಾಜ್ಯದಲ್ಲಿ 466 ಕಾನ್ಸ್ಟೇಬಲ್ ನೇಮಕ ಮಾಡಬೇಕಿದೆ. ಈ ಹುದ್ದೆ ಪಡೆಯಬೇಕಾದರೆ ಅಭ್ಯರ್ಥಿಗಳು ಹಿಂದಿ ಅಥವಾ ಇಂಗ್ಲೀಷ್ ನಲ್ಲಿ ಮಾತ್ರ ಪರೀಕ್ಷೆ ಬರೆಯಬೇಕು. ಅಮಿತ್ ಶಾ ಅವರೇ ಪ್ರಾದೇಶಿಕ ಭಾಷೆಗೆ ಆದ್ಯತೆ ನೀಡುತ್ತಿಲ್ಲ ಯಾಕೆ? ವಿವಿಧತೆಯಲ್ಲಿ ಏಕತೆ ಎಂಬ ಭಾರತದ ಮೂಲತತ್ವಕ್ಕೆ ಧಕ್ಕೆ ತರುತ್ತಿರುವುದೇಕೆ? ಕನ್ನಡ ಭಾಷೆ ಹಾಗೂ ಕನ್ನಡಿಗರಿಗೆ ಅನ್ಯಾಯ ಮಾಡುತ್ತಿರುವುದೇಕೆ?
ಈ ಅಧಿಸೂಚನೆ ಪರಿಶೀಲಿಸಿದರೆ, ಇದರಲ್ಲಿ 125 ಅಂಕಗಳಿಗೆ ಹಿಂದಿ ಅಥವಾ ಇಂಗ್ಲೀಷ್ ನಲ್ಲಿ ಮಾತ್ರ ಉತ್ತರಿಸಬೇಕು. ಉಳಿದ ಕಂಪ್ಯೂಟರ್ ಪರೀಕ್ಷೆಗಳು ಕೂಡ ಈ ಎರಡು ಭಾಷೆಯಲ್ಲಿ ಮಾತ್ರ ಬರೆಯಬೇಕು.
ಮುಂದಿನ ಒಂದು ತಿಂಗಳಲ್ಲಿ ರಾಜ್ಯದಲ್ಲಿ ಚುನಾವಣೆ ನಡೆಯುತ್ತಿದ್ದು, ಬಿಜೆಪಿ ಸರ್ಕಾರ ನಂದಿನಿ ಸಂಸ್ಥೆ ಗುರಿಯಾಗಿಸುವುದಾಗಲಿ, ಅಥವಾ ಕೇಂದ್ರದ ಪರೀಕ್ಷೆಯಲ್ಲಿ ಕನ್ನಡಕ್ಕೆ ಅನ್ಯಾಯ ಮಾಡಿದರೆ ರಾಜ್ಯದ ಮತದಾರ ತಕ್ಕ ಪಾಠ ಕಲಿಸಲಿದ್ದಾರೆ. ಇಷ್ಟೆಲ್ಲಾ ಅನ್ಯಾಯವಾಗುತ್ತಿದ್ದರೂ ಕರ್ನಾಟಕದಿಂದ ಆಯ್ಕೆಯಾಗಿರುವ 25 ಸಂಸದರು ನಂದಿನಿ ಸಂಸ್ಥೆ ವಿರುದ್ಧದ ಪಿತೂರಿಗೆ ಸಹಕಾರ ನೀಡುತ್ತಿದ್ದಾರೆ. ಅವರ ಉದ್ದೇಶವಾದರೂ ಏನು? ಈ ಅನ್ಯಾಯದ ಬಗ್ಗೆ ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಪ್ರಶ್ನಿಸುವ ಧೈರ್ಯ ಯಾವ ಬಿಜೆಪಿ ಸಂಸದರಿಗೂ ಇಲ್ಲವಾಗಿದೆ.
ಬಮೂಲ್ ಅಧ್ಯಕ್ಷ ನರಸಿಂಹಮೂರ್ತಿ:
ಏಮೂಲ್ ಹಾಗೂ ಕೆಎಂಎಫ್ ಎರಡೂ ಕೂಡ ಸಹಕಾರಿ ಸಂಸ್ಥೆಗಳು. ಇವೆರಡನ್ನು ಒಡೆದಾಡಲು ಬಿಜೆಪಿ ಸರ್ಕಾರ ಬಿಡುತ್ತದೆ. ಮಾರುಕಟ್ಟೆಯಲ್ಲಿ ಇವರಿಬ್ಬರೂ ಸಂಘರ್ಷ ಮಾಡಲು ಬಿಡುತ್ತಿದ್ದಾರೆ. ಈ ಹಿಂದೆ ಬಿಜೆಪಿ ಸರ್ಕಾರ ನಂದಿನಿ ಚಿಹ್ನೆಯನ್ನೇ ತೆಗೆಯಲು ಮುಂದಾಗಿತ್ತು. ಆಗ ನಾವು ಹೋರಾಟ ಮಾಡಿ ನಮ್ಮ ಚಿಹ್ನೆ ಉಳಿಸಿಕೊಂಡಿದ್ದೆವು. ಈಗ ಈ ಸರ್ಕಾರ ಬಂದ ನಂತರ ಹೈನುಗಾರಿಕೆಗೆ ಕಿಂಚಿತ್ತೂ ಸಹಕಾರ ನೀಡಲಿಲ್ಲ. ಸಿದ್ದರಾಮಯ್ಯ ಅವರ ಸರ್ಕಾರ ಇದ್ದಾಗ ಶಾಲಾ ಮಕ್ಕಳಿಗೆ ಹಾಲು ನೀಡಿದರು, ರೈತರಿಗೆ ಪ್ರೋತ್ಸಾಹ ಧನ ನೀಡಿದರು. ಪ್ರತಿ ವರ್ಷ ರೈತರಿಗೆ ಬೆಲೆ ಹೆಚ್ಚಿಸಿದರು. ಅವರ ಕಾಲದಲ್ಲಿ ಪ್ರತಿ ವರ್ಷ ಶೇ.0ರಷ್ಟು ಹಾಲು ಉತ್ಪಾದನೆ ಹೆಚ್ಚಿತ್ತು. ಈ ಸರ್ಕಾರ ಹೈನೋದ್ಯಮಕ್ಕೆ ಸಹಕಾರ ನೀಡದ ಪರಿಣಾಮ ಹಾಲು ಉತ್ಪಾದನೆ ಕುಸಿಯುತ್ತಿದೆ.
ಈಗ ರಾಜ್ಯದಲ್ಲಿ ಅಮೂಲ್ ಉತ್ಪನ್ನ ತಂದು ನಂದಿನಿ ಸಂಸ್ಥೆಯನ್ನು ತುಳಿಯುವ ಪ್ರಯತ್ನ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ನಾವೆಲ್ಲರೂ ಹೋರಾಟ ಮಾಡಬೇಕಿದೆ.
ಪ್ರಶ್ನೋತ್ತರ:
ಚುನಾವಣೆ ಕಾರಣಕ್ಕೆ ಈ ವಿಚಾರವನ್ನು ರಾಜಕೀಯಗೊಳಿಸಲಾಗುತ್ತಿದೆ ಎಂಬ ಬಿಜೆಪಿ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸುರೇಶ್ ಅವರು, ‘ನಾವು ರಾಜಕೀಯವಾಗಿ ಮಾತನಾಡುತ್ತಿಲ್ಲ. ಇದರಲ್ಲಿ ರಾಜಕಾರಣ ಮಾಡುತ್ತಿರುವವರು ಬಿಜೆಪಿ. ಅಮಿತ್ ಶಾ ಅವರು ಮಂಡ್ಯಕ್ಕೆ ಬಂದು ನಂದಿನಿ ಹಾಗೂ ಅಮೂಲ್ ವಿಲೀನದ ಬಗ್ಗೆ ಮಾತನಾಡಿದ್ದಾರೆ. ದೇಶದಲ್ಲಿ ಅಮೂಲ್ 8 ರಾಜ್ಯಗಳಲ್ಲಿ 2.60 ಲಕ್ಷ ಲೀಟರ್ ಹಾಲು ಉತ್ಪಾದನೆ ಮಾಡುತ್ತಿದೆ. ಕರ್ನಾಟಕ ರಾಜ್ಯವೊಂದರಲ್ಲೇ ನಂದಿನಿ ಸಂಸ್ಥೆ 95 ಲಕ್ಷ ಲೀ. ಹಾಲು ಉತ್ಪಾದನೆ ಮಾಡುತ್ತಿದೆ. ಅಲ್ಲದೆ ನಂದಿನಿ 160 ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಮಾರುತ್ತಿದೆ. ನಮಗೆ ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರದಿಂದ ಸಹಕಾರ ಸಿಗಬೇಕೇ ವಿನಃ ಬೇರೊಂದು ಸಂಸ್ಥೆಯನ್ನು ನಮ್ಮ ಮೇಲೆ ಹಾಕಲು ಮುಂದಾಗಿದೆ. ಈ ಮೂಲಕ ಈ ವಿಚಾರದಲ್ಲಿ ರಾಜಕಾರಣ ಮಾಡುತ್ತಿರುವವರು ಯಾರು ಎಂದು ನೀವೇ ನಿರ್ಧರಿಸಿ’ ಎಂದು ತಿಳಿಸಿದರು.
ತಮಿಳುನಾಡು, ಆಂಧ್ರಪ್ರದೇಶದಲ್ಲಿ ಅಮೂಲ್ ಮಾರಾಟಕ್ಕೆ ಅವಕಾಶ ಇರುವಾಗ ಕಾಂಗ್ರೆಸ್ ಯಾಕೆ ಪ್ರಶ್ನಿಸುತ್ತಿಲ್ಲ ಎಂದು ಕೇಳಿದಾಗ, ‘ತಮಿಳುನಾಡಿನ ಯಾವುದೇ ಸಹಕಾರಿ ಸಂಸ್ಥೆಗಳು ಇಲ್ಲಿ ಬಂದು ಸ್ಪರ್ಧೆ ಮಾಡುತ್ತಿಲ್ಲ. ಖಾಸಗಿಯ 8 ಸಂಸ್ಥೆಗಳು ಮಾರಾಟ ಮಾಡುತ್ತಿವೆ. ಇಂತಹ ಸಂದರ್ಭದಲ್ಲಿ ನಾವು ಖಾಸಗಿಯವರ ಜತೆ ಪೈಪೋಟಿ ಮಾಡಬೇಕಿದೆ. ಆದರೂ ನಮ್ಮ ಸಂಸ್ಥೆ ಆರೋಗ್ಯಕರವಾಗಿ, ಆರ್ಥಿಕವಾಗಿ ಸಧೃಡವಾಗಿದೆ. ನಮ್ಮ ಸಂಸ್ಥೆ ರೈತರಿಗೆ 30-33 ರೂ ನೀಡಿ ಗ್ರಾಹಕರಿಗೆ 37-40 ರೂ.ಗೆ ಮಾರಿ ಲಾಭ ಮಾಡುತ್ತಿವೆ. ಬೇರೆ ಕಂಪನಿಗಳು 50-60 ರೂ.ಗೆ ಮಾರುತ್ತಿದೆ. ಇಂತಹ ಬೆಲೆ ಏರಿಕೆಯನ್ನು ನಮ್ಮ ಸಂಸ್ಥೆ ಕಡಿಮೆ ಮಾಡಿ ಗ್ರಾಹಕರ ಹಿತವನ್ನು ಕಾಯುತ್ತಿದೆ. ಹಾಲು ಒಕ್ಕೂಟಗಳಲ್ಲಿ ಎಲ್ಲ ಪಕ್ಷದವರು ಆಡಳಿತ ಮಾಡುತ್ತಿದ್ದಾರೆ. ಇವರ ದಬ್ಬಾಳಿಕೆಯನ್ನು ಪ್ರಶ್ನೆ ಮಾಡದಿದ್ದರೆ ತಪ್ಪಾಗುತ್ತದೆ’ ಎಂದರು.
ಹಾಲು ಉತ್ಪಾದನೆ ಕಡಿಮೆ ಮಾಡಿ ಅಮೂಲ್ ಉತ್ಪನ್ನಕ್ಕೆ ಅವಕಾಶ ಕಲ್ಪಿಸಿದರೆ ಅದು ಕೆಎಂಎಫ್ ನಿಂದಲೂ ತಪ್ಪಾಗುತ್ತದೆ ಎಂದು ಕೇಳಿದಾಗ, ‘ಇದೇ ವಿಚಾರಕ್ಕಾಗಿಯೇ ಕೇಂದ್ರ ಬಿಜೆಪಿ ನಾಯಕರ ಆದೇಶಕ್ಕೆ ತಲೆಬಾಗಿ ಕೆಲವು ಆಡಳಿತ ಮುಖ್ಯಸ್ಥರು ತೀರ್ಮಾನ ಮಾಡುತ್ತಿದ್ದಾರೆ. ಅವರು ಸರ್ಕಾರ ಹಾಗೂ ಪಕ್ಷದ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ’ ಎಂದು ತಿಳಿಸಿದರು.
ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ನಂಬರ್ 1 ಮಾಡುವ ಗುರಿ ಇದೆ ಎಂಬ ಬಿಜೆಪಿ ಸಮರ್ಥನೆ ಬಗ್ಗೆ ಕೇಳಿದಾಗ, ‘ಬಿಜಪಿಯವರು ಅಮೂಲ್ ಅನ್ನು ನಂಬರ್ 1 ಮಾಡಲು ಬಯಸುತ್ತಿದ್ದಾರೆ. ನಾವು ನಂದಿನಿಯನ್ನು ನಂಬರ್ 1 ಮಾಡುವ ಗುರಿ ಹೊಂದಿದ್ದೇವೆ. ಬ್ಯಾಂಕುಗಳ ವಿಚಾರದಲ್ಲಿ ನಮ್ಮ ಬ್ಯಾಂಕುಗಳನ್ನು ಈಗ ವಿಜಯಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಕೆನರಾ ಬ್ಯಾಂಕ್ ಹಾಗೂ ಕಾರ್ಪೋರೇಷನ್ ಬ್ಯಾಂಕ್ ಎಂದು ಕರೆಯಲು ಸಾಧ್ಯವಿಲ್ಲ. ಈ ಬ್ಯಾಂಕುಗಳು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಅನ್ನು ವಿಲೀನ ಮಾಡಿದ್ದಾರೆ. ವಿಶ್ವೇಶ್ವರಯ್ಯ ಹಾಗೂ ಮಹಾರಾಜರು ಸ್ಥಾಪಿಸಿದ್ದ ಎಸ್ ಬಿಎಂ ಅವರಿಗೆ ಯಾವ ತೊಂದರೆ ಮಾಡಿತ್ತು ಎಂದು ವಿಲೀನ ಮಾಡಿದರು? ಅವುಗಳಲ್ಲವನ್ನು ಮುಳುಗಿಸಿ, ಈಗ ನಂದಿನಿಯನ್ನು ಮುಳುಗಿಸಲು ಚುನಾವಣೆ ಸಮಯದಲ್ಲಿ ಬಿಲ ತೋಡುತ್ತಿದ್ದಾರೆ. ನಂದಿನಿ ಬ್ರ್ಯಾಂಡ್ ಮೋದಿಯ ಬ್ರ್ಯಾಂಡ್ ಅಲ್ಲ, ಇದು ಕನ್ನಡಿಗರ ಬ್ರ್ಯಾಂಡ್. ಇದನ್ನು ಎಲ್ಲರೂ ಸೇರಿ ಉಳಿಸಬೇಕು’ ಎಂದು ತಿಳಿಸಿದರು.
ಈ ವಿಚಾರದಲ್ಲಿ ಕಾಂಗ್ರೆಸ್ ಯಾವ ರೀತಿಯ ಹೋರಾಟ ಮಾಡುತ್ತೀರಾ ಎಂದು ಕೇಳಿದಾಗ, ‘ಕಾಂಗ್ರೆಸ್ ಪಕ್ಷ ಈ ವಿಚಾರದಲ್ಲಿ ಹೋರಾಟ ಮಾಡಲಿದೆ. ನಾನು ಈ ವಿಚಾರದಲ್ಲಿ ಹೋರಾಟ ಮಾಡಿದರೆ ಅದು ರಾಜಕೀಯವಾಗುತ್ತದೆ, ನೀವು ಹೋರಾಟ ಮಾಡಿದರೆ ಅದು ವ್ಯವಸ್ಥೆಯ ಭಾಗವಾಗುತ್ತದೆ. ಹೀಗಾಗಿ ಕನ್ನಡಿಗರ ಪರವಾಗಿ ಈ ವಿಚಾರದಲ್ಲಿ ಕರ್ನಾಟಕದ ರೈತರು, ಸ್ವಾಭಿಮಾನದ ಪ್ರತೀಕವನ್ನು ಉಳಿಸಿ. ಅಂದಿನ ಕಾಲದಲ್ಲಿ ಡಾ.ರಾಜಕುಮಾರ್ ಅವರು ನಂದಿನಿಗೆ ರಾಯಭಾರಿಯಾಗಿದ್ದರು. ನಂತರ ಪುನೀತ್ ರಾಜಕುಮಾರ್ ಅವರು ಒಂದು ರೂ. ಹಣ ಪಡೆಯದೇ ರೈತರಿಗೆ ಅನುಕೂಲವಾಗಲಿ ಎಂದು ರಾಯಭಾರಿಯಾಗಿದ್ದರು. ಅಮೂಲ್ ಮೂಲಕ ಅವರು ಏನೇ ಲಾಭ ಮಾಡಿದರೂ ಅದನ್ನು ಗುಜರಾತಿಗೆ ತೆಗೆದುಕೊಂಡು ಹೋಗುತ್ತಾರೆ ಹೊರತು ಕರ್ನಾಟಕ ರಾಜ್ಯಕ್ಕೆ ನೀಡುವುದಿಲ್ಲ. ಈ ಕಾರಣಕ್ಕೆ ನಾವು ಈ ವಿಚಾರದಲ್ಲಿ ಧ್ವನಿ ಎತ್ತುತ್ತಿದ್ದಾರೆ’ ಎಂದು ತಿಳಿಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw