ಬಿಜೆಪಿಯಲ್ಲಿ ವಯಸ್ಸಿನ ಮಾನದಂಡ ಯಡಿಯೂರಪ್ಪಗೆ ಸೀಮೀತವಾದಂತಿದೆ ! - Mahanayaka
8:58 AM Thursday 12 - December 2024

ಬಿಜೆಪಿಯಲ್ಲಿ ವಯಸ್ಸಿನ ಮಾನದಂಡ ಯಡಿಯೂರಪ್ಪಗೆ ಸೀಮೀತವಾದಂತಿದೆ !

yediyurappa
12/04/2023

ಬೆಂಗಳೂರು: ಬಿಜೆಪಿಯಲ್ಲಿ ನಡೆದಿರುವ ಟಿಕೆಟ್ ಹಂಚಿಕೆಯಲ್ಲಿ ನಡೆದ ವಿದ್ಯಮಾನಗಳು ಇದನ್ನು ಪುಷ್ಠೀಕರಿಸುವಂತಿದೆ. ಈ ಬಾರಿ ವಿಧಾನಸಭೆಗೆ ಹುರಿಯಾಳುಗಳನ್ನು ಕಣಕ್ಕಿಳಿಸುವಾಗ ವಯಸ್ಸೂ ಸಹ ಮಾನದಂಡವಾಗುತ್ತದೆ ಎಂದು ಘೋಷಿಸಿತ್ತು. ಪಕ್ಷದ ನಾಯಕರು, ಕಾರ್ಯಕರ್ತರು ಹಾಗೂ ಜನತೆ ಇದನ್ನು ಬಲವಾಗಿ ನಂಬಿದ್ದರು. ಬಿಜೆಪಿ ನುಡಿದಂತೆ ನಡೆಯುವ ಪಕ್ಷ ಎಂದು ಅವರ ನಾಯಕರು ಅವಕಾಶ ಸಿಕ್ಕಾಗಲೆಲ್ಲಾ ಹೇಳುತ್ತಿದ್ದರು.

ಆದರೆ ನಿನ್ನೆ ಬಿಡುಗಡೆ ಮಾಡಿದ ಅಭ್ಯರ್ಥಿಗಳ ಪಟ್ಟಿ ಅವಲೋಕಿಸಿದಾಗ, ವಯಸ್ಸಿನ ಮಾನದಂಡ ರಾಜಾಹುಲಿ ಯಡಿಯೂರಪ್ಪನವರನ್ನು ಪದಚ್ಯುತಿಗಾಗಿ ಮಾಡಿದ ತಂತ್ರ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ.

ಎಪ್ಪತ್ತು ದಾಟಿದವರಿಗೆ ಸ್ಪರ್ದಿಸಲು ಅವಕಾಶವಿಲ್ಲ, ಹೊಸ ಮುಖಗಳಿಗೆ ಮಣೆ, ಎಂಬೆಲ್ಲಾ ಘೋಷ ವಾಕ್ಯಗಳನ್ನು ಪುಂಖಾನುಪುಂಖ ಸಾರಿದ ಕಮಲ ಕಲಿಗಳು, ತಮ್ಮ ಘೋಷಣೆಗೆ ಎಳ್ಳುನೀರು ಬಿಟ್ಟು, ಹಳೆ ಗಂಡನ ಪಾದವೇ ಗತಿ ಎಂಬ ನಾಣ್ನುಡಿಗೆ ಶರಣಾದಂತಿದೆ.

ಎಪ್ಪತೈದರ ಜಿ.ಹೆಚ್.ತಿಪ್ಪಾರೆಡ್ಡಿಗೆ ಚಿತ್ರದುರ್ಗದಲ್ಲಿ ಟಿಕೆಟ್ ನೀಡಲಾಗಿದೆ. ಗೋವಿಂದ ಕಾರಜೋಳ, ಮಾಲಿಕಯ್ಯ ಗುತ್ತೇದಾರ್, ಕೆ.ಜಿ.ಬೋಪಯ್ಯ, ವಿ.ಸೋಮಣ್ಣರವರಿಗೆ ಬಾಜಪ ಸ್ಪರ್ಧಿಸಲು ಅನುಮತಿ ನೀಡಿದೆ. ಈ ಕ್ಷೇತ್ರಗಳಲ್ಲಿ ಕಮಲ ಪಾಳೆಯಕ್ಕೆ ಹೊಸಬರು ಲಭ್ಯರಿಲ್ಲವೇ ಅಥವಾ ಬೇರೆಯವರಿಗೆ ಟಿಕೆಟ್ ನೀಡಿದರೆ ಪಕ್ಷಕ್ಕೆ ಹಿನ್ನಡೆಯೇ? ಅದನ್ನು ಪಕ್ಷವೇ ಹೇಳಬೇಕು.

ಎಪ್ಪತ್ತೈದು ದಾಟಿತು ಎಂಬ ಏಕೈಕ ಕಾರಣ ಮುಂದಿಟ್ಟು, ಕಮಲವನ್ನು ದಕ್ಷಿಣ ಭಾರತದಲ್ಲಿ ಅರಳಿಸಿದ ಮೇರು ನಾಯಕ ಯಡಿಯೂರಪ್ಪನವರನ್ನು ಹೀನಾಯವಾಗಿ ಮುಖ್ಯಮಂತ್ರಿ ಸ್ಥಾನದಿಂದ ಪದಚ್ಯುತಿಗೊಳಿಸಿದ ಬಿಜೆಪಿ, ಈಗ ಎಪ್ಪತ್ತು ದಾಟಿದವರಿಗೆ ಟಿಕೆಟ್ ನೀಡಿದೆ. ಹಂಸ ಕ್ಷೀರ ನ್ಯಾಯದಂತೆ, ಎಪ್ಪತ್ತು ದಾಟಿದ ಜಗದೀಶ್ ಶೆಟ್ಟರ್ ಹಾಗೂ ಕೆ ಎಸ್ ಈಶ್ವರಪ್ಪನವರಿಗೆ ಟಿಕೆಟ್ ನಿರಾಕರಿಸಿದೆ. ಈ ಇಬ್ಬರೂ ನಾಯಕರಿಗೆ ರಾಜ್ಯಪಾಲರ ಹುದ್ದೆ ಲಭಿಸುವುದೂ ಅಥವಾ ಯಡಿಯೂರಪ್ಪ ನವರಂತೆ ಮೂಲೆಗೆ ಸರಿಸುವರೂ ನೋಡಬೇಕು.

ಉಮೇಶ್ ಕತ್ತಿಯವರ ಕುಟುಂಬಕ್ಕೆ ಎರಡು ಟಿಕೆಟ್ ನೀಡಿದೆ. ಅದೇ ಸೌಭಾಗ್ಯ  ಕೆ.ಎಸ್.ಈಶ್ವರಪ್ಪ ಹಾಗೂ ವಿ.ಸೋಮಣ್ಣನವರ ಕುಟುಂಬಕ್ಕಿಲ್ಲ.

ಇನ್ನು ಸಿದ್ದರಾಮಯ್ಯ ಸ್ಪರ್ಧಿಸಿರುವ ವರುಣಾ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸ್ಪರ್ಧಿಸುತ್ತಿರುವ ಕನಕಪುರ ಕ್ಷೇತ್ರದಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆದಿದೆಯಾ ಎಂಬ ಗುಮಾನಿ ಇದೆ. ವರಣಾದಲ್ಲಿ ವಿ ಸೋಮಣ್ಣ ಚಾಮರಾಜನಗರದ ಜೊತೆಗೆ ಎರಡೆರಡು ಕಡೆ ಕಣಕ್ಕಿಳಿದಿದ್ದಾರೆ. ಅಂತೆಯೇ ಆರ್.ಅಶೋಕ್, ತಮ್ಮ ಪದ್ಮನಾಭ ನಗರ ಕ್ಷೇತದ ಜೊತೆಗೆ ಕನಕಪುರದಲ್ಲೂ ಸೆಣಸಲಿದ್ದಾರೆ.  ಮೇ 13 ರಂದು ನಿಜ ಏನೆಂದು ತಿಳಿಯುತ್ತದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ