ಅಂಬೇಡ್ಕರ್ ರಂತಹ ನಾಯಕ ಮತ್ತೆ ಹುಟ್ಟಲು ಸಾಧ್ಯವಿಲ್ಲ
ಆಧುನಿಕ ಭಾರತದ ನಿರ್ಮಾತೃ, ಸಂವಿಧಾನ ಶಿಲ್ಪಿ, ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮ ದಿನವನ್ನು ಇಂದು ಇಡೀ ವಿಶ್ವಾದ್ಯಂತ ಆಚರಿಸಲಾಗುತ್ತಿದೆ. ಇಂದಿನಿಂದ ಆರಂಭಗೊಳ್ಳುವ ಅಂಬೇಡ್ಕರ್ ಜಯಂತಿಯು ಇಡೀ ವರ್ಷ ಪ್ರತಿ ದಿನವೂ ದೇಶದಲ್ಲಿ ಆಚರಿಸಲ್ಪಡಲಿದೆ. ವಿಶ್ವದ ನಾಯಕರ ಪೈಕಿ ವರ್ಷವಿಡೀ ಜನ್ಮ ದಿನಾಚರಣೆ ಆಚರಿಸಲ್ಪಡುವ ನಾಯಕ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಮಾತ್ರ.
ಇಂದು ಭಾರತ ಒಂದು ಬಲಿಷ್ಠ ರಾಷ್ಟ್ರವಾಗಿ ಮುಂದುವರಿಯುತ್ತಿದೆ ಎಂದರೆ ಅದಕ್ಕೆ ಅಂಬೇಡ್ಕರ್ ಅವರು ನೀಡಿರುವ ಪ್ರಬಲವಾದ, ಮಾನವೀಯ ಮೌಲ್ಯವುಳ್ಳ ಸಂವಿಧಾನವೇ ಕಾರಣ. ಪ್ರಸ್ತುತ ಸಮಾಜಕ್ಕೆ ಅಂಬೇಡ್ಕರ್ ಅವರು ಉಳಿದ ಎಲ್ಲ ನಾಯಕರಿಗಿಂತಲೂ ಪ್ರಮುಖರಾಗುತ್ತಿದ್ದಾರೆ. ಜೊತೆಗೆ ಯುವ ಸಮುದಾಯ ಇಂದು ಅಂಬೇಡ್ಕರ್ ಅವರ ಚಿಂತನೆಗಳನ್ನು ಒಪ್ಪಿಕೊಂಡು, ವಾಸ್ತವತೆಯ ಆಧಾರದಲ್ಲಿ ಮುಂದುವರಿಯುತ್ತಿದ್ದಾರೆ.
ತಲೆತಲಾಂತರಗಳಿಂದ ಆಚರಿಸಿಕೊಂಡು ಬರುತ್ತಿದ್ದ ಅಸ್ಪೃಷ್ಯತೆ ಎಂಬ ಸಾಮಾಜಿಕ ಪಿಡುಗು ಇಂದಿಗೂ ಹಲವೆಡೆಗಳಲ್ಲಿ ಜೀವಂತವಿದ್ದರೂ ಕೂಡ, ಅದರ ತೀವ್ರತೆ ಹಿಂದಿನಷ್ಟಿಲ್ಲ. ಅದಕ್ಕೆ ಪ್ರಮುಖ ಕಾರಣ ಅಂಬೇಡ್ಕರ್ ಅವರು ರೂಪಿಸಿದ ಸಂವಿಧಾನವಾಗಿದೆ. ಅಂಬೇಡ್ಕರ್ ಅವರ ದಿಟ್ಟತನವನ್ನು ಇಂದಿನ ಯುವಜನತೆ ಅಳವಡಿಸಿಕೊಳ್ಳಬೇಕಿದೆ. ಅಸಮಾನತೆಯನ್ನು ಪ್ರಶ್ನಿಸುವ ಮತ್ತು ಎದುರಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕಿದೆ.
ಅಂಬೇಡ್ಕರ್ ಅವರಂತೆ ಬಲಿಷ್ಠರಾಗೋಣ:
ಇಂದಿಗೂ ತುಳಿತಕ್ಕೊಳಗಾದ ಸಮಾಜಕ್ಕೆ ನ್ಯಾಯ ಕೊಡಲು ಆಳುವ ವರ್ಗ ಮುಂದಾಗಿಲ್ಲ. ಶೋಷಣೆ ಮಾಡುವಂತಹ ಜಾತಿಗಳು ತಮ್ಮ ರಾಜಕೀಯ ಪ್ರಭಾವವನ್ನು ಬಳಸಿಕೊಂಡು, ಜಾತಿಯ ಹೆಸರಿನಲ್ಲಿ ಇನ್ನಷ್ಟು ಜನರನ್ನು ಶೋಷಣೆ ಮಾಡುತ್ತಿದೆ. ಜಾತಿ ಎನ್ನುವುದು ಕೇವಲ ದಲಿತರ ಸಮಸ್ಯೆಯಲ್ಲ ಪ್ರತಿಯೊಂದು ಸಮುದಾಯಕ್ಕೂ ಜಾತಿ ಭೇದ ಸಮಸ್ಯೆಯಾಗಿಯೇ ಉಳಿದಿದೆ. ಆದರೆ ಎಲ್ಲ ಜಾತಿಯವರಿಗಿಂತಲೂ ದಲಿತರು ಜಾತಿ ಅಸಮಾನತೆಯಿಂದ ಹೆಚ್ಚು ಶೋಷಣೆಗೊಳಗಾಗಿದ್ದಾರೆ ಎನ್ನುವುದು ಸತ್ಯ. ಆದರೆ, ಜಾತಿ ಅಸಮಾನತೆಯನ್ನು ಹೋಗಲಾಡಿಸಲು ದಲಿತರೇ ಮುಂದಾಗಬೇಕು. ಜಾತಿಯ ಕಾರಣಕ್ಕಾಗಿ ಅವಮಾನಕ್ಕೊಳಗಾಗುವ ಸಮುದಾಯಗಳು ಬಲಿಷ್ಠರಾಗಬೇಕಿದೆ.
ಈಗಿನ ಪೀಳಿಗೆ ಕಂಡು ಕೇಳರಿಯದಂತಹ ಕೆಟ್ಟ ಜಾತಿ ವ್ಯವಸ್ಥೆಯ ಕಾಲದಲ್ಲಿ ಎಲ್ಲವನ್ನು ಎದುರಿಸಿ ನಿಂತು, ಅಂಬೇಡ್ಕರ್ ಅವರು ಹೇಗೆ ಇಂದು ವಿಶ್ವದಲ್ಲೇ ಗಣ್ಯ ವ್ಯಕ್ತಿಯಾಗಿದ್ದಾರೋ ಅದೇ ರೀತಿಯಲ್ಲಿ ಶೋಷಿತ ಸಮುದಾಯದ ಯುವಕರು ಶಿಕ್ಷಣ ಪಡೆದು, ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ಪ್ರಬಲರಾಗಬೇಕು. ಶೋಷಿತರು ಉದ್ಯೋಗಕ್ಕಾಗಿ ಪ್ರಬಲರ ಮುಂದೆ ಕೈಚಾಚದೇ, ಪ್ರಬಲ ಜಾತಿಯವರು ಎಂಬ ಭ್ರಮೆಯಲ್ಲಿ ಬದುಕುತ್ತಿರುವವರಿಗೆ ಉದ್ಯೋಗ ಕೊಡುವ ಹಂತಕ್ಕೆ ಬೆಳೆಯಬೇಕು. ಆಗ ಮಾತ್ರವೇ, ಈ ಸಾಮಾಜಿಕ ಅಸಮಾನತೆ ಕೊನೆಗಾಣಲು ಸಾಧ್ಯ.
ಅಂಬೇಡ್ಕರ್ ರಂತಹ ನಾಯಕ ಮತ್ತೆ ಹುಟ್ಟಲು ಸಾಧ್ಯವಿಲ್ಲ:
ಇಂದು ಡಾ.ಬಿ.ಆರ್.ಅಂಬೇಡ್ಕರ್ ಅವರ ಹೆಸರು ಹೇಳಿ ರಾಜಕೀಯ ಅಧಿಕಾರ ಪಡೆದುಕೊಳ್ಳುವ ಶೋಷಿತರ ನಾಯಕರು, ನಾವು ಅಂಬೇಡ್ಕರ್ ವಾದಿಗಳು ಎಂಬ ನಕಲಿ ಮುಖವಾಡಗಳನ್ನು ಹೊತ್ತು, ಅಧಿಕಾರ ಪಡೆದುಕೊಳ್ಳುತ್ತಿದ್ದಾರೆ. ಆದರೆ, ಇವರೆಲ್ಲರೂ ಯಾವುದಾದರೂ ರಾಷ್ಟ್ರೀಯ ಪಕ್ಷದ ಅಡಿಯಾಳಾಗಿ, ಅವರ ತಾಳಕ್ಕೆ ತಕ್ಕಂತೆ ಕುಣಿಯುತ್ತಾ, ಸಮಾಜದ ಏಳಿಗೆಯನ್ನು ಸಂಪೂರ್ಣವಾಗಿ ಮರೆತುಬಿಡುತ್ತಿದ್ದಾರೆ. ಹಾಗಾಗಿ ಯುವ ಜನತೆ ಇಂತಹ ಜನರ ಹಿಂದೆ ಹೋಗಿ ತಮ್ಮ ಸಮಯ ವ್ಯರ್ಥ ಮಾಡುವುದಕ್ಕಿಂತ ತಾವೇ ಸ್ವಂತಿಕೆಯನ್ನು ಬೆಳೆಸಿಕೊಳ್ಳಬೇಕಿದೆ. ಅಂಬೇಡ್ಕರ್ ಅವರು ಅಂತಿಮ, ಅವರಂತಹ ಯಾವುದೇ ನಾಯಕರು ಮತ್ತೆ ಹುಟ್ಟಲು ಸಾಧ್ಯವಿಲ್ಲ. ಅವರು ಹಾಕಿಕೊಟ್ಟ ಹಾದಿಯಲ್ಲಿ ಯುವ ಸಮುದಾಯ ಮುನ್ನಡೆಯಬೇಕಿದೆ. ಅಂಬೇಡ್ಕರ್ ಅವರು, “ಇತಿಹಾಸ ತಿಳಿಯದವ, ಇತಿಹಾಸವನ್ನು ಸೃಷ್ಟಿಸಲಾರ” ಎಂಬ ಮಾತನ್ನು ಹೇಳಿದರು. ಇಂದು ಅಂಬೇಡ್ಕರ್ ಅವರನ್ನು ಅಧ್ಯಯನ ಮಾಡಿದ ಪ್ರತಿಯೊಬ್ಬರೂ ಕೂಡ ಈ ಮಾತನ್ನು ಆಗಾಗ ಹೇಳುತ್ತಿದ್ದಾರೆ. ಇತಿಹಾಸವನ್ನು ತಿಳಿದುಕೊಂಡು ಸುಮ್ಮನೆ ಕೂತರೆ ಹೇಗೆ? ಇತಿಹಾಸವನ್ನು ಸೃಷ್ಟಿಸುವುದು ಯಾವಾಗ? ಎನ್ನುವುದನ್ನು ಆಲೋಚಿಸುವ ಕಾಲ ಬಂದಿದೆ.
ರೋದಿಸುವ ಹೋರಾಟ ಬೇಡ:
ಶೋಷಿತರು, “ಇಂದಿಗೂ ನಮ್ಮನ್ನು ಅಸ್ಪೃಷ್ಯತೆಯಿಂದ ನೋಡುತ್ತಾರೆ, ನಮ್ಮನ್ನು ಕೀಳಾಗಿ ಕಾಣುತ್ತಾರೆ” ಎಂಬಂತಹ ದೂರುಗಳನ್ನೇ ಹೇಳುತ್ತಿದ್ದಾರೆ. ಹಿಂದಿನ ಪೀಳಿಗೆ ಈ ಮಾತನ್ನು ಹೇಳಿದ್ದರೆ, ಅದು ಅವರ ತಪ್ಪಲ್ಲ ಎಂದು ನಾವು ಹೇಳಬಹುದು. ಯಾಕೆಂದರೆ ಆ ಕಾಲದಲ್ಲಿ ಶಿಕ್ಷಣ ಪಡೆದುಕೊಳ್ಳುವ ಹಕ್ಕಿರಲಿಲ್ಲ, ಶಿಕ್ಷಣ ಪಡೆದವರ ಸಂಖ್ಯೆ ಕೂಡ ಕಡಿಮೆ ಇತ್ತು. ಶೋಷಣೆಯ ಪ್ರಮಾಣ ಕೂಡ ಅಷ್ಟೇ ಇತ್ತು. ಆದರೆ ಈಗಿನ ಪೀಳಿಗೆ ಇಂತಹ ಮಾತುಗಳನ್ನಾಡಲು ನಾಚಿಕೆಪಡಬೇಕು. ಯಾಕೆಂದರೆ, ಏನೂ ಸೌಲಭ್ಯಗಳಿಲ್ಲದ ಕಷ್ಟದಿನಗಳನ್ನು ಶೋಷಿತರ ಹಿರಿಯರು ಧೈರ್ಯದಿಂದ ಎದುರಿಸಿದರು. ಆದರೆ, ಇಂದು ಶಿಕ್ಷಣ ಪಡೆದವರ ಸಂಖ್ಯೆ ಹೆಚ್ಚಿದೆ. ಆರ್ಥಿಕವಾಗಿಯೂ ಶೋಷಿತರು ಪ್ರಬಲರಾಗುತ್ತಿದ್ದಾರೆ. ಕಾನೂನು ಅತ್ಯಂತ ಪ್ರಬಲವಾಗಿದೆ. ಆಧುನಿಕತೆ ಅತ್ಯಂತ ವೇಗವಾಗಿ ಮುನ್ನುಗ್ಗುತ್ತಿದೆ. ಇಂತಹ ಸಂದರ್ಭದಲ್ಲಿ ಶೋಷಣೆ, ಅಸ್ಪೃಷ್ಯತೆಯನ್ನು ಎದುರಿಸುವ ಛಲ ಯುವ ಸಮುದಾಯದಲ್ಲಿ ಇಲ್ಲದಿದ್ದರೆ, ಅದಕ್ಕಿಂತ ದೊಡ್ಡ ದುರಂತ ಏನಿದೆ? ಶೋಷಣೆ ಮಾಡುವವರಿಗೆ ಬದಲಾವಣೆ ಬೇಕಿಲ್ಲ, ಶೋಷಿತರಿಗೆ ಬದಲಾವಣೆ ಬೇಕಿದೆ. ಶೋಷಣೆ ವಿರುದ್ಧ ಹೋರಾಡಲೇ ಬೇಕಿದೆ. ಹೋರಾಟದ ಮನೋಭಾವ ಇಲ್ಲದ ಸಮುದಾಯ ಮತ್ತೆ ಮತ್ತೆ ಶೋಷಣೆಗೊಳಗಾಗುತ್ತಲೇ ಇರಬೇಕಾಗುತ್ತದೆ ಎನ್ನುವ ಸತ್ಯವನ್ನು ಅಂಬೇಡ್ಕರ್ ಜಯಂತಿಯ ಸಂದರ್ಭದಲ್ಲಿ ಪ್ರತಿಯೊಬ್ಬರೂ ತಿಳಿಯಬೇಕಿದೆ.