ಬೇಸಿಗೆ ಅವಧಿಯಲ್ಲಿ ಪ್ರಾಣಿ, ಪಕ್ಷಿಗಳ ನಿರ್ವಹಣೆಯ ಟಿಪ್ಸ್
ಕರಾವಳಿ ಪ್ರದೇಶದಲ್ಲಿ ಪ್ರಸಕ್ತ ಬೇಸಿಗೆ ಅವಧಿಯಲ್ಲಿ ಉಷ್ಣಾಂಶ ಏರಿಕೆಯಾಗಿರುವುದರಿಂದ ಎಲ್ಲಾ ಪ್ರಾಣಿ, ಪಕ್ಷಿಗಳಲ್ಲಿ ಅದರಲ್ಲಿಯೂ ಉತ್ಪಾದಕ ಪ್ರಾಣಿಗಳಾದ ದನ ಹಾಗೂ ಮಾಂಸದ ಕೋಳಿಗಳ ಮೇಲೆ ತುಂಬಾ ಒತ್ತಡವನ್ನುಂಟು ಮಾಡುತ್ತದೆ.
ಬೇಸಿಗೆ ಅವಧಿಯಲ್ಲಿ ದನಗಳಲ್ಲಿ ಉಷ್ಣಾಂಶದ ಒತ್ತಡದಿಂದ ಆಹಾರ ತಿನ್ನುವ ಪ್ರಮಾಣ ಕಡಿಮೆಯಾಗಿ ಹಾಲಿನ ಇಳುವರಿ ಕಡಿಮೆಯಾಗುತ್ತಿದೆ. ಹೀಗೆ ಹೆಚ್ಚಿನ ಬಿಸಿಲಿನ ತಾಪಮಾನದಿಂದಾಗಿ ಮಾಂಸಕೋಳಿಗಳ ತೂಕಬಾರದೆ ಇರಬಹುದು ಮತ್ತು ಉಷ್ಣಾಂಶದ ಪ್ರಮಾಣ 36 ಡಿಗ್ರಿ ಹೆಚ್ಚಾದಾಗ ಕೋಳಿಗಳ ಸಹ ಸಾಯುವ ಸಾಧ್ಯತೆ ಇರುತ್ತದೆ.
ಅಷ್ಟಲ್ಲದೆ ಉಷ್ಣಾಂಶದ ಒತ್ತಡದಲ್ಲಿ ಬಳಲಿದ ಪ್ರಾಣಿ ಪಕ್ಷಿಗಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಿ ದನಗಳಲ್ಲಿ ಕೆಚ್ಚಲುಬಾವು, ಕೋಳಿಗಳಲ್ಲಿ ಕೊಕ್ಕರೆ ರೋಗಗಳು ಕಂಡು ಬರುತ್ತದೆ. ಜಾನುವಾರುಗಳ ನಿರ್ವಹಣೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳು ಬೇಸಿಗೆಯಲ್ಲಿ ಉಷ್ಣತೆ ಹೆಚ್ಚಾಗುವುದರಿಂದ ದನಗಳನ್ನು ಬೆಳಗ್ಗೆ ಅಥವಾ ಸಂಜೆ ಮೇಯಲು ಹೊರಗಡೆ ಬಿಡಬೇಕು.
ಯಾವುದೇ ಕಾರಣಕ್ಕೂ ಬೆಳಿಗ್ಗೆ 11ರಿಂದ ಸಂಜೆ 4 ಗಂಟೆ ಅವಧಿಯಲ್ಲಿ ಜಾನುವಾರುಗಳನ್ನು ಹೊರಗಡೆ ಬಿಡಬಾರದು. ದಿನದ 24 ಗಂಟೆಯೂ ತಂಪಾದ ನೀರು ನೀಡಬೇಕು. ನೀರಿನ ಕೊರತೆ ಕಂಡುಬಂದರೆ ಸ್ಥಳೀಯ ಸಂಸ್ಥೆಗಳ ಮೂಲಕ ಪಡೆದುಕೊಳ್ಳುವುದು. ಜಾನುವಾರುಗಳನ್ನು ನೆರಳಿನಲ್ಲಿ ಮಾತ್ರ ಹೊರಗಡೆ ಕಟ್ಟಬೇಕು. ಜಾನುವಾರು ಶೆಡ್ ಮೇಲೆ ತೆಂಗಿನ ಅಥವಾ ಅಡಿಕೆ ಗರಿ ಹಾಕಿ ಸ್ಪಿಂಕ್ಲರ್ ನಲ್ಲಿ ನೀರು ಚಿಮ್ಮಿಸಬಹುದು ಅಥವಾ ಬಿಳಿ ಬಣ್ಣದ ಪೇಂಟ್ ಹಾಕಬಹುದು. ಶೆಡ್ ಒಳಗಡೆ ಫ್ಯಾನ್ ಗಳನ್ನು ಅಳವಡಿಸಿದ್ದಲ್ಲಿ ಉಷ್ಣತೆ ಪ್ರಮಾಣ ತಗ್ಗಿಸಬಹುದಾಗಿದೆ.
ಒದ್ದೆಯಾದ ಗೋಣಿ ಚೀಲಗಳನ್ನು ಶೆಡ್ ಸುತ್ತಲೂ ಕಟ್ಟಬಹುದು. ಪ್ರತಿ ಗಂಟೆಗೊಮ್ಮೆ ಜಾನುವಾರುಗಳ ಮೈ ಮೇಲೆ 1 ರಿಂದ 4 ನಿಮಿಷ ನೀರು ಚಿಮುಕಿಸುತ್ತಿರಬೇಕು. ಜಾನುವಾರುಗಳಿಗೆ ಹೆಚ್ಚಿನ ಆಹಾರವನ್ನು ಬೆಳಿಗ್ಗೆ ಬೇಗನೆ ಮತ್ತು ರಾತ್ರಿ ಹೊತ್ತಿನಲ್ಲಿ ತಿನ್ನಿಸುವುದು ಉತ್ತಮ. ಜಾನುವಾರುಗಳಿಗೆ ಅವುಗಳ ಹಾಲಿನ ಇಳುವರಿಗನುಗುಣವಾಗಿ 20 ರಿಂದ 100 ಗ್ರಾಂ ಲವಣ ಮಿಶ್ರಣವನ್ನು ಪ್ರತಿ ದಿನ ನೀಡಬೇಕು. 10 ಜಾನುವಾರುಗಳಿಗೆ ಪ್ರಶ್ನೆ, ತಪ್ಪುವುದು, ತುಂಬಾ ಹಾಲಿನ ಇಳುವರಿ ಕಡಿತವಾಗುವುದು ಈ ರೀತಿ ಕಂಡುಬಂದಲ್ಲಿ ತಕ್ಷಣ ಹತ್ತಿರದ ಪಶುವೈದ್ಯಕೀಯ ಸಂಸ್ಥೆಯನ್ನು ಭೇಟಿ ಮಾಡಬೇಕು.
ಮಾಂಸದ ಕೋಳಿಗಳ ಸಾಕಾಣಿಕೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳು:
ಕೋಳಿ ಮನೆಗಳಲ್ಲಿ, ದಿನದ 24 ಗಂಟೆಗಳ ಕಾಲ ತರವಾದ ಮತ್ತು ಶುಚಿಯಾದ ನೀರನ್ನು ಒದಗಿಸಬೇಕು. ಒಂದು ಗಂಟೆ ನೀರು ಇಲ್ಲದಿದ್ದರೆ ಕೋಳಿಗಳು ಸಾವನ್ನಪ್ಪಬಹುದು. ಚೆನ್ನಾಗಿ ಗಾಳಿಯಾಡಲು ಅನುಕೂಲವಾಗುವಂತೆ ಎಲ್ಲಾ ತಡೆಗಳನ್ನು ತೆಗೆಯಬೇಕು ಕೋಳಿ ಮನೆ ಮಾಡಿನ ಮೇಲ್ಮಾಗಕ್ಕೆ ಸುಣ್ಣ ಬಳಿಯಬೇಕು ಅಥವಾ ಹುಲ್ಲು, ಅಡಿಕೆಗು, ತೆಂಗಿನ ಗರಿಗಳಿಂದ ಹೊದಿಸಬೇಕು.
ಅನುಕೂಲವಿದ್ದರೆ ಕೋಳಿ ಮನೆಯ ಮಾಡಿನ ಮೇಲೆ ನೀರು ಸಿಂಪಡಿಸಬೇಕು. ವಿಟಮಿನ್ ಸಿ ಮತ್ತು ಇತರೆ ಎಲೆಕ್ಟ್ರೋಲೈಟ್ ಗಳನ್ನು ಉಪಯೋಗಿಸುವುದರಿಂದ ಕೋಳಿಗಳ ಮೇಲೆ ಆಗುವ ಬಿಸಿಲಿನ ಒತ್ತಡವನ್ನು ಕಡಿಮೆ ಮಾಡಬಹುದು ಅಥವಾ ಅಡುಗೆ ಸೋಡ 1ಗ್ರಾಂ ಗೆ 5ಲೀಟರ್ ನೀರಿಗೆ ಬೆರೆಸಿ ಕೋಳಿಗಳಿಗೆ ಕುಡಿಯಲು ನೀಡಬೇಕು.
ಕೋಳಿಮನೆಗಳಲ್ಲಿ ನೀರಿನ ಟ್ಯಾಂಕಿನ ಹೊರಮೈಗೆ ಬಿಳಿಬಣ್ಣ ಬಳಿಯಬೇಕು ಅಥವಾ ಗೋಣಿಯನ್ನು ಸುತ್ತಲೂ ಕಟ್ಟಿ ದಿನಕ್ಕೆರಡು ಬಾರಿ ನೀರಿನಿಂದ ಒದ್ದೆ ಮಾಡಬೇಕು ಅಥವಾ ಚಪ್ಪರ ಹಾಕಬೇಕು , ಬೇಸಿಗೆ ಅವಧಿಯಲ್ಲಿ ನೀರಿನಲ್ಲಿ ಹಾನಿಕಾರಕ ಸೂಕ್ಷ್ಮ ಜೀವಿಗಳು ಹೆಚ್ಚಿರುವುದರಿಲದ ಸೋಂಕು ನಿವಾರಕಗಳನ್ನು ಉಪಯೋಗಿಸಬೇಕು. ಅತೀ ಉಷ್ಣ ಹಾಗೂ ಮೋಡ ಕವಿದ ವಾತಾವರಣ ಇದ್ದಾಗ ಮಧ್ಯಾಹ್ನ 1 ಗಂಟೆಯಿಂದ ಸಂಜೆ 5ಗಂಟೆಯವರೆಗೆ ಕೋಳಿಗಳ ಮೇಲೆ ನಿಗಾ ವಹಿಸಬೇಕು.
ಯಾವುದೇ ಕಾರಣಕ್ಕೂ ಕೋಳಿ ಮನೆಗಳ ಒಳಗೆ ಬಿಸಿಲು ಬೀಳದಂತೆ ಎಚ್ಚರ ವಹಿಸಬೇಕು, ಬೇಸಿಗೆಯಲ್ಲಿ ಕೋಳಿಗಳು 20 ದಿನದ ನಂತರ, ಆ ದಿನಕ್ಕೆ ನಿಗದಿಪಡಿಸಿದ ಕೋಳಿ ಆಹಾರ ತಿನ್ನುವ ಸಾಧ್ಯತೆ ಕಡಿಮೆ ಆದ್ದರಿಂದ ರೈತರು ದಿನದ ತಂಪಾದ ಸಮಯ ಅಂದರೆ ರಾತ್ರಿ 12 ಗಂಟೆ ತನಕ ಅಥವಾ ಬೆಳಗ್ಗೆ 4 ರಿಂದ 8 ಗಂಟೆ ಅವಧಿಯಲ್ಲಿ ಕೋಳಿಗಳಿಗೆ ಅಹಾರ ನೀಡಬೇಕು ಎಂದು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw