ಮಲೆನಾಡಿನಲ್ಲಿ ಏರುತ್ತಿದೆ ಬಿಸಿಲಿನ ತಾಪ: ತಂಪು ಪಾನೀಯಕ್ಕೆ ಹೆಚ್ಚಿದ ಬೇಡಿಕೆ
►ಸಂತೋಷ್ ಅತ್ತಿಗೆರೆ, ಕೊಟ್ಟಿಗೆಹಾರ.
ಕೊಟ್ಟಿಗೆಹಾರ: ಹವಾಮಾನದ ವೈಪರೀತ್ಯದಿಂದ ಸುಡು ಬಿಸಿಲಿಗೆ ಜನ ಹೈರಾಣಾಗುತ್ತಿದ್ದಾರೆ. ಸಕಾಲಕ್ಕೆ ಮಳೆಯೂ ಇಲ್ಲದೇ ಜನರು ಸೆಖೆಯ ದಾಹ ತೀರಿಸಲು ತಂಪು ಪಾನೀಯಗಳಿಗೆ ಹಾಗೂ ಹಣ್ಣಿನ ರಸಗಳ ಸೇವನೆಗೆ ಮೊರೆ ಹೋಗುತ್ತಿದ್ದಾರೆ.
ಬೆಳಿಗ್ಗೆ ಆರಂಭವಾಗುತ್ತಿದ್ದಂತೆ ಸ್ವಲ್ಪ ತಣ್ಣಗಿದ್ದ ಬಿಸಿಲ ತಾಪ ಮಧ್ಯಾಹ್ನವಾಗುತ್ತಿದ್ದಂತೆ ಬಿಸಿಲಿನ ಪ್ರಖರತೆ ತೀವ್ರವಾಗಿ ಜನರು ಹೊರಗೆ ಕಾಲಿಟ್ಟರೆ ಬಿಸಿಲು ತಲೆಯ ನೆತ್ತಿ ಸುಡುತ್ತಿದೆ.
ಮಾರ್ಚ್ ಗೆ ಹೋಲಿಸಿದರೆ ಮಲೆನಾಡಿನಲ್ಲಿ ಏಪ್ರಿಲ್ ಮಾಸದಲ್ಲಿ ಬಿಸಿಲಿನ ತಾಪ ಹೆಚ್ಚಳವಾಗುತ್ತಿದ್ದು, ಮಲೆನಾಡಿನ ಸುತ್ತಮುತ್ತಲ ಜಿಲ್ಲೆಗಳಲ್ಲೂ ಕೂಡ ಹವಾಮಾನ ವೈಪರೀತ್ಯದಿಂದ ಸೂರ್ಯನ ತಾಪ ಹೆಚ್ಚಳಗೊಂಡಿದೆ. ಒಂದೆಡೆ ರಾಜಕೀಯ ಬಿಸಿ ಚುರುಕುಗೊಂಡಿದ್ದರೆ, ಹವಾಮಾನ ವೈಪರೀತ್ಯದಿಂದ ಜನರು ಹೈರಾಣಾಗುತ್ತಿದ್ದಾರೆ. ಕೇವಲ ದಕ್ಷಿಣ ಕನ್ನಡ, ರಾಯಚೂರು, ಕಲ್ಬುರ್ಗಿ ಮತ್ತಿತರ ಈಶಾನ್ಯ ಜಿಲ್ಲೆಗಳಲ್ಲಿ ಮಾತ್ರ ಸುಡು ಬಿಸಿಲಿನ ಸೆಕೆಯ ವಾತಾವರಣ ಬೇಸಿಗೆಯಲ್ಲಿ ಹೆಚ್ಚಾಗಿ ಕಂಡು ಬರುತ್ತಿತ್ತು. ಆದರೀಗ ಆ ಬಿಸಿಯ ತಾಪಮಾನ ಮಲೆನಾಡಿನ ಜಿಲ್ಲೆಯ ಭಾಗಗಳಲ್ಲೂ ದಾಖಲಾಗುತ್ತಿದೆ. ತೋಟ ಕಾರ್ಮಿಕರಿಗೂ ಕೂಡ ಬಿಸಿಲಿನ ತಾಪ ತಟ್ಟುತ್ತಿದೆ. ಬೇಸಿಗೆಯಲ್ಲಿ ಬೆಳಿಗ್ಗೆ 26 ಡಿಗ್ರಿ ಸೆಲ್ಸಿಯಸ್ ಇದ್ದರೆ ಮಧ್ಯಾಹ್ನ ಹೊತ್ತಿಗೆ 36 ಡಿಗ್ರಿವರೆಗೂ ಹೋಗುತ್ತಿದೆ.
ಜನರು ಮಜ್ಜಿಗೆ,ದಾಕ್ಷಿ, ಸೇಬು,ಪೇರಳೆ, ಪರಂಗಿಹಣ್ಣು, ಕಲ್ಲಂಗಡಿ, ಕಬ್ಬಿನಹಾಲು, ಪುನರ್ಪುಳಿಪಾನೀಯ, ಎಳನೀರು ಜ್ಯೂಸ್ ಕಡೆ ಹೆಚ್ಚಿನ ಒಲವು ತೋರುತ್ತಿದ್ದು, ತಂಪು ಪಾನೀಯಗಳಿಗೂ ಬೇಡಿಕೆ ಹೆಚ್ಚಿದಂತಾಗಿದೆ. ಎಳನೀರಿಗೆ ರೂ35, ಜ್ಯೂಸ್ ಗೆ ರೂ. 35-.40 ಇತರೆ ಜ್ಯೂಸ್ ಗಳಿಗೆ ರೂ.60 ವರೆಗೂ ಇದೆ. ಸುಡು ಬಿಸಿಲಿನಿಂದ ಹಣ್ಣಿನ ಜ್ಯೂಸ್ ಗೂ ಬೆಲೆ ಏರಿಕೆಯಾಗಿದೆ. ಬಿಸಿಲಿಗೆ ಕಾಫಿ ಮತ್ತಿತರ ಗಿಡಗಳು ಒಣಗುತ್ತಿವೆ.
ಸುತ್ತಮುತ್ತಲಿನ ನದಿಗಳೂ ಕೂಡ ಬಿಸಿಲಿಗೆ ನೀರು ಒಣಗಿ ಹಲವು ಕಡೆ ಬತ್ತಿವೆ. ಈ ಬಾರಿ ಬಿಸಿಲಿನ ಬೇಗೆಯಿಂದ ಬರಗಾಲದಂತೆ ಭಾಸವಾಗುತ್ತಿದೆ.ಹಲವೆಡೆ ಕುಡಿಯುವ ನೀರಿನ ಸೌಲಭ್ಯಕ್ಕೂ ಸಂಚಕಾರವಿದೆ.ನೀರಿನ ಆಸರೆಗೆ ಪ್ರವಾಸಿಗರು ಬಾಟಲಿ ನೀರಿಗೆ ಮೊರೆ ಹೋಗುವಂತಾಗಿದೆ. ಜಾನುವಾರುಗಳು ಕೂಡ ಬಾಯಾರಿಕೆಗೆ ಹೈರಾಣಾಗುತ್ತಿವೆ.ಬಿಸಿಲಿನ ತಾಣಕ್ಕೆ ಹುಲ್ಲು ಕೂಡ ಒಣಗುತ್ತಿದ್ದು ಜಾನುವಾರು ಮೇವಿಗೂ ತೊಂದರೆಯಾಗುತ್ತಿದೆ.
ಸುಡು ಬಿಸಿಲಿಗೆ ಹೆಂಚಿನ ಮನೆಯ ಜನರು ಸ್ವಲ್ಪ ಮಟ್ಟಿಗೆ ತಂಪಾಗಿದ್ದರೂ ಸ್ಲ್ಯಾಬ್ ಮನೆಗಳಲ್ಲಿ ಜನರು ಒಳಗೆ ಕೂರಲು ಆಗದೆ ಸಂಜೆಯ ವಾತಾವರಣ ಯಾವಾಗ ಮೂಡುತ್ತೋ ಎಂದು ಪರಿತಪಿಸುವಂತಾಗಿದೆ.
ಮಲೆನಾಡಿನಲ್ಲಿ ಮೇ ಮತ್ತು ಏಪ್ರಿಲ್ ಮಾಸದಲ್ಲಿ ವಾಡಿಕೆಯಷ್ಟು ಹಿಂಗಾರಿನ ಮಳೆಯಾಗುತ್ತಿದ್ದು ಈ ಬಾರಿ ಒಂದು ಬಾರಿ ಮಾತ್ರ ಹಗುರದಿಂದ ಸಾಮಾನ್ಯ ಮಳೆಯಾಗಿದ್ದು ವಾಡಿಕೆಯಷ್ಟು ಮಳೆಯಾಗದೇ ಇದರಿಂದ ಬಿಸಿಲಿನ ತಾಪ ಏರಿಕೆಯಾಗುತ್ತಿದೆ. ಕಾಫಿ ತೋಟಗಳಲ್ಲಿ ಮರಕಸಿ,ಕಾಡುಮರಗಳ ನಾಶ,ಜಾಗತಿಕ ತಾಪಮಾನ,ನಗರೀಕರಣದಂತಹ ಕಾರಣಗಳಿಂದಾಗಿ ಮಲೆನಾಡಿನಂತಹ ಭಾಗದಲ್ಲೂ ಮಳೆಯ ಅಭಾವ ಉಂಟಾಗಿ ತಾಪಮಾನ ಏರಿಕೆಗೆ ಕಾರಣವಾಗಿದೆ ಎನ್ನುತ್ತಾರೆ ಹಲವು ಪರಿಸರ ಪ್ರಿಯರು.
ಈ ಬಾರಿ ಬೇಸಿಗೆಯ ಸುಡು ಬಿಸಿಲು ಜನರನ್ನ ಕಂಗಾಲುಗೊಳಿಸಿದೆ. ಕಾಫಿ ಬೆಳೆಗಾರರು ನೀರಿನ ಕೊರತೆಯಿಂದ ತೋಟಕ್ಕೆ ನೀರಾಯಿಸಲು ಆಗದೆ ಸಂಕಷ್ಟ ಎದುರಿಸುವಂತಾಗಿದೆ ಎಂದು ಕೊಟ್ಟಿಗೆಹಾರದ ಸಂಜಯ್ ಗೌಡ ಹೇಳಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw