ಅಮಿತ್ ಶಾ ರೋಡ್ ಶೋ: ಕಾಂಗ್ರೆಸ್ ವಿರುದ್ಧ ಮೀಸಲಾತಿ ಅಸ್ತ್ರ ಪ್ರಯೋಗಿಸಿದ ಶಾ | ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ - Mahanayaka

ಅಮಿತ್ ಶಾ ರೋಡ್ ಶೋ: ಕಾಂಗ್ರೆಸ್ ವಿರುದ್ಧ ಮೀಸಲಾತಿ ಅಸ್ತ್ರ ಪ್ರಯೋಗಿಸಿದ ಶಾ | ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ

mysore
24/04/2023

ಚಾಮರಾಜನಗರ: ಚುನಾವಣಾ ಚಾಣಕ್ಯ ಎಂಥಲೇ ಕರೆಯುವ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಂದು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ರೋಡ್ ಶೋ ನಡೆಸಿ ಕಾರ್ಯಕರ್ತರಲ್ಲಿ ರಣೋತ್ಸಾಹ ತುಂಬಿದರು.

ಮೈಸೂರಿನಲ್ಲಿ ನಾಡ ಅಧಿದೇವತೆ ಚಾಮುಂಡೇಶ್ವರಿ ದೇವರ ದರ್ಶನ ಪಡೆದು ಚುನಾವಣಾ ಪ್ರಚಾರ ಆರಂಭಿಸಿದ ಅಮಿತ್ ಷಾ ಮೊದಲಿಗೆ ಗುಂಡ್ಲುಪೇಟೆಗೆ ಬಂದು ಮಡಹಳ್ಳಿ ವೃತ್ತದಿಂದ ರೋಡ್ ಶೋ ಆರಂಭಿಸಿದರು.
ಬಸ್ ನಿಲ್ದಾಣ, ಪೋಸ್ಟ್ ಆಫೀಸ್, ಕಿತ್ತೂರು ರಾಣಿ ಚೆನ್ನಮ್ಮ ರಸ್ತೆ ಮೂಲಕ ಹಳೇ ಬಸ್ ನಿಲ್ದಾಣದ ತನಕ ರೋಡ್ ಶೋ ನಡೆಸಿದ ಅಮಿತ್ ಷಾ, ಮಾರ್ಗದುದ್ದಕ್ಕೂ ಕಾರ್ಯಕರ್ತರು ಹೂವಿನ ಮಳೆ ಸುರಿಸಿದರು. ಬ್ಯಾರಿಕೇಡ್ ಹಿಂದೆ ಬಿಸಿಲಿನಲ್ಲಿ ತಾಸುಗಳಿಂದ ನಿಂತಿದ್ದ ಜನರ ಉತ್ಸಾಹ ಕಂಡು ಜೋಶ್ ಪಡೆದ ಚಾಣಕ್ಯ ವಾಹನದ ಮುಂದಕ್ಕೆ ಬನ್ನಿ ಎಂದು ಕರೆಸಿಕೊಂಡರು.

ಅಮಿತ್ ಷಾ, ನರೇಂದ್ರ ಮೋದಿ, ಬಿ.ಎಸ್.ಯಡಿಯೂರಪ್ಪ, ಬಿಜೆಪಿ ಅಭ್ಯರ್ಥಿ ನಿರಂಜನಕುಮಾರ್ ಪರವಾಗಿ ಕಾರ್ಯಕರ್ತರು ಘೋಷಣೆಗಳನ್ನು ಕೂಗುತ್ತಾ ಕುಣಿದು ಕುಪ್ಪಳಿಸಿದರು. ಷಾ ರೋಡ್ ಶೋನಲ್ಲಿ ಸಂಸದ ಪ್ರತಾಪ್ ಸಿಂಹ, ಬಿಜೆಪಿ ಮುಖಂಡರುಗಳು ಸಾಥ್ ಕೊಟ್ಟರು.

ಮೀಸಲಾತಿ ಅಸ್ತ್ರ ಪ್ರಯೋಗಿಸಿದ ಶಾ:

ಹಳೇ ಬಸ್ ನಿಲ್ದಾಣದಲ್ಲಿ ಪ್ರಚಾರ ರಥದಲ್ಲಿ ಅಮಿತ್ ಷಾ ಮಾತನಾಡಿ ಕಾಂಗ್ರೆಸ್ ವಿರುದ್ಧ ಮೀಸಲಾತಿ ಅಸ್ತ್ರ ಪ್ರಯೋಗ ಮಾಡಿದರು. ತಾವು ಅಧಿಕಾರಕ್ಕೆ ಬಂದರೇ ಮುಸ್ಲಿಮ್ ಮೀಸಲಾತಿನ್ನು ಮತ್ತೆ ಜಾರಿ ಮಾಡುತ್ತೇವೆಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಅವರು ಹೇಗೆ ಮಾಡುತ್ತಾರೆ, ಯಾವ ಜಾತಿ ಮೀಸಲಾತಿಯನ್ನು ಕಿತ್ತುಕೊಳ್ಳುತ್ತಾರೆ, ಲಿಂಗಾಯತರದ್ದೋ, ಒಕ್ಕಲಿಗರದ್ದೋ ಇಲ್ಲವೇ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಕಡಿಮೆ ಮಾಡಿ ಮುಸ್ಲಿಂರಿಗೆ ಕೊಡುತ್ತಾರೋ ಎಂದು ಕಿಡಿಕಾರಿದರು.

ಹಳೇ ಮೈಸೂರು ಭಾಗದಲ್ಲಿ ಬಿಜೆಪಿಗೆ ಉತ್ತಮ ವಾತಾವರಣ ಇದ್ದು ಚಾಮರಾಜನಗರ ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲೂ ಈ ಬಾರಿ ಕಮಲ ಅರಳಲಿದೆ. ಗುಂಡ್ಲುಪೇಟೆ ಅಭ್ಯರ್ಥಿ ನಿರಂಜನಕುಮಾರ್ ಅವರನ್ನು ಪ್ರಚಂಡ ಬಹುಮತ ಕೊಟ್ಟು ಗೆಲ್ಲಿಸಿ ಎಂದು ಮನವಿ ಮಾಡಿದರು.

10–12 ಸಾವಿರ ಮಂದಿ ಭಾಗಿ:

ಅಮಿತ್ ಷಾ ಅಂದಾಜು 1 ಕಿ.ಮೀ. ನಷ್ಟು ರೋಡ್ ಶೋ ನಡೆಸಿದರು. ಈ ವೇಳೆ, 10–12 ಸಾವಿರ ಮಂದಿ ಬಿಜೆಪಿ ಕಾರ್ಯಕರ್ತರು ಭಾಗಿಯಾಗಿದ್ದರು. ಅಮಿತ್ ಷಾ ರನ್ನು ನೋಡುವ ಖುಷಿಯಲ್ಲಿ ವೃದ್ಧರೊಬ್ಬರು ಬಿಜೆಪಿ ಬಾವುಟ ಹಿಡಿದು ರಸ್ತೆಯಲ್ಲಿ ಕುಣಿದು ಕುಪ್ಪಳಿಸಿದರು. ಜೊತೆಗೆ, ಮೋದಿ, ನಿರಂಜನಕುಮಾರ್ ಹಾಗೂ ಅಮಿತ್ ಷಾ ಪರವಾಗಿ ಘೋಷಣೆಗಳನ್ನು ಕೂಗಿ ಉತ್ಸಾಹದಿಂದ ಕುಣಿದರು. ಇನ್ನು, ಟಿ.ನರಸೀಪುರದ ಸಿದ್ದು ಎಂಬವರು ಹುಲಿ ಹಾಗೂ ಅಮಿತ್ ಷಾ ಅವರ ಹಚ್ಚೆ ಹಾಕಿಸಿಕೊಂಡು ರೋಡ್ ಶೋಗೆ ಬಂದು ಗಮನ ಸೆಳೆದರು. ಕಾಶ್ಮೀರದ ವಿಶೇಷ ಪ್ರಾತಿನಿಧ್ಯ ತೆಗೆದಿರುವುದು, ಗುಂಡ್ಲುಪೇಟೆಗೆ ಬರುತ್ತಿರುವ ದ್ಯೋತಕವಾಗಿ ಈ ಟ್ಯಾಟು ಉಡುಗೊರೆ ಎಂದು ಸಂತಸದಿಂದ ಹೇಳಿಕೊಂಡಿದ್ದಾರೆ.

ಕಾಂಗ್ರೆಸ್ ನವರಲ್ಲಿ ನಡುಕ ಹುಟ್ಟಿದೆ:

ಅಮಿತ್ ಷಾ ಅವರ ಭೇಟಿ ಬಗ್ಗೆ ಶಾಸಕ ನಿರಂಜನಕುಮಾರ್ ಮಾಧ್ಯಮದವರೊಂದಿಗೆ ಮಾತನಾಡಿ, ಅಮಿತ್ ಷಾ ಅವರ ಭೇಟಿ ಕಾರ್ಯಕರ್ತರಿಗೆ ಬೂಸ್ಟ್ ಅಪ್ ಕೊಟ್ಟಿದೆ. ಅವರ ಭೇಟಿಯಿಂದಾಗಿ ಕಾಂಗ್ರೆಸ್ ನವರಲ್ಲಿ ನಡುಕ ಹುಟ್ಟಿದೆ, ಅವರಿಗೆ ವಿಚಾರಗಳು ಯಾವುದು ಇಲ್ಲದಿರುವುದರಿಂದ ಅಮಿತ್ ಷಾ ಬಂದರೂ ಟೀಕೆ ಮಾಡುತ್ತಾರೆ ಎಂದು ಕಿಡಿಕಾರಿದರು.

ಒಟ್ಟಿನಲ್ಲಿ ಇಂದು ಅಮಿತ್ ಷಾ ಅವರ ಮಿಂಚಿನ ಸಂಚಾರ ಕಾರ್ಯಕರ್ತರಲ್ಲಿ ರಣೋತ್ಸಾಹ ತುಂಬಿದ್ದು ಚುನಾವಣಾ ರಂಗು ಇಂದಿನಿಂದ ಹೆಚ್ಚಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ