ರಾಜ್ಯದಲ್ಲಿ ಬಿಜೆಪಿ ಸೋಲಿನ ಹತಾಶೆಯಿಂದ ಪ್ರಧಾನಿ ಮೋದಿ ಕಾಂಗ್ರೆಸ್ ಗ್ಯಾರಂಟಿ ಬಗ್ಗೆ ಮಾತನಾಡುತ್ತಿದ್ದಾರೆ: ಡಿ.ಕೆ. ಶಿವಕುಮಾರ್ - Mahanayaka
10:46 PM Saturday 22 - February 2025

ರಾಜ್ಯದಲ್ಲಿ ಬಿಜೆಪಿ ಸೋಲಿನ ಹತಾಶೆಯಿಂದ ಪ್ರಧಾನಿ ಮೋದಿ ಕಾಂಗ್ರೆಸ್ ಗ್ಯಾರಂಟಿ ಬಗ್ಗೆ ಮಾತನಾಡುತ್ತಿದ್ದಾರೆ: ಡಿ.ಕೆ. ಶಿವಕುಮಾರ್

d k shivakumar1
27/04/2023

ಬೆಂಗಳೂರು: ಮುಂಬರುವ ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಸೋಲು ಅನುಭವಿಸಲಿದೆ ಎಂದು ಅರಿತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಹತಾಶರಾಗಿ, ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳ ಬಗ್ಗೆ ಟೀಕೆ ಮಾಡುತ್ತಿದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿ ವೇಳೆ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಸುಳ್ಳು ಅವು ಮುಂದಿನ ಪೀಳಿಗೆಗೆ ಮಾರಕ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಯಕರ್ತರ ಸಭೆಯಲ್ಲಿ ಹೇಳಿರುವುದರ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ ಉತ್ತರಿಸಿದ ಡಿ.ಕೆ. ಶಿ ಅವರು, ‘ಪ್ರಧಾನಮಂತ್ರಿಗಳಿಗೆ ಬಿಜೆಪಿ ಭರವಸೆಗಳ ಬಗ್ಗೆ ಗೊತ್ತಿಲ್ಲವೇ. ನಾವು ಬಿಜೆಪಿಯವರಂತೆ ಎಲ್ಲರ ಖಾತೆಗೆ 15 ಲಕ್ಷ ಹಾಕುತ್ತೇವೆ ಎಂದು ಹೇಳಿಲ್ಲ. ಬಿಜೆಪಿ ಪ್ರಣಾಳಿಕೆ ತೆಗೆದು ನೋಡಿ. ಅವರು 1 ಲಕ್ಷದವರೆಗೂ ರೈತರ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದರು. ರೈತರ ಪಂಪ್ ಸೆಟ್ ಗೆ ನೀಡುವ ವಿದ್ಯತ್ ಅನ್ನು 7 ತಾಸಿನಿಂದ 10 ತಾಸಿಗೆ ಹೆಚ್ಚಳ ಮಾಡುವುದಾಗಿ ಹೇಳಿದ್ದರು. ಜನವರಿ 16ರಂದು ಬೊಮ್ಮಾಯಿ ಅವರ ಸರ್ಕಾರ ಪತ್ರಿಕೆಗಳಿಗೆ ಕೊಟ್ಟಿರುವ ಜಾಹೀರಾತು ನೋಡಿ. ಕಾಂಗ್ರೆಸ್ ಗ್ಯಾರಂಟಿ ಯೋಜನೆ ಮಾದರಿಯಲ್ಲಿ ಮಹಿಳೆಯರಿಗೆ ಪ್ರೋತ್ಸಾಹ ಧನ ನೀಡುವ ಭರವಸೆ ನೀಡಿದ್ದಾರೆ.

ಇಂದು ಪ್ರಧಾನಮಂತ್ರಿಗಳು ನಮ್ಮ ಗ್ಯಾರಂಟಿ ಬಗ್ಗೆ ಮಾತನಾಡಿರುವುದು ಬಹಳ ಸಂತೋಷವಾಗಿದೆ. ನಮ್ಮ ಗ್ಯಾರಂಟಿ ಯೋಜನೆ ಬಗ್ಗೆ ಮಾತನಾಡುವ ಮೂಲಕ ಮೋದಿ ಅವರು ತಮ್ಮ ಸರ್ಕಾರ ಜನರ ವಿಶ್ವಾಗಳಿಸಲು ವಿಫಲವಾಗಿದೆ ಎಂದು ಒಪ್ಪಿಕೊಂಡಿದ್ದಾರೆ. ಬಿಜೆಪಿ ಡಬಲ್ ಇಂಜಿನ್ ಸರ್ಕಾರ ಬೆಲೆ ಏರಿಕೆ ನಿಯಂತ್ರಿಸಲು ವಿಫಲವಾಗಿವೆ. ಅವರು 2014ರ ಚುನಾವಣೆ ಸಮಯದಲ್ಲಿ ದೇಶದ ಮತದಾರರಿಗೆ ಮತದಾನ ಮಾಡುವ ಮುನ್ನ ಅಡುಗೆ ಅನಿಲ ಸಿಲಿಂಡರ್ ಗೆ ನಮಿಸಿ ಮತ ಹಾಕಿ ಎಂದಿದ್ದರು. ಈಗ ಅದನ್ನೇ ಮಾಡಬೇಕು ಎಂದು ರಾಜ್ಯದ ಜನರಿಗೆ ಹೇಳುತ್ತಿದ್ದೇವೆ.

ಕಾಂಗ್ರೆಸ್ ಪಕ್ಷದ ನಾಲ್ಕು ಯೋಜನೆಗಳಾದ ಗೃಹಜ್ಯೋತಿ, ಗೃಹಲಕ್ಷಿ, ಅನ್ನಭಾಗ್ಯ, ಯುವನಿಧಿ ಯೋಜನೆ ಜಾರಿ ಮಾಡುವುದು ನಿಶ್ಚಿತ. ಮೇ 10ರಂದು ಕೇವಲ ಮತದಾನದ ದಿನವಲ್ಲ, ರಾಜ್ಯದ ಭವಿಷ್ಯ ಬದಲಿಸುವ ದಿನ, ಈ ಗ್ಯಾರಂಟಿ ಯೋಜನೆಗಳಿಗೆ ಮುದ್ರೆ ಹಾಕುವ ದಿನ. ಅಧಿಕಾರಕ್ಕೆ ಬಂದ ಮೊದಲ ಸಚಿವ ಸಂಪುಟದಲ್ಲಿ ಈ ಯೋಜನೆ ಜಾರಿ ಮಾಡುತ್ತೇವೆ. ಇದು ಕಾಂಗ್ರೆಸ್ ಪಕ್ಷದ ಸಂಕಲ್ಪ. ಮೋದಿ ಅವರ ಸರ್ಕಾರ ಅಧಿಕಾರಕ್ಕೆ ಬರುವುದಿಲ್ಲ. ಅವರು ಆತಂಕಪಡುವ ಅಗತ್ಯವಿಲ್ಲ. ನಾವು ಈ ಯೋಜನೆ ಜಾರಿ ಮಾಡದಿದ್ದರೆ ನಾವು ಮತ್ತೆ ಜನರ ಮುಂದೆ ಮತಯಾಚಿಸುವುದಿಲ್ಲ’ ಎಂದು ತಿಳಿಸಿದರು.

ಚನ್ನಪಟ್ಟಣ ಕಡೆಯಿಂದ ಬಿಜೆಪಿ ನಾಯಕರು ಪಕ್ಷಕ್ಕೆ ಬರುತ್ತಿದ್ದಾರಾ ಎಂದು ಕೇಳಿದ ಪ್ರಶ್ನೆಗೆ, ‘ಈಗ ಆ ವಿಚಾರ ಹೇಳುವುದಿಲ್ಲ. ಚುನಾವಣೆ ಮಾಡುವವರು ಚುನಾವಣೆ ಮಾಡಲಿ’ ಎಂದರು.

ಕಳೆದ ಲೋಕಸಭೆ ಚುನಾವಮೆಯಲ್ಲಿ ನನಗೆ ಕಣ್ಣೀರು ಹಾಕಿಸಿದವರಿಗೆ ನೀವು ಕಣ್ಣೀರು ಹಾಕಿಸಿ ಎಂಬ ದೇವೇಗೌಡರ ಹೇಳಿಕೆ ಬಗ್ಗೆ ಕೇಳಿದಾಗ, ‘ಅವರು ಹಿರಿಯರು, ಅವರ ಅನುಭವ, ಚಾಣಕ್ಯತೆ ಜತೆ ನಾವು ಸ್ಪರ್ಧೆ ಮಾಡಲು ಆಗುವುದಿಲ್ಲ. ಅವರಿಗೆ ಒಳ್ಳೆಯದಾಗಲಿ, ಅವರ ಆರೋಗ್ಯ ಉತ್ತಮವಾಗಿರಲಿ, ಇಷ್ಟು ಇಳಿವಯಸ್ಸಾದರೂ ಅವರು ಚುನಾವಣೆಯಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಅವರ ಛಲ, ಹೋರಾಟವನ್ನು ನಾವು ನೋಡಿ ಕಲಿಯಬೇಕಿದೆ’ ಎಂದು ತಿಳಿಸಿದರು.

ಪಕ್ಷದ ಬಂಡಾಯ ಅಭ್ಯರ್ಥಿಗಳಿಗೆ ಬರೆದಿರುವ ಪತ್ರದ ಬಗ್ಗೆ ಕೇಳಿದಾಗ, ‘ನಾನು ಈಗಲೂ ಕಾಂಗ್ರೆಸ್ ಪಕ್ಷದ ಬಂಡಾಯ ಅಭ್ಯರ್ಥಿಗಳಿಗೆ ಮುಂದಿನ ಎರಡು ಮೂರು ದಿನಗಳಲ್ಲಿ ಚುನಾವಣೆ ಕಣದಿಂದ ಹಿಂದೆ ಸರಿದು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸುವಂತೆ ಮನವಿ ಮಾಡಿದ್ದೇನೆ. ಅವರು ಮಾಡದಿದ್ದರೆ, ಪಕ್ಷದ ಚೌಕಟ್ಟಿನಲ್ಲಿ ಯಾವ ಕ್ರಮ ಕೈಗೊಳ್ಲಬೇಕೋ ಕೈಗೊಳ್ಳುತ್ತೇವೆ’ ಎಂದರು.

ಮೀಸಲಾತಿ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಮೀಸಲಾತಿ ಎಲ್ಲಿದೆ? ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ಅವರು ತಮ್ಮ ಆದೇಶಕ್ಕೆ ತಡೆ ನೀಡಿದ್ದು, ಮೀಸಲಾತಿ ಹೆಸರಿನಲ್ಲಿ ಜನರಿಗೆ ಚಾಕಲೇಟ್ ನೀಡಿ ಮೋಸ ಮಾಡಿದ್ದಾರೆ’ ಎಂದು ತಿಳಿಸಿದರು.

ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಡಿ.ಕೆ. ಶಿ ಅವರ ಮಾತುಗಳು

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಹೊಸ ಬದಲಾವಣೆಗಳು ನಡೆಯುತ್ತಿರುತ್ತವೆ. ಕಳೆದ 20-30 ವರ್ಷಗಳ ರಾಜಕಾರಣದಲ್ಲಿ ಈ ಹಿಂದೆ ನನ್ನ ವಿರುದ್ಧ ಸ್ಪರ್ಧೆ ಮಾಡಿದ್ದ ಪಿ.ಜಿ.ಆರ್ ಸಿಂಧ್ಯಾ ಅವರು ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಅವರು 6 ಬಾರಿ ಕನಕಪುರದಿಂದ ಶಾಸಕರಾಗಿದ್ದರು. ನನ್ನ ವಿರುದ್ಧ ಸ್ಪರ್ಧಿಸಿ ಕಡಿಮೆ ಅಂತರದಿಂದ ಸೋತಿದ್ದ ವಿಶ್ವನಾಥ್ ಅವರು ಕಾಂಗ್ರೆಸ್ ಪಕ್ಷ ಸೇರಿದ್ದಾರೆ.

ನನ್ನ ಪಕ್ಕದಲ್ಲಿ ಕೂತಿರುವ ನಾರಾಯಣಗೌಡರು ಬಿಜೆಪಿ ಅಭ್ಯರ್ಥಿಯಾಗಿ ನನ್ನ ವಿರುದ್ಧ ಸ್ಪರ್ಧಿಸಿದ್ದರು. 40 ವರ್ಷಗಳ ಕಾಲ ಸಹಕಾರಿ ಕ್ಷೇತ್ರ, ತಾಲೂಕು ಪಂಚಾಯಿತಿ, ಜಿಲ್ಲಾ ಸಹಕಾರಿ ಬ್ಯಂಕ್ ಸೇರಿದಂತೆ ಉತ್ತಮ ಸ್ಥಾನಗಳನ್ನು ಅಲಂಕರಿಸಿದ್ದಾರೆ. ಡಿ.ಕೆ. ಶಿವಕುಮಾರ್ ಅರಿಗೆ ಒಳ್ಳೆಯದಾಗುತ್ತದೆಯಾದರೆ, ತಾಲೂಕು ಅಭಿವೃದ್ಧಿಯಾಗುವುದಾದರೆ ನಾನು ಕಾಂಗ್ರೆಸ್ ಪಕ್ಷ ಸೇರುತ್ತೇನೆ ಎಂದು ಪಕ್ಷ ಸೇರುತ್ತಿದ್ದಾರೆ.

ಇವರ ಜತೆಗೆ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಪ್ರಭಾಕರ ರೆಡ್ಡಿ ಅವರು ಪಕ್ಷ ಸೇರಿದ್ದಾರೆ. ಅವರಿಗೆ ದಕ್ಷಿಣ ಕ್ಷೇತ್ರದಿಂದ ಜೆಡಿಎಶ್ ಟಿಕೆಟ್ ಘೋಷಣೆಯಾಗಿತ್ತು. ಅವರಿಗೂ ನಾನು ಪಕ್ಷಕ್ಕೆ ಸೇರುತ್ತಿದ್ದೇನೆ. ಇವರ ಜತೆಯಲ್ಲಿ ನೂರಾರು ಕಾರ್ಯಕರ್ತರು ಬಿಜೆಪಿ ಹಾಗೂ ಜೆಡಿಎಸ್ ಪಕ್ಷದಿಂದ ಕಾಂಗ್ರೆಸ್ ಸೇರುತ್ತಿದ್ದಾರೆ. ಇವರೆಲ್ಲರೂ ತಮ್ಮ ವ್ಯಕ್ತಿತ್ವ ಉಳಿಸಿಕೊಂಡು ರಾಜಕಾರಣ ಮಾಡುತ್ತಾ ಬಂದಿದ್ದಾರೆ.

ಈ ಎಲ್ಲಾ ಪ್ರಮುಖ ನಾಯಕರು ಮುಂದೆ ನಿಂತು ಚುನಾವಣೆ ಮಾಡುತ್ತಾರೆ. ಹೊಸಬರು ಹಳಬರು ಎಂಬ ವ್ಯಾತ್ಯಸವಿಲ್ಲದೆ ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಾರೆ. ಕಾಂಗ್ರೆಸ್ ಪಕ್ಷದಲ್ಲಿ 78 ಲಕ್ಷ ಸದಸ್ಯರಿದ್ದು, ಪಕ್ಷದ ಗ್ಯಾರಂಟಿ ಯೋಜನೆಗಳನ್ನು ಮನೆ ಮನೆ ತಲುಪಿಸಲಾಗುತ್ತಿದೆ. ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆಗೆ ನಿರಂತರವಾಗಿ ನಡೆಯುತ್ತಿರುವ ಪಕ್ಷ ಸೇರ್ಪಡೆ ಕಾರ್ಯಕ್ರಮಗಳೇ ಸಾಕ್ಷಿ. ಮೇ 10ರಂದು ನಡೆಯಲಿರುವ ಮತದಾನಕ್ಕೆ ಜನ ಕಾಯುತ್ತಿದ್ದಾರೆ. ಚುನಾವಣೆ ಸಮೀಕ್ಷೆಗಳಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಮುನ್ಸೂಚನೆ ನೀಡುತ್ತಿದ್ದಾರೆ. ದಕ್ಷಿಣ ಭಾರತದಲ್ಲಿ ಕರ್ನಾಟಕದಿಂದ ಬದಲಾವಣೆ ಆಗುತ್ತಿದೆ. ಮೇ 13ರಂದು ಫಲಿತಾಂಶ ಹೊರಬಂದ ನಂತರ ಕಾಂಗ್ರೆಸ್ ಸ್ವಂತ ಬಲದ ಆಧಾರದ ಮೇಲೆ ಸರ್ಕಾರ ರಚಿಸಲಿದೆ.

ಈ ಚುನಾವಣೆಯಲ್ಲಿ ನಾನು ಅಭ್ಯರ್ಥಿಯಲ್ಲ, ನೀವುಗಳೇ ಅಭ್ಯರ್ಥಿಯಾಗಿದ್ದು, ನೀವೆ ಚುನಾವಣೆ ಮಾಡಬೇಕು. ನಾರಾಯಣ ಗೌಡರಿಗೆ ರಾಮನಗರದಲ್ಲಿ ಉತ್ತಮ ಹಿಡಿತವಿದ್ದು, ನಮ್ಮ ಅಭ್ಯರ್ಥಿ ಇಕ್ಬಾಲ್ ಹುಸೇನ್ ಅವರನ್ನು ಗೆಲ್ಲಿಸಲು ಕೆಲಸ ಮಾಡಬೇಕು. ನೀವೆಲ್ಲರೂ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಂಡಿದ್ದು, ನಿಮ್ಮೆಲ್ಲರನ್ನೂ ಹೃದಯಪೂರ್ವಕವಾಗಿ ಸ್ವಾಗತ ಮಾಡುತ್ತೇನೆ.

ಇದೇ ಸಂದರ್ಭದಲ್ಲಿ ಕರ್ನಾಟಕದಲ್ಲಿ 25 ಸಾವಿರ ಪೌರ ಕಾರ್ಮಿಕರಿದ್ದು, ಇವರ ಹುದ್ದೆ ಖಾಯಂ ಮಾಡುವ ಬಗ್ಗೆ ಪಕ್ಷದ ಪ್ರಣಾಳಿಕೆಯಲ್ಲಿ ಸೇರಿಸಲಾಗಿದೆ. ಈ ಬಗ್ಗೆ ರಾಹುಲ್ ಗಾಂಧಿ ಅವರು ಘೋಷಣೆ ಮಾಡಿದ್ದು, ಇಂದು ಪೌರ ಕಾರ್ಮಿಕರ ನಡೆ ಕಾಂಗ್ರೆಸ್ ಕಡೆ ಎಂದು ಘೋಷಣೆ ಮಾಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JdaVhZJabeA0V7XQ5ZJp92

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

 

ಇತ್ತೀಚಿನ ಸುದ್ದಿ