ಬಾಲಕಿಯನ್ನು ಅಪಹರಿಸಿ 5 ಲಕ್ಷ ರೂ.ಗೆ ಬೇಡಿಕೆ | ಪೊಲೀಸ್ ಗೆ ದೂರು ನೀಡಿದಕ್ಕೆ ಅತ್ಯಾಚಾರ ಎಸಗಿ ಹತ್ಯೆ!
ಪಾಟ್ನಾ: ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅಪಹರಿಸಿ, ಕುಟುಂಬಸ್ಥರಿಗೆ 5 ಲಕ್ಷ ರೂಪಾಯಿಯ ಬೇಡಿಕೆ ಇಟ್ಟಿದ್ದು, ಬಾಲಕಿಯ ಮನೆಯವರು ಪೊಲೀಸರಿಗೆ ದೂರು ನೀಡಿದ ವಿಚಾರ ತಿಳಿದು ಬಾಲಕಿಯನ್ನು ಅತ್ಯಾಚಾರ ಎಸಗಿ ಹತ್ಯೆ ಮಾಡಿದ ಆಘಾತಕಾರಿ ಘಟನೆ ನಡೆದಿದೆ.
ಭಾನುವಾರ 16 ವರ್ಷದ ಬಾಲಕಿ ನಾಪತ್ತೆಯಾಗಿದ್ದಳು. ಬಾಲಕಿ ನಾಪತ್ತೆಯಾದ ಬಳಿಕ ಅಪಹರಣಕಾರರು ಕುಟುಂಬಸ್ಥರಿಗೆ ಕರೆ ಮಾಡಿ, 5 ಲಕ್ಷ ರೂಪಾಯಿ ಹಣ ನೀಡುವಂತೆ ಒತ್ತಡ ಹೇರಿದ್ದಾರೆ. ಅಲ್ಲದೇ ಒಂದು ವೇಳೆ ಹಣ ನೀಡದಿದ್ದರೆ ಬಾಲಕಿಯನ್ನು ಅತ್ಯಾಚಾರ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿಯಬಿಡುವುದಾಗಿ ಬೆದರಿಕೆ ಹಾಕಿದ್ದಾರೆ.
ಅಪಹರಣಕಾರರ ಕರೆಯಿಂದ ಭಯಭೀತರಾದ ಕುಟುಂಬಸ್ಥರು ತಕ್ಷಣವೇ ಗಾಂಧಿ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಾದ ಬಳಿಕ, ಅಪಹರಣಕ್ಕೊಳಗಾದ ಬಾಲಕಿಯ ಮೃತದೇಹ ಇಲ್ಲಿನ ಗಾಂಧಿ ಪಾರ್ಕ್ ರೈಲ್ವೆ ಹಳಿಯ ಬಳಿಯಲ್ಲಿ ಪತ್ತೆಯಾಗಿದೆ. ಬಾಲಕಿಯನ್ನು ಅತ್ಯಾಚಾರ ಮಾಡಿ ಹತ್ಯೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ.
ಇನ್ನೂ ಘಟನೆ ಸಂಬಂಧ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಪೊಲೀಸರು ಘಟನಾ ಸ್ಥಳದಲ್ಲಿ ಡೆತ್ ನೋಟ್ ಸಿಕ್ಕಿದೆ. ಈ ಸಂಬಂಧ ಮೂವರ ವಿರುದ್ಧ ಪೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.