ಟೆಸ್ಟ್ ಪಂದ್ಯಕ್ಕೆ ತೆರಳಿದ ಟೀಮ್ ಇಂಡಿಯಾ ಸದಸ್ಯರಿಗೆ ಕೆಟ್ಟ ಅನುಭವ!
ಮುಂಬೈ: ಮೂರನೇ ಟೆಸ್ಟ್ ಪಂದ್ಯಕ್ಕಾಗಿ ಮಂಗಳವಾರ ಮಧ್ಯಾಹ್ನ ಬ್ರಿಸ್ಟೇನ್ ಗೆ ಆಗಮಿಸಿದ ಟೀಮ್ ಇಂಡಿಯಾ ಆಟಗಾರರು ತಾವು ತಂಗಿದ್ದ ಪಂಚತಾರಾ ಹೊಟೇಲ್ ಬಗ್ಗೆ ಉದ್ದುದ್ದದ ದೂರುಗಳನ್ನು ಹೇಳಿದ್ದಾರೆ.
ಟೀಮ್ ಇಂಡಿಯಾ ಆಟಗಾರರು ಗಬ್ಬಾದಿಂದ ಸುಮಾರು 4 ಕಿ.ಮೀ. ದೂರದ ಪಂಚತಾರಾ ಹೊಟೇಲ್ ಸೋಫಿಟೆಲ್ ನಲ್ಲಿ ಉಳಿದುಕೊಂಡಿದ್ದರು. ಆದರೆ ಈ ಹೊಟೇಲ್ ಜೈಲಿನಂತಿದೆ ಎಂದು ಅವರು ಹೇಳಿದ್ದು, ನಮ್ಮ ಹಾಸಿಗೆಗಳನ್ನು ನಾವೇ ಸರಿಪಡಿಸಿಕೊಳ್ಳಬೇಕು, ಕಟ್ಟಡದಿಂದ ಆಚೆ ಹೋಗುವಂತಿಲ್ಲ. ಇಡೀ ಹೊಟೇಲ್ ಖಾಲಿ, ಖಾಲಿಯಾಗಿದೆ. ಸ್ವಿಮ್ಮಿಂಗ್ ಫೂಲ್, ಜಿಮ್ ಕೂಡ ಬಳಕೆಗೆ ನೀಡಿಲ್ಲ. ಹೊಟೇಲ್ ನ ಎಲ್ಲ ಕೆಫೆ, ರೆಸ್ಟಾರೆಂಟ್ ಗಳು ಬಂದ್ ಆಗಿವೆ. ಹೊಟೇಲ್ ನ ಟಾಯ್ಲೆಟ್ ನ್ನು ನಾವೇ ಸ್ವಚ್ಛಗೊಳಿಸಬೇಕು ಎಂದು ಆಟಗಾರರು ದೂರಿದ್ದಾರೆ.
ನಾವು ಇಲ್ಲಿಗೆ ಆಗಮಿಸಿದ ನವೆಂಬರ್ ತಿಂಗಳಿನಿಂದ 15ರಿಂದ 20 ಬಾರಿ ನಮ್ಮ ಮೇಲೆ ಕೊವಿಡ್ ಪರೀಕ್ಷೆ ನಡೆಸಲಾಗಿದೆ. ಇದರಿಂದಾಗಿ ನಮ್ಮ ಮೂಗಿನ ಹೊಳ್ಳೆಗಳು ಬಾತುಕೊಂಡಿವೆ. ನಮಗೆ ಸೂಕ್ತ ಸವಲತ್ತು ನೀಡಬೇಕು. ಇಲ್ಲವಾದರೆ, ನಮ್ಮನ್ನು ಭಾರತಕ್ಕೆ ವಾಪಸ್ ಕರೆದುಕೊಳ್ಳಬೇಕು ಎಂದು ತಂಡದ ಸದಸ್ಯರು ಆಗ್ರಹಿಸಿದ್ದಾರೆ.