ಡಿ.ಕೆ.ಶಿವಕುಮಾರ್ ನಡೆದು ಬಂದ ಹಾದಿ: ಎದುರಿಸಿದ ಅಗ್ನಿ ಪರೀಕ್ಷೆಗಳು - Mahanayaka
12:21 AM Sunday 15 - December 2024

ಡಿ.ಕೆ.ಶಿವಕುಮಾರ್ ನಡೆದು ಬಂದ ಹಾದಿ: ಎದುರಿಸಿದ ಅಗ್ನಿ ಪರೀಕ್ಷೆಗಳು

dk shivakumar
18/05/2023

ಕನಕಪುರ ತಾಲ್ಲೂಕು, ದೊಡ್ಡಆಲಹಳ್ಳಿ ಗ್ರಾಮದ ಕೆಂಪೇಗೌಡ ಹಾಗೂ ಗೌರಮ್ಮದಂಪತಿಯ ಪ್ರಥಮ ಪುತ್ರನಾಗಿ ಜನಿಸಿದ ಡಿ.ಕೆ.ಶಿವಕುಮಾರ್ (ಜನನ 15ನೇ ಮೇ 1962) ತಮ್ಮತಂದೆಯಿಂದಲೇ ನಾಯಕತ್ವದ ಗುಣಗಳನ್ನು ಪಡೆದುಕೊಂಡು ಬಂದರು.  18ನೇ ವಯಸ್ಸಿನಲ್ಲಿಯೇ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ವಿಭಾಗವಾದ NSUI ಗೆ ಸೇರ್ಪಡೆಗೊಂಡು ಅನತಿ ಕಾಲದಲ್ಲಿಯೇ ಬೆಂಗಳೂರು ಜಿಲ್ಲೆಯ ಘಟಕದ ಅಧ್ಯಕ್ಷರಾದರು (1981-83).

ತದನಂತರ ವಿದ್ಯಾಭ್ಯಾಸಕ್ಕೆಂದು ಬೆಂಗಳೂರು ಸೇರಿದ ಡಿ.ಕೆ.ಶಿವಕುಮಾರ್ ಆರ್.ಸಿ. ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಯುವ ಕಾಂಗ್ರೆಸ್‍ಗೆ ಸೇರಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು.  ಬೆಂಗಳೂರು ಗ್ರಾಮಾಂತರ ಜಿಲ್ಲಾ ಯುವಕಾಂಗ್ರೆಸ್‍ ಅಧ್ಯಕ್ಷರಾಗಿ ಕನಕಪುರ ತಾಲ್ಲೂಕಿನ ಗ್ರಾಮೀಣ ಭಾಗಗಳಲ್ಲಿ ಉಚಿತ ವೈದ್ಯಕೀಯ ಶಿಬಿರ, ರಕ್ತದಾನ ಶಿಬಿರಗಳನ್ನು ವ್ಯವಸ್ಥೆಗೊಳಿಸಿ ಜನಮನವನ್ನು ಸೂರೆಗೊಂಡರು.

1985ರ ಸಾತನೂರು ವಿಧಾನಸಭಾಕ್ಷೇತ್ರದಲ್ಲಿ ಅಂದಿನ ಪ್ರಭಾವಿ ಜನತಾದಳ ಮುಖಂಡರಾದ ಹೆಚ್.ಡಿ. ದೇವೇಗೌಡ ಅವರ ವಿರುದ್ಧ ಕಾಂಗ್ರೆಸ್ ಪಕ್ಷದಲ್ಲಿ ಉತ್ತಮ ಅಭ್ಯರ್ಥಿ ಸಿಗುವುದು ದುರ್ಲಭವಾದಾಗ ಪಕ್ಷದ ವರಿಷ್ಠರ ಕಣ್ಣು ಡಿ.ಕೆ.ಶಿವಕುಮಾರ್ ಮೇಲೆ ಬಿತ್ತು.  ಹೀಗಾಗಿ ರಾಜಕಾರಣದ ಪರಿಚಯವೇ ಇಲ್ಲದಿದ್ದ ಡಿ.ಕೆ. ಶಿವಕುಮಾರ್ ಅವರನ್ನು ಹೆಚ್.ಡಿ.ದೇವೇಗೌಡ ಅವರ ವಿರುದ್ದ ಸ್ಪರ್ಧಿಸಲು ಪಕ್ಷದ ಅಭ್ಯರ್ಥಿಯನ್ನಾಗಿ ನಿಲ್ಲಿಸಲಾಯಿತು.  ಸಾಕಷ್ಟು ಪ್ರಬಲ ಪ್ರತಿರೋಧವನ್ನೇ ತೋರಿದ ಶ್ರೀ ಡಿ.ಕೆ. ಶಿವಕುಮಾರ್ ಚುನಾವಣೆಯಲ್ಲಿ ಹೆಚ್.ಡಿ. ದೇವೇಗೌಡರು ಅತ್ಯಂತ ಪ್ರಯಾಸದ ಜಯ ಪಡೆಯುವಂತೆ ಮಾಡುವಲ್ಲಿ ಯಶಸ್ವಿಯಾದರು.

ವಿಧಾನಸಭಾ ಚುನಾವಣೆಯಾದ ಕೆಲವೇ ದಿನಗಳಲ್ಲಿ 1987ರಲ್ಲಿ ಅವರು ಸಾತನೂರು ಕ್ಷೇತ್ರದಿಂದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿಗೆ ಸದಸ್ಯರಾಗಿ ಆಯ್ಕೆಗೊಂಡರು.

1989ರಲ್ಲಿ ಅಖಿಲ ಭಾರತೀಯ ಕಾಂಗ್ರೆಸ್ ಪಕ್ಷದ ಮುಖೇನ ಸಾತನೂರು ವಿಧಾನ ಸಭಾಕ್ಷೇತ್ರದಿಂದ ಸ್ಪರ್ಧಿಯನ್ನಾಗಿ ನಿಲ್ಲಿಸಲಾಯಿತು. ಅಭೂತಪೂರ್ವ ರೀತಿಯಲ್ಲಿ, ಕ್ಷೇತ್ರದಲ್ಲಿ ಬೇರೂರಿದ ಜನತಾದಳದ ಪ್ರಾಬಲ್ಯವನ್ನು ಮೊಟಕುಗೊಳಿಸಿದ  ಡಿ.ಕೆ.ಶಿವಕುಮಾರ್ ಅತ್ಯಧಿಕ ಮತಗಳಿಂದ ಜಯಗಳಿಸಿದರು.

1991ರಲ್ಲಿ ಅಂದಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್‍ ಅವರು ಅನಾರೋಗ್ಯದ ಕಾರಣ ಮುಖ್ಯಮಂತ್ರಿ ಪದವಿಯನ್ನು ತ್ಯಜಿಸಬೇಕಾಗಿ ಬಂದಾಗ ಅವರ ಉತ್ತರಾಧಿಕಾರಿಯನ್ನಾಗಿ ಸೋರೆಕೊಪ್ಪ ಬಂಗಾರಪ್ಪ ಅವರು ಸರ್ವಾನುಮತದಿಂದ ಆಯ್ಕೆಯಾಗುವಂತೆ ಮಾಡುವಲ್ಲಿ ಡಿ.ಕೆ.ಶಿವಕುಮಾರ್ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದರು. ಇದಕ್ಕೆ ಬಹುಮಾನದ್ಯೋತಕವಾಗಿ ಬಂಗಾರಪ್ಪನವರು ಈ ಯುವಕನನ್ನು ರಾಜ್ಯಮಟ್ಟದ ಸಚಿವರನ್ನಾಗಿ ಮಾಡಿ ಬಂಧಿಖಾನೆ ಖಾತೆ ನೀಡಿದರು.

ಆದರೂ ಕಾಂಗ್ರೆಸ್ ಪಕ್ಷದಲ್ಲಿದ್ದ ಹಲವು ವಿರೋಧಿಗಳ ರಾಜಕೀಯ ಪಿತೂರಿಯಿಂದಾಗಿ 1994ರಲ್ಲಿ ಪಕ್ಷದ ಟಿಕೆಟ್ ವಿರೋಧಿಸಲಾಯಿತು, ಧೃತಿಗೆಡದೆ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಜಯಗಳಿಸಿ ಜಯದ ಪರಂಪರೆ ಮುಂದುವರೆಸಿದರು.

2004ರಲ್ಲಿ ಡಿ.ಕೆ.ಶಿವಕುಮಾರ್ ಸಾತನೂರು ವಿಧಾನಸಭಾ ಕ್ಷೇತ್ರದಿಂದ 4ನೇ ಭಾರಿ ಆರಿಸಿ ಬಂದರೂ ಕೂಡ ಕಾಂಗ್ರೆಸ್ ಪಕ್ಷ ಬಹುಮತಗಳಿಸುವಲ್ಲಿ ವಿಫಲವಾಯಿತು. ಸ್ವಂತ ಶಕ್ತಿಯ ಮೇಲೆ ಸರ್ಕಾರ ರಚಿಸಲು ಅಗತ್ಯವಾದ ಬಹುಮತವಿಲ್ಲದ ಕಾರಣ ಕೋಮವಾದಿ ಬಿ.ಜೆ.ಪಿ. ಪಕ್ಷ ಅಧಿಕಾರಕ್ಕೇರದಂತೆ ತಡೆಯಲು ಶ್ರೀ ದೇವೇಗೌಡ ನೇತೃತ್ವದ ಪಕ್ಷವಾದ ಜೆ.ಡಿ.ಎಸ್.(ಜಾತ್ಯತೀತ) ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳಬೇಕಾಯಿತು.  ಹೀಗೆ ರಾಜ್ಯದಲ್ಲಿ ಪ್ರಥಮ ಬಾರಿಗೆ ಉದಯಿಸಿದ ಕಾಂಗ್ರೆಸ್-ಜೆ.ಡಿ.ಎಸ್.(ಜಾ), ಸಮ್ಮಿಶ್ರ ಸರ್ಕಾರದಲ್ಲಿ ಡಿ.ಕೆ.ಶಿವಕುಮಾರ್ ಗೆ ಸ್ಥಾನವಿರಲಿಲ್ಲ, ಏಕೆಂದರೆ ಅವರು ಯಾವುದೇ ಕಾರಣಕ್ಕೂ ಸಮ್ಮಿಶ್ರ ಸರ್ಕಾರದಲ್ಲಿ ಮಂತ್ರಿಯಾಗಬಾರದೆಂಬುದು ಹೆಚ್.ಡಿ. ದೇವೇಗೌಡರು ಷರತ್ತು ವಿಧಿಸಿದ್ದರು.

ಆದರೂ ಒಟ್ಟಾರೆ ರಾಜ್ಯದ ಹಿತದೃಷ್ಟಿಯಿಂದ ಹಾಗೂ ಕಾಂಗ್ರೆಸ್ ಪಕ್ಷದ ಹಿತದೃಷ್ಟಿಯಿಂದ ಡಿ.ಕೆ. ಶಿವಕುಮಾರ್ ತಮಗೆ ಮಾಡಲಾದ ಅಪಮಾನವನ್ನು ಸಹಿಸಿಕೊಂಡರು ಹಾಗೂ ಕಾಂಗ್ರೆಸ್ ಪಕ್ಷವನ್ನು ಪುನರ್ ಸಂಘಟಿಸುವಲ್ಲಿತಮ್ಮ ಸಮಯವನ್ನು ಮೀಸಲಿಟ್ಟರು.

ತಮ್ಮ ವಿರುದ್ದ ದೇವೇಗೌಡರು ನಡೆಸಿದ ಸೇಡಿನ ರಾಜಕಾರಣಕ್ಕೆ ತಮ್ಮದೇ ರೀತಿಯಲ್ಲಿ ಪ್ರತ್ಯುತ್ತರ ನೀಡುವಲ್ಲಿ ಶೀಘ್ರದಲ್ಲಿಯೇ ಯಶಸ್ವಿಯಾದರು. 2006ರ ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರ ವಿರುದ್ದ ರಾಜಕೀಯವಾಗಿ, ಸಾರ್ವಜನಿಕವಾಗಿ ಅಷ್ಟೇನು ಪರಿಚಿತರಲ್ಲದ ಅಜ್ಞಾತ ಹೆಣ್ಣು ತೇಜಸ್ವಿನಿ ಗೌಡರವರನ್ನು ನಿಲ್ಲಿಸಿ ಗೆಲ್ಲಿಸುವ ಮೂಲಕ ಸೇಡು ತೀರಿಸಿಕೊಂಡರು.

ನಮ್ಮ ಪಕ್ಕದ ರಾಜ್ಯವಾದ ಮಹಾರಾಷ್ಟ್ರದಲ್ಲಿ ವಿಲಾಸ್‍ರಾವ್ ದೇಶ್‍ ಮುಖ್ ಸಮ್ಮಿಶ್ರ ಸರ್ಕಾರ NCP ಪಕ್ಷದೊಂದಿಗೆ ಸೆಣಸಾಟಕ್ಕಿಳಿದಾಗ ಸರ್ಕಾರ ಅಲ್ಪಮತದ ಅಪಾಯಕ್ಕೆ ಸಿಕ್ಕಿಕೊಂಡಿತ್ತು. ಆಗ NCP ಮತ್ತು ವಿರೋಧ ಪಕ್ಷಗಳು ಕಾಂಗ್ರೆಸ್ ಶಾಸಕರನ್ನು ಖರೀದಿಸುವ ಕುದುರೆ ವ್ಯಾಪಾರಕ್ಕೆ ಇಳಿದಿದ್ದವು. ತಕ್ಷಣ ಕಾಂಗ್ರೆಸ್ ಹೈಕಮಾಂಡಿನ ಆದೇಶದಂತೆ ಕಾರ್ಯಪ್ರವೃತ್ತರಾದ ಡಿ.ಕೆ.ಶಿವಕುಮಾರ್ ರವರು ಮಹಾರಾಷ್ಟ್ರ ಕಾಂಗ್ರೆಸ್ ಶಾಸಕರನ್ನು ಮುಂಬೈಯಿಂದ ಬೆಂಗಳೂರಿಗೆ ಕರೆದುಕೊಂಡು ಬಂದು ಸುಮಾರು 10–12 ದಿನಗಳ ಕಾಲ ಬೆಂಗಳೂರಿನ ವೈಭವಪೇತ ರೆಸಾರ್ಟ್‍ಒಂದರಲ್ಲಿ ಇರಿಸಿಕೊಂಡು ರಕ್ಷಣೆ ನೀಡಿದರು.  ಮುಂಬೈಯಲ್ಲಿ ಪರಿಸ್ಥಿತಿ ತಿಳಿಯಾಗಿ ಸರ್ಕಾರಕ್ಕೆ ಅಪಾಯವಿಲ್ಲವೆಂಬ ಸಂಗತಿ ಮನವರಿಕೆಯಾದ ನಂತರವಷ್ಟೇ ಮಹಾರಾಷ್ಟ್ರ ಶಾಸಕರನ್ನು ಕ್ಷೇಮವಾಗಿ ಕಳುಹಿಸಲಾಯಿತು.

ಹೀಗೆ ಡಿ.ಕೆ. ಶಿವಕುಮಾರ್ ರವರ ಸಕಾಲಿಕ ರಾಜಕೀಯ ತಂತ್ರಗಾರಿಕೆ ಫಲಕೊಟ್ಟು ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ  ವಿಲಾಸ್ ರಾವ್ ದೇಶ್ ಮುಖ್ ರವರ ಸರ್ಕಾರ ಯಾವುದೇ ಅಪಾಯ ಎದುರಿಸದೆ ಪಾರಾಗಿ ಮುಂದುವರೆಯುವಂತಾಯಿತು.  ಇದರ ಎಲ್ಲಾ ಶ್ರೇಯಸ್ಸು ಡಿ.ಕೆ.ಶಿವಕುಮಾರ್ ರವರಿಗೆ ಸಲ್ಲಬೇಕು.

2004ರಲ್ಲಿ ಪ್ರಥಮ ಬಾರಿಗೆ ಜೆ.ಡಿ.ಎಸ್.-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ರೂಪುಗೊಂಡಾಗ ಎಸ್.ಎಂ.ಕೃಷ್ಣ ರವರನ್ನು ಕಡೆಗಣಿಸಿ ಹೆಚ್.ಡಿ.ದೇವಗೌಡರ ಒಪ್ಪಿಗೆಯಂತೆ ಧರ್ಮಸಿಂಗ್ ಅವರನ್ನು ಮುಖ್ಯಮಂತ್ರಿ ಮಾಡಬೇಕಾಗಿ ಬಂದಾಗ ಎಸ್.ಎಂ. ಕೃಷ್ಣ ಅವರಿಗೆ ಬದಲಿಯಾಗಿ ಯಾವುದಾದರೊಂದು ಸ್ಥಾನ ಕೊಡಲೇಬೇಕೆಂದು ಪಕ್ಷದ ವರಿಷ್ಠರ ಮನವೊಲಿಸಿ ಎಸ್.ಎಂ. ಕೃಷ್ಣ ಅವರು ಮಹಾರಾಷ್ಟ್ರದ ರಾಜ್ಯಪಾಲರಾಗುವಂತೆ ಮಾಡುವಲ್ಲಿ ಯಶಸ್ವಿಯಾದರು.

ಬಂಡಾಯ ಶಾಸಕರಾಗಿಯೂ ಕಾಂಗ್ರೆಸ್ ಪಕ್ಷದ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಭಾಗವಹಿಸುತ್ತಿದ್ದ ಡಿ.ಕೆ. ಶಿವಕುಮಾರ್ ಆಗಲೇ ರಾಜಕೀಯವಾಗಿ ಮೂಲೆಗುಂಪಾಗಿದ್ದ ಎಸ್.ಎಂ. ಕೃಷ್ಣ ಅವರನ್ನು ಓಲೈಸಿ ಮರಳಿ ರಾಜಕೀಯರಂಗಕ್ಕೆ ಕರೆತಂದರು ಹಾಗೂ ಜನತಾದಳ ಅಧಿಕಾರದಲ್ಲಿದ್ದರೂ ಅಲ್ಪಮತದ ಬೆಂಬಲದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಎಸ್.ಎಂ. ಕೃಷ್ಣ ಅವರು ರಾಜ್ಯಸಭೆಗೆ ಸ್ಪರ್ಧಿಸುವಂತೆ ಮಾಡಿದರು. ಜನತಾದಳದಿಂದಲೇ ಅಗತ್ಯವಾದ ಸದಸ್ಯರ ಬೆಂಬಲ ಸಿಗುವಂತೆ ವ್ಯೂಹರಚನೆ ಮಾಡಿ ಎಸ್.ಎಂ. ಕೃಷ್ಣ ರಾಜ್ಯಸಭೆಗೆ ಆಯ್ಕೆಯಾಗುವಂತೆ ಮಾಡಿದರು.

ಎಸ್.ಎಂ. ಕೃಷ್ಣ ಅವರು ಪ್ರತಿಕೂಲ ಪರಿಸ್ಥಿತಿಯಲ್ಲಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದ ಪ್ರಸಂಗದ ಸಂಪೂರ್ಣಕೀರ್ತಿ, ಗೌರವ, ಡಿ.ಕೆ. ಶಿವಕುಮಾರ್ ಅವರ ವ್ಯೂಹರಚನೆಗೆ ಸಂದ ವಿಜಯ ಎಂದೇ ಭಾವಿಸಲಾಗುತ್ತಿದೆ.

1999ರಲ್ಲಿ ಎಸ್.ಎಂ. ಕೃಷ್ಣ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಆಯ್ಕೆಗೊಂಡಾಗ ಡಿ.ಕೆ. ಶಿವಕುಮಾರ್ ಅವರ ಹಿಂದೆ ಬೆನ್ನೆಲುಬಾಗಿ ನಿಂತು ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಭೂತಪೂರ್ವ ರೀತಿಯಲ್ಲಿ ಜಯಗಳಿಸಿ ಸರ್ಕಾರ ರಚಿಸುವಲ್ಲಿ ಕಾರಣೀಭೂತರಾದರು.

ಎಸ್.ಎಂ. ಕೃಷ್ಣ ಚುನಾವಣಾ ಪೂರ್ವದಲ್ಲಿ ಪಾಂಚಜನ್ಯ ಮೊಳಗಿಸುವ ಮೂಲಕ ಚುನಾವಣಾ ಸಮರ ಆರಂಭಿಸಿದಾಗ, ಈ ಐತಿಹಾಸಿಕ ಯಾತ್ರೆಯನ್ನು ಆಯೋಜಿಸಿದವರು ಡಿ.ಕೆ.ಶಿವಕುಮಾರ್, ಇದರಿಂದಲೇ ಕಾಂಗ್ರೆಸ್ ಪಕ್ಷ 139 ಸ್ಥಾನಗಳನ್ನು ಗಳಿಸಿ ಸ್ವಂತ ಬಲದ ಮೇಲೆ ಸರ್ಕಾರವನ್ನು ರಚಿಸುವಂತಾಯಿತು.

1999ರಲ್ಲಿ ಡಿ.ಕೆ. ಶಿವಕುಮಾರ್ ಅವರಿಗೆ ಮತ್ತೊಮ್ಮೆ ಸಾತನೂರು ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷ ಅನುಮತಿ ನೀಡಿತ್ತು. ಈ ಭಾರಿ ಅವರ ಎದುರಾಳಿ ಹೆಚ್.ಡಿ.ದೇವೇಗೌಡ ಅವರ ಪುತ್ರ ಹೆಚ್.ಡಿ.ಕುಮಾರಸ್ವಾಮಿ, ದೇವೇಗೌಡರು ರಾಜಕೀಯ ಸ್ಥಿತ್ಯಂತರದಿಂದ ಅಂದಿನ ಪ್ರಧಾನ ಮಂತ್ರಿಯಾಗಿದ್ದರು. ತಂದೆಯನ್ನೇ ರಾಜಕೀಯ ವ್ಯೂಹದಲ್ಲಿ ಮಣಿಸಿದ ಡಿ.ಕೆ. ಶಿವಕುಮಾರ್ ಅವರಿಗೆ ಮಗ ಯಾವ ಲೆಕ್ಕ?  ನಿರೀಕ್ಷಿಸಿದಂತೆ ಹೆಚ್.ಡಿ.ಕುಮಾರಸ್ವಾಮಿ ಚುನಾವಣೆಯಲ್ಲಿ ಸೋತರು.  ಡಿ.ಕೆ. ಶಿವಕುಮಾರ್ ಸತತ 3ನೇ ಬಾರಿಗೆ ಮರಳಿ ಗೆಲುವು ಸಾಧಿಸಲು ಸಾಧ್ಯವಾಯಿತು.  ಎಸ್.ಎಂ. ಕೃಷ್ಣ ಅವರು ಕ್ಯಾಬಿನೆಟ್‍ ದರ್ಜೆ ಸಚಿವರನ್ನಾಗಿ ನೇಮಿಸಿ ಮಹತ್ವದ ಸಹಕಾರ ಖಾತೆ ನೀಡುವ ಮೂಲಕ ಡಿ.ಕೆ. ಶಿವಕುಮಾರ್ ಅವರ ಶ್ರಮಕ್ಕೆತಕ್ಕ ಮನ್ನಣೆ ನೀಡಿದರು.(1999-2002).

2002ರಲ್ಲಿ ನಗರಾಭಿವೃದ್ಧಿ ಖಾತೆ ಸಚಿವರಾಗಿರಾಜ್ಯ ನಗರಯೋಜನಾ ಮಂಡಳಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು.  ಸಚಿವ ಸಂಪುಟದ ಉಪ ಸಮಿತಿಯ ಅಧ್ಯಕ್ಷರಾಗಿ ಯುವಕರನ್ನು ಸಂಘಟಿಸಿ ಜೀವನದಲ್ಲಿ ನೆಲೆಗೊಳಿಸುವ “ರಾಜೀವ್‍ ಯುವ ಶಕ್ತಿ” ಸಂಘಟನೆಗಳು ರಾಜ್ಯದಲ್ಲಿ ತಲೆಎತ್ತಲು ಕಾರಣೀಭೂತರಾದರು.  ವಿಶ್ವದಲ್ಲಿಯೇ ಮೊದಲನೆಯದು ಎನ್ನಿಸಿದ ಸ್ತ್ರೀ ಶಕ್ತಿ ಸಂಘಟನೆಗಳನ್ನು ಆರಂಭಿಸುವಲ್ಲಿ ಡಿ.ಕೆ.ಶಿವಕುಮಾರ್ ಅವರ ಪಾಲು ಮಹತ್ವದ್ದು.

2008ರಲ್ಲಿ ಎಸ್.ಎಂ. ಕೃಷ್ಣ ರಾಜ್ಯಪಾಲ ಪದವಿ ತ್ಯಜಿಸಿ ಪುನರ್ ರಾಜಕಾರಣಕ್ಕೆ ಬರಬೇಕುಎಂದು ಬಯಸಿದಾಗ ಅವರನ್ನು ಕರೆತಂದು ಮತ್ತೊಮ್ಮೆ ಕರ್ನಾಟಕದಿಂದ ರಾಜ್ಯಸಭೆಗೆ ಅವರನ್ನು ಆಯ್ಕೆಮಾಡುವಲ್ಲಿ ಡಿ.ಕೆ. ಶಿವಕುಮಾರ್ ಮಹತ್ವದ ಪಾತ್ರ ವಹಿಸಿದರು.  ಆನಂತರ ಎಸ್.ಎಂ. ಕೃಷ್ಣ ಕೇಂದ್ರ ಸಚಿವ ಸಂಪುಟಕ್ಕೆ ಸೇರಿ ವಿದೇಶಾಂಗ ವ್ಯವಹಾರಗಳ ಮಹತ್ವದ ಖಾತೆಯನ್ನು ನಿಭಾಯಿಸಿದರು.

ಕನಕಪುರಕ್ಷೇತ್ರದಲ್ಲಿ ವಿಡಿಯೋ ಕಾನ್ಫರೆನ್ಸ್ ಸೌಲಭ್ಯವನ್ನು ಸ್ಥಾಪಿಸಿ ಆ ಮೂಲಕ ಕ್ಷೇತ್ರದ ಮತದಾರರೊಂದಿಗೆ ನೇರಾ ನೇರಾ ಸಂಪರ್ಕ ಸಾಧಿಸಿದ ದೇಶದ ಪ್ರಥಮ ಶಾಸಕರೆಂಬ ಕೀರ್ತಿಗೆ ಭಾಜನರಾದವರು ಡಿ.ಕೆ.ಶಿವಕುಮಾರ್, ಸಾತನೂರು ಹಾಗೂ ಕನಕಪುರ ಕಛೇರಿಗಳಲ್ಲಿ ಸ್ಥಾಪಿಸಿದ ವಿಡಿಯೋ ಸಂಪರ್ಕ ಸೌಲಭ್ಯದಿಂದಾಗಿ ಗ್ರಾಮೀಣ ಮತದಾರರು ತಮ್ಮ ಶಾಸಕರೊಂದಿಗೆ ನೇರಾನೇರಾ ಮಾತುಕತೆ ನಡೆಸಿ ತಮ್ಮ ಕುಂದುಕೊರತೆಗಳನ್ನು ಹೇಳಿಕೊಂಡು ಅವುಗಳಿಂದ ಪರಿಹಾರ ಪಡೆದುಕೊಳ್ಳಲು ಸಾಧ್ಯವಾಯಿತು.ಇದರಿಂದ ಸಾರ್ವಜನಿಕರ ಅಪಾರ ಹಣ ಹಾಗೂ ವೇಳೆಯು ಅಪವ್ಯಯವಾಗುವುದು ತಪ್ಪಿತು. ಈ ಬಗ್ಗೆ ರಾಷ್ಟ್ರ ಮಟ್ಟದ ಇಂಡಿಯಾ ಟುಡೆಯಂತಹ ದಿನಪತ್ರಿಕೆಯು ಅವರ ಸಾಧನೆಯ ಬಗ್ಗೆ ತನ್ನ 2006 ಏಪ್ರಿಲ್ 17ನೇ ದಿನದ ಸಂಚಿಕೆಯಲ್ಲಿ ಭಾರತೀಯ ಶಾಸಕನೊಬ್ಬ ಕೈಗೊಂಡ ಈ ಮಹತ್ವದ ಸಾಧನೆಯನ್ನು ಗುರುತಿಸಿ ಶ್ಲಾಘಿಸಿತು.

ಇಂದು ಮಂಡ್ಯ ಲೋಕಸಭಾ ಕ್ಷೇತ್ರದ ಸಂಸದೆಯಾಗಿ ರಾಜಕೀಯ ಧ್ರುವತಾರೆಯಾಗಿರುವ ಕುಮಾರಿ ರಮ್ಯಾ ಕಾಂಗ್ರೆಸ್ ಪಕ್ಷಕ್ಕೆ ಕಾಲೂರಿದ್ದು ಡಿ.ಕೆ.ಶಿವಕುಮಾರ್ ಅವರ ಸತತ ಒತ್ತಾಸೆ ಹಾಗೂ ಪ್ರೇರಣೆಯಿಂದ.

ಒಂದು ವರ್ಷದ ಹಿಂದೆ ಬೆಂಗಳೂರು ಅರಮನೆ ಆವರಣದಲ್ಲಿ ಬೃಹತ್ ಯುವಕಾಂಗ್ರೆಸ್ ಸಮಾವೇಶದಲ್ಲಿ ಕಾಂಗ್ರೆಸ್‍ ಉಪಾಧ್ಯಕ್ಷ ರಾಹುಲ್‍ಗಾಂಧಿ ಸಮ್ಮುಖದಲ್ಲಿ ಕುಮಾರಿ ರಮ್ಯಾ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು.  ಕೇವಲ ಕೆಲವೇ ದಿನಗಳ ಅಂತರದಲ್ಲಿ ಕುಮಾರಿ ರಮ್ಯಾ ಮತದಾರರ ಮೇಲೆ ವಿಶ್ವಾಸ, ಪ್ರಭಾವ ಭೀರಿದರಿಂದಾಗಿ ಅವರು ಉಪ ಚುನಾವಣೆಯಲ್ಲಿ ಎದುರಾಳಿಯ ಮಣ್ಣುಮುಕ್ಕಿಸಿ ಸಂಸದೆಯಾಗಿ ಸುಲಭ ಜಯಗಳಿಸಿದರು.

2013ರಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಪೀಠಕ್ಕೆ ಮರಳಿ ಬಂದು ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿಗಳಾಗಿ ಆಯ್ಕೆಗೊಂಡಾಗ ಪಕ್ಷದಲ್ಲಿನ ವಿರೋಧಿಗಳು ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿ ಕಪೋಲಕಲ್ಪಿತ ದಾಖಲೆಗಳನ್ನು ಪಕ್ಷದ ವರಿಷ್ಠರಿಗೆ ಕಳುಹಿಸಿ, ಡಿ.ಕೆ.ಶಿವಕುಮಾರ್ ಅವರಿಗೆ ಸಚಿವ ಸ್ಥಾನ ತಪ್ಪುವಂತೆ ಮಾಡಿದರು. ಇದರಿಂದ ದೃತಿಗಡೆದ ಡಿ.ಕೆ.ಶಿವಕುಮಾರ್, ಪಕ್ಷದ ನಾಯಕತ್ವದ ವಿರುದ್ದ ಬಹಿರಂಗವಾಗಿ ಯಾವುದೇ ಪ್ರತಿಭಟನೆ ತೋರದೆ, ತಮ್ಮ ವಿರುದ್ಧ ಆಪಾದನೆಗಳ ಬಗ್ಗೆ ನ್ಯಾಯಾಂಗ ತಜ್ಞರಿಂದ ವಿಮರ್ಶೆ ಮಾಡಿಸುವಂತೆ ವರಿಷ್ಠರನ್ನು ಕೋರಿಕೊಂಡರು ಪಕ್ಷದಿಂದ ನೇಮಿತರಾದ ಇಬ್ಬರು ನ್ಯಾಯಾಂಗ ತಜ್ಞರು ಡಿ.ಕೆ.ಶಿವಕುಮಾರ್ ಯಾವುದೇ ರೀತಿಯ ಅಕ್ರಮ ಎಸಗಿಲ್ಲ ಎಂಬ ಅಭಿಪ್ರಾಯಕ್ಕೆ ಬಂದು ಡಿ.ಕೆ.ಶಿವಕುಮಾರ್ ಅವರನ್ನು ಆರೋಪ ಮುಕ್ತರನ್ನಾಗಿಸಿದರು. ಇದರಿಂದ ಏಳೇ ತಿಂಗಳ ಅಲ್ಪಅವಧಿಯ ನಂತರ ಡಿ.ಕೆ.ಶಿವಕುಮಾರ್ ಸಿದ್ಧರಾಮಯ್ಯ ಸಂಪುಟದಲ್ಲಿ ಸಚಿವ ಸ್ಥಾನ ಪಡೆದುಕೊಂಡರು. ಇಂಧನ ಖಾತೆಯಂತಹ ಪ್ರಮುಖ ಖಾತೆಯನ್ನುಅವರಿಗೆ ನೀಡಲಾಯಿತು.

ಈ ವೇಳೆಯಲ್ಲಿಯೇ ಮಂತ್ರಿ ಹಾಗೂ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಉಪಚುನಾವಣೆಗಳು ಎದುರಾದವು.  ತಮ್ಮ ಸಂಘಟನಾ ಶಕ್ತಿ,  ರಾಜಕೀಯತಂತ್ರ ಹಾಗೂ ಚಾಣಾಕ್ಯ ನೀತಿ ಇವುಗಳನ್ನು ಧಾರಾಳವಾಗಿ ಬಳಸಿಕೊಂಡ ಡಿ.ಕೆ.ಶಿವಕುಮಾರ್ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಅಭೂತಪೂರ್ವ ರೀತಿಯಲ್ಲಿ ವಿಜಯ ಸಾಧಿಸಲು ಕಾರಣೀಭೂತರಾದರಲ್ಲದೆ ಜನತಾದಳದಿಂದ ಎರಡು ಕ್ಷೇತ್ರಗಳನ್ನು ಕಸಿದುಕೊಂಡು ಕಾಂಗ್ರೆಸ್ಸಿಗೆ ಪ್ರತಿಷ್ಟೆಯನ್ನು ತಂದುಕೊಟ್ಟರು.

ಇದರಿಂದ ಏಳೇ ತಿಂಗಳ ಅಲ್ಪಅವಧಿಯ ನಂತರ ಡಿ.ಕೆ.ಶಿವಕುಮಾರ್ ಸಿದ್ಧರಾಮಯ್ಯ ಸಂಪುಟದಲ್ಲಿ ಸಚಿವ ಸ್ಥಾನ ಪಡೆದುಕೊಂಡರು. ಇಂಧನ ಖಾತೆಯಂತಹ ಪ್ರಮುಖ ಖಾತೆಯನ್ನುಅವರಿಗೆ ನೀಡಲಾಯಿತು.

ಇಂಧನ ಸಚಿವರಾಗಿ ಡಿ.ಕೆ.ಶಿವಕುಮಾರ್ ಜಡ್ಡುಗಟ್ಟಿದ್ದ ಇಂಧನ ಇಲಾಖೆಯನ್ನು ಅಮೂಲಾಗ್ರ ಸುಧಾರಣೆ ಮಾಡಲಾರಂಭಿಸಿದರು.  ಹಿಂದಿನ ಸರ್ಕಾರಗಳ ಅವಧಿಯಲ್ಲಿ ಸಹಿ ಮಾಡಲಾಗಿದ್ದ ಹಲವಾರು ವಿದ್ಯುತ್ ಖರೀದಿ ಒಪ್ಪಂದಗಳನ್ನು ರದ್ದುಗೊಳಿಸಿದರು.  ಅಷ್ಟೇ ಅಲ್ಲ ಹಿಂದಿನ ಸರ್ಕಾರದ ಕಾಲಾವಧಿಯಲ್ಲಿ ಮಾಡಲಾದ ವಿದ್ಯುತ್ ಖರೀದಿಯಲ್ಲಿ ಅಕ್ರಮ ಕುರಿತ ಸದನ ಸಮಿತಿ ರಚನೆಗೆ ಕಾರಣರಾದರು. ರೈತ ಸೂರ್ಯ ಯೋಜನೆಯನ್ನು ರೂಪಿಸಿ ಭೂ ಮಾಲೀಕರಾದ ರೈತರು ಸ್ವಯಂ 1 ರಿಂದ 3 ಮೆ.ವ್ಯಾ. ಸೌರವಿದ್ಯುತ್  ಉತ್ಪಾದನೆ ಮಾಡುವಂತೆ ಅವಕಾಶ ಕಲ್ಪಿಸಿದರು.  ರಾಜ್ಯ ಸರ್ಕಾರದ ಈ ಯೋಜನೆಯನ್ನು ಕೇಂದ್ರ ಸರ್ಕಾರ ಮುಕ್ತ ಕಂಠದಿಂದ ಪ್ರಶಂಸಿದೆಯಲ್ಲದೇ ಉಳಿದ ರಾಜ್ಯಗಳೂ ಕರ್ನಾಟಕದ ಮಾದರಿ ಅನುಸರಿಸುವಂತೆ ಕೇಂದ್ರ ಇಂಧನ ಸಚಿವರೇ ಕರೆ ನೀಡಿರುತ್ತಾರೆ.

2018ರಲ್ಲಿ ಅಸ್ತಿತ್ವಕ್ಕೆ ಬಂದ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಮೊದಲಿಗೆ ಜಲಸಂಪನ್ಮೂಲ ನಂತರ ಹೆಚ್ಚುವರಿಯಾಗಿ ಕನ್ನಡ ಮತ್ತು ಸಂಸ್ಕøತಿ ಖಾತೆಯನ್ನು ಪಡೆದ ಡಿ.ಕೆ.ಶಿವಕುಮಾರ್ ಅವರು ಅನೇಕ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದರು, ಮಹದಾಯಿ ಸಮಸ್ಯೆ ಪರಿಹಾರ, ಎತ್ತಿನಹೊಳೆ, ಮೇಕೆದಾಟು ಯೋಜನೆಗಳ ಪ್ರಗತಿಗೆ ತಮ್ಮದೇ ಆದ ಕೊಡುಗೆ ನೀಡಿದ ಅವರು ರಾಜ್ಯದಲ್ಲಿ ಅತೀ ಹೆಚ್ಚು ಪ್ರಮಾಣದ ಚೆಕ್ ಡ್ಯಾಮ್‍ ಗಳ ನಿರ್ಮಾಣಕ್ಕೆ ಪ್ರೋತ್ಸಾಹ ಧನ ನೀಡಿಕೆ ಮೂಲಕ ಉತ್ತೇಜಿಸಿದರು.

ಕೆ.ಆರ್.ಎಸ್‍ ನ ಬೃಂದಾವನ ಉದ್ಯಾನವನವನ್ನು ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಿದರಲ್ಲದೇ ಬೃಹತ್ ಕಾವೇರಿ ಪ್ರತಿಮೆ ನಿರ್ಮಾಣಕ್ಕೂ ನಿರ್ಧರಿಸಿದ್ದರು.

ಮೈತ್ರಿ ಸರ್ಕಾರದ ಉಳಿವಿಗೆ ಟೊಂಕ ಕಟ್ಟಿ ನಿಂತಿದ್ದ ಶಿವಕುಮಾರ್ ಅವರು ಪಕ್ಷದ ನಾಯಕತ್ವ ತಮಗೆ ಜವಬ್ದಾರಿ ವಹಿಸಿದ ಅನೇಕ ಉಪಚುನಾವಣೆಗಳಲ್ಲಿ ಪಕ್ಷ ಗೆಲುವಂತೆ ನೋಡಿಕೊಂಡಿರು ಬಳ್ಳಾರಿ ಲೋಕಸಭೆ ಕ್ಷೇತ್ರ ಕುಂದಗೋಳ ವಿಧಾನಸಭಾ ಕ್ಷೇತ್ರದ ಗೆಲುವಿನಲ್ಲಿ ಡಿ.ಕೆ.ಶಿವಕುಮಾರ್ ಅವರ ಕೊಡುಗೆ ಗಮನಾರ್ಹ.

4 ದಶಕಗಳ ಕಾಲ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಸೇನಾನಿಯಾಗಿ ಕಾರ್ಯ ನಿರ್ವಹಿಸಿರುವ ಡಿ.ಕೆ.ಶಿವಕುಮಾರ್ ಅವರು ಯಾವುದೇ ಸಂದರ್ಭದಲ್ಲೂ ಯಾವುದೇ ಆಮಿಷಗಳಿಗೂ ಬಲಿಯಾಗದೇ ಪಕ್ಷ ನಿಷ್ಠೆಯನ್ನು ಬದಲಿಸಲಿಲ್ಲ. ಕಾಂಗ್ರೆಸ್ ಕಟ್ಟಾಳು ಆಗಿರುವ ಡಿ.ಕೆ.ಶಿವಕುಮಾರ್ ಅವರ 2017ರಲ್ಲಿ ಹೈಕಮಾಂಡ್ ವಹಿಸಿದ ಜವಬ್ದಾರಿಯ ಮೇರೆಗೆ ಗುಜರಾತ್ ಕಾಂಗ್ರೆಸ್ ಶಾಸಕರನ್ನು ರಕ್ಷಿಸಿಟ್ಟುಕೊಂಡ ಅವರು ಅದಕ್ಕಾಗಿ ಭಾರಿ ಬೆಲೆಯನ್ನೇ ತೆರಬೇಕಾಯಿತಾದರೂ ವಿಚಲಿತರಾಗಲಿಲ್ಲ. ದ್ವೇಷದ ರಾಜಕಾರಣದಿಂದ ಕೇಂದ್ರ ಸರ್ಕಾರವು ಐಟಿ ಇಡಿ ಮತ್ತಿತರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಅವರು ಮತ್ತು ಅವರ ಪರಿವಾರದ ಮೇಲೆ ದಾಳಿ ನಡೆಸಿದಲ್ಲದೇ ಡಿ.ಕೆ.ಶಿವಕುಮಾರ್ ಅವರನ್ನು ಜೈಲಿಗೂ ಅಟ್ಟಿದರು. ಈ ಸಂದರ್ಭದಲ್ಲಿ ಸ್ವತಃ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂದಿ ಅವರು ಜೈಲಿಗೆ ಭೇಟಿ ಕೊಟ್ಟು ಡಿ.ಕೆ.ಶೀವಕುಮಾರ್‍ರವರಿಗೆ ಸಾಂತ್ವನ ಹೇಳಿದ್ದು, ಅವರ ಪಕ್ಷ ನಿಷ್ಠೆಗೆ ಸಿಕ್ಕ ಗೌರವಕ್ಕೆ ಸಾಕ್ಷಿ.

ಡಿ.ಕೆ.ಶಿವಕುಮಾರ್ ರವರು ಜೈಲಿನಲ್ಲಿದ್ದಾಗ ಲಕ್ಷಾಂತರ ಜನ ಬೀದಿಗಿಳಿದು ಮಾಡಿದ ಹೋರಾಟ ಹಾಗೂ ಅವರು ಜೈಲಿನಿಂದ ಬಂದ ಬಳಿಕ ಡಿ.ಕೆ.ಶಿವಕುಮಾರ್ ರವರಿಗೆ ಸಿಕ್ಕ ಸ್ವಾಗತ ಅವರ ನಿಷ್ಠಾವಂತ ನಾಯಕತ್ವಕ್ಕೆ ಸಾಕ್ಷಿಯಾಗಿದೆ.

ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷದ ಸಂಘಟನೆ:

ಇದಾದ ಕೆಲವೇ ದಿನಗಳಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಖಾಲಿ ಇದ್ದ ನಾಯಕತ್ವದ ಸ್ಥಾನಕ್ಕೆ ಅಂದರೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸೋನಿಯಾ ಗಾಂಧಿ ಅವರು ಮಾರ್ಚ್ 11, 2020ರಂದು  ಡಿ.ಕೆ.ಶಿವಕುಮಾರ್ ಅವರನ್ನು ನೇಮಿಸಿದರು.

ಈ ನೇಮಕವಾದ ಕೆಲವೇ ದಿನಗಳಲ್ಲಿ ಕೋವಿಡ್ ಮಹಾಮಾರಿ ದೇಶದೆಲ್ಲೆಡೆ ಆವರಿಸಿತು. ಈ ಸಂದರ್ಭದಲ್ಲಿ ಮನೆಯಲ್ಲಿ ಕೂರದ ಶಿವಕುಮಾರ್ ಅವರು ಪಕ್ಷದ ನಾಯಕರು ಹಾಗೂ ಕಾರ್ಯಕರ್ತರಿಗೆ ಉತ್ತೇಜನ ನೀಡಿ ಅವರು ಕೂಡ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಸಹಾಯ ಮಾಡಲು ಕರೆ ನೀಡಿದರು.

ಕಳೆದ ಮೂರು ವರ್ಷಗಳ ಅವಧಿಯಲ್ಲಿ ಕರ್ನಾಟಕ ರಾಜ್ಯದಲ್ಲಿ ಡಿ.ಕೆ.ಶಿವಕುಮಾರ್ ಅವರು ಪಕ್ಷವನ್ನು ಸಂಘಟಿಸಿದ ರೀತಿ ಎಲ್ಲಾ ರಾಜಕೀಯ ನಾಯಕರಿಗೆ ಮಾದರಿಯಾಗಿ ಉಳಿದಿದೆ ಎಂದರೆ ತಪ್ಪಾಗುವುದಿಲ್ಲ.

ಕೋವಿಡ್ ಸಮಯದಲ್ಲಿ ಹಗಲಿರುಳು ತಾವೂ ಕೆಲಸ ಮಾಡಿ, ತಮ್ಮ ಪಕ್ಷದ ಜನರು ಜನರ ಬಳಿ ಹೋಗಿ ಕೆಲಸ ಮಾಡಿ ಅವರ ವಿಶ್ವಾಸ ಗೆಲ್ಲುವಂತೆ ಸೂಚನೆ ನೀಡಿದರು.

ಲಾಕ್ ಡೌನ್, ಆದಾಯವಿಲ್ಲದೆ, ಮಾರುಕಟ್ಟೆ ಇಲ್ಲದೆ ಕಂಗಾಲಾಗಿದ್ದ ರೈತರು, ಕಾರ್ಮಿಕರು, ಬಡವರು, ಅಸಂಘಟಿತ ಕಾರ್ಮಿಕರ ಸಂಕಷ್ಟಗಳಿಗೆ ಸ್ಪಂದಿಸಿದರು. ಅವರ ಪರವಾಗಿ ಧ್ವನಿಯಾಗಿ ಸರ್ಕಾರದ ಗಮನ ಸೆಳೆದರು.

ಮಾರುಕಟ್ಟೆಇಲ್ಲದೆ ರೈತರು ಕಂಗಾಲಾದಾಗ ರೈತರ ಜಮೀನಿನಿಂದ ಕೋಟ್ಯಂತರ ರೂಪಾಯಿ ಮೊತ್ತದ ಹಣ್ಣು ತರಕಾರಿ ಖರೀದಿ ಮಾಡಿ ನಂತರ ಅವುಗಳನ್ನು ಜನರಿಗೆ ಉಚಿತವಾಗಿ ಹಂಚುವಂತೆ ಮಾಡಿದರು.

ಕೋವಿಡ್ ನಿಂದ ಸಂಕಷ್ಟಕ್ಕೆ ಸಿಲುಕಿದ ಅಸಂಘಟಿತ ಕಾರ್ಮಿಕರಿಗೆ ಪರಿಹಾರ ನೀಡುವಂತೆ ಸರ್ಕಾರಕ್ಕೆ ಒತ್ತಾಯ ಹಾಕಿದ ಹೋರಾಟ ಮಾಡಿದರು.

ಸರ್ಕಾರ ರಾಜ್ಯದ ಜನರನ್ನು ನಡು ನೀರಲ್ಲಿ ಕೈಬಿಟ್ಟಾಗ ಕಾಂಗ್ರೆಸ್ ಸಹಾಯ ಹಸ್ತ ಕಾರ್ಯಕ್ರಮ ಮೂಲಕ ಕೋವಿಡ್ ಸಂತ್ರಸ್ತರಿಗೆ ಸೇವೆ ಮಾಡಿದರು. ವಿರೋಧ ಪಕ್ಷವಾಗಿ ಜನರ ಸೇವೆ ಹೇಗೆ ಮಾಡಬಹುದು ಎಂದು ತೋರಿಸಿಕೊಟ್ಟು, ಸರ್ಕಾರಕ್ಕೂ ಮಾದರಿಯಾದರು.

ಕೋವಿಡ್ ಸಮಯದಲ್ಲಿ ತಮ್ಮ ಊರುಗಳಿಗೆ ಮರಳಲು ಮುಂದಾದ ವಲಸೆ ಕಾರ್ಮಿಕರಿಂದ ಸರ್ಕಾರವೇ ಮೂರು ಪಟ್ಟು ಟಿಕೆಟ್ ದರ ವಸೂಲಿಗೆ ನಿಂತಾಗ ಅದರ ವಿರುದ್ದ ಹೋರಾಡಿ ಪಕ್ಷದಿಂದ 1 ಕೋಟಿ ಚೆಕ್ ನೀಡಲು ಮುಂದಾದರು. ಆಗ ಸರ್ಕಾರ ಎಚ್ಚೆತ್ತು ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿತು. ನಂತರ ಇದು ಇಡೀ ದೇಶಕ್ಕೆ ಮಾದರಿಯಾಯಿತು.

ಜನರಿಗೆ ಕೋವಿಡ್ ಸಮಯದಲ್ಲಿ ಸರ್ಕಾರದಿಂದ ಸರಿಯಾಗಿ ಆರೋಗ್ಯ ಸೇವೆ ಸಿಗದಿದ್ದಾಗ ಆರೋಗ್ಯ ಹಸ್ತ ಕಾರ್ಯಕ್ರಮ ಮೂಲಕ ಆರೋಗ್ಯ ಸೇವೆ, ಆಂಬುಲೆನ್ಸ್ ಸೇವೆ ಒದಗಿಸಿ ಜನ ಸಾಮಾನ್ಯರ ಕಷ್ಟಕ್ಕೆ ಸಹಯವಾಗಿ ರಾಜ್ಯದ ಪ್ರತಿ ಮನೆ ಮಗನಾದರು.

ಜನರನ್ನು ರಕ್ಷಣೆ ಮಾಡಬೇಕಿದ್ದ ಸರ್ಕಾರ ಕೋವಿಡ್ ಸಮಯದಲ್ಲೂ  ಭ್ರಷ್ಟಾಚಾರಕ್ಕೆ ಮುಂದಾದಾಗ ಅದ ವಿರುದ್ಧ ಧ್ವನಿ ಎತ್ತಿದರು. ಇಷ್ಟೇ ಅಲ್ಲ ಜನರಿಗೆ ಜೀವನ ನಡೆಸಲು ಸವಾಲಾಗಿದ್ದ ಬೆಲೆ ಏರಿಕೆ ವಿರುದ್ಧ, 100 ನಾಟೌಟ್, ಸೈಕಲ್ ಜಾಥಾ, ಎತ್ತಿನ ಬಂಡಿ ಹೋರಾಟ ಮಾಡಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದರು.

ಚಾಮರಾಜನಗರ ಆಕ್ಸಿಜನ್ ದುರಂತದಲ್ಲಿ 36 ಜನ ಸತ್ತಾಗ ಸರ್ಕಾರ ಸುಳ್ಳು ಲೆಕ್ಕ ನೀಡಿ ಯಾಮಾರಿಸಲು ಪ್ರಯತ್ನಿಸಿತು. ಆಗ ಸಿದ್ದರಾಮಯ್ಯ ಅವರ ಜತೆ ಸೇರಿ ಅಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸತ್ತವರ ಸಂಖ್ಯೆ 36 ಎಂದು ತಿಳಿಸಿದರು. ಅಲ್ಲದೆ ಪಕ್ಷದವತಿಯಿಂದ ಸಂತ್ರಸ್ತರ ಕುಟುಂಬಕ್ಕೆ ತಲಾ 1 ಲಕ್ಷ ಪರಿಹಾರ ನೀಡಿದರು.

ಇನ್ನು ರಾಷ್ಟ್ರೀಯ ಕಾಂಗ್ರೆಸ್ ವತಿಯಿಂದ ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನ ಆರಂಭಿಸಿದಾಗ, ಮತ್ತೆ ತಮ್ಮ ಕಾರ್ಯಕರ್ತರನ್ನು ಜನರತ್ತ ಕಳುಹಿಸಿ ರಾಜ್ಯದಲ್ಲಿ ಯಶಸ್ವಿಯಾಗಿ ಸದಸ್ಯತ್ವ ನೋಂದಣಿ ಅಭಿಯಾನ ಮಾಡಿದರು. ಪಕ್ಷದ ಸದಸ್ಯತ್ವ ಅಭಿಯಾನ ಯಶಸ್ವಿ ಜಾರಿ ಹಾಗೂ ರಾಜ್ಯದಲ್ಲಿ 78 ಲಕ್ಷ ಸದಸ್ಯತ್ವ ನೋಂದಣಿ ಮೂಲಕ ದೇಶದಲ್ಲಿ ಪ್ರಥಮ ಸ್ಥಾನ ಪಡೆದು ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬಿದರು.

ಕಾವೇರಿ ಜಲಾನಯನ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ, ವಿದ್ಯುತ್ ಉತ್ಪಾದನೆ ಸೇರಿದಂತೆ ಹಲವು ಪ್ರಯೋಜನಗಳನ್ನು ಹೊಂದಿರುವ ಮೇಕೆದಾಟು ಯೋಜನೆಗೆ ಸರ್ಕಾರ ನಿರ್ಲಕ್ಷ್ಯ ವಹಿಸಿದಾಗ ಈ ಯೋಜನೆ ಆಗ್ರಹಿಸಿ, ಈ ಭಾಗದಲ್ಲಿ 160 ಕಿ.ಮೀ ಪಾದಯಾತ್ರೆ ಮಾಡಿದರು.

ಈ ಹಂತದಲ್ಲಿ ಸರ್ಕಾರ ಸುಲ್ಳು ಕೇಸ್ ದಾಖಲಿಸಿ ಹೋರಾಟ ಹತ್ತಿಕ್ಕಲು ಪ್ರಯತ್ನಿಸಿತಾದರೂ ಕೆಚ್ಚೆದೆಯಿಂದ ತಾವು ಹಾಗೂ ಪಕ್ಷದ ನಾಯಕರು ಕಾರ್ಯಕರ್ತರನ್ನು ಸಂಘಟಿಸಿ ಪಾದಯಾತ್ರೆ ಯಶಸ್ವಿ ಮಾಡಿದರು.

ಕೇಂದ್ರ ಸರ್ಕಾರದ ಕೃಷಿ ಕರಾಳ ಕಾಯ್ದೆ ವಿರುದ್ಧ ಬೀದಿಗಿಳಿದು ಹೋರಾಟ ಮಾಡಿದರು. ರೈತರ ಬೆನ್ನಿಗೆ ನಿಂತರು. ಇನ್ನು ಭ್ರಷ್ಟಾ ಸರ್ಕಾರದ ಭ್ರಷ್ಟಾಚಾರ, 40% ಕಮಿಷನ್, ಪೇ ಸಿಎಂ, ನೇಮಕಾತಿ ಅಕ್ರಮ ವಿರುದ್ಧ ಬೀದಿಗಿಳಿದು ಹೋರಾಟ ಮಾಡಿದರು. ಆಮೂಲಕ ಅನ್ಯಾಯಕ್ಕೆ ಒಳಗಾದವರ ಧ್ವನಿಯಾಗಿ ರೂಪುಗೊಂಡರು.

ನಿರುದ್ಯೋಗ ಸಮಸ್ಯೆ ಹೆಚ್ಚಳದ ವಿರುದ್ಧ ಹಲವು ಮಾದರಿಯ ಹೋರಾಟ ಹಮ್ಮಿಕೊಂಡರು. 75ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಸ್ವಾತಂತ್ರ್ಯ ನಡಿಗೆ ಅಭೂತಪೂರ್ವ ಕಾರ್ಯಕ್ರಮ ಆಯೋಜನೆ ಮಾಡಿ ಸರ್ಕಾರಕ್ಕಿಂತ ಅದ್ಭುತ ಹಾಗೂ ವಿಶೇಷವಾಗಿ ಸ್ವಾತಂತ್ರ್ಯ ದಿನ ಆಚರಣೆ ಮಾಡಿದರು.

ರಾಹುಲ್ ಗಾಂಧಿ ಅವರು ಭಾರತ ಜೋಡೋ ಯಾತ್ರೆ ಆರಂಭಿಸಿದ ನಂತರ ಕರ್ನಾಟಕದಲ್ಲಿ 21 ದಿನಗಳ ಕಾಲ 550 ಕಿ.ಮೀ ಉದ್ದದ ಭಾರತ ಜೋಡೋ ಯಾತ್ರೆ ಯಶಸ್ವಿ ಆಯೋಜನೆ ಮಾಡಿದರು. ಈ ಯೋಜನೆ ಹಾದುಹೋದ ಮಾರ್ಗದಲ್ಲಿ ಕಾಂಗ್ರೆಸ್ ಪಕ್ಷ 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸುವಲ್ಲಿ ಪ್ರಮುಖ ಕಾರಣವಾಯಿತು..

ಪ್ರಜಾಧ್ವನಿ ಯಾತ್ರೆ ಮೂಲಕ ರಾಜ್ಯದ ಮೂಲೆ ಮೂಲೆ ಪ್ರವಾಸ ಮಾಡಿ ಎಲ್ಲ ವರ್ಗಗಳ ಜನರ ಸಂಕಷ್ಟ ಆಲಿಸಿದರು. ಅವುಗಳಿಗೆ ಪರಿಹಾರ ಕಂಡುಕೊಳ್ಳು ಯೋಜನೆಗಳನ್ನು ರೂಪಿಸಲು ನೆರವಾದರು. ಮೀನುಗಾರರು, ನೇಕಾರರು, ತಿಗಲರು, ಮಡಿವಾಳ, ಲೈಂಗಿಕ ಅಲ್ಪಸಂಖ್ಯಾತ ಸಮುದಾಯಗಳ ಕಷ್ಟ ಆಲಿಸಿದರು. ಈ ಕಾರ್ಯಕ್ರಮಗಳಲ್ಲಿ ಆಯಾ ಸಮುದಾಯಗಳ ಸಮಸ್ಯೆ ಬೇಡಿಕೆ ಆಲಿಸಿ, ಅವರಿಗೆ ಸೂಕ್ತ ನ್ಯಾಯ ದೊರಕಿಸಿಕೊಡುವ ಭರವಸೆ ಕೊಟ್ಟರು. ತಮ್ಮ ಮಾತಿನಂತೆ ಪಕ್ಷದ ಪ್ರಣಾಳಿಕೆಯಲ್ಲಿ ಎಲ್ಲಾ ವರ್ಗದ ಜನರ ಕಲ್ಯಾಣಕ್ಕೆ ಕಾರ್ಯಕ್ರಮ ರೂಪಿಸಲಾಯಿತು .

ಪಕ್ಷದ ಸಂಘಟನೆ ಚಾಲಕರ ಘಟಕ, ಅಪಾರ್ಟ್ ಮೆಂಟ್ ನಿವಾಸಿಗಳ ಘಟಕ ಆರಂಭಿಸಿದರು. ರಾಜ್ಯದಲ್ಲಿ ನೇರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ನೆರೆ ಸಂದರ್ಭದಲ್ಲಿ ಅಲ್ಲಿನ ಜನರಿಗೆ ನೆರವಾಗುವಂತೆ ಪಕ್ಷದ ಕಾರ್ಯಕರ್ತರು ನಾಯಕರಿಗೆ ಕರೆ ಕೊಟ್ಟರು.

ಕಾಂಗ್ರೆಸ್ ಪಕ್ಷದ ಬಗ್ಗೆ ಜನರ ವಿಶ್ವಾಸ ಹೆಚ್ಚಿಸಿ, ಅನ್ಯ ಪಕ್ಷದ ನಾಯಕರನ್ನು ಪಕ್ಷಕ್ಕೆ ಕರೆ ತಂದರು. ಜೆಡಿಎಸ್ ಪಕ್ಷದ ಅನೇಕ ಶಾಸಕರು, ವಿಧಾನಸಭಾ ಸದಸ್ಯರು, ಬಿಜೆಪಿಯ ಶಾಸಕರು ಹಾಗೂ ಪರಿಷತ್ ಸದಸ್ಯರುಗಳನ್ನು ಪಕ್ಷಕ್ಕೆ ಸೇರಿಸಿಕೊಂಡು ಪಕ್ಷದ ಬಲವರ್ದನೆ ಮಾಡಿದರು.

ನಾ ನಾಯಕಿ ಕಾರ್ಯಕ್ರಮದ ಮೂಲಕ ಮಹಿಳೆಯರಿಗೆ ಉತ್ತೇಜನ ನೀಡಿ ಮಹಿಳೆಯರನ್ನು ಕಾಂಗ್ರೆಸ್ ಪಕ್ಷದ ಕಡೆ ಸೆಳೆಯುವಲ್ಲಿ ಯಶಸ್ವಿಯಾದರು. ಎಲ್ಲಾ ಸಮುದಾಯ, ಧರ್ಮಗಳ ಧರ್ಮಗುರುಗಳು, ಮಠಾಧೀಶರ ವಿಶ್ವಾಸ ಪಡೆದಿದ್ದು, ಅವರ ಬೆಂಬಲ ಪಡೆದು ಪಕ್ಷವನ್ನು ಸಂಘಟಿಸಿ ಶಕ್ತಿ ತುಂಬಿದರು.

ಇನ್ನು ಬಹಳಷ್ಟು ಜನ ಮೂಗಿನ ಮೇಲೆ ಬೆರಳಿಟ್ಟು ನೋಡುವಂತೆ ಪಕ್ಷದ ಎಲ್ಲಾ ಹಿರಿಯ ಹಾಗೂ ಕಿರಿಯ ನಾಯಕರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವಲ್ಲಿ ಯಶಸ್ವಿಯಾದರು. ಕಳೆದ ಮೂರು ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಹೇಗೆಲ್ಲಾ ಸಂಘಟನೆ ಮಾಡಿ ಪಕ್ಷಕ್ಕೆ ಶಕ್ತಿ ತುಂಬಬಹುದೋ ಆ ಎಲ್ಲಾ ಅವಕಾಶಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಪಕ್ಷವನ್ನು ಮುನ್ನಡೆಸಿದರು.

ವೈಯಕ್ತಿಕ ಜೀವನದಲ್ಲಿ ಪ್ರಗತಿಪರ ರೈತರಾಗಿ, ವಸತಿ ಯೋಜನೆಗಳ ನಿರ್ಮಾತೃರಾಗಿರುವ ಡಿ.ಕೆ. ಶಿವಕುಮಾರ್, ನ್ಯಾಷನಲ್ ಎಜುಕೇಶನ್ ಫೌಂಡೇಷನ್‍ ನ ಸ್ಥಾಪಕ ಅಧ್ಯಕ್ಷರಾಗಿ ಇಂಜಿನಿಯರಿಂಗ್, ನರ್ಸಿಂಗ್ ಹಾಗೂ ಮ್ಯಾನೇಜ್‍ ಮೆಂಟ್ ವಿದ್ಯಾಸಂಸ್ಥೆಗಳನ್ನು ಯಶಸ್ವಿಯಾಗಿ ನಡೆಸುತ್ತಿದ್ದಾರೆ. ಅಲ್ಲದೆ ವಿಶ್ವಮಟ್ಟದ ಎರಡು ಪ್ರಾಥಮಿಕ ಶಾಲೆಗಳನ್ನು ನಡೆಸುತ್ತಿದ್ದಾರೆ.

ಡಿ.ಕೆ. ಶಿವಕುಮಾರ್ ನೇತೃತ್ವದ ಡಿ.ಕೆ.ಎಸ್. ಚಾರಿಟೇಬಲ್ ಟ್ರಸ್ಟ್‍ಕ್ಷೇತ್ರದ ಹಲವಾರು ಸಮಸ್ಯಾತ್ಮಕ ಗ್ರಾಮಗಳಲ್ಲಿ ಶುದ್ಧಕುಡಿಯುವ ನೀರು ತಯಾರಿಕಾ ಘಟಕಗಳನ್ನು ಸ್ಥಾಪಿಸಿ ಕೇವಲ 10 ಪೈಸೆಗೆ ಒಂದು ಲೀಟರ್ ಪರಿಶುದ್ಧ ಕುಡಿಯುವ ನೀರು ಸಿಗುವಂತೆ ಮಾಡಿದೆ. 100ಕ್ಕೂ ಹೆಚ್ಚು ಗ್ರಾಮಗಳಲ್ಲಿ ಈಗಾಗಲೇ ಸ್ಥಾಪಿಸಲಾಗಿರುವ ಈ ಸ್ಥಾವರಗಳ ಮೂಲಕ ಪರಿಶುದ್ಧ ಕುಡಿಯುವ ನೀರು ದೊರಕಿಸಿಕೊಡುವ ಮೂಲಕ ಅಶುದ್ದ ನೀರಿನ ಬಳಕೆಯಿಂದ ಜನರಿಗಾಗುತ್ತಿದ್ದ ರೋಗರುಜಿನಗಳನ್ನು ನಿವಾರಿಸುವಲ್ಲಿ ಡಿ.ಕೆ.ಎಸ್. ಚಾರಿಟೇಬಲ್ ಟ್ರಸ್ಟ್ ಯಶಸ್ವಿಯಾಗಿದೆ.  ಈ ಯೋಜನೆಯನ್ನು ಕಾಲಾನುಕ್ರಮದಲ್ಲಿ ಶ್ರೀ ಡಿ.ಕೆ.ಸುರೇಶ್ ಪ್ರತಿನಿಧಿಸುತ್ತಿರುವ ಇಡೀ ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ವಿಸ್ತರಿಸುವ ಕಾರ್ಯಕ್ರಮವನ್ನು ಡಿ.ಕೆ.ಎಸ್. ಚಾರಿಟೇಬಲ್ ಟ್ರಸ್ಟ್ ಹಾಕಿಕೊಂಡಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ