ಐವರ ಜೀವ ಉಳಿಸಿದ 20 ತಿಂಗಳ ಮಗು | ಅತ್ಯಂತ ಕಿರಿಯ ಅಂಗಾಂಗ ದಾನಿಯ ರಿಯಲ್ ಸ್ಟೋರಿ
ನವದೆಹಲಿ: 20 ತಿಂಗಳ ಮಗು ಅಂಗಾಂಗ ದಾನ ಮಾಡಿದ್ದು, ಈ ಮಗುವಿನ ದಾನದಿಂದಾಗಿ 5 ಜೀವಗಳನ್ನು ಉಳಿಸಲು ಸಾಧ್ಯವಾಗಿದೆ. ಮಗುವಿನ ತಾಯಿ-ತಂದೆ ತಮ್ಮ 20 ತಿಂಗಳ ಮಗುವಿನ ಪ್ರಾಣ ಉಳಿಸಲು ಸತತವಾಗಿ ಪ್ರಯತ್ನಿಸಿದ್ದರು. ಆದರೆ ಅದು ಸಾಧ್ಯವಿಲ್ಲ ಎಂದು ತಿಳಿಯುತ್ತಿದ್ದಂತೆಯೇ ತಮ್ಮ ಮಗುವಿನ ಅಂಗಾಂಗ ದಾನ ಮಾಡಿದ್ದಾರೆ.
ಧನಿಷ್ಕಾ ಎಂಬ 20 ತಿಂಗಳ ಮಗು ಜನವರಿ 8ರಂದು ಸಂಜೆ ಮನೆಯ ಮೊದಲ ಮಹಡಿಯಿಂದ ಕೆಳಗೆ ಬಿದ್ದು, ಗಂಭೀರವಾಗಿ ಗಾಯಗೊಂಡಿತ್ತು. ತಕ್ಷಣವೇ ಮಗುವನ್ನು ದೆಹಲಿಯ ಸರ್ ಗಂಗಾರಾಮ್ ಆಸ್ಪತ್ರೆಗೆ ತಂದು ದಾಖಲಿಸಿದ್ದರು.
ಜನವರಿ 11ರಂದು ವೈದ್ಯರು ಮಗುವಿನ ಆರೋಗ್ಯ ಸ್ಥಿತಿಯ ಬಗ್ಗೆ ಪೋಷಕರಿಗೆ ಹೇಳಿದ್ದು, ಮಗುವಿನ ಮೆದುಳು ನಿಷ್ಕ್ರಿಯಗೊಂಡಿದೆ ಎಂದು ಹೇಳಿದ್ದಾರೆ. ಮಗು ಇನ್ನು ಗುಣಮುಖವಾಗಲು ಸಾಧ್ಯವಿಲ್ಲ ಎಂದೂ ಹೇಳಿದ್ದಾರೆ. ಈ ಸಂದರ್ಭದಲ್ಲಿ ಇತರ ಮಕ್ಕಳ ಪೋಷಕರು ತಮ್ಮ ಮಕ್ಕಳ ಪ್ರಾಣ ಉಳಿಸಲು ಅಂಗಾಂಗಕ್ಕಾಗಿ ಕಾಯುತ್ತಿದ್ದಾರೆ ಎಂಬ ವಿಚಾರ ತಿಳಿದ ಧನಿಷ್ಕಾಳ ಪೋಷಕರು ತಮ್ಮ ಮಗುವಿನ ಅಂಗಾಂಗ ದಾನ ಮಾಡಲು ನಿರ್ಧರಿಸಿದ್ದು, ಇತರ ರೋಗಿಗಳ ಜೀವ ಉಳಿಯುವುದಾದರೆ ನಮ್ಮ ಮಗಳ ಅಂಗಾಂಗ ದಾನ ಮಾಡುತ್ತೇವೆ ಎಂದು ಹೇಳಿದ್ದಾಳೆ.
ಧನಿಷ್ಕಾಳನ್ನು ಈ ಮೂಲಕ ಜೀವಂತವಾಗಿಡಲು ಪೋಷಕರು ನಿರ್ಧರಿಸಿದ್ದರು. ಮಗಳ ಹೃದಯ, ಎರಡು ಮೂತ್ರಪಿಂಡ ಹಾಗೂ ಎರಡು ಕಾರ್ನಿಯಾಗಳನ್ನು ಸರ್ ಗಂಗಾರಾಮ್ ಆಸ್ಪತ್ರೆಯಲ್ಲಿ ದಾನ ಮಾಡಲಾಗಿದೆ. ಈ ಅಂಗಾಂಗಗಳನ್ನು ಐವರು ರೋಗಿಗಳಿಗೆ ಕಸಿ ಮಾಡಲಾಗಿದೆ. ಕಾರ್ನಿಯಾವನ್ನು ಸಂರಕ್ಷಿಸಿಡಲಾಗಿದೆ.
ಧನಿಷ್ಕಾ ಕುಟುಂಬದ ಈ ಉದಾತ್ತಾ ಕಾರ್ಯ ನಿಜಕ್ಕೂ ಪ್ರಶಂಸನೀಯ ಮತ್ತು ಇತರರನ್ನು ಪ್ರೇರೇಪಿಸಬೇಕು ಎಂದು ಆಸ್ಪತ್ರೆಯ ವೈದ್ಯ ಆಶೀಶ್ ಕುಮಾರ್ ಹೇಳಿದ್ದಾರೆ.