ಮಳೆಯಲ್ಲಿ ಸಿಲುಕಿ ಮೃತಪಟ್ಟ ಮಹಿಳೆ ಕುಟುಂಬಸ್ಥರಿಗೆ 5 ಲಕ್ಷ ಪರಿಹಾರ ಘೋಷಣೆ: ಕುಟುಂಬಕ್ಕೆ ಸಿಎಂ ಸಾಂತ್ವನ
ಬೆಂಗಳೂರು: ಆಂಧ್ರದಿಂದ ಬೆಂಗಳೂರಿಗೆ ಪ್ರವಾಸಕ್ಕೆ ಬಂದು ಮಳೆಗೆ ಸಿಲುಕಿ ಮೃತಪಟ್ಟ ಮಹಿಳೆಯ ಕುಟುಂಬಸ್ಥರಿಗೆ 5 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಆಸ್ಪತ್ರೆಗೆ ಭೇಟಿ ನೀಡಿದ ಸಿಎಂ, ಮೃತ ಮಹಿಳೆ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ನಡೆದ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡರು. ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಮಳೆಯಿಂದ ಸಂಕಷ್ಟಕ್ಕೆ ಸಿಲುಕಿ ಆಸ್ಪತ್ರೆ ಸೇರಿರುವವರ ಖರ್ಚನ್ನು ಸರ್ಕಾರವೇ ಭರಿಸಲಿದೆ ಎಂದು ತಿಳಿಸಿದ್ದಾರೆ.
ನಾವು ಈಗಷ್ಟೇ ಅಧಿಕಾರಕ್ಕೆ ಬಂದಿದ್ದೇವೆ. ನಗರದಲ್ಲಿ ಕೆಲವು ಅವೈಜ್ಞಾನಿಕ ಅಂಡರ್ ಪಾಸ್ ಗಳಿವೆ. ಅದನ್ನ ಸರಿಪಡಿಸುವ ಕೆಲಸ ಮಾಡ್ತೀವಿ. ಆಸ್ಪತ್ರೆಯಿಂದ ನಿರ್ಲಕ್ಷ್ಯ ಆಗಿದ್ರೆ ಕ್ರಮ ತೆಗೆದುಕೊಳ್ಳುತ್ತೇವೆ. ಆದರೆ ರೋಗಿ ಆಸ್ಪತ್ರೆಗೆ ಬರುವಷ್ಟೊತ್ತಿಗೆ ಮೃತಪಟ್ಟಿದ್ರು ಅಂತ ವೈದ್ಯರು ಹೇಳ್ತಿದ್ದಾರೆ. ಏನೇ ಆಗಿದ್ರು ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಆಂಧ್ರಪ್ರದೇಶದಿಂದ ಬೆಂಗಳೂರಿಗೆ ಪ್ರವಾಸಕ್ಕೆ ಬಂದಿದ್ದ ಕುಟುಂಬವೊಂದರ ಇನ್ಫೋಸಿಸ್ ಉದ್ಯೋಗಿಯಾಗಿದ್ದ ಭಾನುರೇಖಾ ಎಂಬ ಮಹಿಳೆ ಭಾರೀ ಮಳೆಯಲ್ಲಿ ಸಿಲುಕಿ ಮೃತಪಟ್ಟಿದ್ದರು.
ಭಾನುರೇಖಾ ಕುಟುಂಬವನ್ನು ಭೇಟಿ ಮಾಡಿದ ಸಿಎಂ:
ನಗರದ ಕೆ.ಆರ್.ವೃತ್ತದ ಅಂಡರ್ ಪಾಸ್ ಬಳಿ ಮಳೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ 23 ವರ್ಷದ ಭಾನುರೇಖಾ ಅವರ ಕುಟುಂಬ ವರ್ಗದವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಸಂಜೆ ಮಾರ್ಥಾಸ್ ಆಸ್ಪತ್ರೆಯಲ್ಲಿ ಭೇಟಿ ಮಾಡಿ ಸಾಂತ್ವನ ಹೇಳಿದರು.
ಗಾಯಾಳುಗಳನ್ನು ಆಸ್ಪತ್ರೆಗೆ ತಕ್ಷಣ ದಾಖಲಿಸಿಕೊಳ್ಳದೆ ವಿಳಂಬ ಮಾಡಿದ್ದರ ಕುರಿತು ಮುಖ್ಯಮಂತ್ರಿಯವರು ತನಿಖೆಗೆ ಆದೇಶಿದ್ದಾರೆ.
ಮಳೆ ಅನಾಹುತದ ಮಾಹಿತಿ ದೊರೆಯುತ್ತಿದ್ದಂತೆ ಸಿದ್ದರಾಮಯ್ಯ ಅವರು ನಗರ ಪೊಲೀಸ್ ಆಯುಕ್ತರು ಮತ್ತು ಬಿಬಿಎಂಪಿ ಆಯುಕ್ತರ ಜತೆ ತುರ್ತು ಸಭೆ ನಡೆಸಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು.
ಮಳೆಯಿಂದ ಉರುಳಿ ಬಿದ್ದಿರುವ ಮರಗಳನ್ನು ತಕ್ಷಣ ತೆರವುಗೊಳಿಸಬೇಕು, ಮಳೆ ಅನಾಹುತದಿಂದ ಹಾನಿಗೊಳಗಾಗಿರುವ ಪ್ರದೇಶಗಳಲ್ಲಿ ಕೂಡಲೇ ಪರಿಹಾರ ಕ್ರಮ ಕೈಗೊಳ್ಳಬೇಕು. ನಿರ್ಲಕ್ಷ್ಯ ತೋರಿ ಸಾರ್ವಜನಿಕರಿಗೆ ತೊಂದರೆ ಆದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw