ಕಣ್ಣನ್ನೇ ಕೊಂದ ಗುಂಡಿನ ದಾಳಿ: ಛಲ ಬಿಡದೇ ಬದುಕು ಗೆಲ್ಲಲು ಹೊರಟ ಕಾಶ್ಮೀರಿ ಹುಡುಗಿ 12ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣ
ಅದು 2016. ಭದ್ರತಾ ಪಡೆ ನಡೆಸಿದ ಎನ್ ಕೌಂಟರ್ ನಲ್ಲಿ ಹಿಜ್ಬುಲ್ ಕಮಾಂಡರ್ ಬುರ್ಹಾನ್ ವಾನಿ ಸಾವನ್ನಪ್ಪಿದ ಮೂರು ದಿನದ ಬಳಿಕ 2016 ರ ಜುಲೈ 11ರಂದು ಶೋಪಿಯಾನ ಜಿಲ್ಲೆಯ ಸೆಡೋ ಗ್ರಾಮದಲ್ಲಿರುವ ಆ ಮನೆಗೆ ಪೆಲೆಟ್ ಗುಂಡು ಅಪ್ಪಳಿಸಿತ್ತು.
ಪರಿಣಾಮ ಆ ಮನೆಯಲ್ಲಿದ್ದ ಬಾಲಕಿ ಇನ್ಶಾ ಮುಸ್ತಾಖ್ ಳ ಎರಡೂ ಕಣ್ಣುಗಳಿಗೂ ಹಾನಿಯಾಗಿತ್ತು. ಈಕೆಗೆ ಜಮ್ಮು-ಕಾಶ್ಮೀರ ಹಾಗೂ ಇತರ ಕಡೆ ಹಲವು ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಆದರೆ, ವೈದ್ಯರಿಗೆ ಆಕೆಗೆ ದೃಷ್ಟಿಯನ್ನು ಮರಳಿಸಲು ಸಾಧ್ಯವಾಗಲಿಲ್ಲ. ಇದೀಗ ಅದೇ ಯುವತಿ ಸಾಧನೆಯನ್ನು ಮಾಡಿ ದೇಶದಲ್ಲಿ ಸುದ್ದಿಯಾಗಿದ್ದಾಳೆ.
ಹೌದು…! ಈಕೆ ಇದೀಗ 12ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾಳೆ. ಜಮ್ಮು ಮತ್ತು ಕಾಶ್ಮೀರ ಬೋರ್ಡ್ ಆಫ್ ಸ್ಕೂಲ್ ಎಜುಕೇಶನ್ ನಲ್ಲಿ ಈಕೆ 500 ರಲ್ಲಿ 319 ಅಂಕಗಳನ್ನು ಗಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಇನ್ಶಾ ಮುಸ್ತಾಖ್, ಪದವಿ ಪಡೆಯಬೇಕು. ನಾನು 12ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ. ನನಗೆ ಬೆಂಬಲ ನೀಡಿದ ಹೆತ್ತವರಿಗೆ ಅಭಾರಿಯಾಗಿದ್ದೇನೆ. ಜೆಕೆಸಿಪಿಜೆ ನಿರ್ದೇಶಕ ನಾದಿರ್ ಅಲಿ ನನಗೆ ಬೆಂಬಲ ನೀಡಿದರು.
ಅವರು 2018 ರಿಂದ ನನಗೆ ಪುನರ್ವಸತಿ ಕಲ್ಪಿಸಿದರು. ನನಗೆ ಶಿಕ್ಷಣವನ್ನು ನೀಡಿದರು ಎಂದ ಅವರು, ಇನ್ಮುಂದೆ ನಾನು ಪದವಿ ಜೊತೆಗೆ ನಾಗರಿಕ ಸೇವಾ ಪರೀಕ್ಷೆಗೆ ಸಿದ್ಧತೆ ನಡೆಸಬೇಕು ಎಂದಿದ್ದಾರೆ.
ನಾನು ಐಎಎಸ್ ಅಧಿಕಾರಿಯಾಗಲು ಬಯಸುತ್ತೇನೆ. ಇದರಿಂದ ನಾನು ಎಲ್ಲಾ ದೃಷ್ಟಿಹೀನರಿಗೆ ಮಾದರಿಯಾಗಬಹುದು. ಪ್ರತಿಯೊಬ್ಬರೂ ಸ್ವತಂತ್ರರಾಗಬೇಕು ಮತ್ತು ಜೀವನದಲ್ಲಿ ಮುಂದೆ ಸಾಗಬೇಕು ಎಂದು ನಾನು ಬಯಸುತ್ತೇನೆ’ ಎಂದು ಇನ್ಶಾ ಮುಸ್ತಾಖ್ ಹೇಳಿದ್ದಾರೆ.
ದೇಶದ ವಿವಿಧ ಭಾಗಗಳಲ್ಲಿ ದೃಷ್ಟಿಹೀನರಿಗಾಗಿ ಶಾಲೆಯ ಅಗತ್ಯತೆ ಇದೆ ಎಂದ ಅವರು, ಕಾಶ್ಮೀರ ಕಣಿವೆಯಲ್ಲಿ ಈ ವಿಷಯದ ಬಗ್ಗೆ ಕಡಿಮೆ ಜಾಗೃತಿ ಇದೆ. ಇದರಿಂದಾಗಿ ದೃಷ್ಟಿಹೀನರು ಹಿಂದೆ ಬೀಳುತ್ತಿದ್ದಾರೆ ಎಂದು ಹೇಳಿದ್ದಾರೆ.
ಇನ್ನು ಈ ಕುರಿತು ಇನ್ಶಾ ಮುಸ್ತಾಖ್ ಅವರ ತಂದೆ ಮುಸ್ತಾಖ್ ಅಹ್ಮದ್ ಮಾತನಾಡಿದ್ದು, ‘ನನ್ನ ಪುತ್ರಿ 12ನೇ ತರಗತಿ ಪರೀಕ್ಷೆ ಉತ್ತೀರ್ಣಳಾಗಿದ್ದಾಳೆ ಎಂಬುದನ್ನು ನನಗೆ ನಂಬಲು ಸಾಧ್ಯವಾಗುತ್ತಿಲ್ಲ. ಎರಡು ಕಣ್ಣುಗಳನ್ನು ಕಳೆದುಕೊಂಡ ಅವಳಿಗೆ ಬೋಧಿಸಿದ ಹಾಗೂ ಬೆಂಬಲಿಸಿದ ಆಕೆಯ ಅಧ್ಯಾಪಕರಿಗೆ ಅಭಾರಿಯಾಗಿದ್ದೇನೆ’ ಎಂದು ಭಾವುಕರಾದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw