ಕೊರೊನಾ ಲಸಿಕೆ ಪಡೆದ ಮರುದಿನವೇ ಆರೋಗ್ಯ ಸಿಬ್ಬಂದಿ ಸಾವು!
ಲಕ್ನೋ: ಕೊರೊನಾ ಲಸಿಕೆ ಪಡೆದ ಮರುದಿನವೇ ಆರೋಗ್ಯ ಸಿಬ್ಬಂದಿಯೋರ್ವ ಸಾವನ್ನಪ್ಪಿರುವ ಘಟನೆ ಉತ್ತರಪ್ರದೇಶದ ಮೊರಾದಾಬಾದ್ ನಲ್ಲಿ ನಡೆದಿದ್ದು, 46 ವರ್ಷದ ಮಹೀಪಾಲ್ ಸಿಂಗ್ ಮೃತಪಟ್ಟ ವ್ಯಕ್ತಿಯಾಗಿದ್ದಾರೆ.
ಮೊರಾದಾಬಾದ್ ನ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ವಾರ್ಡ್ ಬಾಯ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಮಹೀಪಾಲ್ ಅವರು ಕೊರೊನಾ ಲಸಿಕೆ ಪಡೆದ ಮರುದಿನವೇ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಶನಿವಾರ ಆರೋಗ್ಯವಂತರಾಗಿದ್ದ ಮಹೀಪಾಲ್ ಸಿಂಗ್ ಅವರಿಗೆ ಕೊರೊನಾ ಲಸಿಕೆಯ ಮೊದಲ ಡೋಸ್ ನೀಡಲಾಗಿದೆ. ರಾತ್ರಿ ಪಾಳಿಯ ಕೆಲಸ ಇದ್ದುದರಿಂದ ಸಂಜೆ ಆಸ್ಪತ್ರೆಗೆ ತೆರಳಿ ಮುಂಜಾನೆ ಮನೆಗೆ ವಾಪಸ್ ಆಗಿದ್ದು, ಈ ವೇಳೆ ತೀವ್ರ ಉಸಿರಾಟದ ಸಮಸ್ಯೆ, ಎದೆ ಉರಿ, ಕೆಮ್ಮು ಆರಂಭವಾಗಿದೆ. ಕೂಡಲೇ ಅವರನ್ನು ಮನೆಯವರು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅವರು ಅದಾಗಲೇ ಮೃತಪಟ್ಟಿದ್ದಾರೆ.
ಮಹೀಪಾಲ್ ಸಿಂಗ್ ಗೆ ಕೊರೊನಾ ಲಸಿಕೆ ಪಡೆಯುವದಕ್ಕೂ ಮೊದಲೇ ಉಸಿರುಗಟ್ಟುವ ಸಮಸ್ಯೆ ಇತ್ತು. ಕೊರೊನಾ ಲಸಿಕೆ ಪಡೆದ ಬಳಿಕ ಈ ಸಮಸ್ಯೆ ಹೆಚ್ಚಾಗಿತ್ತು ಎಂದು ಅವರ ಕುಟುಂಬಸ್ಥರು ಆರೋಪಿಸಿದ್ದಾರೆ.
ಇನ್ನೂ ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಉತ್ತರಪ್ರದೇಶ ಸಿಎಂ ಕಚೇರಿ ಅಧಿಕಾರಿಗಳು, ಮೃತದೇಹವನ್ನು ಪೋಸ್ಟ್ ಮಾರ್ಟಂಗೆ ಕಳುಹಿಸಲಾಗಿದೆ. ಅವರು ಯಾವ ಕಾರಣದಿಂ ಮೃತಪಟ್ಟಿದ್ದಾರೆ ಎನ್ನುವುದು ತಿಳಿದು ಬರಲಿದೆ ಎಂದು ತಿಳಿಸಿದೆ.