ಅನ್ನದಾತನ ಬೃಹತ್ ಹೋರಾಟಕ್ಕೆ ತಲೆಬಾಗಿದ ಖಟ್ಟರ್ ಸರ್ಕಾರ: ರೈತರ ಪ್ರತಿಭಟನೆಗೆ ಗೆಲುವು - Mahanayaka
10:06 AM Monday 23 - December 2024

ಅನ್ನದಾತನ ಬೃಹತ್ ಹೋರಾಟಕ್ಕೆ ತಲೆಬಾಗಿದ ಖಟ್ಟರ್ ಸರ್ಕಾರ: ರೈತರ ಪ್ರತಿಭಟನೆಗೆ ಗೆಲುವು

14/06/2023

ಸೂರ್ಯಕಾಂತಿ ಬೀಜಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ ಪಿ) ಯನ್ನು ನೀಡಬೇಕೆಂಬ ಬೇಡಿಕೆಗಳನ್ನು ಈಡೇರಿಸಲು ಹರ್ಯಾಣದ ಸಿಎಂ ಮನೋಹರ್ ಲಾಲ್ ಖಟ್ಟರ್ ನೇತೃತ್ವದ ಬಿಜೆಪಿ ಸರ್ಕಾರ ಒಪ್ಪಿಕೊಂಡ ನಂತರ ಹರ್ಯಾಣದ ಕುರುಕ್ಷೇತ್ರದಲ್ಲಿ ರೈತರು ತಮ್ಮ ಪ್ರತಿಭಟನೆಯನ್ನು ಕೊನೆಗೊಳಿಸಿದ್ದಾರೆ.

ಸರ್ಕಾರವು ರೈತರ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ ಕೂಡಲೇ ರೈತರು ಸಂಭ್ರಮಾಚರಣೆ ಮಾಡಿದರು. ರಾಜ್ಯ ಸರ್ಕಾರದ ಘೋಷಣೆಯ ನಂತರ ರೈತರು ಸಂಭ್ರಮಿಸುವ ವೀಡಿಯೊವನ್ನು ಸುದ್ದಿ ಸಂಸ್ಥೆ ಎಎನ್ಐ ಹಂಚಿಕೊಂಡಿದೆ. ಇದೇ ವೇಳೆ ಹೇಳಿಕೆ ನೀಡಿದ ರೈತ ಮುಖಂಡ ರಾಕೇಶ್ ಟಿಕಾಯತ್, ‘ನಾವು ನಮ್ಮ ಪ್ರತಿಭಟನೆಯನ್ನು ಕೊನೆಗೊಳಿಸುತ್ತಿದ್ದೇವೆ. ನಿರ್ಬಂಧಿತ ರಸ್ತೆಗಳನ್ನು ಇಂದು ತೆರೆಯಲಾಗುವುದು. ನಮ್ಮ ಬೆಳೆಗಳನ್ನು ಎಂಎಸ್ ಪಿಗೆ ಖರೀದಿಸಬೇಕೆಂದು ನಾವು ಪ್ರತಿಭಟಬೆ ಮಾಡಿದ್ದೇವು. ನಾವು ದೇಶಾದ್ಯಂತ ಎಂಎಸ್ ಪಿಗಾಗಿ ಹೋರಾಡುತ್ತಲೇ ಇರುತ್ತೇವೆ. ನಮ್ಮ ನಾಯಕರನ್ನೂ ಶೀಘ್ರದಲ್ಲೇ ಬಿಡುಗಡೆ ಮಾಡಲಾಗುತ್ತದೆ. ನಮ್ಮ ನಾಯಕರ ವಿರುದ್ಧ ದಾಖಲಿಸಿರುವ ಪ್ರಕರಣಗಳನ್ನು ಹಿಂಪಡೆಯಲಾಗುತ್ತದೆ ಎಂದರು.

ಪ್ರತಿಭಟನಾ ನಿರತ ರೈತರಿಗೆ ಸೂರ್ಯಕಾಂತಿ ಬೆಳೆಗೆ ಸೂಕ್ತ ಬೆಲೆಯ ಭರವಸೆ ನೀಡಲಾಗಿದೆ ಎಂದು ಕುರುಕ್ಷೇತ್ರದ ಜಿಲ್ಲಾಧಿಕಾರಿ ಶಂತನು ಶರ್ಮಾ ಕೂಡಾ ಪಿಟಿಐಗೆ ತಿಳಿಸಿದ್ದಾರೆ.

ಈ ವಿಷಯದ ಬಗ್ಗೆ ಮಹಾಪಂಚಾಯತ್ ನಡೆಸಿದ ನಂತರ ರೈತರು ಸೋಮವಾರ ಮಧ್ಯಾಹ್ನದಿಂದ ಪಿಪ್ಲಿ ಬಳಿ ರಾಷ್ಟ್ರೀಯ ಹೆದ್ದಾರಿ -44 ಅನ್ನು ನಿರ್ಬಂಧಿಸಿದ್ದರು. ಈ ಹೆದ್ದಾರಿಯು ದೆಹಲಿಯನ್ನು ಚಂಡೀಗಢದೊಂದಿಗೆ ಸಂಪರ್ಕಿಸುತ್ತದೆ.

ಇಲ್ಲಿನ ರೈತರು ತಮ್ಮ ಉತ್ಪನ್ನಗಳಿಗೆ ಪ್ರತಿ ಕ್ವಿಂಟಾಲ್ ಗೆ 6,400 ರೂ.ಗಳ ಕನಿಷ್ಠ ಬೆಂಬಲ ಬೆಲೆಯನ್ನು ಆಗ್ರಹಿಸಿದ್ದರು. ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಶನಿವಾರ 36,414 ಎಕರೆಯಲ್ಲಿ ಬೆಳೆದ ಬೆಳೆಗೆ 8,528 ಸೂರ್ಯಕಾಂತಿ ರೈತರಿಗೆ ಮಧ್ಯಂತರ ಪಾವತಿಯಾಗಿ 29.13 ಕೋಟಿ ರೂ.ಗಳನ್ನು ಡಿಜಿಟಲ್ ರೂಪದಲ್ಲಿ ಬಿಡುಗಡೆ ಮಾಡಿದ್ದರು. ವಿಶೇಷವೆಂದರೆ, ಈ ಮೊತ್ತವನ್ನು ಭವಂತರ್ ಭರ್ ಪೈ ಯೋಜನೆ (ಬಿಬಿವೈ) ಅಡಿಯಲ್ಲಿ ಬಿಡುಗಡೆ ಮಾಡಲಾಗಿತ್ತು.

ಈ ವರ್ಷದ ಆರಂಭದಲ್ಲಿ ರಾಜ್ಯ ಸರ್ಕಾರವು ಸೂರ್ಯಕಾಂತಿ ಬೆಳೆಗಳನ್ನು ಬಿಬಿವೈ ಯೋಜನೆಯಡಿ ಸೇರಿಸುವುದಾಗಿ ಘೋಷಿಸಿತ್ತು. ಈ ಯೋಜನೆಯಡಿ, ರೈತರು ತಮ್ಮ ಉತ್ಪನ್ನಗಳನ್ನು ಎಂಎಸ್ಪಿಗಿಂತ ಕಡಿಮೆ ಬೆಲೆಗೆ ಮಾರಾಟ ಮಾಡಿದರೆ ನಿಗದಿತ ಮೊತ್ತವನ್ನು ಪಾವತಿಸಲಾಗುತ್ತದೆ.
ಈ ತಿಂಗಳ ಆರಂಭದಲ್ಲಿಯೂ ರೈತರು ಕುರುಕ್ಷೇತ್ರದ ಶಹಾಬಾದ್ ಬಳಿ ದೆಹಲಿ-ಚಂಡೀಗಢ ರಾಷ್ಟ್ರೀಯ ಹೆದ್ದಾರಿ -44 ಅನ್ನು ತಡೆದು ಪ್ರತಿಭಟಿಸಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ