ಛೇ, ಅಸಹ್ಯ!; ವಿಕೃತಿ ವಿನಾಶಕ್ಕೆ ದಾರಿ: ಕಾಂಗ್ರೆಸ್ ವಿರುದ್ಧ ಜೆಡಿಎಸ್ ಆಕ್ರೋಶ
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಬಿಜೆಪಿ ಜತೆ ಅಡ್ಜಸ್ಟ್ ಮಾಡಿಕೊಂಡಿದ್ದರು ಎಂದು ಅಪಪ್ರಚಾರ ಮಾಡಿದ್ದ ರಾಜ್ಯ ಕಾಂಗ್ರೆಸ್ ಪಕ್ಷದ ವಿರುದ್ಧ ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಪಕ್ಷವು, ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ಒಳ ರಾಜಕೀಯವನ್ನು ತೆರೆದಿಟ್ಟಿದೆ. ಅಲ್ಲದೆ, ಬಿಜೆಪಿ ಕಾಂಗ್ರೆಸ್ ಭಾಯಿ ಭಾಯಿ ಎಂದು ಜರೆದಿದೆ.
135 ಸೀಟುಗಳ ಅಮಲಿನಲ್ಲಿ ತೇಲುತ್ತಿರುವ ರಾಜ್ಯ ಕಾಂಗ್ರೆಸ್ ಪಕ್ಷ, ‘ಕೋತಿ ಮೊಸರನ್ನ ತಿಂದು ಮೇಕೆ ಮೂತಿಗೆ ಒರೆಸಿತು’ ಎಂಬಂತೆ ಹುಚ್ಚಾಟ ಆಡುತ್ತಿದೆ. ಕಳೆದೆರಡು ಲೋಕಸಭೆ ಚುನಾವಣೆಗಳಲ್ಲಿ ಕಂಡ ಅತಿ ಅಪಮಾನಕರ ಸೋಲನ್ನು ಮರೆತು,ಈಗ ಜಗತ್ತನ್ನೇ ಗೆದ್ದೆ ಎಂದು ಗದೆ ತಿರುಗಿಸುತ್ತಿರುವುದು ವಿಕೃತಿಯ ಪರಮಾವಧಿ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಜಾತಿ,ಧರ್ಮ ಒಡೆದು,ಮನಸ್ಸುಗಳ ನಡುವೆ ದ್ವೇಷದಬೆಂಕಿ ಭಿತ್ತಿ, ಪರಸ್ವರ ವ್ಯವಹಾರದ ಪರಿಣಾಮವೇ ಈ 135 ಸೀಟು. ಶಿಗ್ಗಾಂವಿ, ವರುಣಾ, ಶಿಕಾರಿಪುರ, ಚಿಕ್ಕಮಗಳೂರು, ಕನಕಪುರ ಕ್ಷೇತ್ರ ಸೇರಿ ಆಯ್ದ ಜಿಲ್ಲೆಗಳಲ್ಲಿ ನಡೆದ ಅಡ್ಜಸ್ಟ್ ಮೆಂಟ್ ಆಟ ಎರಡೂ ರಾಷ್ಟ್ರೀಯ ಪಕ್ಷಗಳ ನೀತಿಗೆಟ್ಟ ರಾಜಕಾರಣಕ್ಕೆ ಹಿಡಿದ ಕನ್ನಡಿ ಎಂದು ಜೆಡಿಎಸ್ ಕಿಡಿಕಾರಿದೆ.
ಬಿಜೆಪಿಯ ಸಿಟಿ ರವಿ, ಸಂಸದ ಪ್ರತಾಪ್ ಸಿಂಹ, ಸಚಿವ ಡಾ.ಜಿ.ಪರಮೇಶ್ವರ ಅವರು ಎತ್ತಿರುವ ಪ್ರಶ್ನೆಗಳಿಗೆ ಉತ್ತರ ಕೊಡುವ ದಮ್ಮು, ತಾಕತ್ತು ಮುಖ ಮೂತಿಗೆಲ್ಲ ಒಳ ರಾಜಕೀಯದ ಗಲೀಜು ಮೆತ್ತಿಕೊಂಡ ಎರಡೂ ಪಕ್ಷಗಳ ನಾಯಕರಿಗೆ ಇದೆಯಾ? ಹಗಲಲ್ಲಿ ಹಾರಾಟ, ಕತ್ತಲಾದರೆ ಕಳ್ಳಾಟ!! ಕಾರ್ಯಕರ್ತರೇ ಹಾದಿಬೀದಿಯಲ್ಲಿ ಮಾತನಾಡುತ್ತಿದ್ದಾರೆ ಎಂದು ಪಕ್ಷ ಲೇವಡಿ ಮಾಡಿದೆ.
ಮಂಡ್ಯ ಜಿಲ್ಲೆ ಒಂದರಲ್ಲಿಯೇ ಪ್ರತಿ ಕ್ಷೇತ್ರಕ್ಕೆ ಕಮ್ಮಿ ಎಂದರೂ 10-20 ಕೋಟಿ ವ್ಯಯಿಸಿ ಮತ ವಿಭಜನೆ ಮಾಡಿದ್ದು ಯಾರು? ಒಬ್ಬರನ್ನು ಒಬ್ಬರು ಮೀರಿಸುವಂತೆ ಹಣದ ಹೊಳೆ ಹರಿಸಿದ್ದು ಯಾರು? ಪ್ರಾದೇಶಿಕ ಪಕ್ಷದ ಕತ್ತು ಕೊಯ್ಯಲು ನೀಚ, ನಿಕೃಷ್ಟ ರಾಜಕೀಯ ಮಾಡಿದ್ದು ಯಾರು? ಈಗ ನೀವೇ ಸತ್ಯ ಹೇಳುತ್ತಿದ್ದೀರಿ, ಸತ್ಯದ ಕತ್ತು ಕೊಯ್ಯುವುದು ಸಾಧ್ಯವೇ? ಎಂದು ಜೆಡಿಎಸ್ ಪ್ರಶ್ನಿಸಿದೆ.
ಅಡ್ಜಸ್ಟ್ ಮೆಂಟ್ ಇಲ್ಲದಿದ್ದರೆ ಕಳೆದ ಬಾರಿ ಡಾ.ಜಿ.ಪರಮೇಶ್ವರ ಅವರು ಕೊರಟಗೆರೆಯಲ್ಲಿ, ಮಲ್ಲಿಕಾರ್ಜುನ ಖರ್ಗೆ ಅವರು ಕಲಬುರ್ಗಿಯಲ್ಲಿ ಸೋತಿದ್ದೇಕೆ? ದಲಿತೋದ್ಧಾರ, ಆಹಿಂದೋದ್ಧಾರ ಎನ್ನುವರು, ಈ ಇಬ್ಬರನ್ನು ಸೋಲಿಸಲು ಹೂಡಿದ ತಂತ್ರಗಳ ಬಗ್ಗೆ,ಆಡಿದ ಸದಾರಮೆ ಆಟಗಳ ಬಗ್ಗೆ ಪ್ರಾಯಶ್ಚಿತ್ತ ಮಾಡಿಕೊಳ್ಳುವ ಧೈರ್ಯ ಈ ಕಾಂಗ್ರೆಸ್ ಗೆ ಇದೆಯಾ? ಎಂದು ಸವಾಲು ಹಾಕಿದೆ.
ಆಪರೇಶನ್ ಕಮಲ;ಇಬ್ಬರ ನಾಯಕರ ಜಂಟಿ ಆಪರೇಶನ್ ಎನ್ನುವುದು ಯಾರಿಗೆ ಗೊತ್ತಿಲ್ಲ? ಇದರ ಅಸಲಿ ಕಥೆ ಗೊತ್ತಿಲ್ಲದಷ್ಟು ಮುಗ್ಧರಾ ಬಿಜೆಪಿ,ಕಾಂಗ್ರೆಸ್ ಕಾರ್ಯಕರ್ತರು?ಆ ಹೇಸಿಗೆಯಲ್ಲಿ ಬಿದ್ದು ಹೊರಳುತ್ತಿರುವ ರಾಜ್ಯ ಕಾಂಗ್ರೆಸ್ ಆ ಗಲೀಜನ್ನೆಲ್ಲ ಮುಖಕ್ಕೆ ಮೆತ್ತಿಕೊಂಡು ಇತರರಿಗೂ ಮೆತ್ತಲು ಹವಣಿಸುತ್ತಿದೆ! ಛೇ, ಅಸಹ್ಯ!; ವಿಕೃತಿ ವಿನಾಶಕ್ಕೆ ದಾರಿ ಎಂದು ಎಚ್ಚರಿಕೆ ನೀಡಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw