ರಸ್ತೆ ಬದಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಮಾನವ ಭ್ರೂಣ ಪತ್ತೆ!
19/01/2021
ಮಂಗಳೂರು: ಹೆದ್ದಾರಿ ಬದಿಯಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿದ ಸ್ಥಿತಿಯಲ್ಲಿ ಮಾನವ ಭ್ರೂಣವೊಂದು ಪತ್ತೆಯಾದ ಘಟನೆ ಮುಲ್ಕಿ-ಕಿನ್ನಿಗೋಲಿ ರಾಜ್ಯ ಹೆದ್ದಾರಿಯ ಕೆಂಚನಕರೆ ರಸ್ತೆ ತಿರುವಿನಲ್ಲಿ ನಡೆದಿದೆ.
ಜನವರಿ 17ರಂದು ಈ ಘಟನೆ ಬಯಲಿಗೆ ಬಂದಿದೆ. ಕಿಲ್ವಾಡಿ ಗ್ರಾಮ ಪಂಚಾಯತ್ ನ ಪೌರ ಕಾರ್ಮಿಕರು ತ್ಯಾಜ್ಯ ವಿಲೇವಾರಿ ಮಾಡುವ ಸಂದರ್ಭದಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ಕೊಳೆತ ಭ್ರೂಣ ಹಾಗೂ ಕೈಗವಸು, ಪ್ಯಾಡ್ ಜೊತೆಗೆ ನೈಟಿ ಮತ್ತು ಬಟ್ಟೆಗಳು ಪತ್ತೆಯಾಗಿವೆ.
ಕಳೆದ ವಾರ ಈ ಪ್ರದೇಶದಲ್ಲಿ ಮಳೆಯಾಗಿದ್ದು, ಈ ಸಂದರ್ಭ ಪ್ಲಾಸ್ಟಿಕ್ ಚೀಲಕ್ಕೆ ನೀರು ನುಗ್ಗಿ ಭ್ರೂಣ ಕೊಳೆತು ಹೋಗಿದೆ ಎಂದು ಹೇಳಲಾಗಿದೆ. ಭ್ರೂಣ ಕೊಳೆತು ಹೋದ ಪರಿಣಾಮ ಈ ಪ್ರದೇಶದಲ್ಲಿ ದುರ್ವಾಸನೆ ಹರಡಿತ್ತು.
ಇನ್ನೂ ಘಟನೆ ಸಂಬಂಧ ಸ್ಥಳಕ್ಕೆ ಭೇಟಿ ನೀಡಿರುವ ಮುಲ್ಕಿ ಠಾಣಾ ಪೊಲೀಸರು ಸ್ಥಳೀಯರಿಂದ ಮಾಹಿತಿ ಪಡೆದುಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.