ರೈತರ ಹೋರಾಟದ ದಿಕ್ಕು ತಪ್ಪಿಸಲು ಶ್ರೀರಾಮ ಮಂದಿರದ ನಿಧಿ ಸಂಗ್ರಹ ಅಭಿಯಾನ | ಕೋಡಿಹಳ್ಳಿ ಚಂದ್ರಶೇಖರ್ ಆರೋಪ
ಹೊಸಪೇಟೆ: ರೈತ ಹೋರಾಟದ ದಿಕ್ಕು ತಪ್ಪಿಸಲು ಶ್ರೀರಾಮ ಮಂದಿರದ ನಿಧಿ ಸಂಗ್ರಹ ಅಭಿಯಾನ ನಡೆಸಲಾಗುತ್ತಿದೆ ಎಂದು ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆರೋಪಿಸಿದ್ದು, ನಾನು ಕೂಡ ರಾಮ ಭಕ್ತ. ಆದರೆ ಕೆಲಸದ ಸಂದರ್ಭದಲ್ಲಿ ಆರಾಧನೆ ಮಾಡಿಕೊಂಡು ಕುಳಿತುಕೊಳ್ಳಲು ಆಗುವುದಿಲ್ಲ ಎಂದು ಅವರು ಹೇಳಿದ್ದಾರೆ.
ದೆಹಲಿ ಗಡಿಯಲ್ಲಿ ಲಕ್ಷಾಂತರ ರೈತರು ಹೋರಾಟ ನಡೆಸುತ್ತಿದ್ದು, ಈ ವಿವಾದವನ್ನು ಬಗೆಹರಿಸದೇ ರಾಮಮಂದಿರ ನಿರ್ಮಾಣ ಅಭಿಯಾನ ಕೈಗೊಳ್ಳಲಾಗಿದೆ. ರೈತ ವಿರೋಧಿ ಕಾಯ್ದೆಯನ್ನು ವಿರೋಧಿಸಿ ಹೋರಾಟ ನಡೆಸುತ್ತಿರುವ ಸಂದರ್ಭದಲ್ಲಿ ನಿಧಿ ಸಂಗ್ರಹ ಅಭಿಯಾನ ಅಗತ್ಯವೇ? ಎಂದು ಅವರು ಪ್ರಶ್ನಿಸಿದ್ದಾರೆ.
ದೇಶದ ಜನರನ್ನು ಭಾವನಾತ್ಮಕವಾಗಿ ದಿಕ್ಕು ತಪ್ಪಿಸಲಾಗುತ್ತಿದೆ. ರೈತರ ಸಾವಿನ ಬಗ್ಗೆ ಮನ್ ಕೀ ಬಾತ್ ನಲ್ಲಿ ಮಾತನಾಡಬೇಕಿದ್ದ ಪ್ರಧಾನಿ ನರೇಂದ್ರ ಮೋದಿ, ಬೀಚ್ ನಲ್ಲಿ ನವದಂಪತಿ ಪ್ಲ್ಯಾಸ್ಟಿಕ್ ಆರಿಸುವ ಬಗ್ಗೆ ಮಾತನಾಡುತ್ತಾರೆ ಎಂದು ಅವರು ಟೀಕಿಸಿದ್ದಾರೆ.
ಚೀನಾದವರು ಅರುಣಾಚಲ ಪ್ರದೇಶದಲ್ಲಿ ಒಂದು ಹಳ್ಳಿಯನ್ನು ನಿರ್ಮಾಣ ಮಾಡಿದ್ದಾರೆ. ಇದರ ಬಗ್ಗೆ ಮಾತನಾಡುವ ಧೈರ್ಯ ಸರ್ಕಾರಕ್ಕಿಲ್ಲ. ಗುಪ್ತಚರ ಇಲಾಖೆ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಅವರು ಆರೋಪಿಸಿದರು.