ನಾಗರಹಾವಿನ ಹೊಟ್ಟೆಯೊಳಗೆ ಸೇರಿದ್ದ ಪ್ಲಾಸ್ಟಿಕ್ ಡಬ್ಬ ಹೊರ ತೆಗೆದ ಪಶು ವೈದ್ಯರು - Mahanayaka

ನಾಗರಹಾವಿನ ಹೊಟ್ಟೆಯೊಳಗೆ ಸೇರಿದ್ದ ಪ್ಲಾಸ್ಟಿಕ್ ಡಬ್ಬ ಹೊರ ತೆಗೆದ ಪಶು ವೈದ್ಯರು

manglore
24/06/2023

ನಾಗರಹಾವಿನ ಹೊಟ್ಟೆಯೊಳಗೆ ಸೇರಿದ್ದ ಪ್ಲಾಸ್ಟಿಕ್ ಡಬ್ಬವೊಂದನ್ನು ಮಂಗಳೂರಿನ ಪಶು ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಯಶಸ್ವಿಯಾಗಿ ಹೊರ ತೆಗೆದಿದ್ದಾರೆ.

ಬಂಟ್ವಾಳದ ವಗ್ಗದ ಸಾಲುಮರ ತಿಮ್ಮಕ್ಕ ಉದ್ಯಾನವನದ ಸಮೀಪದಲ್ಲಿ ಬಿಲವೊಂದರಲ್ಲಿ ಸಿಲುಕಿ‌ದ್ದ ನಾಗರಹಾವಿನ ಬಗ್ಗೆ ಸ್ಥಳೀಯ ಗ್ರಾಪಂ ಉಪಾಧ್ಯಕ್ಷೆ ವಸಂತಿ ಅವರು ಹಾವು ಹಿಡಿಯುವ ಸ್ನೇಕ್ ಕಿರಣ್ ಅವರಿಗೆ ಮಾಹಿತಿ ನೀಡಿದ್ದರು.

ಮೂರು ದಿನಗಳಿಂದ ಅದನ್ನು ಗಮನಿಸುತ್ತಿದ್ದ ವಸಂತಿ ಮನೆಯವರು ಕೊನೆಗೆ ಅದರ ರಕ್ಷಣೆಗೆ ಮುಂದಾಗಿದ್ದರು. ಸ್ಥಳಕ್ಕೆ ಆಗಮಿಸಿದ ಸ್ನೇಕ್ ಕಿರಣ್ ಹಾವನ್ನು ಬಿಲದಿಂದ ಹೊರ ತೆಗೆದು ರಕ್ಷಿಸಿದ್ದಾರೆ. ಈ ವೇಳೆ ಅದರ ತಲೆಯ ಭಾಗದಲ್ಲಿ ಗಾಯಗಳಾಗಿದ್ದರಿಂದ ಚಿಕಿತ್ಸೆಗಾಗಿ ಮಂಗಳೂರಿನ ಪಶುವೈದ್ಯೆ ಯಶಸ್ವಿ ನಾರಾವಿ ಅವರಲ್ಲಿಗೆ ತಂದಿದ್ದರು.

ಗಾಯಕ್ಕೆ ಚಿಕಿತ್ಸೆ ಒದಗಿಸಿದ ವೈದ್ಯರು ಹಾವಿನ ಹೊಟ್ಟೆ ಉಬ್ಬೇರಿದ್ದನ್ನು ಗಮನಿಸಿ ಎಕ್ಸ್ ರೇ ಮಾಡಿದ್ದರು. ಆಗ ಹಾವಿನ ಉದರದೊಳಗೆ ಪ್ಲಾಸ್ಟಿಕ್ ವಸ್ತು ಇರುವುದು ಗಮನಕ್ಕೆ ಬಂದಿತ್ತು. ಹೀಗಾಗಿ ಹಾವಿಗೆ ಶಸ್ತ್ರಚಿಕಿತ್ಸೆ ನಡೆಸಿ ಉದರದಲ್ಲಿದ್ದ ಸುಣ್ಣದ ಪ್ಲಾಸ್ಟಿಕ್ ಡಬ್ಬವನ್ನು ಹೊರತೆಗೆದಿದ್ದಾರೆ.

ವೈದ್ಯರ ಪ್ರಕಾರ ‘ಸುಮಾರು ಐದು ಅಡಿ ಉದ್ದದ ಹೆಣ್ಣು ನಾಗರಹಾವು ಇದಾಗಿತ್ತು. 10 ವರ್ಷ ಪ್ರಾಯ ಆಗಿರಬಹುದು. ಹಾವು ಮೊಟ್ಟೆ ನುಂಗುವ ವೇಳೆ ಸುಣ್ಣದ ಡಬ್ಬವನ್ನು ಒಟ್ಟಿಗೆ ನುಂಗಿದ್ದಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

ಶಸ್ತ್ರಚಿಕಿತ್ಸೆಯ ಬಳಿಕ 15 ದಿನಗಳ ಕಾಲ ಶುಶ್ರೂಷೆ ಒದಗಿಸಿ ಯಾವುದೇ ತೊಂದರೆ ಇಲ್ಲವೆಂದು ಕಂಡ ಬಳಿಕ ಸ್ನೇಕ್ ಕಿರಣ್ ಅರಣ್ಯ ಇಲಾಖೆಯ ಮಾರ್ಗದರ್ಶನದಂತೆ ಮತ್ತೆ ಹಾವನ್ನು ರಕ್ಷಿತಾರಣ್ಯಕ್ಕೆ ಬಿಟ್ಟಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

 

ಇತ್ತೀಚಿನ ಸುದ್ದಿ