ಸಿನಿಮಾ ಸ್ಟೈಲ್ ನಲ್ಲಿ ಕಾಲೇಜಿನ ಗಾಜಿನ ಕಿಟಕಿಗೆ ಹೊಡೆದ ವಿದ್ಯಾರ್ಥಿ | ಮುಂದೆ ಆಗಿದ್ದೇನು ಗೊತ್ತಾ?
ಮೂಡಿಗೆರೆ: ಸಿನಿಮಾಗಳಲ್ಲಿ ಕನ್ನಡಿಗೆ ಹೊಡೆದು ಹೀರೋಗಳು ಹೀರೋಯಿಸಂ ತೋರಿಸುವುದು ಸಾಮಾನ್ಯ ವಿಚಾರ. ಆದರೆ ಇಲ್ಲೊಬ್ಬ ವಿದ್ಯಾರ್ಥಿ ಕಾಲೇಜಿನ ಕಿಟಕಿಗೆ ಬರಿ ಗೈಯಿಂದ ಹೊಡೆದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದು, ವಿವಾದಕ್ಕೆ ಕಾರಣವಾಗಿದೆ.
ಮೂಡಿಗೆರೆಯ ಡಿ.ಎಸ್.ಬಿಳೀಗೌಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಒಬ್ಬ ವಿದ್ಯಾರ್ಥಿ ಕಿಟಕಿ ಗಾಜು ಹೊಡೆದಿದ್ದಾನೆ. ಇನ್ನೊಬ್ಬ ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾನೆ ಎಂದು ವರದಿಯಾಗಿದೆ.
ಇನ್ನೂ ಕಿಟಕಿ ಹೊಡೆದಿರುವ ವಿದ್ಯಾರ್ಥಿ ಕಾಲೇಜಿಗೆ ಬರುವುದೇ ಅಪರೂಪವಂತೆ, ಅಪರೂಪಕ್ಕೆ ಬಂದವ ಹಾಗೆಯೇ ಹೋಗುವುದು ಬಿಟ್ಟು ಶಾಲೆಯ ಗಾಜು ಹೊಡೆಯಲು ಹೋಗಿ ಇದೀಗ ವಿವಾದಕ್ಕೆ ಕಾರಣವಾಗಿದ್ದಾನೆ.
ಘಟನೆ ಸಂಬಂಧ ವಿದ್ಯಾರ್ಥಿಯನ್ನು ಕಾಲೇಜಿನಿಂದ ಒಂದು ವಾರ ಅಮಾನತು ಮಾಡಲಾಗಿದೆ. ಈ ಬಗ್ಗೆ ಪೊಲೀಸರಿಗೂ ದೂರು ನೀಡಲಾಗಿದ್ದು, ಪೊಲೀಸರು ಎಫ್ ಐ ಆರ್ ದಾಖಲಿಸಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲ ಬಸವರಾಜಪ್ಪ ತಿಳಿಸಿದ್ದಾರೆ.
ಕಿಟಕಿಗೆ ಬರಿಗೈಯಲ್ಲಿ ಹೊಡೆದ ಪರಿಣಾಮ ವಿದ್ಯಾರ್ಥಿಯ ಕೈಗೆ ಕೂಡ ಗಾಯವಾಗಿದೆ ಎಂದು ತಿಳಿದು ಬಂದಿದೆ. ಸಿನಿಮಾದಲ್ಲಿ ತೋರಿಸುವುದನ್ನು ಅನುಸರಿಸಲು ಹೋದರೆ, ಕೈ-ಕಾಲುಗಳನ್ನು ಕಳೆದುಕೊಳ್ಳುವುದು ಖಚಿತ. ಅಲ್ಲದೇ ಅನಗತ್ಯವಾಗಿ ಕೇಸು ಹಾಕಿಸಿಕೊಂಡು ಭವಿಷ್ಯವನ್ನು ಹಾಳು ಮಾಡಿಕೊಳ್ಳುವುದು ಖಚಿತವಾಗಿದೆ.