ಸುಧಾಕರ್ ಒತ್ತಡಕ್ಕೆ ಮಣಿದ ಯಡಿಯೂರಪ್ಪ | ಮತ್ತೆ ಖಾತೆ ಬದಲಾವಣೆ - Mahanayaka
6:24 PM Thursday 14 - November 2024

ಸುಧಾಕರ್ ಒತ್ತಡಕ್ಕೆ ಮಣಿದ ಯಡಿಯೂರಪ್ಪ | ಮತ್ತೆ ಖಾತೆ ಬದಲಾವಣೆ

25/01/2021

ಬೆಂಗಳೂರು: ಇದೇನು ಸಂಪುಟ ವಿಸ್ತರಣೆಯೋ ಅಥವಾ ಮಕ್ಕಳಾಟವೋ ಅಂತೂ ಗೊತ್ತಿಲ್ಲ, ಮುಖ್ಯಮಂತ್ರಿ ಯಡಿಯೂರಪ್ಪನವರು,  ಸಚಿವ ಡಾ.ಕೆ.ಸುಧಾಕರ್ ಅವರಿಗೆ ಮತ್ತೆ ವೈದ್ಯಕೀಯ ಶಿಕ್ಷಣ ಖಾತೆಯನ್ನು ನೀಡಿದ್ದು, ಇದರ ಜೊತೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಕೂಡ ಸುಧಾಕರ್ ಮಡಿಲು ಸೇರಿದೆ.

ನೂತನ 7 ಸಚಿವರಿಗೆ ಖಾತೆ ಹಂಚುವ ವೇಳೆ ಸಿಎಂ ಯಡಿಯೂರಪ್ಪನವರು  ಹಲವು ಹಾಲಿ ಸಚಿವರ ಖಾತೆಗಳನ್ನು ಬದಲಾವಣೆ ಮಾಡಿದ್ದರು. ಈ ವೇಳೆ ಸುಧಾಕರ್ ಅವರ ಖಾತೆಯನ್ನೂ ಬದಲಾವಣೆ ಮಾಡಲಾಗಿತ್ತು. ಇದರಿಂದಾಗಿ ಸುಧಾಕರ್ ಅವರು ತೀವ್ರವಾಗಿ ಅಸಮಾಧಾನಗೊಂಡಿದ್ದರು.

ಖಾತೆ ಬದಲಾವಣೆಯಿಂದ ಮುನಿಸಿಕೊಂಡಿದ್ದ ಸುಧಾಕರ್ ಅವರು ಕೆಲವು ಸಚಿವರ ಜೊತೆಗೆ ಪ್ರತ್ಯೇಕ ಸಭೆ ನಡೆಸಿದ್ದರು ಹಾಗೂ ಸಚಿವ ಸಂಪುಟಕ್ಕೆ ಗೈರಾಗಿದ್ದರು. ಇದೀಗ ಸುಧಾಕರ್ ಅವರ ಒತ್ತಡಕ್ಕೆ ಮಣಿದು ಮತ್ತೆ ಅವರಿಗೆ ವೈದ್ಯಕೀಯ ಶಿಕ್ಷಣ ಖಾತೆಯನ್ನು ನೀಡಲಾಗಿದೆ.

ವೈದ್ಯಕೀಯ ಶಿಕ್ಷಣ ಸಚಿವರಾಗಿ ಜೆ.ಸಿ.ಸ್ವಾಮಿಯವರ ಖಾತೆಯನ್ನು ಬದಲಾವಣೆ ಮಾಡಲಾಗಿತ್ತು. ಇದೀಗ ಜೆ.ಸಿ.ಸ್ವಾಮಿ ಅವರಿಗೆ ಪ್ರವಾಸೋದ್ಯಮ ಖಾತೆಯನ್ನು ನೀಡಲಾಗಿದೆ.




ಒಂದೆಡೆ ವಲಸಿಗರು, ಇನ್ನೊಂದೆಡೆ ಮೂಲ ಬಿಜೆಪಿಗರು ಎಂಬ ಧರ್ಮ ಸಂಕಟಕ್ಕೆ ಬಿದ್ದಿರುವ ಸಿಎಂ ಯಡಿಯೂರಪ್ಪನವರಿಗೆ ಖಾತೆ ಹಂಚಿಕೆ ಕಗ್ಗಂಟಾಗಿ ಪರಿಣಮಿಸಿದೆ. ಸಚಿವ ಸ್ಥಾನ ಸಿಕ್ಕಿಲ್ಲ ಎಂಬ ಶಾಸಕರ ಆಕ್ರೋಶ ಒಂದೆಡೆಯಾದರೆ, ತಾವು ಬಯಸಿದ ಖಾತೆ ಸಿಕ್ಕಿಲ್ಲ ಎನ್ನುವ ಆಕ್ರೋಶ ಮತ್ತೊಂದೆಡೆಯಾಗಿದ್ದು, ಈ ಗೊಂದಲಗಳ ನಡುವೆ  ಅಭಿವೃದ್ಧಿ ಹೇಗೆ ನಡೆಯಲು ಸಾಧ್ಯ ಎನ್ನುವ ಪ್ರಶ್ನೆಗಳು ಸದ್ಯ ಜನರಲ್ಲಿ ಮನೆ ಮಾಡಿದೆ.

francis& navya

ಇತ್ತೀಚಿನ ಸುದ್ದಿ